ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shraddha Kapoor: ಶ್ರದ್ಧಾ ಕಪೂರ್ ಡೆಡಿಕೇಷನ್‌ಗೆ ಫಿದಾ ಆದ ನಿರ್ದೇಶಕ; ಕಾಲು ಊದಿಕೊಂಡರೂ ನಿಲ್ಲದ ಅಭ್ಯಾಸ

Shraddha Kapoor: ಬಾಲಿವುಡ್ ನಟಿ ಶ್ರದ್ಧಾ ಕಪೂರ್ (Shraddha Kapoor) ತಮ್ಮ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಇದೀಗ ಅವರು ಅಭಿನಯಿಸಿರುವ ಬಹುನಿರೀಕ್ಷಿತ ಸಿನಿಮಾ ‘ಈಥಾ’ (Eetha) ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದಲ್ಲಿ ಶ್ರದ್ಧಾ ಅವರು ಖ್ಯಾತ ತಮಾಷಾ ಮತ್ತು ಲಾವಣಿ ಕಲಾವಿದೆ ವಿಠಾಬಾಯಿ ಭಾವು ಮಾಂಗ್ ನಾರಾಯಣಗಾಂವ್ಕರ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕಾಗಿ ನಟಿ ಪಟ್ಟಿರುವ ಶ್ರಮದ ಬಗ್ಗೆ ಚಿತ್ರದ ನಿರ್ದೇಶಕ ಲಕ್ಷ್ಮಣ್ (Lakshman) ಉಟೇಕರ್ ಇತ್ತೀಚೆಗೆ ಹಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಟಿ ಶ್ರದ್ಧಾ ಕಪೂರ್

ಬಾಲಿವುಡ್ ನಟಿ ಶ್ರದ್ಧಾ ಕಪೂರ್ (Shraddha Kapoor) ತಮ್ಮ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಇದೀಗ ಅವರು ಅಭಿನಯಿಸಿರುವ ಬಹುನಿರೀಕ್ಷಿತ ಸಿನಿಮಾ ‘ಈಥಾ’ (Eetha) ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದಲ್ಲಿ ಶ್ರದ್ಧಾ ಅವರು ಖ್ಯಾತ ತಮಾಷಾ ಮತ್ತು ಲಾವಣಿ ಕಲಾವಿದೆ ವಿಠಾಬಾಯಿ ಭಾವು ಮಾಂಗ್ ನಾರಾಯಣಗಾಂವ್ಕರ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕಾಗಿ ನಟಿ ಪಟ್ಟಿರುವ ಶ್ರಮದ ಬಗ್ಗೆ ಚಿತ್ರದ ನಿರ್ದೇಶಕ ಲಕ್ಷ್ಮಣ್ (Lakshman) ಉಟೇಕರ್ ಇತ್ತೀಚೆಗೆ ಹಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಪುಣೆಯಲ್ಲಿ ನಡೆದ ಚಿತ್ರದ ‘ಜಿ ಜಿ ರೇ ಜಿ’ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕರು, ಶ್ರದ್ಧಾ ಅವರ ಪರಿಶ್ರಮ ಮತ್ತು ಕಲೆಯ ಮೇಲಿನ ಆಸಕ್ತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಗಂಟೆಗಟ್ಟಲೆ ನೃತ್ಯಾಭ್ಯಾಸ ಮಾಡಿದ್ದರಿಂದ ಅವರ ಕಾಲುಗಳು ಊದಿಕೊಂಡಿದ್ದರೂ ಚಿತ್ರೀಕರಣದ ಬಗ್ಗೆ ಅಪಾರ ಉತ್ಸಾಹ ಹೊಂದಿದ್ದರು ಎಂದು ಬಹಿರಂಗಪಡಿಸಿದ್ದಾರೆ.

ಪ್ರತಿದಿನ 8 ಗಂಟೆ ಅಭ್ಯಾಸ, ಕಾಲಿಗೆ 4 ಕೆ.ಜಿ. ಗೆಜ್ಜೆ!

‘ಈಥಾ’ ಚಿತ್ರದ ಹಾಡಿಗಾಗಿ ಮುಂಬೈನ ಮಡ್ ಐಲ್ಯಾಂಡ್‌ನಲ್ಲಿ ಬೃಹತ್ ಸೆಟ್ ನಿರ್ಮಿಸಲಾಗಿತ್ತು. ಖ್ಯಾತ ನೃತ್ಯ ನಿರ್ದೇಶಕಿ ವೈಭವೀ ಮರ್ಚೆಂಟ್ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಹಾಡಿಗಾಗಿ ಶ್ರದ್ಧಾ ಕಪೂರ್ ಬರೋಬ್ಬರಿ 25 ದಿನಗಳ ಕಾಲ ನಿರಂತರ ಅಭ್ಯಾಸ ನಡೆಸಿದ್ದರು.

ಇದನ್ನೂ ಓದಿ: Bigg Boss Kannada 13: ಧನುಷ್‌ ಮಾಸ್ಟರ್‌ ಸ್ಟ್ರೋಕ್:‌ ನಾಮಿನೇಟ್‌ ಆದವರು ಯಾರು?

ಪ್ರತಿ ಕಾಲಿಗೂ ನಾಲ್ಕು ಕೆ.ಜಿ. ತೂಕದ ಗೆಜ್ಜೆಗಳನ್ನು ಕಟ್ಟಿಕೊಂಡು ದಿನಕ್ಕೆ ಸುಮಾರು ಎಂಟು ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದರು. ಇದರಿಂದ ಅವರ ಕಾಲುಗಳು ಊದಿಕೊಳ್ಳುತ್ತಿದ್ದವು. ಅಷ್ಟೇ ಅಲ್ಲದೆ, ತಮಾಷಾ ಮತ್ತು ಲಾವಣಿ ಕಲೆಯ ಆಳವನ್ನು ಅರ್ಥಮಾಡಿಕೊಳ್ಳಲು ಈ ಕಲಾ ಪ್ರಕಾರದ ಜಗತ್ತಿನಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು ಎಂದು ನಿರ್ದೇಶಕ ಲಕ್ಷ್ಮಣ್ ತಿಳಿಸಿದ್ದಾರೆ.

ಸ್ನಾಯುಗಳಿಗೆ ಗಾಯವಾದರೂ ಸಿನಿಮಾ ಮೇಲಿನ ಪ್ರೀತಿ ಕಡಿಮೆಯಾಗಲಿಲ್ಲ!

ಹಾಡಿನ ಚಿತ್ರೀಕರಣದ ಮೊದಲ ದಿನ ಯಾವುದೇ ಸಮಸ್ಯೆಯಿಲ್ಲದೆ ಪೂರ್ಣಗೊಂಡಿತ್ತು. ಆದರೆ ಎರಡನೇ ದಿನ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಶ್ರದ್ಧಾ ಅವರಿಗೆ ಸ್ನಾಯು ಸೆಳೆತದೊಂದಿಗೆ ಗಾಯವಾಗಿತ್ತು. ಹೀಗಾಗಿ ಅನಿವಾರ್ಯವಾಗಿ ಚಿತ್ರೀಕರಣವನ್ನು ಸ್ಥಗಿತಗೊಳಿಸಬೇಕಾಯಿತು.

ಈ ಬಗ್ಗೆ ಮಾತನಾಡಿದ ನಿರ್ದೇಶಕರು, ಶೂಟಿಂಗ್ ನಿಂತಿದ್ದಕ್ಕೆ ತಮಗೆ ಅಷ್ಟೊಂದು ಬೇಸರವಾಗಿರಲಿಲ್ಲ. ಆದರೆ ಗಾಯದ ಕಾರಣದಿಂದ ಶ್ರದ್ಧಾ ಕಣ್ಣೀರು ಹಾಕುತ್ತಿದ್ದುದನ್ನು ನೋಡಿ ತುಂಬಾ ನೋವಾಯಿತು ಎಂದು ಹೇಳಿದ್ದಾರೆ.

ಗಾಯದಿಂದ ಚೇತರಿಸಿಕೊಳ್ಳಲು ಸುಮಾರು ಒಂದು ತಿಂಗಳು ತೆಗೆದುಕೊಂಡಿದ್ದ ಶ್ರದ್ಧಾ, ಸಂಪೂರ್ಣ ಗುಣಮುಖರಾದ ಬಳಿಕ ಮತ್ತೆ ಚಿತ್ರೀಕರಣಕ್ಕೆ ಮರಳಲು ಉತ್ಸುಕರಾಗಿದ್ದರು. ವಿಠಾಬಾಯಿ ಅವರ ಪಾತ್ರಕ್ಕೆ ಶ್ರದ್ಧಾ ಅವರಿಗಿಂತ ಉತ್ತಮ ಆಯ್ಕೆ ಚಿತ್ರರಂಗದಲ್ಲಿ ಮತ್ತೊಬ್ಬರು ಇರಲಿಲ್ಲ ಎಂಬ ವಿಶ್ವಾಸವನ್ನೂ ನಿರ್ದೇಶಕರು ವ್ಯಕ್ತಪಡಿಸಿದ್ದಾರೆ.

ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಸೀರೆಯುಟ್ಟು ಮಿಂಚಿದ ಶ್ರದ್ಧಾ, ವೇದಿಕೆಯ ಮೇಲೆ ಮಕ್ಕಳೊಂದಿಗೆ ‘ಜಿ ಜಿ ರೇ ಜಿ’ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ನೈಜ ಕಲಾವಿದೆಯ ಜೀವನ ಆಧರಿಸಿದ ‘ಈಥಾ’

ಲಕ್ಷ್ಮಣ್ ಉಟೇಕರ್ ನಿರ್ದೇಶನದ ‘ಈಥಾ’ ಒಂದು ಜೀವನಾಧಾರಿತ ಸಂಗೀತಮಯ ಚಿತ್ರವಾಗಿದೆ. ಮಹಾರಾಷ್ಟ್ರದ ಸಾಂಪ್ರದಾಯಿಕ ತಮಾಷಾ ಮತ್ತು ಲಾವಣಿ ನೃತ್ಯ ಪ್ರಕಾರಗಳಲ್ಲಿ ಅಪಾರ ಹೆಸರು ಗಳಿಸಿದ್ದ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಬದುಕಿನಿಂದ ಈ ಸಿನಿಮಾ ಸ್ಫೂರ್ತಿ ಪಡೆದಿದೆ.

ಸಮಾಜದ ಹಲವು ಸವಾಲುಗಳನ್ನು ಎದುರಿಸಿ, ಸಂಪ್ರದಾಯದ ಗಡಿಗಳನ್ನು ಮೀರಿ ತನ್ನದೇ ಆದ ಛಾಪು ಮೂಡಿಸಿದ ಮಹಿಳೆಯ ಹೋರಾಟದ ಕಥೆಯನ್ನು ಈ ಚಿತ್ರ ತೆರೆದಿಡಲಿದೆ. ಮರಾಠಿ ಪುಸ್ತಕ ‘ತಮಾಷಾ: ವಿಠಾಬಾಯಿಚ್ಯಾ ಆಯುಷ್ಯಾಚಾ’ದಲ್ಲಿ ದಾಖಲಾಗಿರುವ ಘಟನೆಗಳು ಕೂಡ ಸಿನಿಮಾಕ್ಕೆ ಆಧಾರವಾಗಿವೆ.

ತಮಾಷಾ ಕಲಾವಿದರ ಬದುಕಿನ ಬಗ್ಗೆ ಜನರಿಗಿರುವ ದೃಷ್ಟಿಕೋನವನ್ನು ಈ ಸಿನಿಮಾ ಬದಲಿಸಲಿದೆ ಎಂಬ ಆಶಯವನ್ನು ನಿರ್ದೇಶಕರು ವ್ಯಕ್ತಪಡಿಸಿದ್ದಾರೆ. ಕೇವಲ ವೇದಿಕೆಯ ಮೇಲಿನ ವೈಭವವಷ್ಟೇ ಅಲ್ಲದೆ, ಈ ಕಲಾವಿದರು ವೈಯಕ್ತಿಕ ಜೀವನದಲ್ಲಿ ಎದುರಿಸುವ ಸಂಕಷ್ಟಗಳನ್ನೂ ಚಿತ್ರದಲ್ಲಿ ತೋರಿಸಲಾಗುತ್ತದೆ.

ಡಿಸೆಂಬರ್ 4ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ

ದಿನೇಶ್ ವಿಜನ್ ಮತ್ತು ಕರಿಷ್ಮಾ ಶರ್ಮಾ ಅವರ ನಿರ್ಮಾಣದಲ್ಲಿ ಮ್ಯಾಡಾಕ್ ಫಿಲ್ಮ್ಸ್ ಹಾಗೂ ಕಠ್ಪುತ್ಲಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ‘ಈಥಾ’ ನಿರ್ಮಾಣವಾಗುತ್ತಿದೆ.

ಶ್ರದ್ಧಾ ಕಪೂರ್ ಜೊತೆಗೆ ರಣದೀಪ್ ಹೂಡಾ, ಮೊಹಮ್ಮದ್ ಜೀಶಾನ್ ಅಯ್ಯುಬ್, ಸಿದ್ಧಾರ್ಥ್ ಜಾಧವ್, ಇಷ್ಟಿಯಾಕ್ ಖಾನ್ ಮತ್ತು ಅನಂತ್ ಜೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಸಿನಿಮಾ ಡಿಸೆಂಬರ್ 4ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ವಿಶೇಷವೆಂದರೆ, ಇದೇ ದಿನ ಸಲ್ಮಾನ್ ಖಾನ್ ಅಭಿನಯದ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಚಿತ್ರವೂ ತೆರೆಗೆ ಬರಲಿದೆ. ಅಪೂರ್ವ ಲಾಖಿಯಾ ನಿರ್ದೇಶನದ ಈ ಚಿತ್ರದಲ್ಲಿ ಚಿತ್ರಾಂಗದಾ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Bigg Boss Kannada 13: ಗಾನವಿಗೆ ಗಗನ್ ಖಡಕ್ ವಾರ್ನಿಂಗ್; ಕ್ಯಾಪ್ಟನ್ಸಿ ಆಸೆಗಾಗಿ ಹೀಗೆ ಮಾಡೋದಾ?

ಹೀಗಾಗಿ ಬಾಕ್ಸ್ ಆಫೀಸ್‌ನಲ್ಲಿ ಶ್ರದ್ಧಾ ಕಪೂರ್ ಮತ್ತು ಸಲ್ಮಾನ್ ಖಾನ್ ಸಿನಿಮಾಗಳ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. ವಿಠಾಬಾಯಿ ಅವರ ಜೀವನಕಥೆಯನ್ನು ಶ್ರದ್ಧಾ ಹೇಗೆ ತೆರೆಮೇಲೆ ಜೀವಂತಗೊಳಿಸಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Yashaswi Devadiga

View all posts by this author