ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ನಟ ದರ್ಶನ್ ಅವರು ಕಳೆದ ಹಲವು ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಪ್ರಕರಣದ ವಿಚಾರಣೆ ವಿಳಂಬ ಆಗುತ್ತಿರುವುದರಿಂದ ಜಾಮೀನು ಮಂಜೂರು ಮಾಡುವಂತೆ ಕೋರಿ ದರ್ಶನ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿದ್ದರು. ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ವಿಜಯ್ ಬಿಷ್ಣೋಯ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಜಾಮೀನು ನಿರಾಕರಣೆ ಮಾಡಿದ ಪೀಠವು ಮುಂದಿನ ಒಂದು ವರ್ಷದವರೆಗೆ ಜಾಮೀನು ಕೇಳುವಂತಿಲ್ಲ ಎಂದು ಹೇಳಿ ದರ್ಶನ್‌ಗೆ ದೊಡ್ಡ ಆಘಾತ ನೀಡಿದೆ. ಹಾಗಾದರೆ, ದರ್ಶನ್ ಅವರು ಯಾವಾಗ ಅರ್ಜಿ ಸಲ್ಲಿಕೆ ಮಾಡಬೇಕು? ರೇಣುಕಾಸ್ವಾಮಿ ಪ್ರಕರಣದ ವಿಚಾರಣೆಯು ಮುಂದಿನ ಒಂದು ವರ್ಷದಲ್ಲಿ ಗಣನೀಯ ಪ್ರಗತಿ ಕಾಣದಿದ್ದರೆ ನಟ ದರ್ಶನ್ ಅವರ ಜಾಮೀನು ಅರ್ಜಿಯನ್ನು ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ.
"ಜೈಲು ಕೈಪಿಡಿಯ ಅನ್ವಯ ವಿಚಾರಣಾಧೀನ ಕೈದಿಗೆ ಲಭ್ಯ ಇರುವ ಎಲ್ಲಾ ಸೌಲಭ್ಯಗಳನ್ನು ದರ್ಶನ್‌ಗೆ ಒದಗಿಸಬೇಕು. ವಿಚಾರಣೆಯಲ್ಲಿ ಗಣನೀಯ ಪ್ರಗತಿ ಆಗದಿದ್ದರೆ ದರ್ಶನ್ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು. ಒಂದು ವರ್ಷದಲ್ಲಿ 60 ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸಲು ಪ್ರಾಸಿಕ್ಯೂಷನ್ ಕೆಲಸ ಮಾಡಬೇಕು" ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿ, ದರ್ಶನ್ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿದೆ.
ದರ್ಶನ್ ಪರ ವಕೀಲರು ಹೇಳಿದ್ದೇನು?
ಅದಕ್ಕೂ ಮುನ್ನ ವಾದ ಮಂಡಿಸಿದ ದರ್ಶನ್ ಪರ ವಕೀಲರು, ಹಲವು ವಿಚಾರಗಳನ್ನು ಕೋರ್ಟ್ ಮುಂದೆ ಇರಿಸಿದರು. ದರ್ಶನ್ ಪರ ಹಿರಿಯ ವಕೀಲ ಮುಕುಲ್ ರೋಹಟ್ಗಿ, "ರಾಜ್ಯ ಸರ್ಕಾರವು 272 ಸಾಕ್ಷಿಗಳ ವಿಚಾರಣೆ ನಡೆಸಲು ಬಯಸಿದೆ. ದರ್ಶನ್ ಜಾಮೀನು ರದ್ದುಗೊಂಡು ಎಂಟು ತಿಂಗಳಾಗಿದ್ದು, 10 ಸಾಕ್ಷಿಗಳ ವಿಚಾರಣೆ ಮಾತ್ರ ಮಾಡಲಾಗಿದೆ. ದರ್ಶನ್ ಅವರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇಡಲಾಗಿದ್ದು, ಅನ್ಯ ಕೈದಿಗಳ ಜೊತೆ ಮಾತನಾಡಲೂ ಅವಕಾಶ ನೀಡುತ್ತಿಲ್ಲ. ಹೀಗಾಗಿ, ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಯಾವುದೇ ಬೆಳವಣಿಗೆ ಆಗದಿದ್ದರೆ ಜಾಮೀನು ನೀಡುವುದನ್ನು ಪರಿಗಣಿಸಬೇಕು" ಎಂದು ವಾದಿಸಿದ್ದರು.
"ಈ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಮತ್ತೊಂದು ಪೀಠದ ಉಸ್ತುವಾರಿಯಾಗಿರುವುದರಿಂದ ವಿಚಾರಣೆ ವಿಳಂಬವಾಗುತ್ತಿದೆ" ಎಂಬ ವಿಚಾರವನ್ನು ಕೋರ್ಟ್‌ನ ಗಮನಕ್ಕೆ ತಂದರು. ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಪ್ರತಿಕ್ರಿಯಿಸಿ, "ಪ್ರಮುಖ ಸಾಕ್ಷಿಯ ವಿಚಾರಣೆಯನ್ನು ಪ್ರಾಸಿಕ್ಯೂಷನ್ ಒಂದೇ ದಿನದಲ್ಲಿ ಮುಗಿಸಿದೆ. ಅದರೆ ಆರೋಪಿಗಳ ಪರ ವಕೀಲರು ವಿಚಾರಣೆಯನ್ನು ಐದಾರು ದಿನ ಎಳೆಯುತ್ತಿದ್ದಾರೆ" ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು.
ನಟ ದರ್ಶನ್‌ಗೆ ಶಾಕ್ ನೀಡಿದ ಸುಪ್ರೀಂ ಕೋರ್ಟ್; ಜಾಮೀನು ನೀಡಲು ನಿರಾಕರಣೆ, ದಾಸನಿಗೆ ಒಂದು ವರ್ಷ ಜೈಲು ಫಿಕ್ಸ್!
ಜೊತೆಗೆ "ಕೋವಿಡ್ ಸಂದರ್ಭದಲ್ಲಿ ನಿರ್ಮಿಸಲಾಗಿದ್ದ ಸೆಲ್‌ನಲ್ಲಿಯೇ ದರ್ಶನ್ ಅವರನ್ನು ಇಡಲಾಗಿದೆ. ಇತರರ ಜೊತೆ ದರ್ಶನ್ ಮಾತನಾಡುತ್ತಿರುವ ಫೋಟೋಗಳು ನಮ್ಮ ಬಳಿ ಇವೆ" ಎಂದು ಹೇಳಿದರು. ವಾದ - ಪ್ರತಿವಾದ ಅವನ್ನು ಆಲಿಸಿದ ಪೀಠವು "ವಿಚಾರಣೆಯಲ್ಲಿ ಗಣನೀಯ ಪ್ರಗತಿ ಕಾಣದಿದ್ದರೆ ಒಂದು ವರ್ಷದ ಬಳಿಕ ದರ್ಶನ್ ಜಾಮೀನು ಅರ್ಜಿ ಪರಿಗಣಿಸಲಾಗುವುದು" ಎಂದು ಹೇಳಿತು.