ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮನೋಜ್ ಕುಮಾರ್ ಸಾರಥ್ಯದಲ್ಲಿ ಮೂಡಿಬಂದಿರುವ ‘ಪ್ರೇಮದ ಊರಲಿ’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡುತ್ತಿದ್ದು, ಅಚ್ಚರಿಯ ಗೆಲುವಿನೊಂದಿಗೆ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸುವತ್ತ ಮುನ್ನುಗ್ಗುತ್ತಿದೆ. ಮೂಲಗಳ ಪ್ರಕಾರ, 2 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ, ಪ್ರೇಕ್ಷಕರ ಬಾಯಿಮಾತಿನ ಪ್ರಚಾರದಿಂದಲೇ ಥಿಯೇಟರ್‌ಗಳತ್ತ ಜನರನ್ನು ಸೆಳೆಯುತ್ತಿದ್ದು, ಈ ವರ್ಷದ ಅತಿ ದೊಡ್ಡ ಲಾಭದಾಯಕ ಚಿತ್ರವಾಗಿ ಹೊರಹೊಮ್ಮಿದೆ.
ಈ ವರ್ಷ ದಾಖಲೆ ಬರೆದ ʻಪ್ರೇಮದ ಊರಲಿʼ ಸಿನಿಮಾ
ಮೂಲಗಳ ಪ್ರಕಾರ, ಬಿಡುಗಡೆಯಾದ ಕೇವಲ 9 ದಿನಗಳಲ್ಲೇ 10 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಬಾಚಿಕೊಂಡಿದ್ದ ಚಿತ್ರವು, 10ನೇ ದಿನವಾದ ಅಕ್ಟೋಬರ್ 4ರ ಗಳಿಕೆ ಸೇರಿದಂತೆ ಒಟ್ಟಾರೆ 13+ ಕೋಟಿ ರೂಪಾಯಿಗಳ ಗಡಿ ದಾಟಲಿದೆ. ಬಹುತೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನಗಳು ಹೌಸ್‌ಫುಲ್ ಆಗುತ್ತಿದ್ದು, ಮುಂದಿನ ಎರಡು ವಾರಗಳಲ್ಲಿ ಚಿತ್ರದ ಒಟ್ಟಾರೆ ಕಲೆಕ್ಷನ್ 30 ಕೋಟಿ ರೂಪಾಯಿ ಮುಟ್ಟುವ ನಿರೀಕ್ಷೆಯಿದೆ. ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಈ ಪ್ರಮಾಣದ ಭರ್ಜರಿ ರಿಟರ್ನ್ಸ್ ಕಂಡ ಮತ್ತೊಂದು ಸಿನಿಮಾ ಇಲ್ಲ ಎಂಬುದು ವಿಶೇಷ.
Premada Oorali Review: ಅಬ್ಬರವಿಲ್ಲದ ಹಳ್ಳಿ ಸೊಗಡಿನ ಮನಮುಟ್ಟುವ ಅಪ್ಪ- ಮಗನ ಬಾಂಧವ್ಯದ ಕಥೆ
ವಿವಿಧ ಭಾಷೆಗಳಿಗೆ ʻಪ್ರೇಮದ ಊರಲಿʼ ಡಬ್
ರಂಗಾಯಣ ರಘು ಅವರ ಮನಮುಟ್ಟುವ ಅಭಿನಯ, ಶ್ರೀರಾಮ್, ರಮಿಕಾ ಶಿವು ಹಾಗೂ ತಪಸ್ವಿನಿ ಪೂಣಚ್ಚ ಸೇರಿದಂತೆ ಇಡೀ ತಾರಾಗಣದ ಉತ್ತಮ ನಟನೆಗೆ ಪ್ರೇಕ್ಷಕರು ಮನಸೋತಿದ್ದಾರೆ. ಕಂಟೆಂಟ್ ಆಧಾರಿತ ಈ ಚಿತ್ರ ಕರ್ನಾಟಕದಲ್ಲಿ ಧೂಳೆಬ್ಬಿಸಿದ ಬೆನ್ನಲ್ಲೇ, ಹೊರ ರಾಜ್ಯಗಳಲ್ಲೂ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದೆ. ಈಗಾಗಲೇ ತೆಲುಗು ಭಾಷೆಗೆ ಡಬ್ ಆಗಿ ಬಿಡುಗಡೆಯಾಗಿರುವ ಈ ಚಿತ್ರ ಅಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರ ಬೆನ್ನಲ್ಲೇ ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೂ ಚಿತ್ರವನ್ನು ಕೊಂಡೊಯ್ಯಲು ಚಿತ್ರತಂಡ ಸಕಲ ಸಿದ್ಧತೆ ನಡೆಸಿದೆ.
ಸಾಥ್ ನೀಡಿದ ವಿತರಣಾ ಸಂಸ್ಥೆಗಳು
ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಮನೋಜ್ ಕುಮಾರ್, "ನಮ್ಮ ಸಿನಿಮಾಗೆ ಪರಭಾಷೆಗಳಿಂದ ವ್ಯಾಪಕ ಬೇಡಿಕೆ ಬರುತ್ತಿದೆ. ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಚಿತ್ರವನ್ನು ವಿತರಣೆ ಮಾಡಲು ಈಗಾಗಲೇ ಪ್ರಮುಖ ಸಂಸ್ಥೆಗಳೊಂದಿಗೆ ಮಾತುಕತೆಗಳು ನಡೆಯುತ್ತಿವೆ" ಎಂದು ಸಂತಸ ಹಂಚಿಕೊಂಡಿದ್ದಾರೆ. ಚಿತ್ರದ ಬಿಡುಗಡೆ ಹಾಗೂ ವಿತರಣೆಯ ಜವಾಬ್ದಾರಿಯನ್ನು ಚಿತ್ರರಂಗದ ಪ್ರಮುಖ ಸಂಸ್ಥೆಗಳು ಹೊತ್ತಿದ್ದು, ಕರ್ನಾಟಕದಲ್ಲಿ ಜಯಣ್ಣ ಕಂಬೈನ್ಸ್ ಚಿತ್ರವನ್ನು ಯಶಸ್ವಿಯಾಗಿ ಪ್ರದರ್ಶಿಸುತ್ತಿದ್ದರೆ, ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆಯು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಾಗೂ ವಿದೇಶಗಳಲ್ಲಿ ಸಿನಿಮಾವನ್ನು ತೆರೆಕಾಣಿಸುವ ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಚಿತ್ರತಂಡಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮೆಚ್ಚುಗೆ
‘ಕಾಂತಾರ’ ಖ್ಯಾತಿಯ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು ಈ ಚಿತ್ರದ ಅಭೂತಪೂರ್ವ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ದಾರೆ. "ಒಂದು ಒಳ್ಳೆಯ ಸಿನಿಮಾ ಬಂದಾಗ ಪ್ರೇಕ್ಷಕರು ಅದನ್ನು ಎಂದಿಗೂ ಕೈಬಿಡದೆ ಗೆಲ್ಲಿಸುತ್ತಾರೆ ಅನ್ನೋದನ್ನ ನಮ್ಮ ಜನ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ‘ಪ್ರೇಮದ ಊರಲಿ’ ಅದಕ್ಕೊಂದು ಅತ್ಯುತ್ತಮ ಉದಾಹರಣೆ.
ಹಲವು ದಿನಗಳ ನಂತರ ಒಂದು ಕನ್ನಡ ಸಿನಿಮಾಗೆ ಜನರಿಂದ ಇಷ್ಟೊಂದು ಪ್ರೀತಿ ಮತ್ತು ಬೆಂಬಲ ಸಿಗುತ್ತಿರುವುದನ್ನು ನೋಡಲು ಹೆಮ್ಮೆಯಾಗುತ್ತಿದೆ. ಕನ್ನಡ ಜನತೆಯ ಈ ಬೆಂಬಲಕ್ಕೆ ಧನ್ಯವಾದಗಳು ಹಾಗೂ ಚಿತ್ರತಂಡಕ್ಕೆ ಹೃದಯಪೂರ್ವಕ ಶುಭಾಶಯಗಳು" ಎಂದು ಬೆನ್ನುತಟ್ಟಿದ್ದಾರೆ.