ಕಿರುತೆರೆ ಲೋಕದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ವೀಕ್ಷಕರಿಗೆ ಜಿಯೋಸ್ಟಾರ್ (JioStar) ಸಂಸ್ಥೆಯು ಬೃಹತ್ ಸುದ್ದಿಯೊಂದನ್ನು ನೀಡಿದೆ. ಕಿಚ್ಚ ಸುದೀಪ್ ಸಾರಥ್ಯದ 'ಬಿಗ್ ಬಾಸ್ ಕನ್ನಡ' ಸೇರಿದಂತೆ ಒಟ್ಟು ಆರು ಪ್ರಾದೇಶಿಕ ಭಾಷೆಗಳ ಹೊಸ ಸೀಸನ್‌ಗಳು ಮುಂಬರುವ ಸೆಪ್ಟೆಂಬರ್‌ನಿಂದ ಜಿಯೋಸ್ಟಾರ್ ಟೆಲಿವಿಷನ್ ನೆಟ್‌ವರ್ಕ್ ಹಾಗೂ ಜಿಯೋಹಾಟ್‌ಸ್ಟಾರ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗಲಿವೆ.
ಫ್ರಾಂಚೈಸಿಯೊಂದರ ಆರು ಭಾಷೆಗಳ (ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಬಾಂಗ್ಲಾ) ಆವೃತ್ತಿಗಳು ಒಂದೇ ಅವಧಿಯಲ್ಲಿ ಒಟ್ಟಿಗೆ ಶುರುವಾಗುತ್ತಿರುವುದು ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಯಾಗಿದೆ.
ಬಿಗ್ ಬಾಸ್ ಜಗತ್ತಿಗೆ ಸೌರವ್ ಗಂಗೂಲಿ ಎಂಟ್ರಿ
ಈ ಬಾರಿಯ ಸೀಸನ್‌ನ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಬಿಗ್ ಬಾಸ್ ಅಖಾಡಕ್ಕೆ ಕಾಲಿಡುತ್ತಿರುವುದು. ಅವರು ಮುಂಬರುವ ಬಾಂಗ್ಲಾ ಆವೃತ್ತಿಯ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದು, ಕಿರುತೆರೆಯಲ್ಲಿ ಶೋವೊಂದನ್ನು ನಡೆಸಿಕೊಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಈ ಮಹತ್ವದ ಘೋಷಣೆಯ ಜತೆಗೆ, ಜಿಯೋಸ್ಟಾರ್ ಸಂಸ್ಥೆಯು 'ಇಂಡಿಯಾಸ್ ಬಿಗ್ ರಿಯಾಲಿಟಿ' ಎಂಬ ಶೀರ್ಷಿಕೆಯ ಕಾಫಿ ಟೇಬಲ್ ಪುಸ್ತಕವನ್ನು ಅನಾವರಣಗೊಳಿಸಿದೆ. ಈ ಪುಸ್ತಕವು ಕಳೆದ ಎರಡು ದಶಕಗಳಲ್ಲಿ ಬಿಗ್ ಬಾಸ್ ಬೆಳೆದುಬಂದ ಹಾದಿ, ಬ್ರ್ಯಾಂಡ್ ಪಾಲುದಾರಿಕೆ ಹಾಗೂ ಪ್ರೇಕ್ಷಕರ ಬೆಂಬಲದ ಸಂಪೂರ್ಣ ಪಯಣವನ್ನು ದಾಖಲಿಸಿದೆ.
ದಾಖಲೆ ಬರೆದ 2025ರ ಸೀಸನ್
ಜಿಯೋಸ್ಟಾರ್ ನೀಡಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ, 2025ರಲ್ಲಿ ಬಿಗ್ ಬಾಸ್ ಶೋ ಎಲ್ಲಾ ಭಾಷೆಗಳು ಸೇರಿ ಭಾರಿ ಯಶಸ್ಸು ಕಂಡಿದೆ. 50 ಕೋಟಿಗೂ (500 ಮಿಲಿಯನ್) ಹೆಚ್ಚು ವೀಕ್ಷಕರನ್ನು ತಲುಪಿದ್ದು, 4,380 ಕೋಟಿ (438 ಬಿಲಿಯನ್) ವೀಕ್ಷಣೆಯ ನಿಮಿಷಗಳನ್ನು ದಾಖಲಿಸಿದೆ.
46 ವಿಭಾಗಗಳ 625ಕ್ಕೂ ಹೆಚ್ಚು ಪ್ರಸಿದ್ಧ ಬ್ರ್ಯಾಂಡ್‌ಗಳು ಶೋ ಜೊತೆ ಕೈಜೋಡಿಸಿದ್ದು, ಇದರಲ್ಲಿ 49 ಹೊಸ ಬ್ರ್ಯಾಂಡ್‌ಗಳು ಸೇರಿವೆ. ಜಿಯೋಹಾಟ್‌ಸ್ಟಾರ್ ಮೂಲಕ ವೀಕ್ಷಕರು ಬರೋಬ್ಬರಿ 932 ಕೋಟಿಗೂ (9.32 ಬಿಲಿಯನ್) ಹೆಚ್ಚು ಮತಗಳನ್ನು ಚಲಾಯಿಸಿದ್ದು, 4.30 ಕೋಟಿ (43 ಮಿಲಿಯನ್) ಲೈವ್ ಚಾಟ್‌ಗಳನ್ನು ಮಾಡಿದ್ದಾರೆ. ಶೋ ಬಗೆಗೆ ಸೋಶಿಯಲ್ ಮೀಡಿಯಾದಲ್ಲಿ 170 ಕೋಟಿಗೂ ಹೆಚ್ಚು ಎಂಗೇಜ್‌ಮೆಂಟ್ ಹಾಗೂ 3 ಕೋಟಿಗೂ ಹೆಚ್ಚು ಮೀಮ್‌ಗಳು ಹರಿದಾಡಿವೆ.
Bigg Boss: ಈ ರೂಲ್ಸ್ ಬ್ರೇಕ್ ಮಾಡಿದ್ರೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಬೀಳುತ್ತೆ 10 ಲಕ್ಷ ದಂಡ?
ಸಾಂಪ್ರದಾಯಿಕ ಜಾಹೀರಾತು ಶೈಲಿಯನ್ನು ಮೀರಿ, ಟಾಸ್ಕ್‌ಗಳು ಹಾಗೂ ಪ್ರಾಡಕ್ಟ್ ಆಧಾರಿತ ಚಟುವಟಿಕೆಗಳ ಮೂಲಕ ಬ್ರ್ಯಾಂಡ್‌ಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಬಿಗ್ ಬಾಸ್ ಯಶಸ್ವಿಯಾಗಿದೆ. 2026ರ ಈ ಹೊಸ ಸೀಸನ್, ಭಾರತೀಯ ಕಿರುತೆರೆಯಲ್ಲಿ ಮತ್ತೊಂದು ಹೊಸ ದಾಖಲೆ ಬರೆಯಲು ಸಜ್ಜಾಗಿದೆ.