ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AR Murugadoss: ಸಲ್ಮಾನ್‌-ರಶ್ಮಿಕಾ ನಟನೆಯ ʼಸಿಕಂದರ್‌ʼ ರಿಮೇಕ್‌ ಚಿತ್ರವ? ನಿರ್ದೇಶಕ ಎ.ಆರ್‌.ಮುರುಗದಾಸ್‌ ಹೇಳಿದ್ದೇನು?

AR Murugadoss: ಬಾಲಿವುಡ್‌ನ ಬಹು ನಿರೀಕ್ಷಿತ ʼಸಿಕಂದರ್‌ʼ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಈದ್‌ ಹಬ್ಬದ ವೇಳೆಗೆ ಸಲ್ಮಾನ್‌ ಖಾನ್‌-ರಶ್ಮಿಕಾ ಮಂದಣ್ಣ ನಟನೆಯ ಈ ಚಿತ್ರ ತೆರೆಗೆ ಬರಲಿದೆ. ಇದು ರಿಮೇಕ್‌ ಎನ್ನುವ ವದಂತಿಗೆ ಇದೀಗ ನಿರ್ದೇಶಕ ಎ.ಆರ್‌.ಮುರುಗದಾಸ್‌ ಸ್ಪಷ್ಟನೆ ನೀಡಿದ್ದಾರೆ. ಅವರೇನು ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.

ಸಲ್ಮಾನ್‌-ರಶ್ಮಿಕಾ ನಟನೆಯ ಸಿಕಂದರ್‌ ರಿಮೇಕ್‌ ಚಿತ್ರವ?

ಎ.ಆರ್‌.ಮುರುಗದಾಸ್‌ ಮತ್ತು ಸಲ್ಮಾನ್‌ ಖಾನ್‌.

Profile Ramesh B Mar 8, 2025 9:17 PM

ಮುಂಬೈ: ಸದ್ಯ ಬಾಲಿವುಡ್‌ನಲ್ಲಿ ʼಸಿಕಂದರ್‌ʼ (Sikandar) ಜಪ ಆರಂಭವಾಗಿದೆ. ವರ್ಷಾರಂಭದಲ್ಲಿ ತೆರೆಕಂಡ ವಿಕ್ಕಿ ಕೌಶಲ್‌-ರಶ್ಮಿಕಾ ಮಂದಣ್ಣ ನಟನೆಯ ʼಛಾವಾʼ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದ್ದು, ಅದೇ ಯಶಸ್ಸನ್ನು ಸಲ್ಮಾನ್‌ ಖಾನ್‌ (Salman Khan) ನಟನೆಯ ʼಸಿಕಂದರ್‌ʼ ಮುಂದುವರಿಸಲಿದೆ ಎನ್ನುವ ಲೆಕ್ಕಾಚಾರ ನಡೆಯುತ್ತಿದೆ. ವಿಶೇಷ ಎಂದರೆ ಈ ಚಿತ್ರ ಘಟಾನುಘಟಿಗಳ ಸಂಗಮವಾಗಿದ್ದು, ಇದೇ ಕಾರಣಕ್ಕೆ ಈಗಾಗಲೇ ನಿರೀಕ್ಷೆ ಮೂಡಿಸಿದೆ. ʼಸಿಕಂದರ್‌ʼ ಸಿನಿಮಾದಲ್ಲಿ ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌, ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಎ.ಆರ್‌.ಮುರುಗದಾಸ್‌ (AR Murugadoss) ಮೊದಲ ಬಾರಿ ಒಂದಾಗುತ್ತಿರುವುದು ಕುತೂಹಲ ಕೆರಳಿಸಿದೆ. ಈಗಾಗಲೇ ಹೊರಬಂದಿರುವ ಟೀಸರ್‌, ಹಾಡಿನ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿರುವ ಈ ಚಿತ್ರ ದಕ್ಷಿಣ ಭಾರತ ಚಿತ್ರವೊಂದರ ರಿಮೇಕ್‌ ಎನ್ನಲಾಗಿತ್ತು. ಇದೀಗ ನಿರ್ದೇಶಕ ಮುರುಗದಾಸ್‌ ಈ ಬಗ್ಗೆ ಪ್ರತಿಕ್ರಿಯಿಸಿ ವದಂತಿಯನ್ನು ತಳ್ಳಿ ಹಾಕಿದ್ದಾರೆ.

ಇದುವರೆಗೆ ಕಥೆಯ ಗುಟ್ಟು ಬಿಟ್ಟುಕೊಡದ ʼಸಿಕಂದರ್‌ʼ ಚಿತ್ರತಂಡ ಇತ್ತೀಚೆಗೆ 2ನೇ ಟೀಸರ್‌ ಬಿಡುಗಡೆ ಮಾಡಿತ್ತು. ಇದನ್ನು ವೀಕ್ಷಿಸಿದ ಹಲವರು ಇದು ಕಾಲಿವುಡ್‌ ಚಿತ್ರದ ರಿಮೇಕ್‌ ಎಂದಿದ್ದರು. 2018ರಲ್ಲಿ ರಿಲೀಸ್‌ ಆಗಿದ್ದ, ಎ.ಆರ್‌.ಮುರುಗದಾಸ್‌ ನಿರ್ದೇಶನದ, ದಳಪತಿ ವಿಜಯ್‌-ಕೀರ್ತಿ ಸುರೇಶ್‌ ಅಭಿನಯದ ತಮಿಳು ಚಿತ್ರ ʼಸರ್ಕಾರ್‌ʼನ ರಿಮೇಕ್‌ ಎನ್ನುವ ಚರ್ಚೆ ನಡೆದಿತ್ತು. ಈ ಬಗ್ಗೆ ಚಿತ್ರತಂಡ ಏನೂ ಹೇಳಿರಲಿಲ್ಲ. ಆದರೆ ಇದೀಗ ಮುರುಗದಾಸ್‌ ಈ ಬಗ್ಗ ಪ್ರತಿಕ್ರಿಯೆ ನೀಡಿದ್ದಾರೆ.



ಮುರುಗದಾಸ್‌ ಹೇಳಿದ್ದೇನು?

ಈ ಬಗ್ಗೆ ಮಾತನಾಡಿದ ಮುರುಗದಾಸ್‌ ರಿಮೇಕ್‌ ವದಂತಿಯನ್ನು ತಳ್ಳಿ ಹಾಕಿದ್ದಾರೆ. ʼʼಇದು ಸಂಪೂರ್ಣ ಒರಿಜಿನಲ್‌ ಕಥೆ. ʼಸಿಕಂದರ್‌ʼ ಚಿತ್ರದ ಪ್ರತಿ ದೃಶ್ಯವನ್ನು ಹೊಸದಾಗಿ ಕಟ್ಟಿ ಕೊಡಲಾಗಿದೆ. ಇದು ವೀಕ್ಷಕರಿಗೆ ಹೊಸ ಅನುಭವ ನೀಡಲಿದೆ ಎನ್ನುವ ಭರವಸೆ ಇದೆ. ಯಾವುದೇ ಚಿತ್ರದ ರಿಮೇಕ್‌‌ ಅಲ್ಲ ಅಥವಾ ಸ್ಫೂರ್ತಿ ಪಡೆದು ಮಾಡಿದ್ದಲ್ಲ. ಸಂಪೂರ್ಣ ಕಥೆ ಹೊಸದುʼʼ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Sikandar Teaser Out: ಸಲ್ಮಾನ್‌-ರಶ್ಮಿಕಾ ನಟನೆಯ ಬಹು ನಿರೀಕ್ಷಿತ ʼಸಿಕಂದರ್‌ʼ ಚಿತ್ರದ ಟೀಸರ್‌ ಔಟ್‌

"ಸಂತೋಷ್ ನಾರಾಯಣನ್ ಅವರ ಅದ್ಭುತ ಹಿನ್ನೆಲೆ ಸಂಗೀತ ಚಿತ್ರದ ಪ್ರಮುಖ ಆಕರ್ಷಣೆ. ಅವರ ಸಂಗೀತವು ಚಿತ್ರದ ರೋಮಾಂಚಕ ದೃಶ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುತ್ತದೆ. ಪ್ರತಿ ದೃಶ್ಯ ಭಾವನಾತ್ಮಕವಾಗಿ ಕಾಡುವಂತೆ ಮಾಡುತ್ತದೆʼʼ ಎಂದಿದ್ದಾರೆ. ಬಾಲಿವುಡ್‌ನ ಜನಪ್ರಿಯ ಸಂಗೀತ ನಿರ್ದೇಶಕ ಪ್ರೀತಂ ಹಾಡುಗಳಿಗೆ ಟ್ಯೂನ್‌ ಒದಗಿಸಿದ್ದಾರೆ. ರಿಲೀಸ್‌ ಆಗಿರುವ ಮೊದಲ ಹಾಡು ಈಗಾಗಲೇ ಹಿಟ್‌ ಲಿಸ್ಟ್‌ ಸೇರಿದೆ.

ಲಕ್ಕಿ ಚಾರ್ಮ್‌ ಆಗ್ತಾರಾ ರಶ್ಮಿಕಾ?

ಸದ್ಯ ರಶ್ಮಿಕಾ ದಕ್ಷಿಣ ಭಾರತೀಯ ಚಿತ್ರರಂಗ ಮಾತ್ರವಲ್ಲ ಬಾಲಿವುಡ್‌ಗೂ ಲಕ್ಕಿ ಚಾರ್ಮ್‌ ಎನಿಸಿಕೊಂಡಿದ್ದಾರೆ. ಕಳೆದ ವರ್ಷ ರಿಲೀಸ್‌ ಆದ ಟಾಲಿವುಡ್‌ನ ʼಪುಷ್ಪ 2ʼ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದರೆ, ಕಳೆದ ತಿಂಗಳು ತೆರೆಕಂಡ ಹಿಂದಿ ಚಿತ್ರ ʼಛಾವಾʼ ಗಲ್ಲಾ ಪೆಟ್ಟಿಯಲ್ಲಿ ಕೋಟಿ ಕೋಟಿ ರೂ. ದೋಚುತ್ತಿದೆ. ಹೀಗಾಗಿ ʼಸಿಕಂದರ್‌ʼ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಸಲ್ಮಾನ್‌ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡಿಲ್ಲ. ʼಸಿಕಂದರ್‌ʼ ಮೂಲಕ ಅವರು ಮತ್ತೆ ರೇಸ್‌ಗೆ ಮರಳಲಿದ್ದಾರೆ ಎನ್ನಲಾಗಿದೆ. ಈ ಚಿತ್ರ ಈದ್‌ ವೇಳೆಗೆ ತೆರೆಗೆ ಬರಲಿದೆ.