ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಲಯಾಳಂ ಚಿತ್ರರಂಗಕ್ಕೆ ಜೆಪಿ ತುಮ್ಮಿನಾಡು ಎಂಟ್ರಿ; ಮಂಜು ವಾರಿಯರ್ ಜೊತೆ ʻಸು ಫ್ರಮ್‌ ಸೋʼ ನಟನ ಜುಗಲ್‌ಬಂದಿ!

ʻಸು ಫ್ರಮ್ ಸೋʼ ಚಿತ್ರದ ಮೂಲಕ ಸಂಚಲನ ಮೂಡಿಸಿದ್ದ ನಟ-ನಿರ್ದೇಶಕ ಜೆಪಿ ತುಮ್ಮಿನಾಡು ಈಗ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸ್ಟಾರ್ ನಟಿ ಮಂಜು ವಾರಿಯರ್ ಪ್ರಮುಖ ಪಾತ್ರದಲ್ಲಿರುವ ʻಹ್ಯಾಪಿಲೂಪ್ʼ ಚಿತ್ರದಲ್ಲಿ ಜೆಪಿ ನಟಿಸುತ್ತಿದ್ದು, ʻವಾಳʼ ಖ್ಯಾತಿಯ ಆನಂದ್ ಮೆನನ್ ನಿರ್ದೇಶನ ಮಾಡುತ್ತಿದ್ದಾರೆ.

ʻಸು ಫ್ರಮ್ ಸೋʼ (Su From So) ಸಿನಿಮಾವನ್ನು ನಿರ್ದೇಶಿಸಿ, ಹೀರೋ ಆಗಿ ನಟಿಸಿ, ಮೊದಲ ಪ್ರಯತ್ನದಲ್ಲೇ ಪ್ರಚಂಡ ಗೆಲುವು ಸಾಧಿಸಿದ್ದವರು ಜೆಪಿ ತುಮ್ಮಿನಾಡು. ʻಸು ಫ್ರಮ್ ಸೋʼ ಸಿನಿಮಾ ತೆರೆಕಂಡು ಆಗಲೇ 10 ತಿಂಗಳು ಕಳೆಯುತ್ತಿದ್ದು, ಅವರ ಮುಂದಿನ ಪ್ರಾಜೆಕ್ಟ್‌ ಯಾವುದು ಎಂಬ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಇದೀಗ ಅವರು ಭರ್ಜರಿ ಅಪ್ಡೇಟ್‌ ಅನ್ನೇ ನೀಡಿದ್ದಾರೆ. ಜೊತೆಗೆ ಅವರೀಗ ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ.

ಹ್ಯಾಪಿಲೂಪ್ ಚಿತ್ರದಲ್ಲಿ ಜೆಪಿ ತುಮ್ಮಿನಾಡು

ಮಲಯಾಳಂ ಸ್ಟಾರ್‌ ನಟಿ ಮಂಜು ವಾರಿಯರ್ ಮತ್ತು ಮುಖೇಶ್ ಮುಖ್ಯಭೂಮಿಕೆಯಲ್ಲಿರುವ 'ಹ್ಯಾಪಿಲೂಪ್' (Happiloop) ಚಿತ್ರದಲ್ಲಿ ಖ್ಯಾತಿಯ ಕನ್ನಡದ ನಟ-ನಿರ್ದೇಶಕ ಜೆಪಿ ತುಮ್ಮಿನಾಡು ಅವರು ನಟಿಸುತ್ತಿದ್ದಾರೆ. 'ಗೌತಮಂತೆ ರಾಧಂ' ಮತ್ತು 'ವಾಳ' (Vaazha) ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ಆನಂದ್ ಮೆನನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 'ಮಧುರಂ' ಮತ್ತು 'ಕೇರಳ ಕ್ರೈಮ್ ಫೈಲ್ಸ್ ಸೀಸನ್ 1' ಖ್ಯಾತಿಯ ಆಶಿಕ್ ಐಮರ್ ಅವರು 'ಹ್ಯಾಪಿಲೂಪ್' ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ.

ಪ್ರೀತಿಸಿದ ಹುಡುಗಿ ಜೊತೆ ಹಸೆಮಣೆ ಏರಿದ 'ಸು ಫ್ರಮ್ ಸೋ’ ನಟ ಜೆಪಿ ತುಮ್ಮಿನಾಡು!

ತಾಂತ್ರಿಕ ವರ್ಗದಲ್ಲಿ ಯಾರೆಲ್ಲಾ ಇದ್ದಾರೆ?

'ಹ್ಯಾಪಿಲೂಪ್' ಚಿತ್ರಕ್ಕೆ ಗೌತಮ್ ಶಂಕರ್ ಅವರು ಛಾಯಾಗ್ರಹಣ ಮಾಡುತ್ತಿದ್ದು, ಕಣ್ಣನ್ ಮೋಹನ್ ಅವರು ಸಂಕಲನದ ಹೊಣೆಯನ್ನು ಹೊತ್ತುಕೊಂಡಿದ್ದಾರೆ. 'ವಾಳ' ಖ್ಯಾತಿಯ 'ಎಲೆಕ್ಟ್ರಾನಿಕ್ ಕಿಲಿ' ಮತ್ತು ಪಾರ್ವತಿಶ್ ಪ್ರದೀಪ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದು, ಉಳಿದಂತೆ, ಅನು, ವಿ.ಕೆ. ಪ್ರಕಾಶ್, ನಿಶಾಂತ್ ಸಾಗರ್, ನೀರಜಾ ರಾಜೇಂದ್ರನ್ ಮತ್ತು ಅತಿರಾ ರಾಜೀವ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಟಿ ಮಂಜು ವಾರಿಯರ್ ಅವರ ಆಪ್ತ ಬಿನೀಶ್ ಚಂದ್ರ ಅವರು 'ಮೂವಿ ಬಕೆಟ್' ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 'ಹ್ಯಾಪಿಲೂಪ್' ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದ್ದು, ಹೆಚ್ಚಿನ ಮಾಹಿತಿಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಹ್ಯಾಪಿಲೂಪ್‌ ಸಿನಿಮಾದ ಕುರಿತ ಪೋಸ್ಟ್‌



ದಾಂಪತ್ಯ ಬದುಕಿಗೆ ಕಾಲಿಟ್ಟ ಜೆಪಿ ತುಮ್ಮಿನಾಡು

ನಟ ಜೆಪಿ ತುಮ್ಮಿನಾಡು ಅವರು ಈಚೆಗೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ತಮ್ಮ ದೀರ್ಘಕಾಲದ ಪ್ರೇಯಸಿ ರಶ್ಮಿಕಾ ಜೊತೆ ಜೆಪಿ ಮದುವೆಯಾಗಿದ್ದು, ಅವರ ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಮಂಗಳೂರಿನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಆಪ್ತರು ಹಾಗೂ ಕುಟುಂಬ ಸದಸ್ಯರು ಭಾಗಿಯಾಗಿದ್ದರು. 14 ವರ್ಷಗಳಿಂದ ಈ ಜೋಡಿಯೂ ಪರಸ್ಪರ ಪ್ರೀತಿಸುತ್ತಿದ್ದು ಇದೀಗ ಮದುವೆಯಾಗಿದ್ದರು. ಆರಂಭದ ದಿನಗಳಲ್ಲಿ ತುಳು ರಂಗಭೂಮಿಯಲ್ಲಿ ಖ್ಯಾತಿ ಪಡೆದಿದ್ದ ಜೆಪಿ ಅವರಿಗೆ ರಶ್ಮಿಕಾ ಪರಿಚಯವಾಗಿದ್ದರು. ನಂತರ ಇಬ್ಬರ ಸ್ನೇಹವು ಪ್ರೀತಿಗೆ ತಿರುಗಿತ್ತು. ಇದೀಗ 14 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಬಿದ್ದಿತ್ತು.