ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

94ನೇ ವಯಸ್ಸಿನಲ್ಲಿ ನಿರ್ದೇಶನಕ್ಕೆ ಮರಳಿದ ಸಿಂಗೀತಂ ಶ್ರೀನಿವಾಸ ರಾವ್;‌ ಅಣ್ಣಾವ್ರಿಗೆ ಸೂಪರ್‌ ಹಿಟ್‌ ಫಿಲ್ಮ್ಸ್‌ ಕೊಟ್ಟ ಡೈರೆಕ್ಟರ್‌ ಇವ್ರು!

Singeetham Srinivasa Rao: 94ನೇ ವಯಸ್ಸಿನಲ್ಲಿ ದಿಗ್ಗಜ ಸಿಂಗೀತಂ ಶ್ರೀನಿವಾಸ ರಾವ್ ಅವರು ನಿರ್ದೇಶನಕ್ಕೆ ಮರಳಿದ್ದಾರೆ. 13 ವರ್ಷಗಳ ನಂತರ ವೈಜಯಂತಿ ಮೂವೀಸ್ ಅಡಿಯಲ್ಲಿ ತಮ್ಮ 61ನೇ ಚಿತ್ರವನ್ನು ಅವರು ಅನೌನ್ಸ್‌ ಮಾಡಿದ್ದಾರೆ. 'ಕಲ್ಕಿ 2898 ಎಡಿ' ಖ್ಯಾತಿಯ ನಾಗ್ ಅಶ್ವಿನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತ ನೀಡಲಿದ್ದಾರೆ.

94ರ ಹರೆಯದಲ್ಲೂ ಬತ್ತದ ಉತ್ಸಾಹ; ನಿರ್ದೇಶನಕ್ಕೆ ಮರಳಿದ‌ ʻದಿಗ್ಗಜʼ ಸಿಂಗೀತಂ

-

Avinash GR
Avinash GR Jan 31, 2026 7:46 PM

ಭಾರತೀಯ ಚಿತ್ರರಂಗದ ದಿಗ್ಗಜ ನಿರ್ದೇಶಕರಲ್ಲಿ ಸಿಂಗೀತಂ ಶ್ರೀನಿವಾಸರಾವ್ ಕೂಡ ಒಬ್ಬರು. ಹತ್ತು ಹಲವು ವಿಭಿನ್ನ ಹಾಗೂ ಪ್ರಯೋಗಾತ್ಮಕ ಸಿನಿಮಾಗಳನ್ನು ನಿರ್ದೇಶಿಸುವ ಮೂಲಕ ಫೇಮಸ್‌ ಆಗಿದ್ದ ಸಿಂಗೀತಂ ಶ್ರೀನಿವಾಸರಾವ್ ಅವರ ವೃತ್ತಿ ಬದುಕಿಗೆ ಆಗಲೇ 54 ವರ್ಷ ತುಂಬಿದೆ. ಪ್ರಯೋಗಾತ್ಮಕವಾಗಿ ಕಮರ್ಷಿಯಲ್‌ ಸಿನಿಮಾಗಳನ್ನು ಮಾಡುತ್ತಿದ್ದ ಸಿಂಗೀತಂ ಶ್ರೀನಿವಾಸರಾವ್ ಅವರಿಗೆ ಈಗ 94 ವರ್ಷ ವಯಸ್ಸು. ಸದ್ಯ ಅವರೀಗ ಚಿತ್ರ ನಿರ್ದೇಶನಕ್ಕೆ ಕಮ್‌ಬ್ಯಾಕ್‌ ಮಾಡಿದ್ದಾರೆ.

ಹೌದು, ಖ್ಯಾತ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಬ್ಯಾನರ್‌ ಅಡಿಯಲ್ಲಿ ಹೊಸ ಸಿನಿಮಾವೊಂದು ಘೋಷಣೆ ಆಗಿದೆ. SSR61 ಆಗಿ ಸೆಟ್ಟೇರಲಿರುವ ಈ ಚಿತ್ರವನ್ನು ಪ್ರಸಿದ್ಧ ಕಲ್ಕಿ 2898 ಎಡಿ ನಿರ್ದೇಶಕ ನಾಗ್ ಅಶ್ವಿನ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾಗೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಲಿದ್ದಾರೆ. 94ನೇ ವಯಸ್ಸಿನಲ್ಲಿ ಸಿಂಗೀತಂ ಶ್ರೀನಿವಾಸ ರಾವ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ.

ಕ್ಲಾಸಿಕ್‌ ಸಿನಿಮಾಗಳ ಮಾಸ್ಟರ್‌

ಸಿಂಗೀತಂ ಶ್ರೀನಿವಾಸ ರಾವ್ ಅವರ ಸಿನಿಮಾ ಎಂದಾಗ, ಅದು ಅದು ಖಂಡಿತವಾಗಿಯೂ ವಿಭಿನ್ನ ಕಥಾಹಂದರ ಮತ್ತು ವೈವಿಧ್ಯತೆಯನ್ನು ಹೊಂದಿರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ ಈ ಬಾರಿ ಅವರು ಆಯ್ಕೆ ಮಾಡಿಕೊಂಡಿರುವ ಕಾನ್ಸೆಪ್ಟ್ ಏನು ಎಂಬುದು ಕುತೂಹಲ ಮೂಡಿಸಿದೆ. ಹಿಂದೆ ನಂದಮೂರಿ ಬಾಲಕೃಷ್ಣ ಅವರೊಂದಿಗೆ ಮಾಡಿದ್ದ 'ಆದಿತ್ಯ 369' ದೊಡ್ಡ ಯಶಸ್ಸು ಕಂಡಿದ್ದಲ್ಲದೆ ಎಲ್ಲರ ಪ್ರಶಂಸೆಗೂ ಪಾತ್ರವಾಗಿತ್ತು. ಕಮಲ್‌ ಹಾಸನ್‌ ಜೊತೆ ಹಲವು ಹಿಟ್‌ ಹಾಗೂ ಕ್ಲಾಸಿಕ್‌ ಸಿನಿಮಾಗಳನ್ನ ಸಿಂಗೀತಂ ನೀಡಿದ್ದಾರೆ.

Sarkari Shale H 8 Movie: ರಾಘವೇಂದ್ರ ರಾಜ್‌ಕುಮಾರ್‌ ಸಿನಿಮಾದಲ್ಲಿ ಮಿಂಚಿದ ಗಿಲ್ಲಿ ನಟ; ಮತ್ತೊಂದು ಚಿತ್ರದಲ್ಲಿ ʻಬಿಗ್ ಬಾಸ್‌ʼ ಸ್ಟಾರ್‌!

13 ವರ್ಷಗಳ ಬಳಿಕ ಕಮ್‌ಬ್ಯಾಕ್‌

ಸಿಂಗೀತಂ ಶ್ರೀನಿವಾಸ ರಾವ್‌ ಅವರು ಕೊನೆಯದಾಗಿ 2013ರಲ್ಲಿ ತೆರೆಕಂಡಿದ್ದ 'ವೆಲ್ಕಮ್ ಒಬಾಮಾ' ಚಿತ್ರವನ್ನು ನಿರ್ದೇಶಿಸಿದ್ದರು. ಅದಾದ ಮೇಲೆ ನಿರ್ದೇಶನದಿಂದ ಉಳಿದಿದ್ದ ಅವರು, ಇದೀಗ ತಮ್ಮ 61ನೇ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. 94ನೇ ವಯಸ್ಸಿನಲ್ಲೂ ನಿರ್ದೇಶನ ಮಾಡುತ್ತಿರುವ ಭಾರತೀಯ ಚಿತ್ರರಂಗದ ಏಕೈಕ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಎಂಬುದು ವಿಶೇಷ.

ಅಣ್ಣಾವ್ರಿಗೆ ಹಿಟ್‌ ಸಿನಿಮಾ ಕೊಟ್ಟ ಡೈರೆಕ್ಟರ್‌

ಡಾ. ರಾಜ್‌ಕುಮಾರ್ ಮತ್ತು ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರು 80ರ ದಶಕದಲ್ಲಿ ಒಟ್ಟಿಗೆ ಏಳು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇವು ಡಾ. ರಾಜ್‌ಕುಮಾರ್ ಕರಿಯರ್‌ನಲ್ಲಿ ಹೊಸ ಆಯಾಮಗಳನ್ನು ತೆರೆದಿಟ್ಟ ಪ್ರಯೋಗಗಳಾಗಿದ್ದವು. ‘ಹಾಲು ಜೇನು’ ಸಿನಿಮಾದಿಂದ ಶುರುವಾಗಿ ಇವರ ಕಾಂಬಿನೇಷನ್‌, ‘ಚಲಿಸುವ ಮೋಡಗಳು’, ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ‘ಎರಡು ನಕ್ಷತ್ರಗಳು’, ‘ಶ್ರಾವಣ ಬಂತು’, ‘ಜ್ವಾಲಾಮುಖಿ’ ಮತ್ತು ‘ದೇವತಾ ಮನುಷ್ಯ’ ಚಿತ್ರಗಳನ್ನು ನೀಡಿದರು. ಬಳಿಕ ಶಿವರಾಜ್‌ಕುಮಾರ್‌ ಅವರ ಮೊದಲ ಸಿನಿಮಾ ಆನಂದ್‌ಗೂ ಸಿಂಗೀತಂ ಡೈರೆಕ್ಷನ್‌ ಮಾಡಿದ್ದರು.

ಖುಷಿ ವ್ಯಕ್ತಪಡಿಸಿದ ಶಿವಣ್ಣ

"ಸಿಂಗೀತಂ ಶ್ರೀನಿವಾಸ್ ರಾವ್ ಅವರು ನಿರ್ದೇಶನಕ್ಕೆ ಮರಳುತ್ತಿರುವುದು ಅತ್ಯಂತ ಸಂತಸದ ವಿಷಯ. ನನ್ನ ಮೊದಲ ಚಿತ್ರದ ನಿರ್ದೇಶಕರು, ಅವರ ಆಲೋಚನೆಗಳು ಯಾವಾಗಲು ಅಹೆಡ್ ಆಫ್ ದಿ ಟೈಮ್ಸ್ ಇತ್ತು ಅನ್ನುವುದಕ್ಕೆ ಪುಷ್ಪಕ ವಿಮಾನ ಚಿತ್ರವೇ ಸಾಕ್ಷಿ. ಅಪ್ಪಾಜಿ, ರಾಘು, ಅಪ್ಪು ಹಾಗು ನನ್ನನ್ನು ಬೇರೆ ಬೇರೆ ಚಿತ್ರಗಳಲ್ಲಿ ನಿರ್ದೇಶಿಸಿದ ಏಕೈಕ ನಿರ್ದೇಶಕರು ಸಿಂಗೀತಂ ಶ್ರೀನಿವಾಸ್ ರಾವ್ ಅವರು. 94ರ ಹರೆಯದಲ್ಲೂ ನಿರ್ದೇಶನ ಮಾಡುವ ಅವರ ಚೈತನ್ಯ ನಮ್ಮೆಲ್ಲರಿಗೂ ಸ್ಪೂರ್ತಿ. ಚಿತ್ರಕ್ಕೆ, ಚಿತ್ರತಂಡಕ್ಕೆ ಹಾಗು ಸಿಂಗೀತಂ ಶ್ರೀನಿವಾಸ್ ರಾವ್ ಅವರಿಗೆ ತುಂಬು ಹೃದಯದ ಶುಭಾಶಯಗಳು" ಎಂದು ಶಿವರಾಜ್‌ಕುಮಾರ್‌ ಹೇಳಿದ್ದಾರೆ.