ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಟ ದರ್ಶನ್‌ಗೆ ಶಾಕ್‌ ನೀಡಿದ ಸುಪ್ರೀಂ ಕೋರ್ಟ್‌; ಜಾಮೀನು ನೀಡಲು ನಿರಾಕರಣೆ, ದಾಸನಿಗೆ ಒಂದು ವರ್ಷ ಜೈಲು ಫಿಕ್ಸ್!‌

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಭಾರಿ ಹಿನ್ನಡೆಯಾಗಿದೆ. ಅವರ ಜಾಮೀನು ಅರ್ಜಿಯನ್ನು ನಿರಾಕರಿಸಿರುವ ನ್ಯಾಯಾಲಯ, ಒಂದು ವರ್ಷದೊಳಗೆ 60 ಪ್ರಮುಖ ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಲು ಪ್ರಾಸಿಕ್ಯೂಷನ್‌ಗೆ ಗಡುವು ನೀಡಿದೆ.

ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಶಾಕ್; ದಾಸನಿಗೆ ಇನ್ನೂ 1 ವರ್ಷ ಜೈಲೇ ಗತಿ!

-

Avinash GR
Avinash GR May 15, 2026 11:58 AM

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರಿಗೆ ಸುಪ್ರೀಂಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆಯಾಗಿದೆ. ಜಾಮೀನು ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಿರುವ ನ್ಯಾಯಾಲಯ, ಸದ್ಯಕ್ಕೆ ಜಾಮೀನು ನೀಡಲು ನಿರಾಕರಿಸಿದ್ದು, ಕೊಲೆ ಪ್ರಕರಣದ ವಿಚಾರಣಾ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಮಹತ್ವದ ಆದೇಶ ನೀಡಿದೆ.

ಒಂದು ವರ್ಷದ ನಂತರ ಅರ್ಜಿ ಸಲ್ಲಿಸಬಹುದು

ರೇಣುಕಾಸ್ವಾಮಿ ಕೊಲೆ ಪ್ರಕರಣದ ಒಟ್ಟು 60 ಪ್ರಮುಖ ಸಾಕ್ಷಿಗಳ ವಿಚಾರಣೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಪ್ರಾಸಿಕ್ಯೂಷನ್‌ಗೆ ಗಡುವು ನೀಡಿದೆ. ಒಂದು ವೇಳೆ ಒಂದು ವರ್ಷದ ಅವಧಿಯಲ್ಲಿ ಸಾಕ್ಷ್ಯ ವಿಚಾರಣೆಯಲ್ಲಿ ಪ್ರಗತಿ ಕಂಡುಬರದಿದ್ದರೆ, ದರ್ಶನ್ ಅವರು ಪುನಃ ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಪೀಠ ತಿಳಿಸಿದೆ.

Actor Darshan: ಸವಲತ್ತು ಕೋರಿದ ದರ್ಶನ್‌ ಅರ್ಜಿ 9ಕ್ಕೆ ಮುಂದೂಡಿಕೆ, ʼಉಮೇಶ್‌ ರೆಡ್ಡಿಗೆ ಕೊಟ್ಟ ಸೌಲಭ್ಯ ದರ್ಶನ್‌ಗೆ ಏಕಿಲ್ಲ?ʼ ಎಂದ ವಕೀಲರು

ವಿಚಾರಣೆ ವಿಳಂಬವಾಗಬಾರದು

ನವೆಂಬರ್ 3 ರಂದು ದೋಷಾರೋಪ ಹೊರಿಸಲಾಗಿದ್ದರೂ, ಕಳೆದ 7 ತಿಂಗಳಲ್ಲಿ ಕೇವಲ 10 ಸಾಕ್ಷಿಗಳ ವಿಚಾರಣೆ ನಡೆದಿರುವುದಕ್ಕೆ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಸಾಕ್ಷ್ಯ ವಿಚಾರಣೆ ತುಂಬಾ ವಿಳಂಬವಾಗಿದೆ. ಅನಗತ್ಯ ಕಾರಣ ನೀಡಿ ವಿಚಾರಣೆಯನ್ನು ಮುಂದೂಡಬಾರದು" ಎಂದು ಜಡ್ಜ್ ಪರ್ದಿವಾಲಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನ್ಯಾಯಾಧೀಶರನ್ನು ನೇಮಕ ಮಾಡಿ

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿರುವ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಖಾಯಂ ನ್ಯಾಯಾಧೀಶರಿಲ್ಲದ ಕಾರಣ ವಿಚಾರಣೆ ವಿಳಂಬವಾಗುತ್ತಿದೆ ಎಂದು ದರ್ಶನ್ ಪರ ವಕೀಲ ಸಿದ್ದಾರ್ಥ್ ಲೂತ್ರಾ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ, ಖಾಲಿ ಇರುವ ನ್ಯಾಯಾಧೀಶರ ಹುದ್ದೆಯನ್ನು ತಕ್ಷಣವೇ ಭರ್ತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ಗೆ ಸುಪ್ರೀಂಕೋರ್ಟ್ ಸೂಚಿಸಿದೆ.‌

ರೇಣುಕಾಸ್ವಾಮಿ ಕೊಲೆ ಪ್ರಕರಣ; ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ಭವಿಷ್ಯ ನಿರ್ಧಾರ

ದರ್ಶನ್‌ಗೆ ಮೂಲಭೂತ ಸವಲತ್ತು ಕೊಡಿ

"ಜೈಲಿನಲ್ಲಿ ತಮಗೆ ಕನಿಷ್ಠ ಸವಲತ್ತುಗಳನ್ನು ನೀಡುತ್ತಿಲ್ಲ" ಎಂಬ ದರ್ಶನ್ ಅವರ ಆರೋಪಕ್ಕೆ ಸಂಬಂಧಿಸಿದಂತೆ, ಜೈಲು ಕೈಪಿಡಿಯಲ್ಲಿ ನಿಗದಿಪಡಿಸಿರುವ ಎಲ್ಲಾ ಮೂಲಭೂತ ಸವಲತ್ತುಗಳನ್ನು ದರ್ಶನ್ ಅವರಿಗೆ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. "ಇತರ ಕೈದಿಗಳಿಗೆ ನೀಡುವ ಸವಲತ್ತುಗಳನ್ನೇ ದರ್ಶನ್ ಅವರಿಗೂ ನೀಡಬೇಕು" ಎಂದು ಜೈಲು ಅಧೀಕ್ಷಕರಿಗೆ ಸೂಚಿಸಲಾಗಿದೆ. ಆದರೆ, ಕ್ವಾರಂಟೈನ್ ಸೆಲ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನ್ಯಾಯಾಲಯ ನಿರಾಕರಿಸಿದೆ.

ದರ್ಶನ್‌ಗೆ ಇನ್ನೂ ಒಂದು ವರ್ಷ ಜೈಲು ಫಿಕ್ಸ್‌

ದರ್ಶನ್ ಪರವಾಗಿ ಮುಕುಲ್ ರೋಹಟಗಿ ಅವರು ವಾದ ಮಂಡಿಸಿ, "ಮುಖ್ಯ ಸಾಕ್ಷಿಗಳ ವಿಚಾರಣೆಯೇ ಆಗಿಲ್ಲ" ಎಂದು ಸುಪ್ರೀಂ ಕೋರ್ಟ್‌ನ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸಾಕ್ಷಿಗಳ ವಿಚಾರಣೆ ನಡೆಯುತ್ತಿರುವಾಗ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಂತಿಮವಾಗಿ ಜಾಮೀನು ಅರ್ಜಿ ಇತ್ಯರ್ಥಪಡಿಸಿದ ಸುಪ್ರೀಂಕೋರ್ಟ್, ದರ್ಶನ್ ಅವರಿಗೆ ಸದ್ಯಕ್ಕೆ ಬಿಡುಗಡೆಯ ಭಾಗ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಒಟ್ಟಾರೆಯಾಗಿ, ಸುಪ್ರೀಂಕೋರ್ಟ್‌ನ ಈ ಕಠಿಣ ನಿಲುವಿನಿಂದಾಗಿ ನಟ ದರ್ಶನ್ ಕನಿಷ್ಠ ಇನ್ನೂ ಒಂದು ವರ್ಷವಾದರೂ ಜೈಲಿನಲ್ಲೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ.