ತಮಿಳು ನಟ ಸಿಲಂಬರಸನ್ (ಸಿಂಬು) ಮತ್ತು ನಿರ್ದೇಶಕ ವೆಟ್ರಿಮಾರನ್ ಕಾಂಬಿನೇಷನ್‌ನ ಬಹುನಿರೀಕ್ಷಿತ ʻಅರಸನ್ʼ ಸಿನಿಮಾವು ಕೆಲವು ತಿಂಗಳ ಹಿಂದಷ್ಟೇ ಶೂಟಿಂಗ್ ಆರಂಭಿಸಿತ್ತು. ಕಲೈಪುಲಿ ಎಸ್ ಧಾನು ನಿರ್ಮಾಣದ ಈ ಚಿತ್ರಕ್ಕಾಗಿ ಫ್ಯಾನ್ಸ್ ಕೂಡ ಭಾರಿ ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಎಲ್ಲವೂ ಅಂದುಕೊಂಡಂತೆ ನಡೆಯೋದಿಲ್ಲ. ಇದೀಗ ʻಅರಸನ್ʼ ಸಿನಿಮಾದ ಶೂಟಿಂಗ್ ಸದ್ದಿಲ್ಲದೇ ನಿಂತಿದೆ!
ಅರಸನ್ ಶೂಟಿಂಗ್ ನಿಲ್ಲೋದಕ್ಕೆ ಕಾರಣವೇನು?
'ಅರಸನ್' ಚಿತ್ರದ ಶೂಟಿಂಗ್ ಹೀಗೆ ಹಠಾತ್ತನೇ ನಿಂತುಹೋಗಲು ಮುಖ್ಯ ಕಾರಣ ನಟ ಸಿಂಬು ಮತ್ತು ನಿರ್ಮಾಪಕ ಇಶಾರಿ ಕೆ. ಗಣೇಶ್ ನಡುವಿನ ವೈಷಮ್ಯ! ಹೌದು, ಇವರಿಬ್ಬರ ನಡುವಿನ ಈ ಸಂಘರ್ಷವು ಇಂದು ನಿನ್ನೆಯದಲ್ಲ. ಇಶಾರಿ ಕೆ. ಗಣೇಶ್ ಅವರೇ ನಿರ್ಮಿಸಿದ್ದ 'ವೆಂದು ತಣಿಂದದು ಕಾಡು' ಚಿತ್ರದಲ್ಲಿ ಸಿಂಬು ನಟಿಸಿದ್ದರು. ಅಂದಿನಿಂದಲೂ ಇಬ್ಬರ ನಡುವೆ ವಿವಾದವೊಂದು ಹೊಗೆಯಾಡುತ್ತಲೇ ಇದೆ.
Actor Silambarasan: ಥಗ್ ಲೈಫ್ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಭಾವುಕರಾದ ನಟ ಸಿಂಬು!
ಅಷ್ಟಕ್ಕೂ ಆಗಿದ್ದೇನೆಂದರೆ, 'ವೆಂದು ತಣಿಂದದು ಕಾಡು' ಚಿತ್ರದ ನಂತರ ಹೊಸ ಪ್ರಾಜೆಕ್ಟ್‌ಗಾಗಿ ಸಿಂಬು ಅವರಿಗೆ ಗಣೇಶ್ 5 ಕೋಟಿ ರೂ. ಮುಂಗಡ ಹಣ ನೀಡಿದ್ದರಂತೆ. ಆದರೆ ಆ ಹೊಸ ಚಿತ್ರ ಸೆಟ್ಟೇರಲಿಲ್ಲ ಮತ್ತು ಈ ವಿಳಂಬಕ್ಕೆ ಸಿಂಬು ಅವರೇ ಕಾರಣ ಎಂದು ಆರೋಪಿಸಲಾಗಿದೆ. ಈಗ ಈ ವಿವಾದ ದೊಡ್ಡಮಟ್ಟದ ತಿರುವು ಪಡೆದುಕೊಂಡಿದೆ. ಈ ಕಾಂಟ್ರವರ್ಸಿಯಲ್ಲಿ 'ನಡಿಗರ್ ಸಂಘಂ' (ಕಲಾವಿದರ ಸಂಘ) ಮತ್ತು ದಕ್ಷಿಣ ಭಾರತೀಯ ಚಲನಚಿತ್ರ ಕಾರ್ಮಿಕರ ಒಕ್ಕೂಟ ಮಧ್ಯಪ್ರವೇಶಿಸಿವೆ. ಇದರಿಂದಾಗಿ 'ಅರಸನ್' ಶೂಟಿಂಗ್ ಸ್ಥಗಿತಗೊಂಡಿದೆ.
Actor Dhanush: 5ನೇ ಬಾರಿ ವೆಟ್ರಿಮಾರನ್ ಚಿತ್ರದಲ್ಲಿ ಧನುಷ್; ಮತ್ತೊಂದು ರಾಷ್ಟ್ರ ಪ್ರಶಸ್ತಿ ಲೋಡಿಂಗ್
ಸಿಟ್ಟಾದ ಸಿಂಬು ತಂದೆ
ಈ ಬೆಳವಣಿಗೆಯಿಂದ ಸಿಟ್ಟಾಗಿರುವ ಸಿಂಬು ತಂದೆ, ನಟ-ನಿರ್ದೇಶಕ ಟಿ. ರಾಜೇಂದರ್, ಶೂಟಿಂಗ್ ನಿಲ್ಲಿಸಲು ಆದೇಶ ನೀಡಿದವರನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ. "ನಾನು ಇಲ್ಲಿ ಅರಸನ್ ಅಥವಾ ಸಿಂಬು ಪರವಾಗಿ ವಾದಿಸಲು ಬಂದಿಲ್ಲ. ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ ಮತ್ತು FEFSI ಈ ಕ್ರಮವನ್ನು ಬೆಂಬಲಿಸುತ್ತಿರುವುದು ಅನ್ಯಾಯ ಎಂದು ಹೇಳಲು ಬಂದಿದ್ದೇನೆ" ಎಂದಿದ್ದಾರೆ. ಗಣೇಶ್ ಹೂಡಿದ್ದ ಪ್ರಕರಣದಲ್ಲಿ ನ್ಯಾಯಾಲಯವು ಸಿಂಬು ಪರವಾಗಿ ತೀರ್ಪು ನೀಡಿದೆ. ಎರಡನೇ ಚಿತ್ರಕ್ಕಾಗಿ ನೀಡಿದ ಮುಂಗಡ ಹಣವು ಸಿಂಬು ಅವರಿಗೆ ಸೇರುತ್ತದೆ ಎಂದು ಕೋರ್ಟ್ ಈಗಾಗಲೇ ಹೇಳಿದೆ ಎಂದು ರಾಜೇಂದರ್ ಹೇಳಿದ್ದಾರೆ.
"ಸಿಂಬು ಪರವಾಗಿ ನ್ಯಾಯಾಲಯದ ತೀರ್ಪು ಬಂದ ನಂತರವೂ ಕಾನೂನನ್ನು ಕೈಗೆತ್ತಿಕೊಂಡು ಚಿತ್ರೀಕರಣ ನಿಲ್ಲಿಸುವುದು ಸರಿಯೇ" ಎಂದು ಟಿ ರಾಜೇಂದರ್ ಪ್ರಶ್ನಿಸಿದ್ದಾರೆ. ಇಷ್ಟೆಲ್ಲಾ ಗೊಂದಲಗಳ ನಡುವೆಯೂ 'ಅರಸನ್' ಚಿತ್ರದ ಮೇಲೆ ಭಾರಿ ನಿರೀಕ್ಷೆಯಿದೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಮತ್ತು ದೀಪಾವಳಿ ಹಬ್ಬಕ್ಕೆ ಅರಸನ್ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂಬ ಪ್ಲಾನಿಂಗ್ ನಡೆಯುತ್ತಿದೆ. ಆದರೆ ಈಗ ಶೂಟಿಂಗ್ ನಿಂತಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.