ದಳಪತಿ ವಿಜಯ್ ಅವರ ಕೊನೆ ಸಿನಿಮಾ ʻಜನ ನಾಯಗನ್ʼ ತೆರೆಗೆ ಬರುವ ಮುನ್ನವೇ ಲೀಕ್ ಆಗಿದ್ದು, ದಳಪತಿ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಚಿತ್ರರಂಗದ ಗಣ್ಯರು ಹೀಗೆ ಸಿನಿಮಾವನ್ನು ಲೀಕ್ ಮಾಡಿದ್ದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪೈರಸಿ ಲಿಂಕ್, ಕಾಪಿಯನ್ನು ಹಂಚಿಕೊಳ್ಳಬೇಡಿ ಎಂದು ಕರೆ ನೀಡಿದ್ದಾರೆ. ಈ ಮಧ್ಯೆ ಈ ಲೀಕ್ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಈ ಪ್ರಕರಣದ ಕುರಿತು ಅಪ್‌ಡೇಟ್ ಹಂಚಿಕೊಂಡಿರುವ ತಮಿಳುನಾಡು ಸೈಬರ್ ಅಪರಾಧ ವಿಭಾಗವು, "ಜನ ನಾಯಗನ್ ಸಿನಿಮಾ ಸೋರಿಕೆ ಪ್ರಕರಣದಲ್ಲಿ ತಮಿಳುನಾಡು ಸೈಬರ್ ಅಪರಾಧ ವಿಭಾಗವು ತ್ವರಿತ ಕ್ರಮ ಕೈಗೊಂಡಿದೆ. ಇಲ್ಲಿಯವರೆಗೆ 6 ಜನರನ್ನು ಬಂಧಿಸಲಾಗಿದೆ, 300+ ಅಕ್ರಮ ಲಿಂಕ್‌ಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ" ಎಂದು ತಿಳಿಸಿದೆ. ಈ ಕುರಿತಂತೆ ಸುದೀರ್ಘ ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಇಲಾಖೆಯು ನೀಡಿದೆ.
Jana Nayagan postponed: 'ಜನ ನಾಯಗನ್' ಸಿನಿಮಾ ರಿಲೀಸ್ ಮುಂದೂಡಿಕೆ ; ದಳಪತಿ ವಿಜಯ್ ಫ್ಯಾನ್ಸ್ ಬೇಸರ
ತ್ವರಿತ ಕ್ರಮ ಕೈಗೊಂಡ ಸೈಬರ್ ಕ್ರೈಂ ವಿಭಾಗ
"ಜನ ನಾಯಗನ್ ಸಿನಿಮಾವು ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಅನಧಿಕೃತವಾಗಿ ಸೋರಿಕೆಯಾಗಿರುವ ಬಗ್ಗೆ ಬಂದ ದೂರಿನ ಮೇರೆಗೆ ತಮಿಳುನಾಡು ಸೈಬರ್ ಕ್ರೈಂ ವಿಭಾಗವು ತ್ವರಿತ ಕ್ರಮ ಕೈಗೊಂಡಿದೆ. ಈ ಸಂಬಂಧ, ರಾಜ್ಯ ಸೈಬರ್ ಕ್ರೈಂ ತನಿಖಾ ಕೇಂದ್ರದಲ್ಲಿ ಭಾರತೀಯ ನ್ಯಾಯ ಸಂಹಿತೆ (BNS), ಮಾಹಿತಿ ತಂತ್ರಜ್ಞಾನ ಕಾಯ್ದೆ, ಕೃತಿಸ್ವಾಮ್ಯ (ಕಾಪಿರೈಟ್) ಕಾಯ್ದೆ ಮತ್ತು ಸಿನಿಮಾಟೋಗ್ರಾಫ್ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಅಪರಾಧ ಸಂಖ್ಯೆ 47/2026 ರಂತೆ ಪ್ರಕರಣ ದಾಖಲಿಸಲಾಗಿದೆ"
6 ಆರೋಪಿಗಳ ಬಂಧನ
"ದೂರಿನ ಮೇಲೆ ತಕ್ಷಣವೇ ಕಾರ್ಯಪ್ರವೃತ್ತರಾದ ಸೈಬರ್ ಕ್ರೈಂ ವಿಭಾಗವು, ನಿಯಮ ಉಲ್ಲಂಘಿಸುವ URL ಗಳನ್ನು ಗುರುತಿಸುವುದು ಮತ್ತು ನಿರ್ಬಂಧಿಸುವುದು, ಡಿಜಿಟಲ್ ವಿಧಿವಿಜ್ಞಾನ ವಿಶ್ಲೇಷಣೆ (forensic analysis), ವಿತರಣಾ ಜಾಲದಲ್ಲಿ ಭಾಗಿಯಾಗಿರುವ ಅಪರಾಧಿಗಳ ಪತ್ತೆ, ವಿಚಾರಣೆ ಸೇರಿದಂತೆ ಪ್ರಕರಣದ ವಿವಿಧ ಆಯಾಮಗಳನ್ನು ನಿರ್ವಹಿಸಲು ಹಲವಾರು ವಿಶೇಷ ತಂಡಗಳನ್ನು ರಚಿಸಿದೆ. ತನಿಖೆ ಮತ್ತು ಡಿಜಿಟಲ್ ಸಾಕ್ಷ್ಯಾಧಾರಗಳ ವಿಶ್ಲೇಷಣೆಯ ಆಧಾರದ ಮೇಲೆ, ಕ್ಲೌಡ್ ಸ್ಟೋರೇಜ್ ಪ್ಲಾಟ್‌ಫಾರ್ಮ್‌ಗಳು, ಡ್ರೈವ್ ಲಿಂಕ್‌ಗಳ ಮೂಲಕ ಪೈರಸಿ ಪ್ರತಿಗಳನ್ನು ಅಪ್‌ಲೋಡ್ ಮಾಡಿದ ಮತ್ತು ಹರಡಿದ 6 ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ನ್ಯಾಯಾಲಯದ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಗಿದ್ದು, ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ"
ʻಜನ ನಾಯಗನ್ʼ ಸಿನಿಮಾ ಲೀಕ್ ಆಗಿದ್ದಕ್ಕೆ ಸೆನ್ಸಾರ್ ಮಂಡಳಿ ಕಾರಣವಲ್ಲ; ಸಿಬಿಎಫ್‌ಸಿ ನೀಡಿದ ಸ್ಪಷ್ಟನೆ ಇಲ್ಲಿದೆ!
ಪೈರಸಿಗೆ ಬೆಂಬಲ ನೀಡಬೇಡಿ
"ಪೈರಸಿ ವಿಷಯಗಳ ಹರಡುವಿಕೆಯನ್ನು ತಡೆಯಲು ನಿರಂತರವಾಗಿ ಕಣ್ಣಿಡಲಾಗಿದೆ. ಈವರೆಗೆ 300ಕ್ಕೂ ಹೆಚ್ಚು ಲಿಂಕ್‌ಗಳನ್ನು ತೆಗೆಯಲಾಗಿದೆ. ಹೆಚ್ಚಿನ ಲಿಂಕ್‌ಗಳನ್ನು ಗುರುತಿಸಿ ತೆಗೆದುಹಾಕುವ ಕ್ರಮಗಳು ಪ್ರಗತಿಯಲ್ಲಿವೆ. ಪೈರಸಿ ತಡೆಗಟ್ಟಲು ನಮ್ಮ ತಂಡಗಳು ಸಾಮಾಜಿಕ ಜಾಲತಾಣ, ವೆಬ್‌ಸೈಟ್‌ಗಳು ಮತ್ತು ಫೈಲ್-ಶೇರಿಂಗ್ ಸೇವೆಗಳ ಮೇಲೆ ಸಕ್ರಿಯವಾಗಿ ಗಮನ ನೀಡಿವೆ. ಈ ಅಪರಾಧದಲ್ಲಿ ಭಾಗಿಯಾಗಿರುವ ಇತರರನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ನಡೆಯುತ್ತಿದೆ.
ಪೊಲೀಸ್ ಇಲಾಖೆ ಹಂಚಿಕೊಂಡಿರುವ ಪೋಸ್ಟ್
ʻಜನ ನಾಯಗನ್ʼ ಅಥವಾ ಇತರ ಯಾವುದೇ ಕೃತಿಸ್ವಾಮ್ಯ ಹೊಂದಿರುವ ವಿಷಯಗಳ ಪೈರಸಿ ಪ್ರತಿಗಳನ್ನು ಡೌನ್‌ಲೋಡ್ ಮಾಡುವುದು, ಸ್ಟ್ರೀಮ್ ಮಾಡುವುದು ಅಥವಾ ಹಂಚಿಕೊಳ್ಳುವುದನ್ನು ಮಾಡಬಾರದೆಂದು ಸಾರ್ವಜನಿಕರಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಪೈರಸಿ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಗಂಭೀರ ಅಪರಾಧವಾಗಿದ್ದು, ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಶಿಕ್ಷಾರ್ಹ ಕ್ರಮಗಳು ಸೇರಿದಂತೆ ಕಠಿಣ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ" ಎಂದು ಪೊಲೀಸ್ ಇಲಾಖೆಯು ಎಚ್ಚರಿಕೆ ನೀಡಿದೆ.
ನಿರ್ಮಾಪಕರ ಪರ ವಕೀಲರು ಹೇಳಿದ್ದೇನು?
ನಿರ್ಮಾಪಕರ ಪರ ವಕೀಲರಾದ ವಿಜಯನ್ ಸುಬ್ರಮಣ್ಯಂ, "ಜನ ನಾಯಗನ್ ಚಿತ್ರದ ಸೋರಿಕೆಯಾದ ದೃಶ್ಯಗಳನ್ನು ಕಾನೂನುಬಾಹಿರವಾಗಿ ಪ್ರಸಾರ ಮಾಡಿದ ಸಂಬಂಧ ಸೈಬರ್ ಕ್ರೈಂ ಇಲಾಖೆಯು ಈಗಾಗಲೇ 6 ಜನರನ್ನು ಬಂಧಿಸಿದೆ. ಸೋರಿಕೆಯಾದ ದೃಶ್ಯಗಳನ್ನು ಸಾಮಾಜಿಕ ಜಾಲತಾಣ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಡೌನ್‌ಲೋಡ್ ಮಾಡುವ, ಫಾರ್ವರ್ಡ್ ಮಾಡುವ ಅಥವಾ ಹಂಚಿಕೊಳ್ಳುವವರನ್ನು ಕೂಡ ಪತ್ತೆಹಚ್ಚಲಾಗುವುದು. ಅವರ ಮೇಲೆಯೂ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಯಾವುದೇ ವಿನಾಯಿತಿ ಇಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದ್ದಾರೆ.