ʻಸೂಪರ್ ಸ್ಟಾರ್ʼ ರಜನಿಕಾಂತ್ ಅಭಿನಯದ 'ಜೈಲರ್ 2' ಚಿತ್ರದ ಚಿತ್ರೀಕರಣವು ಇತ್ತೀಚೆಗಷ್ಟೇ ಮುಕ್ತಾಯ ಹಂತ ತಲುಪಿತ್ತು. ಆದರೆ, ಬಾಕಿ ಉಳಿದಿದ್ದ ಕೆಲವು ಪ್ಯಾಚ್‌ವರ್ಕ್ ದೃಶ್ಯಗಳ ಚಿತ್ರೀಕರಣವು ಚೆನ್ನೈನ ಈಸ್ಟ್ ಕೋಸ್ಟ್ ರೋಡ್‌ನಲ್ಲಿರುವ ಆದಿತ್ಯರಾಮ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿತ್ತು. ಆದರೆ, ಈ ಸಂದರ್ಭದಲ್ಲಿ ಒಂದು ದುರಂತ ಸಂಭವಿಸಿದೆ. ಸೆಟ್‌ನಲ್ಲಿ ವಿದ್ಯುತ್ ಅವಘಡದಲ್ಲಿ ಚಿತ್ರತಂಡದ ತಂತ್ರಜ್ಞರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಸೆಟ್‌ನಲ್ಲಿ ಏನಾಯ್ತು?
ಸೇಲಂ ಮೂಲದ 28 ವರ್ಷದ ಎಲೆಕ್ಟ್ರಿಷಿಯನ್ ಕಾರ್ತಿಕೇಯನ್ ಎಂಬುವವರು ʻಜೈಲರ್ 2ʼ ಸೆಟ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಇದೀಗ ಚಿತ್ರೀಕರಣದ ಸಮಯದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ ಎಂಬ ಬಗ್ಗೆ ಕಾನತ್ತೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
'ಜೈಲರ್ 2' ಬಿಡುಗಡೆ ಯಾವಾಗ?
ಜೈಲರ್ ಪಾರ್ಟ್ 1 ಸಿನಿಮಾವು 3 ವರ್ಷಗಳ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್ ಯಶಸ್ಸು ಕಂಡಿತ್ತು. ಅದೇ ರೀತಿ ಎರಡನೇ ಭಾಗವೂ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದೇ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈಗಿನ ಪರಿಸ್ಥಿತಿ ಹಾಗಿಲ್ಲ. 'ಲಾಹೋರ್ 1947' ಮತ್ತು ಇಮ್ರಾನ್ ಹಶ್ಮಿ ಅವರ 'ಆವಾರಪನ್ 2' ಸೇರಿದಂತೆ ಹಲವಾರು ಚಿತ್ರಗಳು ಅದೇ ಸಮಯದಲ್ಲಿ ತೆರೆಗೆ ಬರುತ್ತಿವೆ. ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತದ ಸಿನಿಮಾಗಳಾದ ಸೂರ್ಯ ಅವರ 'ವಿಶ್ವನಾಥ್ ಅಂಡ್ ಸನ್ಸ್' ಮತ್ತು ನಟ ಸೂರಿ ಅವರ 'ಮಂದಾಡಿ' ಕೂಡ ಆಗಸ್ಟ್‌ನಲ್ಲಿಯೇ ಬಿಡುಗಡೆಯಾಗುವ ಸಾಧ್ಯತೆಯಿದೆ.
ಆದ್ದರಿಂದ ಜೈಲರ್ 2 ನಿರ್ಮಾಪಕರು ತಮ್ಮ ಚಿತ್ರವನ್ನು ಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭವಾದ ಸೆಪ್ಟೆಂಬರ್ 4 ರಂದು ರಿಲೀಸ್ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಹಾಗಾಗಿ, ಅಭಿಮಾನಿಗಳು ಆಗಸ್ಟ್ ಅಲ್ಲ, ಸೆಪ್ಟೆಂಬರ್‌ವರೆಗೂ ಕಾಯಲೇಬೇಕಿದೆ. ಈ ಆಕ್ಷನ್ ಡಾರ್ಕ್ ಕಾಮಿಡಿ ಚಿತ್ರವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸುತ್ತಿದ್ದಾರೆ. ರಜನಿಕಾಂತ್ ಅವರೊಂದಿಗೆ ಮೋಹನ್‌ಲಾಲ್, ಶಿವರಾಜ್‌ಕುಮಾರ್, ಯೋಗಿ ಬಾಬು, ರಮ್ಯಾ ಕೃಷ್ಣ ಜೊತೆಗೆ ವಿದ್ಯಾ ಬಾಲನ್, ವಿಜಯ್ ಸೇತುಪತಿ, ಎಸ್.ಜೆ. ಸೂರ್ಯ ಮತ್ತು ಮಿಥುನ್ ಚಕ್ರವರ್ತಿ ಕೂಡ ಈಗ ಚಿತ್ರೆತಂಡ ಸೇರಿಕೊಂಡಿದ್ದಾರೆ.
Jailer 2 Movie: ಮತ್ತೊಮ್ಮೆ ಆ್ಯಕ್ಷನ್ ಅವತಾರದಲ್ಲಿ ರಜನಿಕಾಂತ್; 'ಜೈಲರ್ 2' ಚಿತ್ರದ ಟೀಸರ್ ಔಟ್
ಜೈಲರ್ 2 ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದು, ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ಮಾಡಿದ್ದಾರೆ. ಸನ್ ಪಿಕ್ಚರ್ಸ್‌ನ ಕಲಾನಿಧಿ ಮಾರನ್ ಅವರು ಅದ್ದೂರಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.