ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ನನ್ನ ಈ ಸಿನಿಮಾ ಪಯಣಕ್ಕೆ ನೀವೇ ಬುನಾದಿ...’; ಸಿಂಗೀತಂ ಶ್ರೀನಿವಾಸರಾವ್ ನಿಧನಕ್ಕೆ ನಟ ಶಿವರಾಜ್‌ಕುಮಾರ್‌‌ ಸಂತಾಪ

Singeetham Srinivasa Rao Death: ಭಾರತೀಯ ಚಿತ್ರರಂಗದ ಪ್ರಯೋಗಶೀಲ ದಂತಕಥೆಯಾಗಿದ್ದ ಸಿಂಗೀತಂ ಶ್ರೀನಿವಾಸರಾವ್ ಅವರು ತಮ್ಮ 94ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ತಮ್ಮ ಸಿನಿ ಪಯಣಕ್ಕೆ ಬುನಾದಿ ಹಾಕಿದ ಸಿಂಗೀತಂ ಅವರನ್ನು ಡಾ. ಶಿವರಾಜ್‌ಕುಮಾರ್ ಅವರು ಭಾವುಕರಾಗಿ ನೆನೆದಿದ್ದಾರೆ. ಸಿಎಂ ಡಿ ಕೆ ಶಿವಕುಮಾರ್‌ ಕೂಡ ಕಂಬನಿ ಮಿಡಿದಿದ್ದಾರೆ.

ಭಾರತೀಯ ಸಿನಿಮಾರಂಗ ಕಂಡ ಜನಪ್ರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್ ಅವರು ಕೊನೆಯುಸಿರೆಳೆದಿದ್ದಾರೆ. ಅಪ್ರತಿಮ ಪ್ರತಿಭಾವಂತರಾಗಿದ್ದ ಸಿಂಗೀತಂ ಶ್ರೀನಿವಾಸರಾವ್ ಅವರು ತೆಲುಗು, ಕನ್ನಡದ ಜೊತೆಗೆ ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಡಾ. ರಾಜ್‌ಕುಮಾರ್‌ ಅವರೊಂದಿಗೆ ಅವಿನಾಭಾವ ನಂಟನ್ನು ಹೊಂದಿದ್ದ ಸಿಂಗೀತಂ, ಅಣ್ಣಾವ್ರಿಗೆ ಹಲವು ಹಿಟ್‌ ಸಿನಿಮಾಗಳನ್ನು ನೀಡುವುದರ ಜೊತೆಗೆ ಶಿವರಾಜ್‌ಕುಮಾರ್‌ ಅವರನ್ನು ‘ಆನಂದ್‌’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದರು.

ನೀವು ಕೇವಲ ಒಂದು ಕಲಾ ಪ್ರಕಾರದ ಭಾಗವಲ್ಲ

ಇದೀಗ ಸಿಂಗೀತಂ ಶ್ರೀನಿವಾಸರಾವ್‌ ಅವರ ನಿಧನದ ಹಿನ್ನೆಲೆಯಲ್ಲಿ ಶಿವಣ್ಣ ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. "ಸಿಂಗೀತಂ ಶ್ರೀನಿವಾಸರಾವ್ ಅವರೇ, 'ಆನಂದ್' ಚಿತ್ರದ ಮೂಲಕ ನನ್ನ 40 ವರ್ಷಗಳ ಸಿನಿಮಾ ಪಯಣಕ್ಕೆ ನೀವೇ ನಾಂದಿ ಹಾಡಿದಿರಿ. 94ನೇ ವಯಸ್ಸಿನಲ್ಲಿಯೂ ಚಲನಚಿತ್ರವನ್ನು ನಿರ್ದೇಶಿಸುವ ಮೂಲಕ ನೀವು ಇಡೀ ಜಗತ್ತಿಗೇ ಸ್ಫೂರ್ತಿಯಾದಿರಿ. 'ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ' ಎಂಬುದಕ್ಕೆ ನೀವೇ ಅತ್ಯುತ್ತಮ ಉದಾಹರಣೆ. ನೀವು ಕೇವಲ ಒಂದು ಕಲಾ ಪ್ರಕಾರದ ಭಾಗವಲ್ಲ, ನೀವೇ ಒಂದು ಕಲೆ" ಎಂದು ಶಿವಣ್ಣ ಹೇಳಿದ್ದಾರೆ.

ನೀವು ಎಂದೆಂದಿಗೂ ಶ್ರೇಷ್ಠರಾಗಿರುತ್ತೀರಿ

"ಸರ್ವೈವರ್ ಸಾಕ್ಷ್ಯಚಿತ್ರದ ಕುರಿತು ನೀವು ಆಡಿದ ಮಾತುಗಳು ನಮ್ಮ ನಡುವಿನ ಅತ್ಯುತ್ತಮ ಸಂಭಾಷಣೆಗಳಲ್ಲಿ ಒಂದಾಗಿವೆ; 94 ವರ್ಷಗಳ ಕಾಲ ಸಿನಿಮಾವನ್ನೇ ಉಸಿರಾಗಿಸಿಕೊಂಡು, ಕೊನೆಯ ಉಸಿರಿನವರೆಗೂ ಅದಕ್ಕಾಗಿ ಸರ್ವಸ್ವವನ್ನೂ ಅರ್ಪಿಸುವ ವಿಷಯವನ್ನು ನಿಮ್ಮಷ್ಟು ಚೆನ್ನಾಗಿ ಬೇರೆ ಯಾರೂ ಹೇಳಲಾರರು. ಮರಳಿ ಬನ್ನಿ ಸರ್! ನೀವು ಎಂದೆಂದಿಗೂ ಶ್ರೇಷ್ಠರಾಗಿರುತ್ತೀರಿ" ಎಂದು ಶಿವರಾಜ್‌ಕುಮಾರ್‌ ಸ್ಮರಿಸಿದ್ದಾರೆ.

ಶಿವರಾಜ್‌ಕುಮಾರ್‌ ಟ್ವೀಟ್‌



ಸಿಂಗೀತಂ ಅವರನ್ನು ನೆನೆದ ಸಿಎಂ

"ಭಾರತೀಯ ಚಿತ್ರರಂಗದ ಮಾಣಿಕ್ಯ ಸಿಂಗೀತಂ ಶ್ರೀನಿವಾಸರಾವ್ ಅವರ ಅಗಲಿಕೆಯಿಂದ ದುಃಖಿತನಾಗಿದ್ದು, ಅವರ ನಿಧನದಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅತ್ಯುತ್ತಮ ಚಿತ್ರಗಳ ಮೂಲಕ ಕನ್ನಡ ಚಲನಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ ಸಿಂಗೀತಂ ಶ್ರೀನಿವಾಸರಾವ್ ಅವರು, ಡಾ. ರಾಜ್‌ಕುಮಾರ್ ಅಭಿನಯದ 'ಹಾಲುಜೇನು', 'ಚಲಿಸುವ ಮೋಡಗಳು', 'ಶ್ರಾವಣ ಬಂತು' ಮುಂತಾದ ಸದಭಿರುಚಿಯ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದರು. ಸಿಂಗೀತಂ ಅವರ 'ಪುಷ್ಪಕ ವಿಮಾನ' ಮೂಕಿ ಚಿತ್ರ ಭಾರತೀಯ ಚಿತ್ರರಂಗದ ಮೈಲಿಗಲ್ಲು ಹಾಗೂ ಅವರ ಅನನ್ಯ ಪ್ರತಿಭೆಗೆ ಸಾಕ್ಷಿ. ಕನ್ನಡ ಚಿತ್ರರಂಗದ ಜೊತೆ ನಿಕಟ ಒಡನಾಟ ಇಟ್ಟುಕೊಂಡಿದ್ದ ಸಿಂಗೀತಂ, ತಮ್ಮ ಕೊನೆಯುಸಿರಿನ ತನಕ ಸಿನಿಮಾ ಧ್ಯಾನ ಮಾಡುತ್ತಿದ್ದರು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಭಿಮಾನಿಗಳು ಹಾಗೂ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಓಂ ಶಾಂತಿ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪೋಸ್ಟ್ ಮಾಡಿದ್ದಾರೆ.

94ನೇ ವಯಸ್ಸಿನಲ್ಲಿ ನಿರ್ದೇಶನಕ್ಕೆ ಮರಳಿದ ಸಿಂಗೀತಂ ಶ್ರೀನಿವಾಸ ರಾವ್;‌ ಅಣ್ಣಾವ್ರಿಗೆ ಸೂಪರ್‌ ಹಿಟ್‌ ಫಿಲ್ಮ್ಸ್‌ ಕೊಟ್ಟ ಡೈರೆಕ್ಟರ್‌ ಇವ್ರು!

ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಸಂತಾಪ ಸೂಚಿಸಿ, "ಹಲವಾರು ಸದಭಿರುಚಿಯ ಸಿನಿಮಾಗಳನ್ನು ಭಾರತೀಯ ಚಿತ್ರರಂಗಕ್ಕೆ ನೀಡಿದ ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್ ಅವರ ನಿಧನದ ಸುದ್ದಿ ಅತ್ಯಂತ ನೋವುಂಟು ಮಾಡಿದೆ. ಡಾ. ರಾಜ್‌ಕುಮಾರ್ ಅವರ ಅಭಿನಯದ ‘ಹಾಲು ಜೇನು’, ‘ಚಲಿಸುವ ಮೋಡಗಳು’, ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿಯೂ ಅವರು ಅಚ್ಚಳಿಯದ ಛಾಪು ಮೂಡಿಸಿದ್ದರು. ಕನ್ನಡ ಚಿತ್ರರಂಗದೊಂದಿಗೆ ಅವರು ಹೊಂದಿದ್ದ ಆತ್ಮೀಯ ನಂಟು ಮತ್ತು ನೀಡಿದ ಕೊಡುಗೆ ಸದಾ ಸ್ಮರಣೀಯ. ಭಾರತೀಯ ಚಿತ್ರರಂಗದಲ್ಲಿ ದಶಕಗಳ ಕಾಲ ತಮ್ಮ ಸೃಜನಶೀಲತೆ, ವಿಭಿನ್ನ ಪ್ರಯೋಗಗಳು ಮತ್ತು ವಿಶಿಷ್ಟ ಕಥನಶೈಲಿಯಿಂದ ಗುರುತಿಸಿಕೊಂಡ ಸಿಂಗೀತಂ ಶ್ರೀನಿವಾಸರಾವ್ ಅವರ ಅಗಲಿಕೆಯಿಂದ ಬಣ್ಣದಲೋಕ ಬಡವಾಗಿದೆ. ಭಗವಂತನು ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ, ಅವರ ಕುಟುಂಬದವರಿಗೆ ಮತ್ತು ಅಭಿಮಾನಿ ವರ್ಗಕ್ಕೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಸಿಂಗೀತಂ ನಿಧನಕ್ಕೆ ರಿಷಬ್ ಸಂತಾಪ

"ನನ್ನ ನೆಚ್ಚಿನ ನಿರ್ದೇಶಕರಲ್ಲಿ ಒಬ್ಬರಾದ ಸಿಂಗೀತಂ ಶ್ರೀನಿವಾಸರಾವ್ ಸರ್ ಅವರ ನಿಧನವು ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಒಬ್ಬ ಚಲನಚಿತ್ರ ನಿರ್ದೇಶಕನಾಗಿ ಅವರ ಕಲ್ಪನಾಶಕ್ತಿ, ಸರಳತೆ ಮತ್ತು ನಿರ್ಭೀತ ಕಥನ ಶೈಲಿಯು ನನ್ನನ್ನು ಸದಾ ಪ್ರೇರೇಪಿಸಿವೆ. ಸರ್, ನೀವು ನಮಗೆ ನೀಡಿದ ಅದ್ಭುತ ಚಲನಚಿತ್ರಗಳು ಮತ್ತು ಆ ಮಾಂತ್ರಿಕ ಅನುಭವಕ್ಕಾಗಿ ಧನ್ಯವಾದಗಳು. ಸಿಂಗೀತಂ ಶ್ರೀನಿವಾಸರಾವ್ ಸರ್, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ‘ಕಾಂತಾರ’ ಖ್ಯಾತಿಯ ರಿಷಬ್ ಶೆಟ್ಟಿ ಸಂತಾಪ ವ್ಯಕ್ತಪಡಿಸಿದ್ದಾರೆ.