ದಕ್ಷಿಣ ಭಾರತದ ಹೆಮ್ಮೆಯ ಗಾನಕೋಗಿಲೆ, ಸ್ವರ ಸಾಮ್ರಾಜ್ಞಿ ಎಸ್. ಜಾನಕಿ ಅವರು ಇಂದು (ಜುಲೈ 11) ಸಂಜೆ ನಿಧನರಾಗಿದ್ದಾರೆ. ಸಾವಿರಾರು ಸುಮಧುರ ಗೀತೆಗಳ ಮೂಲಕ ಭಾರತೀಯರ ನೆಚ್ಚಿನ ಗಾಯಕಿಯಾಗಿದ್ದ ಜಾನಕಮ್ಮ ಅವರ ಅಗಲಿಕೆ ಇಡೀ ಕಲಾ ಲೋಕಕ್ಕೆ ತುಂಬಲಾರದ ನಷ್ಟ ತಂದಿದೆ.
ಭಾರತೀಯ ಚಿತ್ರರಂಗದಲ್ಲಿ ಎಸ್. ಜಾನಕಿ ಮತ್ತು ಗಾನಗಂಧರ್ವ ಎಸ್. ಪಿ. ಬಾಲಸುಬ್ರಹ್ಮಣ್ಯಂ (ಎಸ್‌ಪಿಬಿ) ಅವರ ಕಾಂಬಿನೇಷನ್ ಸೃಷ್ಟಿಸಿದ್ದ ಇತಿಹಾಸ ಅಷ್ಟಿಷ್ಟಲ್ಲ. ಅವರು ಒಟ್ಟಿಗೆ ಹಾಡಿದ ಯುಗಳ ಗೀತೆಗಳೆಲ್ಲವೂ ಸೂಪರ್ ಹಿಟ್ ಆಗಿದ್ದವು. ಆದರೆ, ಎಸ್‌ಪಿಬಿ ಅವರಿಗೆ ಹಿನ್ನೆಲೆ ಗಾಯಕನಾಗಲು ಅಡಿಪಾಯ ಹಾಕಿ, ಪ್ರೇರೇಪಿಸಿದ್ದೇ ಜಾನಕಮ್ಮ ಎನ್ನುವ ರೋಚಕ ಇತಿಹಾಸ ಈ ಹೊತ್ತಿನಲ್ಲಿ ಮತ್ತೊಮ್ಮೆ ನೆನಪಾಗುತ್ತಿದೆ.
ಎಂಜಿನಿಯರ್ ಆಗಬೇಕಿದ್ದ ಯುವಕನನ್ನು ಗಾಯಕರನ್ನಾಗಿಸಿದ ಜಾನಕಮ್ಮ
ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಆರಂಭದಲ್ಲಿ ಗೆಜೆಟೆಡ್ ಶ್ರೇಣಿಯ ಇಂಜಿನಿಯರ್ ಆಗಬೇಕೆಂಬ ಕನಸಿನೊಂದಿಗೆ ಚೆನ್ನೈನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಆದರೆ, ವಿಧಿ ಅವರ ಪಾಲಿಗೆ ಸಂಗೀತ ಲೋಕದಲ್ಲಿ ಅವರ ಪಯಣವನ್ನು ನಿರ್ಧರಿಸಿತ್ತು. ಆಂಧ್ರಪ್ರದೇಶದಲ್ಲಿ ನಡೆದ ಲಘು ಸಂಗೀತ ಸ್ಪರ್ಧೆಯೊಂದರಲ್ಲಿ ಎಸ್‌ಪಿಬಿ ಅವರ ಅಸಾಧಾರಣ ಪ್ರತಿಭೆಯನ್ನು ಮೊಟ್ಟಮೊದಲ ಬಾರಿಗೆ ಗುರುತಿಸಿದ್ದು ಇದೇ ಎಸ್. ಜಾನಕಿ ಅವರು. ಸಿನಿಮಾರಂಗದಲ್ಲಿ ವೃತ್ತಿಜೀವನವನ್ನು ಕಂಡುಕೊಳ್ಳುವಂತೆ ಅವರಿಗೆ ಆತ್ಮವಿಶ್ವಾಸ ತುಂಬಿ ಪ್ರೋತ್ಸಾಹಿಸಿದ್ದರು.
ಹಾಗಾಗಿ, 1966ರಲ್ಲಿ ಎಸ್‌ಪಿಬಿ ಅವರು ತಾವು ಗುರು ಎಂದು ಗೌರವಿಸುತ್ತಿದ್ದ ಎಸ್ ಪಿ ಕೋದಂಡಪಾಣಿ ಅವರ ಸಂಗೀತ ನಿರ್ದೇಶನದಲ್ಲಿ ತೆಲುಗು ಮತ್ತು ಕನ್ನಡ ಹಾಡುಗಳ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ತಮಗೆ ಸಂಗೀತ ಲೋಕದ ಹಾದಿ ತೋರಿಸಿ ಸ್ಪೂರ್ತಿ ತುಂಬಿದ್ದೇ ಜಾನಕಿ ಅಮ್ಮ ಎಂದು ಎಸ್‌ಪಿಬಿ ಅವರು ಹಲವು ವೇದಿಕೆಗಳಲ್ಲಿ ಪದೇ ಪದೇ ಕೃತಜ್ಞತೆಯಿಂದ ನೆನಸಿಕೊಳ್ಳುತ್ತಿದ್ದರು. ಇನ್ನು, ಎಸ್‌ಪಿಬಿ ಅವರು ನಿಧನರಾದಾಗ ಜಾನಕಮ್ಮ ಅವರು ಬರೆದಿದ್ದ ಸುದೀರ್ಘ ಭಾವನಾತ್ಮಕ ಪತ್ರವೊಂದು ಅವರ ನಡುವಿನ ಒಡನಾಟಕ್ಕೆ ಹಿಡಿದ ಕನ್ನಡಿಯಾಗಿದೆ.
6 ತಿಂಗಳ ಹಿಂದಷ್ಟೇ ಇದ್ದೊಬ್ಬ ಮಗನನ್ನು ಕಳೆದುಕೊಂಡಿದ್ದ ಎಸ್. ಜಾನಕಿ; ಇಳಿವಯಸ್ಸಿನಲ್ಲಿ ಕಾಡಿತೇ ಪುತ್ರಶೋಕ?
ಅಂದು ಎಸ್‌ಪಿಬಿ ಕುರಿತು ಜಾನಕಿ ಬರೆದಿದ್ದ ಸುದೀರ್ಘ ಪತ್ರದಲ್ಲಿ ಏನಿತ್ತು?
"ನಾನು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದು ಆಂಧ್ರದ ಲಘು ಸಂಗೀತ ಸ್ಪರ್ಧೆಯೊಂದರಲ್ಲಿ. ಆ ಸ್ಪರ್ಧೆಯಲ್ಲಿ ಅವರು ಯಾರನ್ನೂ ನಕಲು ಮಾಡದೆ, ತಮ್ಮದೇ ಆದ ಸ್ವಂತ ಧ್ವನಿಯಲ್ಲಿ ಅತ್ಯದ್ಭುತವಾಗಿ ಹಾಡಿದ್ದರು. ಅವರ ಗಾಯನಕ್ಕೆ ಮನಸೋತು ನಾನು ತುಂಬಾ ಸಂತೋಷದಿಂದ ಆಶೀರ್ವದಿಸಿ, 'ಮಗನೇ, ನೀನು ತುಂಬಾ ಚೆನ್ನಾಗಿ ಹಾಡುತ್ತೀಯಾ. ಚಿತ್ರರಂಗಕ್ಕೆ ಬಂದರೆ ನೀನು ದೊಡ್ಡ ಗಾಯಕನಾಗುತ್ತೀಯಾ' ಎಂದು ಹೇಳಿದೆ. ಆ ಮಾತು ಅವರಿಗೆ ಅಪಾರ ಸಂತೋಷ ನೀಡಿತ್ತು. ಆನಂತರ ಅವರು ಚಿತ್ರರಂಗಕ್ಕೆ ಬಂದು ದೊಡ್ಡ ಗಾಯಕರಾದರು. ಎಷ್ಟೋ ವೇದಿಕೆಗಳಲ್ಲಿ ಅವರು, 'ಜಾನಕಮ್ಮ ನನಗೆ ಅಂದು ಆಶೀರ್ವಾದ ಮಾಡಿ ನೀನು ದೊಡ್ಡ ಗಾಯಕನಾಗುತ್ತೀಯಾ ಎಂದು ಹೇಳಿದ್ದರು. ಅವರ ಆಶೀರ್ವಾದದ ಬಲದಿಂದಲೇ ನಾನು ಇಷ್ಟು ಪ್ರಸಿದ್ಧ ಗಾಯಕನಾಗಿದ್ದೇನೆ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು" ಎಂದು ಜಾನಕಿ ತಿಳಿಸಿದ್ದರು.
ಈ ಒಂದು ಕಾರಣಕ್ಕೆ ಅಂದು ಪದ್ಮ ಭೂಷಣ ಪ್ರಶಸ್ತಿ ನಿರಾಕರಿಸಿದ್ದ ಗಾಯಕಿ ಎಸ್. ಜಾನಕಿ
"ಆದರೆ, ನಾನು ನಿಮಗೆ ಒಂದು ಮಾತು ಹೇಳುತ್ತೇನೆ. ನಾನು ಎಷ್ಟೋ ಹೆಣ್ಣುಮಕ್ಕಳಿಗೆ ಮತ್ತು ಗಂಡುಮಕ್ಕಳಿಗೆ 'ನೀವು ಚೆನ್ನಾಗಿ ಹಾಡುತ್ತೀರಿ, ದೊಡ್ಡ ಗಾಯಕರಾಗುತ್ತೀರಿ' ಎಂದು ಆಶೀರ್ವದಿಸಿದ್ದೇನೆ. ಆದರೆ ಅವರೆಲ್ಲರೂ ಪ್ರಸಿದ್ಧರಾಗಿದ್ದಾರೆಯೇ? ಖಂಡಿತ ಇಲ್ಲ. ಬಾಲಸುಬ್ರಹ್ಮಣ್ಯಂ ಅವರಲ್ಲಿ ಅಪ್ರತಿಮ ಪ್ರತಿಭೆ ಇತ್ತು, ಅದೃಷ್ಟವಿತ್ತು ಮತ್ತು ದೇವರ ಕೃಪೆಯಿತ್ತು. ಅವರು ಅತ್ಯಂತ ಬುದ್ಧಿವಂತರಾಗಿದ್ದರು ಮತ್ತು ಯಾವುದೇ ಕಠಿಣ ರಾಗವನ್ನು ತಕ್ಷಣವೇ ಗ್ರಹಿಸುವ ಶಕ್ತಿಯನ್ನು ಹೊಂದಿದ್ದರು. ಅವರು ಈ ಕ್ಷೇತ್ರಕ್ಕೆ ಬಂದಾಗಿನಿಂದ ನಾವು ಒಟ್ಟಿಗೆ ಸಾವಿರಾರು ಡ್ಯುಯೆಟ್ ಹಾಡುಗಳನ್ನು ಹಾಡಿದ್ದೇವೆ. ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಸಾಂಗ್ ರೆಕಾರ್ಡಿಂಗ್‌ಗೆ ಭೇಟಿಯಾಗುತ್ತಿದ್ದೆವು. ನಾವು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲೂ ಸಹ ಎಷ್ಟೋ ಎವರ್‌ಗ್ರೀನ್ ಹಾಡುಗಳನ್ನು ಒಟ್ಟಿಗೆ ಹಾಡಿದ್ದೇವೆ" ಎಂದು ಜಾನಕಮ್ಮ ತಮ್ಮ ಪತ್ರದಲ್ಲಿ ನೆನಪುಗಳನ್ನು ಬಿಚ್ಚಿಟ್ಟಿದ್ದರು.
ಅಂದು ಎಸ್‌ಪಿಬಿ ಅಗಲಿದಾಗ ಕಂಬನಿ ಮಿಡಿದಿದ್ದ ಜಾನಕಮ್ಮ, ಇಂದು ತಾವೂ ಇಹಲೋಕ ತ್ಯಜಿಸುವ ಮೂಲಕ ಸಂಗೀತ ಲೋಕದ ಒಂದು ಸುವರ್ಣ ಯುಗಕ್ಕೆ ಅಂತಿಮ ತೆರೆ ಎಳೆದಿದ್ದಾರೆ.