ತಮ್ಮ ವಿಶಿಷ್ಟ ಕಂಠಸಿರಿಯಿಂದ ಕನ್ನಡಿಗರ ಮನೆಮಾತಾಗಿರುವ ಖ್ಯಾತ ಗಾಯಕ ನವೀನ್ ಸಜ್ಜು, ಇದೀಗ ಮತ್ತೊಮ್ಮೆ ನಾಯಕ ನಟನಾಗಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಈ ಹಿಂದೆ ‘ಲೋ ನವೀನ’ ಚಿತ್ರದಲ್ಲಿ ಹಳ್ಳಿ ಹುಡುಗನ ಪಾತ್ರದ ಮೂಲಕ ಗಾಯಕನಿಂದ ನಾಯಕನಾಗಿ ಗಮನ ಸೆಳೆದಿದ್ದ ಅವರು, ಇದೀಗ ಸಂಪೂರ್ಣ ಹೊಸ ಶೈಲಿಯ ಕಥಾಹಂದರದ ‘ಸುಬ್ಬ ನಿಮ್ಮಲೊಬ್ಬ’ ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೆ ಆಕ್ಷನ್ ಹೀರೋ ಆಗಿ ಮಿಂಚಲು ಹೊರಟಿದ್ದಾರೆ.
ಮಧ್ಯಮ ವರ್ಗದ ಕನ್ನಡಿಗನ ಬದುಕು, ಕನಸು, ಅನಿವಾರ್ಯ ಸಂಘರ್ಷ ಹಾಗೂ ಹೋರಾಟವನ್ನು ಒಳಗೊಂಡಿರುವ ಈ ಚಿತ್ರದ ಮುಹೂರ್ತ ಸಮಾರಂಭವು ಪೂಜ್ಯ ಶ್ರೀ ವಿನಯ್ ಗುರೂಜಿ ಅವರ ಅಮೃತಹಸ್ತದಿಂದ ನೆರವೇರಿದ್ದು, ಗುರೂಜಿಯವರ ಆಶೀರ್ವಾದದೊಂದಿಗೆ ಚಿತ್ರತಂಡ ತನ್ನ ಚಿತ್ರೀಕರಣಕ್ಕೂ ಚಾಲನೆ ನೀಡಿದೆ.
ನವೀನ್ ಸಜ್ಜುಗೆ ಶ್ರುತಿ ಗೌಡ ನಾಯಕಿ
ಯುನಿಕ್ ಪ್ರೊಡಕ್ಷನ್ಸ್ ಎಲ್ಎಲ್ಪಿ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ಎಸ್. ಟಿ. ಉದಯ್ ಕುಮಾರ್ ಹಾಗೂ ಅರುಣ್ ಕುಮಾರ್ ಸಿ. ಅವರು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ವಿನಯ್ ಕೃಷ್ಣ ಅವರು ಕಥೆ ಹಾಗೂ ಚಿತ್ರಕಥೆ ರಚಿಸಿ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಸಾಮಾನ್ಯ ಮನುಷ್ಯನ ಬದುಕಿನ ಅಸಾಮಾನ್ಯ ಹೋರಾಟವನ್ನು ನೈಜವಾಗಿ ತೆರೆಗೆ ತರುವ ಸಿದ್ಧತೆಯಲ್ಲಿದ್ದಾರೆ. ಚಿತ್ರದಲ್ಲಿ ನವೀನ್ ಸಜ್ಜು ಅವರಿಗೆ ಜೋಡಿಯಾಗಿ ಚಿಕ್ಕಮಗಳೂರು ಮೂಲದ ಪ್ರತಿಭಾನ್ವಿತ ನಟಿ ಶ್ರುತಿ ಗೌಡ ನಾಯಕಿಯಾಗಿ ಅಭಿನಯಿಸುತ್ತಿದ್ದು, ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಈ ಹೊಸ ಜೋಡಿಯ ತೆರೆಮೇಲಿನ ಕೆಮಿಸ್ಟ್ರಿ ಬಗ್ಗೆ ಸಿನಿಪ್ರಿಯರಲ್ಲಿ ಈಗಾಗಲೇ ಕುತೂಹಲ ಮೂಡಿದೆ.
Kannada New Movie: ಚಂದ್ರಹಾಸ ಸಿನಿಮಾಗಾಗಿ ಜೊತೆಯಾಗಿ ಹಾಡಿದ ನಟ ಶರಣ್, ನವೀನ್ ಸಜ್ಜು!
ಮಾಸ್ ಆಕ್ಷನ್ ಲುಕ್ನಲ್ಲಿ ನವೀನ್ ಸಜ್ಜು
ಚಿತ್ರದ ಕಥೆಯು ಮುಖ್ಯವಾಗಿ ಮಧ್ಯಮ ವರ್ಗದ ಲಾರಿ ಚಾಲಕನೊಬ್ಬನ ಜೀವನದ ಸುತ್ತ ಹೆಣೆಯಲ್ಪಟ್ಟಿದೆ. ಹೆದ್ದಾರಿಗಳಲ್ಲಿ ಸಾಗುವ ಲಾರಿ ಡ್ರೈವರ್ ಒಬ್ಬನ ದಿನನಿತ್ಯದ ಬದುಕಿನ ಸವಾಲುಗಳು, ಸಂಸಾರದ ಜವಾಬ್ದಾರಿಗಳು, ಏರಿಳಿತಗಳು ಹಾಗೂ ತನ್ನ ಕನಸುಗಳನ್ನು ನನಸು ಮಾಡಿಕೊಳ್ಳಲು ಆತ ಸಮಾಜದಲ್ಲಿ ನಡೆಸುವ ಸಂಘರ್ಷಗಳು ಚಿತ್ರದ ಪ್ರಮುಖ ಜೀವಾಳವಾಗಿವೆ. ಕೇವಲ ಹಾಡುಗಾರಿಕೆಗೆ ಸೀಮಿತವಾಗದೆ, ನಟನೆಯಲ್ಲೂ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿರುವ ನವೀನ್ ಸಜ್ಜು ಅವರಿಗೆ ಈ ಚಿತ್ರದಲ್ಲಿ ಪಕ್ಕಾ ರಗಡ್ ಹಾಗೂ ಮಾಸ್ ಆಕ್ಷನ್ ಲುಕ್ ಸಿಗಲಿದ್ದು, ಅವರ ಸಿನಿಪಯಣದಲ್ಲಿ ಇದೊಂದು ಮಹತ್ವದ ತಿರುವು ನೀಡುವ ನಿರೀಕ್ಷೆಯಿದೆ.
ಶೀಘ್ರದಲ್ಲೇ ಹೆಚ್ಚಿನ ಮಾಹಿತಿ
ಮುಹೂರ್ತದ ಬೆನ್ನಲ್ಲೇ ಮೊದಲ ಹಂತದ ಚಿತ್ರೀಕರಣವನ್ನು ಆರಂಭಿಸಿರುವ ಚಿತ್ರತಂಡ, ಕಥೆಯ ನೈಜತೆಗೆ ತಕ್ಕಂತೆ ಬೆಂಗಳೂರು, ಚೆನ್ನೈ ಹಾಗೂ ಮೈಸೂರು ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಶೂಟಿಂಗ್ ನಡೆಸಲು ಯೋಜಿಸಿದೆ. ಕನ್ನಡ ಚಿತ್ರರಂಗದಲ್ಲಿ ಸಾಮಾನ್ಯ ಜನರ ಬದುಕಿನ ನೈಜ ಕಥೆಗಳಿಗೆ ಯಾವಾಗಲೂ ಪ್ರೇಕ್ಷಕರ ಪ್ರೋತ್ಸಾಹ ಸಿಗುತ್ತಾ ಬಂದಿದ್ದು, ‘ಸುಬ್ಬ ನಿಮ್ಮಲೊಬ್ಬ’ ಚಿತ್ರವೂ ಅದೇ ಹಾದಿಯಲ್ಲಿ ಪ್ರೇಕ್ಷಕರ ಮನ ಮುಟ್ಟುವ ಭರವಸೆ ಮೂಡಿಸಿದೆ. ಚಿತ್ರದ ಉಳಿದ ತಾರಾಗಣ ಹಾಗೂ ತಾಂತ್ರಿಕ ಬಳಗದ ವಿವರಗಳನ್ನು ಶೀಘ್ರದಲ್ಲೇ ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಲಿದೆ.