‘ಸೂಪರ್ ಸ್ಟಾರ್’ ರಜನಿಕಾಂತ್ ಅವರ ಹೊಸ ಸಿನಿಮಾ ‘ಧರ್ಮನ್’ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ಈ ಸಿನಿಮಾವನ್ನು ಕಮಲ್ ಹಾಸನ್ ಅವರ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಹಾಗೂ ‘ಟರ್ಮರಿಕ್ ಮೀಡಿಯಾ’ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿವೆ.
ಹಲವು ಬದಲಾವಣೆಗಳ ನಂತರ ಸೆಟ್ಟೇರಿದ ಈ ಚಿತ್ರಕ್ಕೆ ಅಶ್ವತ್ಥ್ ಮಾರಿಮುತ್ತು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದೀಗ ಈ ಸಿನಿಮಾದಲ್ಲಿ ರಜನಿಕಾಂತ್ ಎದುರು ಪವರ್‌ಫುಲ್ ಖಳನಾಯಕನ ಪಾತ್ರಕ್ಕಾಗಿ ತೆಲುಗು ನಟ ರಾಮ್ ಪೋತಿನೇನಿ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.
ವೈದ್ಯನ ಕೈಗೆ ಕತ್ತಿ ಕೊಟ್ಟ ‘ಧರ್ಮನ್’ ಕಥೆ
ಈ ಚಿತ್ರದಲ್ಲಿ ರಜನಿಕಾಂತ್ ಅವರು ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ಅತ್ಯಂತ ಖಡಕ್ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೈಯಲ್ಲಿ ಸ್ಟೆತಸ್ಕೋಪ್ ಹಿಡಿದು ಜೀವ ಉಳಿಸುವ ವೈದ್ಯನೊಬ್ಬ ಅನಿವಾರ್ಯವಾಗಿ ಕತ್ತಿ ಹಿಡಿದು ರಕ್ತಪಾತ ಸೃಷ್ಟಿಸಬೇಕಾದ ಪರಿಸ್ಥಿತಿ ಏಕೆ ಎದುರಾಗುತ್ತದೆ ಎಂಬ ವಿಶಿಷ್ಟ ಪರಿಕಲ್ಪನೆಯೊಂದಿಗೆ ಈ ಆ್ಯಕ್ಷನ್ ಡ್ರಾಮಾ ರೂಪುಗೊಳ್ಳುತ್ತಿದೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸುತ್ತಿರುವ ಈ ಚಿತ್ರವನ್ನು ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ ಅದ್ಧೂರಿಯಾಗಿ ಚಿತ್ರಮಂದಿರಗಳಿಗೆ ತರುವ ಗುರಿಯೊಂದಿಗೆ ಚಿತ್ರತಂಡ ಕೆಲಸ ಮಾಡುತ್ತಿದೆ.
ಸ್ಟಾರ್ ನಟ ರಾಮ್ ಈಗ ವಿಲನ್!
ಮೂಲಗಳ ಪ್ರಕಾರ, ಈ ಚಿತ್ರದಲ್ಲಿ ನೆಗೆಟಿವ್ ಶೇಡ್ ಹೊಂದಿರುವ ಪಾತ್ರಕ್ಕಾಗಿ ರಾಮ್ ಪೋತಿನೇನಿ ಅವರನ್ನು ಸಂಪರ್ಕಿಸಲಾಗಿದ್ದು, ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ರಜನಿಕಾಂತ್ ಅವರ ಮಗಳಾಗಿ ನಟಿಸುತ್ತಿರುವ ರಾಶಿ ಖನ್ನಾ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುವುದರ ಜೊತೆಗೆ, ರಜನಿ ಎದುರು ಖಳನಾಯಕನಾಗಿ ಅಬ್ಬರಿಸಲಿದ್ದಾರೆ.
ಇಲ್ಲಿ ರಾಮ್ ಅವರ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆಯಂತೆ. ಈವರೆಗೂ ಚಾಕೊಲೇಟ್ ಬಾಯ್ ಹಾಗೂ ಮಾಸ್ ಹೀರೋ ಆಗಿ ರಂಜಿಸಿದ್ದ ರಾಮ್, ಮೊದಲ ಬಾರಿಗೆ ತಮಿಳಿನ ಇಷ್ಟು ದೊಡ್ಡ ಪ್ರಾಜೆಕ್ಟ್‌ನಲ್ಲಿ ಖಳನ ಪಾತ್ರ ಒಪ್ಪಿಕೊಳ್ಳುತ್ತಿರುವುದು ಅಚ್ಚರಿ ಮೂಡಿಸಿದೆ.
Rajinikanth-Kamal Haasan: ಬರೋಬ್ಬರಿ 4 ದಶಕಗಳ ಬಳಿಕ ತೆರೆಮೇಲೆ ಒಂದಾಗಲಿದ್ದಾರೆ ರಜನಿಕಾಂತ್-ಕಮಲ್ ಹಾಸನ್
ಈ ನಿರ್ಧಾರದ ಹಿಂದಿದೆ ದೊಡ್ಡ ರಿಸ್ಕ್!
ಹಿಂದೆ ಕಾಲಿವುಡ್ ಚಿತ್ರಗಳಲ್ಲಿ ಟಾಲಿವುಡ್ ಹೀರೋಗಳು ವಿಲನ್‌ಗಳಾಗಿ ನಟಿಸಿದಾಗ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ‘ಕೂಲಿ’ ಚಿತ್ರದಲ್ಲಿ ಖಳನಾಗಿ ನಟಿಸಿದ್ದ ಅಕ್ಕಿನೇನಿ ನಾಗಾರ್ಜುನ ಹಾಗೂ ‘ವಲಿಮೈ’ ಚಿತ್ರದಲ್ಲಿ ವಿಲನ್ ಆಗಿದ್ದ ಕಾರ್ತಿಕೇಯ ಅವರಿಗೆ ನಿರೀಕ್ಷಿತ ಮಟ್ಟದ ಯಶಸ್ಸು ಸಿಗಲಿಲ್ಲ. ಆದರೆ ರಾಮ್ ಪೋತಿನೇನಿ ಅವರಂತಹ ಸ್ಟಾರ್ ಹೀರೋ ಈ ಪ್ರಾಜೆಕ್ಟ್ ಆಯ್ಕೆ ಮಾಡಿಕೊಂಡಿದ್ದಾರೆ ಎಂದರೆ, ಆ ಪಾತ್ರ ಅತ್ಯಂತ ಪವರ್‌ಫುಲ್ ಆಗಿದ್ದು ಕಥೆಗೆ ಮಹತ್ವದ ತಿರುವು ನೀಡುವಂತಿರಬಹುದು ಎಂದು ಅಂದಾಜಿಸಲಾಗಿದೆ.
ಧರ್ಮನ್ ಚಿತ್ರದಲ್ಲಿ ರಾಮ್ ಪೋತಿನೇನಿ ವಿಲನ್
ಪ್ರಸ್ತುತ ರಾಮ್ ಪೋತಿನೇನಿ ತಮ್ಮ 23ನೇ ಚಿತ್ರದ ಚಿತ್ರೀಕರಣದಲ್ಲಿ ಭರ್ಜರಿಯಾಗಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಿವೇದಾ ಪೇತುರಾಜ್ ನಾಯಕಿಯಾಗಿದ್ದು, ರಿತೇಶ್ ದೇಶ್‌ಮುಖ್ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ರಜನಿಕಾಂತ್ ಪ್ರಾಜೆಕ್ಟ್ ಅಧಿಕೃತವಾಗಿ ಖಚಿತವಾದರೆ, ಅವರು ಕಾಲ್‌ಶೀಟ್‌ಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಆದಾಗ್ಯೂ, ಈ ಎಲ್ಲ ಬೆಳವಣಿಗೆಗಳ ಬಗ್ಗೆ ಚಿತ್ರತಂಡದಿಂದ ಅಧಿಕೃತ ಸ್ಪಷ್ಟನೆ ಹೊರಬರಬೇಕಿದೆ.