ಸ್ಯಾಂಡಲ್‌ವುಡ್‌ನಲ್ಲಿ ʻಹಾಲುಂಡ ತವರುʼ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ ನಟಿ ಎಂದರೆ ಅದು ಸಿತಾರಾ. 90ರ ದಶಕದ ಫೇಮಸ್ ನಟಿ ಸಿತಾರಾ ಅವರು ಇದೀಗ ಸ್ಯಾಂಡಲ್‌ವುಡ್‌ಗೆ ಬಹಳ ದಿನಗಳ ನಂತರ ಮರಳಿದ್ದಾರೆ. ʻಹೊಂದಿಸಿ ಬರೆಯಿರಿʼ ಸಿನಿಮಾ ಮೂಲಕ ಬದುಕನ್ನು ಬಂದಂತೆ ಸ್ವೀಕರಿಸಿ ಎಂಬ ಸಂದೇಶ ಕೊಟ್ಟಿದ್ದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್, ಈಗ ಅವರು ಬದುಕಿನಲ್ಲಾದ ಒಂದು ಚಿಕ್ಕ ತಪ್ಪು ಕುಟುಂಬವನ್ನು ಎಷ್ಟು ದೂರ ಮಾಡುತ್ತದೆ ಜೊತೆಗೆ ತಂದೆ ತಾಯಿ ಮೌಲ್ಯಗಳನ್ನು ಸಾರುವ ಕಂಟೆಂಟ್ ನೊಂದಿಗೆ ಬಂದಿದ್ದಾರೆ. ಈ ಕಥೆಗೆ ಚಿತ್ರಕ್ಕೆ ʻತೀರ್ಥರೂಪ ತಂದೆಯವರಿಗೆʼ ಎಂಬ ಟೈಟಲ್ ಇಟ್ಟಿದ್ದಾರೆ. ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಈ ಚಿತ್ರದಲ್ಲಿ ಸಿತಾರಾ ಮಹತ್ವದ ಪಾತ್ರ ಮಾಡಿದ್ದಾರೆ.
ಸಿತಾರಾ ಹೇಳಿದ್ದೇನು?
"ಈ ಚಿತ್ರದಲ್ಲಿ ನನಗೆ ಉತ್ತಮವಾದ ಪಾತ್ರ ಕೊಟ್ಟಿದ್ದಾರೆ. ನಿಮಗೆ ನನ್ನ ಪಾತ್ರ ಇಷ್ಟವಾಗುತ್ತದೆ. ಕಥೆ ಪ್ರೇಕ್ಷಕರ ಹೃದಯ ತಟ್ಟುತ್ತದೆ. ಕನ್ನಡದಲ್ಲಿ ತುಂಬಾ ದಿನಗಳ ಬಳಿಕ ಬಣ್ಣ ಹಚ್ಚಿದ್ದೇನೆ. ನಾನು ನನ್ನ ಕನಸು ಆದಮೇಲೆ ರಾಜೇಶ್ ನಟರಂಗ ಅವರ ಜೊತೆ ಅಭಿನಯಿಸಿದ್ದೇನೆ" ಎನ್ನುತ್ತಾರೆ ಸಿತಾರಾ.
Rajesh Dhruva: ಕಿರುತೆರೆ ಲೋಕದ ಕರಾಳ ಸತ್ಯ ಬಿಚ್ಚಿಟ್ಟ ರಾಜೇಶ್ ಧ್ರುವ
ನಿರ್ದೇಶಕರು ಏನಂದ್ರು?
"ಇದು ಬೇರೆ ಕಥೆಗೆ ಇಟ್ಟ ಟೈಟಲ್. ನಾನು & ನಿಹಾರ್ ಭೇಟಿಯಾದಾಗ ಕಥೆ ಬಗ್ಗೆ ಚರ್ಚೆ ಮಾಡಿದೆವು. ಥಿಯೇಟರ್ ಗೆ ಪ್ರೇಕ್ಷಕರನ್ನು ಆಕರ್ಷಿಸಲು ಟೈಟಲ್ ಬಹಳ ಮುಖ್ಯ. ಅಲ್ಲದೇ ಜನಕ್ಕೆ ಹತ್ತಿರವಾಗಿ ಇರಬೇಕು ಹಾಗೂ ಕಥೆಗೆ ಅದು ಸೂಟ್ ಆಗುವ ರೀತಿಯೂ ಇರಬೇಕು. ಹೀಗಾಗಿ ಈ ಚಿತ್ರಕ್ಕೆ ಇದೇ ಟೈಟಲ್ ಇಟ್ಟೇವು. ತೀರ್ಥರೂಪ ತಂದೆಯವರಿಗೆ ತುಂಬಾ ಒಳ್ಳೆ ಟೈಟಲ್ ಎಂದು ಎಲ್ಲರೂ ಹೇಳಿದರು. ಚಿತ್ರದ ಪ್ರಮುಖ ಪಾತ್ರಧಾರಿ ಹುಡುಕಾಟದಲ್ಲಿ ಕೊನೆಗೆ ಏನೂ ಸಿಗಲಿದೆ ಎನ್ನುವುದು ಚಿತ್ರದ ಆಶಯ. ಈ ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ಎಲ್ಲಾ ಪಾತ್ರಗಳು ಸಹಜವಾಗಿ, ಉತ್ತಮವಾಗಿ ಮೂಡಿಬಂದಿದೆ" ಎಂದರು ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್.
ಈ ಚಿತ್ರಕ್ಕೆ ನಿಹಾರ್ ಮುಖೇಶ್ ಹೀರೋ
"ನಾನು ಮೂಲತಃ ಮೈಸೂರು ಹುಡುಗ. ಸೀರಿಯಲ್ ಮೂಲಕ ನನ್ನ ಜರ್ನಿ ಶುರುವಾಯ್ತು. ಹೊಂದಿಸಿ ಬರೆಯಿರಿ ಚಿತ್ರ ನೋಡಿದ ಮೇಲೆ ನಿರ್ದೇಶಕ ಜಗನ್ನಾಥ ಅವರ ಜೊತೆ ಕೆಲಸ ಮಾಡಬೇಕು ಎಂದುಕೊಂಡೆ. ಅದು ನನಸಾಗಿದೆ. ನಾನು ಪೃಥ್ವಿ ಎಂಬ ಪಾತ್ರ ಮಾಡಿದ್ದೇನೆ. ಪಾತ್ರದಲ್ಲಿ ತುಂಬಾ ಎಮೋಷನ್ ಪ್ಲೇ ಆಗಿದೆ" ಎನ್ನುತ್ತಾರೆ ನಿಹಾರ್. ʻತೀರ್ಥರೂಪ ತಂದೆಯವರಿಗೆʼ ಚಿತ್ರವನ್ನು ಜನವರಿ 1ರಂದು ಚಿತ್ರಮಂದಿರಗಳಿಗೆ ತರಲು ಚಿತ್ರತಂಡ ಸಜ್ಜಾಗಿದೆ.
ನಾಯಕಿಯಾಗಿ ರಚನಾ ಇಂದರ್
ಈ ಚಿತ್ರದಲ್ಲಿ ನಿಹಾರ್ ಮುಕೇಶ್‌ಗೆ ನಾಯಕಿಯಾಗಿ ರಚನಾ ಇಂದರ್ ನಟಿಸಿದ್ದಾರೆ. ರಾಜೇಶ್ ನಟರಂಗ, ಸಿತಾರಾ, ರವೀಂದ್ರ ವಿಜಯ್, ಅಜಿತ್ ಹಂದೆ ಸೇರಿದಂತೆ ಅನುಭವಿ ತಾರಾಬಳಗ ಚಿತ್ರದಲ್ಲಿದೆ. ಈ ಚಿತ್ರವು ‘ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಆಗಿದ್ದು, ರಾಮೇನಹಳ್ಳಿ ಜಗನ್ನಾಥ್ ಅವರೇ ಕಥೆ ಬರೆದಿದ್ದಾರೆ. ‘ಹೊಂದಿಸಿ ಬರೆಯಿರಿ’ ಚಿತ್ರ ನಿರ್ಮಾಣ ಮಾಡಿದ್ದ ‘ಸಂಡೇ ಸಿನಿಮಾಸ್’ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ರವಿಚಂದ್ರ ಎ ಜೆ ಅವರು ‘ತೀರ್ಥರೂಪ ತಂದೆಯವರಿಗೆ’ ಚಿತ್ರಕ್ಕೆ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಸಾಥ್ ಕೊಟ್ಟಿದ್ದಾರೆ. 'ತೀರ್ಥರೂಪ ತಂದೆಯವರಿಗೆ' ಚಿತ್ರ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಚಿತ್ರೀಕರಣಗೊಂಡಿದೆ. ಮೊದಲು ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಲಿದ್ದು, ಆ ಬಳಿಕ ತೆಲುಗು ಆವೃತ್ತಿಯು 'ಪ್ರಿಯಮೈನ ನಾನಾಕು' ಎಂಬ ಶೀರ್ಷಿಕೆಯೊಂದಿಗೆ ರಿಲೀಸ್ ಆಗಲಿದೆ.