ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Jolly Review: ಭೂಗತ ಲೋಕದಲ್ಲೊಂದು ʻಜಾಲಿʼ ಜಾಲಿಯಾದ ಪ್ರೇಮ್ ಕಹಾನಿ!

ನಟ ಹಾಗೂ ನಿರ್ದೇಶಕ ತಾರುಷ್ ಕೃಷ್ಣ ಅಭಿನಯದ 'ಜಾಲಿ' ಸಿನಿಮಾ ಜುಲೈ 31 ರಂದು ಬಿಡುಗಡೆಯಾಗಿದೆ. ಗ್ಯಾರೇಜ್ ಯುವಕ ಜಾಲಿ ಹಾಗೂ ಜಾನು ನಡುವಿನ ಪ್ರೀತಿಗೆ ಭೂಗತ ಲೋಕದ ಪ್ರವೇಶದಿಂದ ಎದುರಾಗುವ ಸಂಕಷ್ಟಗಳೇ ಚಿತ್ರದ ಮುಖ್ಯ ಕಥಾಹಂದರ. ಮಾಸ್, ಲವ್, ಕಾಮಿಡಿ ಹಾಗೂ ಕೌಟುಂಬಿಕ ಸೆಂಟಿಮೆಂಟ್ ಬೆರೆತಿರುವ ಈ ಸಿನಿಮಾ ಹೇಗಿದೆ? ಇಲ್ಲಿದೆ ಓದಿ ಸಿನಿಮಾ ವಿಮರ್ಶೆ.

ಸ್ಯಾಂಡಲ್‌ವುಡ್‌ನಲ್ಲಿ ನಟನೆ ಜೊತೆಗೆ ನಿರ್ದೇಶನ ಮಾಡುವಂತಹ ಪ್ರತಿಭೆಗಳು ತೀರಾ ಕಮ್ಮಿ. ಈಚೆಗೆ ನಟ ದುನಿಯಾ ವಿಜಯ್‌, ಡಾರ್ಲಿಂಗ್‌ ಕೃಷ್ಣ ಮುಂತಾದವರು ತಮ್ಮ ಸಿನಿಮಾಗಳನ್ನು ತಾವೇ ನಿರ್ದೇಶಿಸಿ ಸಕ್ಸಸ್‌ ಪಡೆದುಕೊಂಡಿದ್ದಾರೆ. ಇದೀಗ ಯುವ ಪ್ರತಿಭೆ ತಾರುಷ್‌ ಕೃಷ್ಣ ಕೂಡ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಪ್ರಯತ್ನದಲ್ಲೇ ನಟನೆ ಜೊತೆಗೆ ನಿರ್ದೇಶನಕ್ಕೂ ಕೈ ಹಾಕಿದ್ದಾರೆ. ʻಜಾಲಿʼ ಸಿನಿಮಾದ ಮೂಲಕ ತಮ್ಮ ಕನ್ನಡ ಚಿತ್ರರಂಗಕ್ಕೆ ನಟರಾಗಿ, ನಿರ್ದೇಶಕರಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ವಾರ (ಜುಲೈ 31) ʻಜಾಲಿʼ ಸಿನಿಮಾ ತೆರೆಕಂಡಿದೆ. ಹಾಗಾದರೆ, ಮೊದಲ ಸಿನಿಮಾದಲ್ಲಿ ಪ್ರೇಕ್ಷಕರನ್ನು ರಂಜಿಸುವಲ್ಲಿ ತಾರುಷ್‌ ಯಶಸ್ವಿಯಾಗಿದ್ದಾರಾ? ಇಲ್ಲಿದೆ ಸಂಪೂರ್ಣ ವಿಮರ್ಶೆ.

ʻಜಾಲಿʼ ಕಥೆ ಏನು?

ಜಾಲಿ (ತಾರುಷ್) ಸ್ವಾವಲಂಬಿಯಾಗಿ ಬದುಕಬೇಕು ಎಂಬ ಕನಸು ಹೊತ್ತ ಯುವಕ. ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಾ, ಜಾನು (ಪದ್ಮಶ್ರೀ) ಎಂಬ ಹುಡುಗಿಯನ್ನು ಪ್ರೀತಿಸುತ್ತಾ ಲೈಫ್ ಅನ್ನು ಬಿಂದಾಸ್ ಆಗಿ ಕಳೆಯುತ್ತಿರುತ್ತಾನೆ. ಆದರೆ, ಇವರ ಪ್ರೀತಿಗೆ ಜಾನು ತಂದೆ (ಕೃಷ್ಣಪ್ಪ ವೇಣುಗೋಪಾಲ್) ವಿರೋಧ ವ್ಯಕ್ತಪಡಿಸುತ್ತಾನೆ. ಮಗಳನ್ನು ಆರ್‌ಕೆ (ಶೋಭರಾಜ್) ಎಂಬ ಡಾನ್ ಮಗನಿಗೆ ಕೊಟ್ಟು ಮದುವೆ ಮಾಡಲು ನಿಶ್ಚಯಿಸುತ್ತಾನೆ. ಒಂದೆಡೆ ಪ್ರೀತಿಗೆ ಶತ್ರುಗಳ ಕಾಟ, ಇನ್ನೊಂದೆಡೆ ನಾಯಕನ ಜೀವನದಲ್ಲಿ ಎದುರಾಗುವ ಸಾಲು ಸಾಲು ಟ್ವಿಸ್ಟ್‌ಗಳು! ಅಂತಿಮವಾಗಿ ಜಾನು ತಂದೆಯ ಮಾತಿಗೆ ಒಪ್ಪಿಕೊಳ್ಳುತ್ತಾಳಾ ಅಥವಾ ಪ್ರೀತಿಸಿದ ಜಾಲಿ ಜೊತೆ ಒಂದಾಗುತ್ತಾಳಾ ಎಂಬುದೇ ‘ಜಾಲಿ’ ಸಿನಿಮಾದ ಮುಖ್ಯ ಕಥಾಹಂದರ.

ಮೊದಲ ಪ್ರಯತ್ನದಲ್ಲೇ ಗೆದ್ರಾ ತಾರುಷ್?‌

ನಟ, ನಿರ್ದೇಶಕ ತಾರುಷ್ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಒಂದು ಮಾಸ್‌ ಕಮರ್ಷಿಯಲ್‌ ಸಬ್ಜೆಕ್ಟ್‌ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಲವ್‌ ಸ್ಟೋರಿ, ತಂದೆ-ಮಗಳ ಸೆಂಟಿಮೆಂಟ್‌, ಅಪ್ಪ-ಮಗನ ಅಟ್ಯಾಚ್‌ಮೆಂಟ್‌ ಜೊತೆಗೆ ರೌಡಿಸಂ, ಕಾಮಿಡಿ ಎಲ್ಲವನ್ನು ಹದವಾಗಿ ಬೆರೆಸಿ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡಿದ್ದಾರೆ. ಚಿತ್ರಕಥೆಯಲ್ಲಿ ಇನ್ನಷ್ಟು ಶಾರ್ಪ್‌ನೆಸ್ ತಂದಿದ್ದರೆ ಸಿನಿಮಾ ಮತ್ತಷ್ಟು ವೇಗವಾಗಿ ಸಾಗುತ್ತಿತ್ತು. ನಿತಿನ್‌ರಾಜ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡುಗಳಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ವಿಜಯ್‌ ಪ್ರಕಾಶ್ ಹಾಗೂ ಕೈಲಾಶ್ ಖೇರ್ ಅವರಂತಹ ಖ್ಯಾತ ಗಾಯಕರು ಧ್ವನಿಯಾಗಿರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್.

Vaishnavi Gowda: ಮನಾಲಿಯಲ್ಲಿ ವೈಷ್ಣವಿ ಗೌಡ ಜಾಲಿ ಜಾಲಿ; ಕಲರ್‌ಫುಲ್‌ ಫೋಟೊಗಳಿಗೆ ಫ್ಯಾನ್ಸ್‌ ಫಿದಾ

ತಾರುಷ್ ನಟನೆ ಹೇಗಿದೆ?

ನಟ ಹಾಗೂ ನಿರ್ದೇಶಕ ತಾರುಷ್ ಮೊದಲ ಹೆಜ್ಜೆಯಲ್ಲೇ ಭರವಸೆ ಮೂಡಿಸುತ್ತಾರೆ. ಮಾಸ್ ಲುಕ್ ಹಾಗೂ ಲವರ್ ಬಾಯ್ ಎರಡೂ ಶೇಡ್‌ಗಳಲ್ಲಿ ಗಮನಸೆಳೆಯುವ ಅವರು, ಡ್ಯಾನ್ಸ್‌ನಲ್ಲೂ ಸೈ ಎನಿಸಿಕೊಂಡಿದ್ದಾರೆ. ನಾಯಕಿ ಪದ್ಮಶ್ರೀ ಜೈನ್ ತಮ್ಮ ಜಾನು ಪಾತ್ರದಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಹಿರಿಯ ನಟ ಶೋಭರಾಜ್ ಅವರಿಗೆ ಸ್ಕ್ರೀನ್ ಸ್ಪೇಸ್ ಕಡಿಮೆಯಿದ್ದರೂ ಇರುವಷ್ಟು ಸಮಯದಲ್ಲೇ ಖಡಕ್ ಅಭಿನಯ ನೀಡಿದ್ದಾರೆ. ನಾಯಕಿಯ ತಂದೆಯಾಗಿ ಕೃಷ್ಣಪ್ಪ ವೇಣುಗೋಪಾಲ್ ಅಚ್ಚುಕಟ್ಟಾಗಿ ನಟಿಸಿದ್ದರೆ, ರೇಖಾ ದಾಸ್, ಅಭಿ ಸಾಮ್ರಾಟ್, ಸುಷ್ಮಿತಾ ಜಗಪ್ಪ ಹಾಗೂ ನಿಖಿಲ್ ಹಾಸ್ಯದ ಮೂಲಕ ನಗಿಸುವ ಪ್ರಯತ್ನ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ಗೆ ನಟ-ನಿರ್ದೇಶಕನಾಗಿ ಎಂಟ್ರಿ ಕೊಟ್ಟಿರುವ ತಾರುಷ್ ಕೃಷ್ಣ ಅವರು ಮೊದಲ ಪ್ರಯತ್ನದಲ್ಲೇ ಶ್ರಮ ಹಾಕಿರುವುದು ಗೊತ್ತಾಗುತ್ತದೆ. ಲವ್, ಮಾಸ್, ಸೆಂಟಿಮೆಂಟ್ ಹಾಗೂ ಎಂಟರ್‌ಟೇನ್‌ಮೆಂಟ್ ಬಯಸುವ ಕಮರ್ಷಿಯಲ್ ಪ್ರಿಯರು 'ಜಾಲಿ' ಸಿನಿಮಾವನ್ನು ಒಮ್ಮೆ ಥಿಯೇಟರ್‌ನಲ್ಲಿ ನೋಡಬಹುದು.

ಚಿತ್ರ: ಜಾಲಿ

ಬಿಡುಗಡೆ ದಿನಾಂಕ: ಜುಲೈ 31, 2026

ಭಾಷೆ: ಕನ್ನಡ

ಜಾನರ್: ಆಕ್ಷನ್, ಡ್ರಾಮಾ

ನಿರ್ದೇಶನ: ತಾರುಷ್‌ ಕೃಷ್ಣ

ತಾರಾಗಣ: ತಾರುಷ್‌ ಕೃಷ್ಣ, ಪದ್ಮಶ್ರೀ ಜೈನ್‌, ಶೋಭರಾಜ್‌, ರೇಖಾ ದಾಸ್‌, ಸುಷ್ಮಿತಾ ಜಗಪ್ಪ, ಅಭಿ ಸಾಮ್ರಾಟ್‌, ಭರತ್‌ ಶಿವಣ್ಣ

ಸಂಗೀತ: ನಿತಿನ್‌ ರಾಜ್‌

ಅವಧಿ: 118 ನಿಮಿಷಗಳು

ರೇಟಿಂಗ್: 3/5