'ಕಾಂತಾರ' ಚಿತ್ರಗಳ ಅಭೂತಪೂರ್ವ ಗೆಲುವು ಪಡೆದುಕೊಂಡಿರುವ ನಟ-ನಿರ್ದೇಶಕ ರಿಷಬ್ ಶೆಟ್ಟಿ, ಇದೀಗ ಮತ್ತೊಂದು ಐತಿಹಾಸಿಕ ಸಿನಿಮಾಕ್ಕೆ ಸಜ್ಜಾಗಿದ್ದಾರೆ. ಮರಾಠ ಸಾಮ್ರಾಜ್ಯದ ಸಂಸ್ಥಾಪಕ, ವೀರ ಛತ್ರಪತಿ ಶಿವಾಜಿ ಮಹಾರಾಜರ ಜೀವನಗಾಥೆಯನ್ನು ತೆರೆಗೆ ತರಲು ಸಿದ್ಧತೆಗಳು ಆರಂಭವಾಗಿದ್ದು, ರಿಷಬ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವುದು ಎಲ್ಲರಿಗೂ ಗೊತ್ತೇ ಇದೆ.
ಈ ಚಿತ್ರದ ನಿರ್ಮಾಪಕ ಸಂದೀಪ್ ಸಿಂಗ್ ಅವರಿಗೆ ಇದೀಗ ಬಾಲಿವುಡ್ನ ಪ್ರಸಿದ್ಧ ನಿರ್ಮಾಣ ಸಂಸ್ಥೆ ಟಿ-ಸೀರೀಸ್ ಮುಖ್ಯಸ್ಥ ಭೂಷಣ್ ಕುಮಾರ್ ಕೈಜೋಡಿಸಿದ್ದು, ಈ ಚಿತ್ರವನ್ನು 2 ಭಾಗಗಳಲ್ಲಿ ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ.
ರಿಷಬ್ ಶೆಟ್ಟಿಗೆ ಸಿಕ್ತು ಸ್ಪೆಷಲ್ ಗಿಫ್ಟ್
'ದಿ ಪ್ರೈಡ್ ಆಫ್ ಭಾರತ್ – ಛತ್ರಪತಿ ಶಿವಾಜಿ ಮಹಾರಾಜ್' (The Pride of Bharat – Chhatrapati Shivaji Maharaj) ಹೆಸರಿನ ಈ ಐತಿಹಾಸಿಕ ಚಿತ್ರವು ಮರಾಠ ದೊರೆಯ ಜೀವನ, ಅವರ ಸ್ವರಾಜ್ಯದ ಕನಸು, ಐತಿಹಾಸಿಕ ವಿಜಯಗಳು ಹಾಗೂ ತ್ಯಾಗಗಳನ್ನು ಎಳೆಎಳೆಯಾಗಿ ಅನಾವರಣಗೊಳಿಸಲಿದೆ. ಶಿವಾಜಿ ಮಹಾರಾಜರ ಚುರುಕಾದ ಯುದ್ಧತಂತ್ರದ ಬುದ್ಧಿಮತ್ತೆ, ನಿರ್ಭೀತ ನಾಯಕತ್ವ ಮತ್ತು ಇತಿಹಾಸದ ಪುಟಗಳಲ್ಲಿ ಅಷ್ಟಾಗಿ ದಾಖಲಾಗದ ಹಲವು ಘಟನೆಗಳ ಸುತ್ತ ಕಥೆ ಸಾಗಲಿದೆಯಂತೆ!
Rishab Shetty: ಛತ್ರಪತಿ ಶಿವಾಜಿ ಅವತಾರದಲ್ಲಿ ರಿಷಬ್ ಶೆಟ್ಟಿ; ಗಮನ ಸೆಳೆಯುವ ಪೋಸ್ಟರ್ ಔಟ್
ಈ ಮಹತ್ವದ ಪ್ರಾಜೆಕ್ಟ್ಗೆ ಕೈಜೋಡಿಸಿದ ನೆನಪಿಗಾಗಿ ನಿರ್ಮಾಪಕ ಭೂಷಣ್ ಕುಮಾರ್ ಅವರು ನಟ ರಿಷಬ್ ಶೆಟ್ಟಿ ಅವರಿಗೆ ಛತ್ರಪತಿ ಶಿವಾಜಿ ಮಹಾರಾಜರ ಶತಮಾನದಷ್ಟು ಹಳೆಯದಾದ ಅಪರೂಪದ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ.
ನಿರ್ಮಾಪಕ ಭೂಷಣ್ ಕುಮಾರ್ ಹೇಳಿದ್ದೇನು?
ಚಿತ್ರದ ಮಹತ್ವದ ಕುರಿತು ಮಾತನಾಡಿದ ನಿರ್ಮಾಪಕ ಭೂಷಣ್ ಕುಮಾರ್, "ಮಹಾರಾಷ್ಟ್ರ ಮತ್ತು ಛತ್ರಪತಿ ಶಿವಾಜಿ ಮಹಾರಾಜರು ಇಡೀ ದೇಶವೇ ಹೆಮ್ಮೆಪಡುವಂತಹ ಪರಂಪರೆಯನ್ನು ನಮಗೆ ನೀಡಿದ್ದಾರೆ. ಆ ಪರಂಪರೆಯನ್ನು ಸಿನಿಮಾದ ಮೂಲಕ ಜಗತ್ತಿಗೆ ಪರಿಚಯಿಸುವುದು ನಮ್ಮ ಕರ್ತವ್ಯ. ಸಂದೀಪ್ ಸಿಂಗ್ ಅವರು ಈ ಕಥೆ ಹೇಳಿದಾಗ, ಇದನ್ನು ಬೆಳ್ಳಿತೆರೆಗೆ ತರುವ ದೊಡ್ಡ ಜವಾಬ್ದಾರಿಯ ಭಾವನೆ ನನ್ನಲ್ಲಿ ಮೂಡಿತು. ರಿಷಬ್ ಶೆಟ್ಟಿ ಅವರ ಅತ್ಯದ್ಭುತ ನಟನೆ ಹಾಗೂ ಐತಿಹಾಸಿಕ, ಪೌರಾಣಿಕ ಪಾತ್ರಗಳಿಗೆ ಜೀವ ತುಂಬುವ ಅವರ ಸಾಮರ್ಥ್ಯವು ನಮಗೆ ತಿಳಿದಿದೆ. ಶಿವಾಜಿ ಅವರ ಧೈರ್ಯ, ದೂರದೃಷ್ಟಿ ಮತ್ತು ಸ್ವರಾಜ್ಯದ ಸ್ಪೂರ್ತಿಯನ್ನು ಪ್ರೇಕ್ಷಕರಿಗೆ ತಲುಪಿಸಲು ರಿಷಬ್ ಅತ್ಯಂತ ಸೂಕ್ತ ಆಯ್ಕೆ. ಟಿ-ಸೀರೀಸ್ಗೆ ಇದು ಕೇವಲ ಸಿನಿಮಾವಲ್ಲ, ಶಿವಾಜಿ ಮಹಾರಾಜರ ಪರಂಪರೆಗೆ ಸಲ್ಲಿಸುವ ನಮನ" ಎಂದು ಹೇಳಿದ್ದಾರೆ.
ಸಹ ನಿರ್ಮಾಪಕನಾದ ರಿಷಬ್ ಶೆಟ್ಟಿ
ಸದ್ಯ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ನಿರತವಾಗಿದ್ದು, 2027ರ ಶುರುವಿನಲ್ಲೇ ಶೂಟಿಂಗ್ ಆರಂಭವಾಗಲಿದೆ. ಈ ಚಿತ್ರದಲ್ಲಿ ಭಾರತೀಯ ಹಾಗೂ ಅಂತಾರಾಷ್ಟ್ರೀಯ ತಂತ್ರಜ್ಞರು ಕೆಲಸ ಮಾಡಲಿದ್ದು, ಭೂಮಿ ಪೆಡ್ನೇಕರ್, ಅರ್ಜುನ್ ರಾಂಪಾಲ್ ಮತ್ತು ವಿವೇಕ್ ಒಬೆರಾಯ್ ಸೇರಿದಂತೆ ದೊಡ್ಡ ತಾರಾಗಣವೇ ಇರಲಿದೆ ಎನ್ನಲಾಗಿದೆ.
ಗುಲ್ಶನ್ ಕುಮಾರ್ ಮತ್ತು ಟಿ-ಸೀರೀಸ್ ಫಿಲ್ಮ್ಸ್ ಅರ್ಪಣೆಯಲ್ಲಿ, ಟಿ-ಸೀರೀಸ್ ಫಿಲ್ಮ್ಸ್ ಮತ್ತು ಲೆಜೆಂಡ್ ಸ್ಟುಡಿಯೋಸ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸುತ್ತಿವೆ. ಸಂದೀಪ್ ಸಿಂಗ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಭೂಷಣ್ ಕುಮಾರ್ ಹಾಗೂ ಕ್ರಿಷನ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ರಿಷಿ ವಿರ್ಮಾನಿ ಮತ್ತು ಸಂದೀಪ್ ಸಿಂಗ್ ಕಥೆ ಬರೆದಿದ್ದು, ರಿಷಬ್ ಶೆಟ್ಟಿ, ಶಿವ್ ಚನಾನ ಹಾಗೂ ಕಬೀರ್ ಸದಾನಂದ್ ಸಹ-ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.