ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪುನರ್ಜನ್ಮದ ಸುತ್ತ ಸಾಗುವ ಸಸ್ಪೆನ್ಸ್ ಥ್ರಿಲ್ಲರ್ 'ತರಂಗಾಂತರಂಗ' ಟೀಸರ್ ರಿಲೀಸ್: ಸ್ಯಾಂಡಲ್‌ವುಡ್‌ಗೆ ನಾಯಕ-ನಿರ್ದೇಶಕನಾಗಿ ಉಡುಪಿಯ ಶ್ರೀಷ ಎಂಟ್ರಿ!

Tarangantaranga Movie Teaser: 'ತರಂಗಾಂತರಂಗ' ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಉಡುಪಿಯ ಬೈಂದೂರು ಮೂಲದ ಪ್ರತಿಭೆ ಶ್ರೀಷ ಹೀರೋ ಹಾಗೂ ನಿರ್ದೇಶಕರಾಗಿ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದಾರೆ. ಪುನರ್ಜನ್ಮ ಹಾಗೂ ದೈವಿಕ ಹರಕೆ ತೀರಿಸದಿದ್ದಾಗ ಎದುರಾಗುವ ಪರಿಣಾಮಗಳ ಸುತ್ತ ಈ ಸಸ್ಪೆನ್ಸ್ ಥ್ರಿಲ್ಲರ್ ಸಾಗಲಿದೆ. ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ.

ಕರ್ನಾಟಕದ ಕರಾವಳಿ ತೀರ ಹಲವು ಅದ್ಭುತ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ನಿರಂತರವಾಗಿ ಪರಿಚಯಿಸುತ್ತಲೇ ಬಂದಿದೆ. ಇದೀಗ ಆ ಸಾಲಿಗೆ ಉಡುಪಿಯ ಬೈಂದೂರು ಮೂಲದ ಪ್ರತಿಭೆ ಶ್ರೀಷ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಗ್ರಾಫಿಕ್ಸ್ ಡಿಸೈನರ್ ಹಾಗೂ ಇವೆಂಟ್ ಮ್ಯಾನೇಜರ್ ಆಗಿ ಅನುಭವ ಹೊಂದಿರುವ ಅವರು, ಇದೀಗ 'ತರಂಗಾಂತರಂಗ' ಎಂಬ ಚಿತ್ರದ ಮೂಲಕ ನಾಯಕ ನಟನಾಗಿ ಹಾಗೂ ನಿರ್ದೇಶಕನಾಗಿ ಚಂದನವನಕ್ಕೆ ಅಧಿಕೃತ ಪದಾರ್ಪಣೆ ಮಾಡಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿಕೊಂಡಿರುವ ಈ ಚಿತ್ರದ ಆಕರ್ಷಕ ಟೀಸರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಗೊಂಡಿದೆ.

ಕಥೆಯ ಎಳೆ ಪ್ರೇಕ್ಷಕರನ್ನು ಸೆಳೆಯುವಂತಿದೆ

'ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ'ದ ಅಧ್ಯಕ್ಷ ಎನ್.ಆರ್.ಕೆ ವಿಶ್ವನಾಥ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಟೀಸರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ವೇಳೆ ಮಾತನಾಡಿದ ಅವರು, "ಕರಾವಳಿ ಮೂಲದ ಯುವ ಪ್ರತಿಭೆಗಳು ಸೇರಿಕೊಂಡು ಅತ್ಯಂತ ಹೊಸತನದಿಂದ ಕೂಡಿರುವ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಟೀಸರ್‌ನಲ್ಲಿ ಕಾಣುವ ದೃಶ್ಯಗಳು ಮತ್ತು ಕಥೆಯ ಎಳೆ ಪ್ರೇಕ್ಷಕರನ್ನು ಸೆಳೆಯುವಂತಿದ್ದು, ಚಿತ್ರವು ಚಿತ್ರಮಂದಿರಗಳಲ್ಲಿ ದೊಡ್ಡ ಯಶಸ್ಸು ಕಾಣಲಿ" ಎಂದು ಹಾರೈಸಿದರು.

ಹರಕೆ ಸೇವೆ ಸಲ್ಲಿಸದೇ ಹೋದರೆ ಏನಾಗುತ್ತೆ?

ಈ ಚಿತ್ರದ ಕುರಿತು ವಿವರ ಹಂಚಿಕೊಂಡ ನಾಯಕ ಹಾಗೂ ನಿರ್ದೇಶಕ ಶ್ರೀಷ, "ಇದೊಂದು ಪುನರ್ಜನ್ಮ ಮತ್ತು ದೈವಿಕ ನಂಬಿಕೆಯ ಸುತ್ತ ಸಾಗುವ ಹಿಸ್ಟರಿ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವಾಗಿದೆ. ದೇವರಿಗೆ ಕಟ್ಟಿಕೊಂಡ ಹರಕೆ ಅಥವಾ ಸೇವೆಗಳನ್ನು ತೀರಿಸಲು ವಿಫಲವಾದರೆ ಏನೆಲ್ಲಾ ಪರಿಣಾಮಗಳು ಎದುರಾಗಬಹುದು ಎಂಬ ಆಸಕ್ತಿದಾಯಕ ಎಳೆಯನ್ನು ಇಟ್ಟುಕೊಂಡು ಈ ಚಿತ್ರವನ್ನು ಸಿದ್ಧಪಡಿಸಲಾಗಿದೆ. ಪ್ರೇಕ್ಷಕರಿಗೆ ಹೊಸ ಬಗೆಯ ದೃಶ್ಯಾನುಭವ ನೀಡುವ ಭರವಸೆ ಚಿತ್ರದಲ್ಲಿದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Karavali movie controversy: 'ಕರಾವಳಿ' ಸಿನಿಮಾ ವಿವಾದದ ಬಗ್ಗೆ ರಕ್ಷಿತಾ ಪ್ರೇಮ್ ಹೇಳಿದ್ದೇನು?

ಪ್ರಮುಖ ಪಾತ್ರವೊಂದರಲ್ಲಿ ಪ್ರಮೋದ್‌ ಶೆಟ್ಟಿ

ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವ ನಟ ಪ್ರಮೋದ್ ಶೆಟ್ಟಿ ಮಾತನಾಡಿ, "ಯುವ ಪ್ರತಿಭೆ ಶ್ರೀಷ ಮತ್ತು ತಂಡ ಅತ್ಯುತ್ತಮ ಪರಿಶ್ರಮದಿಂದ ಈ ಸಿನಿಮಾ ರೂಪಿಸಿದೆ. ತಾವು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇಡೀ ತಂಡದೊಂದಿಗೆ ಕೆಲಸ ಮಾಡಿದ ಅನುಭವ ತೃಪ್ತಿ ತಂದಿದೆ" ಎಂದರು. ಉಳಿದಂತೆ ನಾಯಕಿ ಚೆರಿಕಾ ಮೂರ್ತಿ, ಛಾಯಾಗ್ರಹಕ ವೆಂಕಟೇಶ್ ಸೇರಿದಂತೆ ಚಿತ್ರತಂಡದ ಸದಸ್ಯರು ಈ ಸಮಾರಂಭದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ರಾಕೇಶ್‌ ಪೂಜಾರಿ ನಟನೆಯ ಸಿನಿಮಾ ಇದು

'ತರಂಗಾಂತರಂಗ' ಚಿತ್ರದಲ್ಲಿ ಶ್ರೀಷ ಅವರಿಗೆ ಜೋಡಿಯಾಗಿ ಚೆರಿಕಾ ಮೂರ್ತಿ ಮತ್ತು ಯಶಸ್ವಿನಿ ಸ್ವಾಮಿ ನಟಿಸಿದ್ದು, ಹಿರಿಯ ಕಲಾವಿದರಾದ ರಮೇಶ್ ಪಂಡಿತ್, ಪ್ರಭಾಕರ ಕುಂದರ್, ಲಿಖಿತಾ ಶೆಟ್ಟಿ, ಮುರಳಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿ ಅಗಲಿದ ಹಿರಿಯ ನಟ ದಿನೇಶ್ ಮಂಗಳೂರು ಮತ್ತು ರಾಕೇಶ್ ಪೂಜಾರಿ ಅವರು ಕೊನೆಯದಾಗಿ ಬಣ್ಣ ಹಚ್ಚಿದ ಚಿತ್ರಗಳಲ್ಲಿ ಇದೂ ಒಂದಾಗಿರುವುದು ವಿಶೇಷವಾಗಿದೆ. ಟೀಸರ್ ಬಿಡುಗಡೆಯೊಂದಿಗೆ ಭರ್ಜರಿ ಪ್ರಚಾರ ಆರಂಭಿಸಿರುವ 'ತರಂಗಾಂತರಂಗ' ಚಿತ್ರತಂಡ, ಮುಂಬರುವ ಜನವರಿಯಲ್ಲಿ ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರಲು ಸಕಲ ಸಿದ್ಧತೆ ನಡೆಸಿದೆ.