ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ಬಿಗ್ ಬಾಸ್‌’ ಕನ್ನಡ ಸೀಸನ್ 13 ಶೋಗೆ ಅನುಮತಿ ನೀಡದಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು: ಕಾರಣವೇನು?

‘ಬಿಗ್ ಬಾಸ್‌’ ಕನ್ನಡ ಸೀಸನ್ 13 ಆರಂಭಕ್ಕೂ ಮುನ್ನವೇ ಪರಿಸರ ಮತ್ತು ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಬೆಂಗಳೂರು ಬಳಿಯ ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ನಿರಾಕ್ಷೇಪಣಾ ಪತ್ರ (NOC) ನೀಡದಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಿದ್ದಾರೆ.

ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಕನ್ನಡ ಸೀಸನ್ 13 ಆರಂಭಕ್ಕೆ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ ಕಾರ್ಯಕ್ರಮಕ್ಕೆ ಕಾನೂನು ಸಂಕಷ್ಟ ಎದುರಾಗಿದೆ. ಬೆಂಗಳೂರು ಬಳಿಯ ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯಲಿರುವ ಈ ಶೋಗೆ ಪರಿಸರ ಇಲಾಖೆಯ ಯಾವುದೇ ನಿರಾಕ್ಷೇಪಣಾ ಪತ್ರ (NOC) ಅಥವಾ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (KSPCB) ಅಧಿಕೃತ ದೂರು ಸಲ್ಲಿಸಿದ್ದಾರೆ.

ಹಿಂದಿನ ಸೀಸನ್‌ಗಳ ವೇಳೆ ಮಾಡಲಾದ ಪರಿಸರ ನಿಯಮಗಳ ಉಲ್ಲಂಘನೆಗಳನ್ನು ಸರಿಪಡಿಸದೆ ಮತ್ತು ಬಾಕಿ ದಂಡ ಪಾವತಿಸದೆ ಹೊಸ ಕಾರ್ಯಕ್ರಮಕ್ಕೆ ಅನುಮತಿ ನೀಡುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಕಳೆದ ವರ್ಷ ಇದೇ ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ನಡೆಸಿದ ಸಂದರ್ಭದಲ್ಲಿ ಪರಿಸರ ಸಂರಕ್ಷಣಾ ಕಾಯ್ದೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

Bigg Boss Kannada 12: Bigg Boss 12 Finale: ಕುಚಿಕು ದೋಸ್ತಿಗಳೇ ವಿನ್ನರ್‌, ರನ್ನರ್‌! ಗೆದ್ದ ಗಿಲ್ಲಿ ಪಕ್ಕಾ ನಿಂತ ಪಟಾಕಿ ರಕ್ಷಿತಾ

ದಂಡ ಪಾವತಿ ಮಾಡಿಲ್ಲ!

ಆ ಸಂದರ್ಭದಲ್ಲಿ ವಿಧಿಸಲಾಗಿದ್ದ ಪರಿಸರ ಪರಿಹಾರ ದಂಡದ ಮೊತ್ತವನ್ನು ಸ್ಟುಡಿಯೋ ಆಡಳಿತ ಮಂಡಳಿ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಪಾವತಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಹಳೆಯ ದಂಡ ವಸೂಲಿ ಮಾಡದೆ, ಲೋಪಗಳನ್ನು ಸರಿಪಡಿಸದೆ ಮತ್ತೊಮ್ಮೆ ಬೃಹತ್ ಕಾರ್ಯಕ್ರಮ ಆಯೋಜನೆಗೆ ಅವಕಾಶ ಮಾಡಿಕೊಡುವುದು ಪರಿಸರ ಸಂರಕ್ಷಣಾ ವ್ಯವಸ್ಥೆಯನ್ನೇ ಅಣಕಿಸಿದಂತಾಗುತ್ತದೆ ಎಂದು ದಿನೇಶ್ ಕಲ್ಲಹಳ್ಳಿ ದೂರಿದ್ದಾರೆ.

ವೈಜ್ಞಾನಿಕ ಪರೀಕ್ಷೆಗೊಳಪಡಿಸಬೇಕು

ಮುಖ್ಯವಾಗಿ, ಜಾಲಿವುಡ್ ಸ್ಟುಡಿಯೋದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ಸೂಕ್ತ ಸಾಮರ್ಥ್ಯದ ಒಳಚರಂಡಿ ಸಂಸ್ಕರಣಾ ಘಟಕ (STP) ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಸ್ಥಳ ಪರಿಶೀಲನೆ ನಡೆಸಿ ದೃಢಪಡಿಸಿಕೊಳ್ಳಬೇಕಿದೆ. ಕೇವಲ ಎಸ್‌ಟಿಪಿ ಇದೆ ಎಂದು ಹೇಳಿದರೆ ಸಾಲದು; ನೂರಾರು ಸಿಬ್ಬಂದಿ ಮತ್ತು ಸ್ಪರ್ಧಿಗಳು ಇರುವಾಗ ಉತ್ಪತ್ತಿಯಾಗುವ ಭಾರಿ ಪ್ರಮಾಣದ ಕೊಳಚೆ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯ ಅದಕ್ಕಿದೆಯೇ, ಇನ್‌ಲೆಟ್ ಮತ್ತು ಔಟ್‌ಲೆಟ್ ನೀರಿನ ಗುಣಮಟ್ಟ ಸರಿಯಾಗಿದೆಯೇ ಹಾಗೂ ಸಂಸ್ಕರಿಸದ ತ್ಯಾಜ್ಯವನ್ನು ಸುತ್ತಮುತ್ತಲಿನ ಕೆರೆ, ರಾಜಕಾಲುವೆ ಅಥವಾ ಜಲಮೂಲಗಳಿಗೆ ಅಕ್ರಮವಾಗಿ ಹರಿಸಲಾಗುತ್ತಿದೆಯೇ ಎಂಬುದನ್ನು ಮಂಡಳಿಯು ವೈಜ್ಞಾನಿಕ ಪರೀಕ್ಷೆಗೊಳಪಡಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ಯಾವುದೇ ಅನುಮತಿ ನೀಡಬಾರದು

ಇದರೊಂದಿಗೆ, ಶೋ ನಡೆಯುವ ಅವಧಿಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯ, ಪ್ಲಾಸ್ಟಿಕ್ ಹಾಗೂ ಅಪಾರ ಪ್ರಮಾಣದ ಆಹಾರ ತ್ಯಾಜ್ಯದ ವಿಲೇವಾರಿಗೆ ಜಲ ಮತ್ತು ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆಗಳ ಅನ್ವಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂದು ಪರಿಶೀಲಿಸಬೇಕಾಗಿದೆ. ಈ ಎಲ್ಲಾ ಅಂಶಗಳನ್ನು ದಾಖಲೆ ಸಹಿತ ತನಿಖೆ ನಡೆಸುವವರೆಗೆ ಯಾವುದೇ ಅನುಮತಿ ನೀಡಬಾರದು.

"ಮೊದಲು ಕಾರ್ಯಕ್ರಮಕ್ಕೆ ಅನುಮತಿ ನೀಡಿ ನಂತರ ನಿಯಮ ಪಾಲನೆ ಪರಿಶೀಲಿಸುವ" ತಪ್ಪಾದ ಪದ್ಧತಿಯ ಬದಲಿಗೆ, "ಮೊದಲು ಸಂಪೂರ್ಣ ಕಾನೂನುಬದ್ಧ ಪರಿಸರ ನಿಯಮಗಳ ಪಾಲನೆ, ನಂತರವಷ್ಟೇ ಕಾರ್ಯಕ್ರಮ" ಎಂಬ ನೀತಿಯನ್ನು ಮಂಡಳಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ದಿನೇಶ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ.