2023ರಲ್ಲಿ ತೆರೆಕಂಡಿದ್ದ 'ಬ್ಯಾಡ್ ಮ್ಯಾನರ್ಸ್' ಸಿನಿಮಾದ ನಂತರ 'ದುನಿಯಾ' ಸೂರಿ ಯಾವುದೇ ಹೊಸ ಸಿನಿಮಾವನ್ನು ಘೋಷಿಸಿರಲಿಲ್ಲ. ಯುವ ರಾಜ್‌ಕುಮಾರ್ ಅವರ ಜೊತೆಗಿನ ಚಿತ್ರಕ್ಕೆ ಮುಹೂರ್ತ ನೆರವೇರಿದರೂ ಅದು ಮುಂದುವರಿಯಲಿಲ್ಲ; ಧ್ರುವ ಸರ್ಜಾ ಜೊತೆಗಿನ ಸಿನಿಮಾವೂ ನಿಂತೇಹೋಯಿತು. ಹೀಗಿರುವಾಗ ಸೂರಿ ಮುಂದೇನು ಮಾಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಕೊನೆಗೆ 'ಕಾಗೆ ಬಂಗಾರ' ಚಿತ್ರವನ್ನಾದರೂ ತೆರೆಗೆ ತರುತ್ತಾರಾ ಎಂದು ಸಿನಿಪ್ರಿಯರು ಕಾದುಕುಳಿತಿದ್ದರು. ಇದೀಗ ಆ ಚಿತ್ರಕ್ಕೆ ಕಾಲ ಕೂಡಿಬಂದಿದೆ!
'ಕಾಗೆ ಬಂಗಾರ' ಚಿತ್ರಕ್ಕೆ ಮುಹೂರ್ತ
ದೀರ್ಘಕಾಲದ ವಿಳಂಬ ಹಾಗೂ ಕಲಾವಿದರ ಬದಲಾವಣೆಗಳ ನಂತರ 'ಕಾಗೆ ಬಂಗಾರ' ಚಿತ್ರದ ಮುಹೂರ್ತ ಕೊನೆಗೂ ನೆರವೇರಿದೆ. ನಿರ್ದೇಶಕ ಸೂರಿ ಅವರು ಚಿತ್ರೀಕರಣವನ್ನೂ ಆರಂಭಿಸಿದ್ದು, ಚಿತ್ರತಂಡ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ. ನಿರ್ಮಾಣ ಹಂತದಲ್ಲಿ ಹಲವು ಬದಲಾವಣೆಗಳನ್ನು ಕಂಡ ಈ ಚಿತ್ರಕ್ಕೆ ನಾಯಕನಾಗಿ ಸೂರ್ಯ ಪ್ರಖ್ಯಾತ್ ಆಯ್ಕೆಯಾಗಿದ್ದಾರೆ. 'ನಡುವೆ ಅಂತರವಿರಲಿ' ಚಿತ್ರದ ಮೂಲಕ ಪಾದಾರ್ಪಣೆ ಮಾಡಿ, ಇತ್ತೀಚೆಗೆ 'ಜೆಸಿ – ದಿ ಯೂನಿವರ್ಸಿಟಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಈ ಸೂರ್ಯ ಪ್ರಖ್ಯಾತ್, ಈಗ ಸೂರಿ ಅವರ ಹೊಸ ಸಾಹಸಕ್ಕೆ ಸಾಥ್ ನೀಡಿದ್ದಾರೆ. ಸೂರ್ಯ ಪ್ರಖ್ಯಾತ್ ಅವರ ಈ ಆಯ್ಕೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ.
Director Suri: ಸೆಟ್ಟೇರಿತು ಸೂರಿ-ಯುವ ಸಿನಿಮಾ; ದೊಡ್ಮನೆ ಕುಡಿಗೆ ದುನಿಯಾ ವಿಜಯ್ ಪುತ್ರಿ ನಾಯಕಿ
'ಕೆಂಡಸಂಪಿಗೆ' ಜೊತೆ ಕನೆಕ್ಷನ್
ಇನ್ನು ಚಿತ್ರದ ನಾಯಕಿಯಾಗಿ ನಟ 'ದುನಿಯಾ' ವಿಜಯ್ ಅವರ ಪುತ್ರಿ ರಿತಾನ್ಯ ವಿಜಯ್ ನಟಿಸುತ್ತಿದ್ದಾರೆ. ಜಡೇಶ ಕೆ. ಹಂಪಿ ನಿರ್ದೇಶನದ 'ಲ್ಯಾಂಡ್‌ಲಾರ್ಡ್' ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದ್ದ ಅವರು, ಇದೀಗ ಮತ್ತೊಂದು ಹೊಸ ಸಿನಿಮಾವನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಸುಮಾರು 11 ವರ್ಷಗಳ ಹಿಂದೆ ಬಂದ 'ಕೆಂಡಸಂಪಿಗೆ' ಸಿನಿಮಾದ ಪ್ರೀಕ್ವೆಲ್ ಆಗಿ 'ಕಾಗೆ ಬಂಗಾರ' ಬರಲಿದೆ ಎಂಬ ಮಾತುಗಳು ಆಗಲೇ ಕೇಳಿಬಂದಿದ್ದವು; ಸ್ವತಃ ಸೂರಿ ಕೂಡ ಇದನ್ನು ಪ್ರಕಟಿಸಿದ್ದರು.
ಚರಣ್ ರಾಜ್ ಸಂಗೀತ ಸಂಯೋಜನೆ
ಈ ಚಿತ್ರದಲ್ಲಿ ನಟ ಪ್ರಶಾಂತ್ ಸಿದ್ಧಿ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂಬ ಮಾಹಿತಿ ಈ ಹಿಂದೆಯೇ ಇತ್ತು; ಈಗಲೂ ಅವರೇ ಆ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. 'ಕೆಂಡಸಂಪಿಗೆ'ಯಲ್ಲಿನ ಅವರ ಪಾತ್ರವೇ ಈ ಚಿತ್ರದಲ್ಲೂ ಮುಂದುವರಿಯಲಿದೆ ಎನ್ನಲಾಗಿದ್ದು, 'ಕೆಂಡಸಂಪಿಗೆ' ಜೊತೆಗೆ 'ಪಾಪ್‌ಕಾರ್ನ್ ಮಂಕಿ ಟೈಗರ್' ಸಿನಿಮಾದೊಂದಿಗೂ 'ಕಾಗೆ ಬಂಗಾರ' ಕಥೆಯ ನಂಟಿದೆ.
ಹಾಗಾಗಿ, ಆ ಎರಡೂ ಚಿತ್ರಗಳ ಹಲವು ಕಲಾವಿದರು ಈ ಸಿನಿಮಾದಲ್ಲೂ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. 'ಕಾಗೆ ಬಂಗಾರ' ಚಿತ್ರಕ್ಕೆ ಸುರೇಂದ್ರನಾಥ್ ಕಥೆ ಬರೆದಿದ್ದರೆ, ಅಮ್ರಿ ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ಶೇಖರ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.