ನಟ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ʻಜನ ನಾಯಗನ್ʼಗೆ ಒಂದಲ್ಲಾ ಒಂದು ಸಮಸ್ಯೆಗಳು ಕಾಡುತ್ತಲೇ ಇವೆ. ಈ ಚಿತ್ರವನ್ನು ಜನವರಿ 9ರಂದು ತೆರೆಗೆ ತರುವುದಕ್ಕೆ ಚಿತ್ರತಂಡ ಬಿರುಸಿನ ತಯಾರಿ ಮಾಡಿಕೊಳ್ಳುತ್ತಿದೆ. ವಿಪರ್ಯಾಸವೆಂದರೆ, ಇನ್ನೂ ಕೂಡ ಚಿತ್ರಕ್ಕೆ ಸೆನ್ಸಾರ್‌ನಿಂದ ಪ್ರಮಾಣ ಪತ್ರ ಸಿಕ್ಕಿಲ್ಲ. ಜನವರಿ 9ಕ್ಕೆ ರಿಲೀಸ್ ಆಗಲಿದೆಯಾ ಇಲ್ಲವೇ ಎಂಬ ಬಗ್ಗೆಯೂ ಖಾತರಿ ಇಲ್ಲ. ಆದರೂ ಈ ಚಿತ್ರದ ಅಬ್ಬರ ಮಾತ್ರ ಒಂಚೂರು ಕಮ್ಮಿ ಆಗಿಲ್ಲ.
ಅಡ್ವಾನ್ಸ್ ಬುಕಿಂಗ್‌ನಿಂದಲೇ 50 ಕೋಟಿ ರೂ. ಬಾಚಿದ ಜನ ನಾಯಗನ್
ಹೌದು, ಇದು ಅಚ್ಚರಿ ಎನಿಸಿದರೂ ಸತ್ಯ! ವಿಶ್ವಾದ್ಯಂತ ಕೆಲವು ಕಡೆ ಈ ಚಿತ್ರಕ್ಕೆ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಓಪನ್ ಆಗಿದ್ದು, ಫ್ಯಾನ್ಸ್ ಮುಗಿಬಿದ್ದು ಟಿಕೆಟ್ ಬುಕ್ ಮಾಡಿದ್ದಾರೆ. ಅದರ ಎಫೆಕ್ಟ್ ಹೇಗಿದೆ ಎಂದರೆ, ರಿಲೀಸ್‌ಗೆ ಇನ್ನೂ 3 ದಿನಗಳು ಇರುವಾಗಲೇ ಜನ ನಾಯಗನ್ ಖಾತೆಗೆ 50 ಕೋಟಿ ರೂ. ಅಡ್ವಾನ್ಸ್ ಮೊತ್ತ ಬಂದಿದೆ. ಹಾಗ್ನೋಡಿದ್ರೆ ಈ ಚಿತ್ರಕ್ಕೆ ತವರಿನಲ್ಲೇ ಬುಕಿಂಗ್ ಓಪನ್ ಆಗಿಲ್ಲ.
ಹೌದು, ತಮಿಳುನಾಡಿನಲ್ಲಿ ಇನ್ನೂ ಕೂಡ ಜನ ನಾಯಗನ್ ಸಿನಿಮಾಗೆ ಟಿಕೆಟ್ ಬುಕಿಂಗ್ ಆರಂಭವಾಗಿಲ್ಲ. ತೆಲಂಗಾಣ & ಆಂಧ್ರ ಪ್ರದೇಶದಲ್ಲೂ ಟಿಕೆಟ್ ಬುಕಿಂಗ್ ಶುರುವಾಗಿಲ್ಲ. ಆದರೂ ಈ ಚಿತ್ರಕ್ಕೆ ಇಷ್ಟೊಂದು ದೊಡ್ಡ ಮೊತ್ತ ಕಲೆಕ್ಟ್ ಆಗಿರುವುದು ವಿಜಯ್‌ಗೆ ಇರುವ ಜನಪ್ರಿಯತೆಯನ್ನು ತೋರಿಸುತ್ತದೆ. ಮೊದಲ ದಿನ ದಾಖಲೆ ಮೊತ್ತದ ಹಣ ಗಳಿಕೆ ಆಗುವುದರಲ್ಲಿ ಅನುಮಾನವೇ ಇಲ್ಲ ಎನ್ನಲಾಗಿದೆ.
ಅಂದಹಾಗೆ, ಮಲೇಷ್ಯಾದಲ್ಲಿ 'ಜನ ನಾಯಗನ್' ಸಿನಿಮಾ ಅಕ್ಷರಶಃ ಇತಿಹಾಸ ಸೃಷ್ಟಿಸುತ್ತಿದೆ. ಬುಕ್ಕಿಂಗ್ ಆರಂಭವಾದ 24 ಗಂಟೆಗಳಲ್ಲಿ ಸುಮಾರು 90 ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿದ್ದು, ಮಲೇಷ್ಯಾದಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟವಾದ 3ನೇ ಚಿತ್ರ ಎಂಬ ಹೆಗ್ಗಳಿಕೆಗೆ 'ಜನ ನಾಯಗನ್' ಪಾತ್ರವಾಗಿದೆ.
ಕರ್ನಾಟಕ ಕೇರಳದಲ್ಲಿ ಎಷ್ಟಾಯ್ತು ಕಲೆಕ್ಷನ್?
ಕರ್ನಾಟಕ ಮತ್ತು ಕೇರಳದಲ್ಲಿ ಟಿಕೆಟ್ ಬುಕಿಂಗ್ ಆರಂಭವಾಗಿದ್ದು, ಈಗಾಗಲೇ ಕೇರಳದಲ್ಲಿ ಮುಂಗಡ ಟಿಕೆಟ್ ಬುಕಿಂಗ್‌ನಿಂದಲೇ 2.36 ಕೋಟಿ ರೂ. ಹಣ ಸಂಗ್ರಹವಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಕರ್ನಾಟಕದಲ್ಲಿ ಈ ಮೊತ್ತ ಜಾಸ್ತಿ ಇದೆ. ಅಂದಾಜು 5 ಕೋಟಿ ರೂ. ಹಣ ಈಗಾಗಲೇ ಕಲೆಕ್ಟ್ ಆಗಿರುವ ಮಾಹಿತಿ ಇದೆ. ಇನ್ನು, ಕರ್ನಾಟಕದಲ್ಲಿ ಟಿಕೆಟ್ ದರ 1000 ರೂ. ಇರುವುದು ಗಳಿಕೆ ಹೆಚ್ಚಲಿಕ್ಕೆ ಮತ್ತೊಂದು ಕಾರಣ.
Jana Nayagan : ದಳಪತಿ ವಿಜಯ್ ‘ಜನ ನಾಯಗನ್’ ಸಿನಿಮಾದಿಂದ ಬಿಗ್ ಅಪ್‌ಡೇಟ್; ಹೊಸ ಪೋಸ್ಟರ್ ಔಟ್, ರಿಲೀಸ್ ಯಾವಾಗ?
ಜನ ನಾಯಗನ್‌ಗೆ ಸೆನ್ಸಾರ್ ಸಮಸ್ಯೆ
ಈ ಮಧ್ಯೆ 'ಜನ ನಾಯಗನ್' ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ (Censor Certificate) ಇನ್ನು ಸಿಕ್ಕಿಲ್ಲ. ಆ ಹಿನ್ನೆಲೆಯಲ್ಲಿ ಚಿತ್ರತಂಡ ಕೋರ್ಟ್ ಮೆಟ್ಟಿಲೇರಿದೆ. ಅಂದಹಾಗೆ, ಡಿ.19ರಂದು ಸೆನ್ಸಾರ್ ಮಂಡಳಿ ಸಿನಿಮಾ ವೀಕ್ಷಿಸಿತ್ತು, ಡಿ.22ರಂದು ಒಂದಷ್ಟು ಕಟ್‌ಗಳ ಜೊತೆಗೆ ಯು/ಎ ಪ್ರಮಾಣ ಪತ್ರ ನೀಡಿತ್ತು. ಅದಕ್ಕೆ ಚಿತ್ರತಂಡ ಎಲ್ಲಾ ರೀತಿಯಲ್ಲೂ ಸಹಕರಿಸಿತ್ತು. ಆದರೂ ಪ್ರಮಾಣ ಪತ್ರ ನೀಡಲು ತಡಮಾಡಲಾಗಿದೆ. ಇದೀಗ ಜನವರಿ 5ರಂದು ರಿವೈಸಿಂಗ್ ಕಮಿಟಿಯನ್ನು ಭೇಟಿ ಮಾಡಿ, ಮುಂಬೈ ಕಚೇರಿಗೆ ಹೋಗಿ ಎಂದು ಪ್ರಾದೇಶಿಕ ಸೆನ್ಸಾರ್ ಮಂಡಳಿಯು ಜನ ನಾಯಗನ್ ಟೀಮ್‌ಗೆ ಸೂಚಿಸಿದೆಯಂತೆ.
ಇದರಿಂದ ಬೇಸರಗೊಂಡಿರುವ ಚಿತ್ರತಂಡ, ಕೋರ್ಟ್ ಮೊರೆ ಹೋಗಿದೆ ಎಂಬ ಮಾಹಿತಿ ಇದೆ. ಸದ್ಯದ ಮಾಹಿತಿ ಪ್ರಕಾರ ಇದರಿಂದ ಚಿತ್ರದ ಬಿಡುಗಡೆಗೆ ಯಾವುದೇ ವಿಳಂಬವಾಗುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ಮುಂದೇನಾಗಲಿದೆ ಎಂಬುದನ್ನು ಕಾದುನೋಡಬೇಕು.