ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ ʻ45ʼ ಮತ್ತು ನಟ ಸುದೀಪ್ ಅಭಿನಯದ ʻಮಾರ್ಕ್ʼ ಸಿನಿಮಾಗಳು ಒಂದೇ ದಿನ (ಡಿ.25) ತೆರೆಗೆ ಬರುತ್ತಿವೆ. ಈ ಎರಡೂ ಚಿತ್ರಗಳ ಮೇಲೆ ಅತಿಯಾದ ನಿರೀಕ್ಷೆ ಇದೆ. ಎರಡೂ ಕೂಡ ದೊಡ್ಡ ಬಜೆಟ್‌ನ ಸಿನಿಮಾಗಳೇ. ಸದ್ಯ ಬಿಡುಗಡೆ ಇನ್ನೂ ನಾಲ್ಕು ದಿನ ಇರುವಾಗಲೇ ಈ ಎರಡೂ ಸಿನಿಮಾಗಳ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಅನ್ನು ಓಪನ್ ಮಾಡಲಾಗಿದೆ. ಆದರೆ ಒಂದು ಟ್ವಿಸ್ಟ್ ಇದೆ.
ಈಗಾಗಲೇ ಘೋಷಣೆಯಾದಂತೆ, ಡಿಸೆಂಬರ್ 25ರಂದು 45 ಮತ್ತು ಮಾರ್ಕ್ ತೆರೆಗೆ ಬರುತ್ತಿವೆ. ಆದರೆ 45 ಚಿತ್ರವನ್ನು ಒಂದು ದಿನ ಮೊದಲೇ ವೀಕ್ಷಿಸ ಬಹುದಾಗಿದೆ. ಅಡ್ವಾನ್ಸ್ ಟಿಕೆಟ್ ಬುಕಿಂಗ್ ತೆರೆದಿದ್ದು, ಅಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳಿಗೆ ಟಿಕೆಟ್ ಬುಕ್ ಮಾಡಬಹುದಾಗಿದೆ.
45 ಸಿನಿಮಾದ ಪೇಯ್ಡ್ ಪ್ರೀಮಿಯರ್‌ಗೆ ಬುಕಿಂಗ್ ಓಪನ್
ಡಿಸೆಂಬರ್ 24ರ ಸಂಜೆಯಿಂದಲೇ 45 ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋಗಳು ಆರಂಭವಾಗಲಿದ್ದು, ಅದಕ್ಕಾಗಿ ಬುಕ್ ಮೈ ಶೋನಲ್ಲಿ ಟಿಕೆಟ್ ಬುಕಿಂಗ್‌ಗೆ ಅವಕಾಶ ನೀಡಲಾಗಿದೆ. ಮೊದಲು ಸಿಂಗಲ್ ಸ್ಕ್ರೀನ್ ಶೋಗಳನ್ನು ತೆರೆಯಲಾಗಿದೆ. ಸಾಮಾನ್ಯವಾಗಿ ಪೇಯ್ಡ್ ಪ್ರೀಮಿಯರ್ ಶೋಗಳಿಗೆ 600-700 ರೂ. ಟಿಕೆಟ್ ದರ ಇರುತ್ತದೆ. ಒಮ್ಮೊಮ್ಮೆ 1000 ರೂ. ದಾಟಿದ್ದನ್ನು ಕೂಡ ನೋಡಿದ್ದೇವೆ. ಆದರೆ 45 ಸಿನಿಮಾದ ಡಿಸೆಂಬರ್ 24ರ ಪೇಯ್ಡ್ ಪ್ರೀಮಿಯರ್‌ನ ಟಿಕೆಟ್ ದರಗಳು 200-250 ರೂ. ಇದೆ. ಇನ್ನೂ ಮಲ್ಟಿಪ್ಲೆಕ್ಸ್ ಶೋಗಳು ಓಪನ್ ಆಗಿಲ್ಲ. ಡಿ.24ರ ಸಂಜೆ 7 ಗಂಟೆಯಿಂದ ಶೋಗಳು ಶುರುವಾಗಲಿವೆ. ಇನ್ನೂ ಡಿಸೆಂಬರ್ 25ರ ಶೋಗಳ ಟಿಕೆಟ್ ಬುಕಿಂಗ್ ಆರಂಭವಾಗಿಲ್ಲ.
ಅಡ್ವಾನ್ಸ್ ಬುಕಿಂಗ್ ಬಗ್ಗೆ ಸುದೀಪ್ ಪೋಸ್ಟ್
ಡಿಸೆಂಬರ್ 25ರ ಬೆಳ್ಳಂಬೆಳಗ್ಗೆಯಿಂದ ಮಾರ್ಕ್ ಶೋ ಆರಂಭ
ಹೌದು, ಮತ್ತೊಂದು ಮಾರ್ಕ್ ಚಿತ್ರದ ಟಿಕೆಟ್ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಕೂಡ ಆರಂಭವಾಗಿದೆ. ಈವರೆಗೂ ಚಿತ್ರತಂಡ ಯಾವುದೇ ಪೇಯ್ಡ್ ಪ್ರೀಮಿಯರ್ ಕುರಿತ ಘೋಷಣೆ ಮಾಡಿಲ್ಲ. ಬದಲಿಗೆ, ಡಿಸೆಂಬರ್ 25ರ ಬೆಳ್ಳಂಬೆಳಗ್ಗೆಯೇ ಮಾರ್ಕ್ ಸಿನಿಮಾ ಪ್ರದರ್ಶನ ಆರಂಭಿಸಲಿದೆ. ಈಗಾಗಲೇ ಟಿಕೆಟ್ ಬುಕಿಂಗ್ ಶುರುವಾಗಿದೆ. ಬಹುತೇಕ ಕಡೆ ಬೆಳಗ್ಗೆ 6 ಗಂಟೆಯ ಫ್ಯಾನ್ಸ್ ಶೋಗಳಿಗೆ ಮಾತ್ರ ಬುಕಿಂಗ್ ಓಪನ್ ಮಾಡಲಾಗಿದೆ. ಟಿಕೆಟ್ ದರ 350 ರಿಂದ 400 ವರೆಗೆ ಇದೆ. ಸದ್ಯ ಸಿಂಗಲ್ ಸ್ಕ್ರೀನ್‌ಗಳಲ್ಲಿ ಮಾತ್ರ ಬುಕಿಂಗ್ ಮಾತ್ರ ತೆರೆಯಲಾಗಿದೆ. ಈಗಾಗಲೇ ಅಭಿಮಾನಿಗಳು ಟಿಕೆಟ್ ಬುಕ್ ಮಾಡುತ್ತಿದ್ದಾರೆ.
45 ಸಿನಿಮಾವನ್ನು ಅರ್ಜುನ್ ಜನ್ಯ ನಿರ್ದೇಶನ ಮಾಡಿದ್ದರೆ, ಮಾರ್ಕ್‌ಗೆ ವಿಜಯ್ ಕಾರ್ತಿಕೇಯ ಅವರು ನಿರ್ದೇಶನ ಮಾಡಿದ್ದಾರೆ. ಈ ಎರಡೂ ಸಿನಿಮಾಗಳಿಗಾಗಿ ಸ್ಯಾಂಡಲ್‌ವುಡ್ ಕಾದು ಕುಳಿತಿದೆ.