ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Padmagandhi Movie: 3 ಭಾಷೆಯಲ್ಲಿ ಸಿನಿಮಾ ನಿರ್ದೇಶಿಸಿದ ಸುಚೇಂದ್ರ ಪ್ರಸಾದ್;‌ ಈ ಚಿತ್ರಕ್ಕೆ ಮಾಜಿ MLC ಎಸ್‌ ಆರ್‌ ಲೀಲಾ ನಿರ್ಮಾಪಕಿ

ಹಿರಿಯ ನಟ ಸುಚೇಂದ್ರ ಪ್ರಸಾದ್‌ ಅವರು 'ಪದ್ಮಗಂಧಿ' ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ವಿಶೇಷವಾಗಿ ಈ ಸಿನಿಮಾವು ಕನ್ನಡ, ಹಿಂದಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ಬರಲು ಸಿದ್ಧವಾಗಿದ್ದು, ಮಾಜಿ ಎಂಎಲ್‌ಸಿ, ನಿವೃತ್ತ ಪ್ರೊಫೆಸರ್ ಡಾ. ಎಸ್‌ ಆರ್‌ ಲೀಲಾ ಅವರು ಈ ಚಿತ್ರಕ್ಕೆ ಹಣ ಹೂಡಿ, ಸ್ಕ್ರಿಪ್ಟ್‌ ಕೂಡ ಬರೆದಿದ್ದಾರೆ.

Suchindra Prasad: ಮೂರು‌ ಭಾಷೆಯಲ್ಲಿ ʻಪದ್ಮಗಂಧಿʼ ಚಿತ್ರ ರಿಲೀಸ್‌!

-

Avinash GR
Avinash GR Dec 9, 2025 5:41 PM

ಹಿರಿಯ ನಟ ಸುಚೇಂದ್ರ ಪ್ರಸಾದ್‌ ಅವರು ಆಗಾಗ ಸಿನಿಮಾ ನಿರ್ದೇಶನದತ್ತಲೂ ಮುಖ ಮಾಡುತ್ತಾರೆ. ಈ ಹಿಂದೆ ಹಿರಿಯ ಸಾಹಿತಿ ದೊಡ್ಡ ರಂಗೇಗೌಡ ಅವರ ‘ಮಾವು ಬೇವು ’ ಗೀತ ಗುಚ್ಛವನ್ನು ಸಿನಿಮಾ ಮಾಡಿದ್ದರು. ಇದೀಗ ʻಪದ್ಮಗಂಧಿʼ ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ ಈ ಸಿನಿಮಾವು ಮೂರು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಅದರಲ್ಲೂ ಸಂಸ್ಕೃತದಲ್ಲಿ ರಿಲೀಸ್‌ ಆಗುತ್ತಿರುವುದು ವಿಶೇಷ.

ಎಸ್‌ ಆರ್‌ ಲೀಲಾ ನಿರ್ಮಾಪಕಿ

ಸುಚೇಂದ್ರ ಪ್ರಸಾದ್‌ ನಿರ್ದೇಶನದ ʻಪದ್ಮಗಂಧಿʼ ಚಿತ್ರಕ್ಕೆ ಮಾಜಿ ಎಂಎಲ್‌ಸಿ, ಅಂಕಣಕಾರ್ತಿ, ಸಂಸ್ಕ್ರತ ಭೂಮಿಕೆಯಲ್ಲಿ ನಾನಾ ದಿಕ್ಕಿನಲ್ಲಿ ಅಧ್ಯಯನ ನಡೆಸಿರುವ ನಿವೃತ್ತ ಪ್ರೊಫೆಸರ್ ಎಸ್ ಆರ್ ಲೀಲಾ ಅವರು ಹಣ ಹಾಕಿರುವುದು ವಿಶೇಷ. ಅಲ್ಲದೆ, ಅವರೇ ಈ ಸಿನಿಮಾಗೆ ಸ್ಕ್ರಿಪ್ಟ್‌ ಕೂಡ ಬರೆದಿದ್ದಾರೆ. ಈಚೆಗೆ ಈ ಚಿತ್ರದ ಹಾಡುಗಳು ಮತ್ತು ಟ್ರೇಲರ್‌ ರಿಲೀಸ್‌ ಆಗಿದ್ದು, ಸಿನಿಮಾ ಪ್ರಿಯರಿಂದ ಮೆಚ್ಚುಗೆ ಪಡೆದುಕೊಂಡಿವೆ. ಈ ಚಿತ್ರವನ್ನು ಕನ್ನಡ, ಹಿಂದಿ ಮತ್ತು ಸಂಸ್ಕೃತ ಭಾಷೆಯಲ್ಲಿ ನಿರ್ಮಾಣ ಮಾಡಿದ್ದು, ಮೂರೂ ಭಾಷೆಗಳಲ್ಲಿಯೂ ತೆರೆಗೆ ತರುವುದಕ್ಕೆ ಚಿತ್ರತಂಡ ಪ್ಲ್ಯಾನ್‌ ಮಾಡಿಕೊಳ್ಳುತ್ತಿದೆ.

ನಿರ್ದೇಶಕರನ್ನು ಹೊಗಳಿದ ಎಸ್‌ ಆರ್‌ ಲೀಲಾ

"ಈ ಸಿನಿಮಾವು ಹಾದಿಯಿಂದ ಅಂತ್ಯದವರೆಗೂ ಪದ್ಮಗಂಧಿಯ ಪರಿಮಳ ಪಸರಿಸುತ್ತದೆ. ದೈವೀಕ ಗಂಧ ಮೆತ್ತಿಕೊಂಡಿರುವ ಕಮಲದ ಹೂವಿನ ಬಗ್ಗೆಯೇ ಕಥೆ ಇರುವುದು ವಿಶೇಷ. ನಮ್ಮಲ್ಲಿ ದೈವೀಕ ಅನುಭೂತಿ ಸ್ಪುರಿಸುವ ಕಮಲ ಪುಷ್ಪದ ಬಗ್ಗೆ ಆಳವಾಗಿ ಅರಿವಿನ ಪರಧಿಯನ್ನು ವಿಸ್ತಿರಿಸಿಕೊಳ್ಳುತ್ತಾ, ಅದರ ಅಗಾಧತೆ ಮೊಗೆದರೂ ಮುಗಿಯದ ಅಕ್ಷಯ ಪಾತ್ರೆಯಂತೆ ಭಾಸವಾಗಲು ಆರಂಭಿಸಿದೆ. ಇದೆಲ್ಲಾವನ್ನು ಸಂಶೋಧಿಸಿ ವಿಷಯಗಳನ್ನು ಸನ್ನಿವೇಶಗಳಲ್ಲಿ ಕಟ್ಟಿಕೊಡಲಾಗಿದೆ. ನಿರ್ದೇಶಕರು ನನ್ನ ಮನಸ್ಸಿನಲ್ಲಿರುವಂತೆ ತೆರೆ ಮೇಲೆ ತೋರಿಸಿದ್ದಾರೆ" ಎಂದು ನಿರ್ಮಾಪಕಿ ಡಾ. ಎಸ್ ಆರ್ ಲೀಲಾ ಹೇಳಿದ್ದಾರೆ.

ಈ ಚಿತ್ರದಲ್ಲಿ ವಿದ್ಯಾರ್ಥಿಯಾಗಿ ಕು. ಮಹಾಪದ್ಮ, ಗುರುಮಾತೆ ಪಾತ್ರದಲ್ಲಿ ಉಡುಪಿಯ ಪರಿಪೂರ್ಣ ಚಂದ್ರಶೇಖರ್ ನಟಿಸುತ್ತಿದ್ದಾರೆ. ಶತಾವಧಾನಿ ಡಾ. ಆರ್. ಗಣೇಶ್, ಮುಕ್ತಿನಾಗ ದೇವಸ್ಥಾನದ ಧರ್ಮಾಧಿಕಾರಿ ಡಾ. ಗೌರಿ ಸುಬ್ರಹ್ಮಣ್ಯ , ಡಾ. ಪ್ರೇಮಾ, ಡಾ. ಹೇಮಂತ್‌ಕುಮಾರ್, ಆಚಾರ್ಯ ಮೃತ್ಯುಂಜಯ ಶಾಸ್ತ್ರಿ, ಜಿ ಎಲ್ ಭಟ್ (ಶಿಲ್ಪಜ್ಞ), ಮೃತ್ಯುಂಜಯ ಶಾಸ್ತ್ರಿ, ಪಂಡಿತ ಪ್ರಸನ್ನ ವೈದ್ಯ, ಡಾ ದೀಪಕ್‌ ಪರಮಶಿವನ್, ಹೇಮಂತ ಕುಮಾರ. ಜಿ ಅವರುಗಳು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಈ ಚಿತ್ರಕ್ಕೆ ಡಾ. ದೀಪಕ್ ಪರಮಶಿವನ್ ಅವರು ಸಂಗೀತ ನೀಡಿದ್ದಾರೆ. ಮನು ಯಪ್ಲಾರ್, ನಾಗರಾಜ್ ಅದವಾನಿ, ಗಿರಿಧರ್‌ ದಿವಾನ್ ಅವರುಗಳು ಛಾಯಾಗ್ರಹಣದ ಹೊಣೆ ಹೊತ್ತುಕೊಂಡಿದ್ದಾರೆ. ಎನ್.ನಾಗೇಶ್ ನಾರಾಯಣಪ್ಪ ಸಂಕಲನವನ್ನು ಮಾಡಿದ್ದಾರೆ. ಅಂದಹಾಗೆ, ʻಪದ್ಮಗಂಧಿʼ ಸಿನಿಮಾವನ್ನು ಡಿಸೆಂಬರ್‌ನಲ್ಲಿ ತೆರೆಗೆ ತರಲು ಸುಚಿತ್ ಫಿಲಂಸ್‌ನ ವೆಂಕಟ್‌ಗೌಡ ಯೋಜನೆ ಹಾಕಿಕೊಂಡಿದ್ದಾರೆ.