Rachana Rai: ಮಸ್ತ್ ಫೋಟೊಶೂಟ್ ಮೂಲಕ ಗೌರಿ ಗಣೇಶ ಹಬ್ಬದ ಶುಭಾಶಯ ತಿಳಿಸಿದ ʼಡೆವಿಲ್ʼ ಚಿತ್ರದ ನಾಯಕಿ ರಚನಾ ರೈ
The Devil: ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಡೆವಿಲ್ ಚಿತ್ರ ಕುತೂಹಲ ಕೆರಳಿಸಿದೆ. ಇದೀಗ ಚಿತ್ರದ ನಾಯಕಿ ರಚನಾ ರೈ ಕಲರ್‌ಪುಲ್ ಫೋಟೊಶೂಟ್ ಮಾಡಿಸುವ ಮೂಲಕ ಗೌರಿ ಗಣೇಶ ಹಬ್ಬದ ಶುಭಾಶಯ ತಿಳಿಸಿದ್ದಾರೆ.


ಬೆಂಗಳೂರು: ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ನಟನೆಯ 'ಡೆವಿಲ್' (The Devil) ಸದ್ಯ ಭಾರಿ ಕುತೂಹಲ ಮೂಡಿಸಿದೆ. ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲಿನಲ್ಲಿರುವ ದರ್ಶನ್ ಅವರ ಅನುಪಸ್ಥಿತಿಯಲ್ಲಿ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಪ್ರಕಾಶ್ ವೀರ್ (Prakash Veer) ನಿರ್ದೇಶನದ ಈ ಸಿನಿಮಾದಲ್ಲಿ ನಾಯಕಿಯಾಗಿ ಕರಾವಳಿ ಮೂಲದ ರಚನಾ ರೈ (Rachana Rai) ನಟಿಸುತ್ತಿದ್ದು, ಆ ಮೂಲಕ ಭರ್ಜರಿ ಅವಕಾಶ ಪಡೆದುಕೊಂಡಿದ್ದಾರೆ. ಇದುವರೆಗೆ ಸೈಲಂಟ್ ಆಗಿದ್ದ ಅವರು ಚಿತ್ರದ ಪ್ರಮೋಷನ್‌ಗೆ ಮುಂದಾಗಿದ್ದಾರೆ. ಇದೀಗ ಅವರು ವಿಭಿನ್ನ ಫೋಟೊ ಶೂಟ್ ಮಾಡಿಸುವ ಮೂಲಕ ಮಾಧ್ಯಮ ಮಿತ್ರರಿಗೆ ಮತ್ತು ಅಭಿಮಾನಿಗಳಿಗೆ ಗೌರಿ ಗಣೇಶ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ʼʼಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಗೌರಿ ಗಣೇಶರು ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿʼʼ ಎಂದು ಶುಭ ಹಾರೈಸಿದ್ದಾರೆ.
ಮುಂದುವರಿದು, ʼʼನನ್ನ ಪ್ರತಿ ಹೆಜ್ಜೆಯಲ್ಲಿ ಜತೆಯಾದವರು ನೀವು. ನನ್ನ ತಪ್ಪುಗಳನ್ನು ತಿದ್ದಿದವರು ನೀವು. ನಿಮ್ಮ ಬೆಂಬಲ, ಆಶೀರ್ವಾದದಿಂದ ನಾನು ಬಹುನಿರೀಕ್ಷಿತ ʼಡೆವಿಲ್ʼ ಸಿನಿಮಾದ ಭಾಗವಾಗಿದ್ದೇನೆ. ಒಬ್ಬ ಕಲಾವಿದರಿಗೆ ಇದಕ್ಕಿಂತ ಇನ್ನೇನು ಬೇಕು? ʼಡೆವಿಲ್ʼ ಚಿತ್ರದಲ್ಲಿನಾಯಕಿಯಾಗಿ ನಟಿಸಿದ್ದೇನೆ. ಈ ಚಿತ್ರದ ಮೇಲೆ ಬೆಂಬಲವಿರಲಿ. ಇಲ್ಲಿವರೆಗೆ ನೀವು ನನಗೆ ನೀಡಿದ ಪ್ರೀತಿ, ಈ ಸಿನಿಆದ ಮೇಲೂ ಇರಲಿʼʼ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Devil Movie: ಡಿ ಬಾಸ್ ಫ್ಯಾನ್ಸ್‌ಗೆ ಡಬಲ್ ಧಮಾಕಾ! ಸಾಂಗ್ ಬಿಡುಗಡೆ ಬೆನ್ನಲ್ಲೇ ಡೆವಿಲ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್!

ಕಲರ್‌ಫುಲ್ ಫೋಟೊಶೂಟ್
ಇದರೊಂದಿಗೆ ರೇಷ್ಮೆ ಸೀರೆ ಉಟ್ಟು ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದು, ಫೋಟೊಶೂಟ್ ಮಾಡಿಸಿದ್ದಾರೆ. ಸದ್ಯ ಅವರ ಈ ಕಲರ್‌ಫುಲ್ ಫೋಟೊ ಗಮನ ಸೆಳೆಯುತ್ತಿದೆ. ಗೌರಿ ಥೀಮ್‌ನ ಈ ಫೋಟೊಶೂಟ್‌ನಲ್ಲಿ ಅವರು ಆಕರ್ಷಕವಾಗಿ ಕಂಡಿದ್ದಾರೆ.
ರಿಲೀಸ್ ಡೇಟ್ ಫಿಕ್ಸ್
ʼಡೆವಿಲ್ʼ ಚಿತ್ರದ ʼಇದ್ರೆ ನೆಮ್ದಿಯಾಗಿರ್ಬೇಕುʼ ಹಾಡು ರಿಲೀಸ್ ಆದ ಬೆನ್ನಲ್ಲೇ ಸಿನಿಮಾ ತಂಡ ಮತ್ತೊಂದು ಗುಡ್‌ನ್ಯೂಸ್ ನೀಡಿದ್ದು, ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಇದು ಡಿಸೆಂಬರ್ 12ರಂದು ತೆರೆಗೆ ಬರಲಿದೆ ಎಂದು ಚಿತ್ರತಂಡ ಘೋಷಿಸಿದೆ. ಆ ಮೂಲಕ ದರ್ಶನ್ ಅಭಿಮಾನಿಗಳ ಬಹು ದಿನಗಳ ಕಾಯುವಿಕೆಗೆ ಅಂತ್ಯ ಹಾಡಿದೆ. ಈ ಹಿಂದೆ ʼತಾರಕ್ʼ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಪ್ರಕಾಶ್ ವೀರ್ ಮತ್ತೊಮ್ಮೆ ದರ್ಶನ್ ಜತೆ ಕೈ ಜೋಡಿಸಿದ್ದು, ಸಹಜವಾಗಿಯೇ ಕುತೂಹಲ ಮೂಡಿಸಿದೆ. 'ಕಾಟೇರ' ಸಿನಿಮಾ ಬಳಿಕ ಬಿಡುಗಡೆಯಾಗುತ್ತಿರುವ ದರ್ಶನ್ ಚಿತ್ರ ಇದಾಗಿದೆ.
ದರ್ಶನ್, ರಚನಾ ರೈ ಜತೆಗೆ ಶರ್ಮಿಳಾ ಮಾಂಡ್ರೆ, ಅಚ್ಯುತ್ ಕುಮಾರ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ದರ್ಶನ್ ಸಿನಿಮಾಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದು, ಇದೀಗ ʼಇದ್ರೆ ನೆಮ್ದಿಯಾಗಿರ್ಬೇಕುʼ ದಾಖಲೆಯ ವ್ಯೂವ್ಸ್ ಪಡೆದುಕೊಂಡಿದೆ.
ʼಡೆವಿಲ್ʼ ಚಿತ್ರ ತಂಡಕ್ಕೆ ತೊಂದರೆಯಾಗಬಾರದೆಂದು ಜೈಲಿಗೆ ಹೋಗುವ ಮುನ್ನವೇ ದರ್ಶನ್ ಶೂಟಿಂಗ್ ಮುಗಿಸಿದ್ದಾರೆ. ಜತೆಗೆ ತಮ್ಮ ಪಾತ್ರದ ಡಬ್ಬಿಂಗ್ ಕೂಡ ಮಾಡಿ ಕೊಟ್ಟಿದ್ದಾರೆ. ಹೀಗಾಗಿ ಸಿನಿಮಾ ಸಂಬಂಧಿಸಿದ ಬಹುತೇಕ ಕೆಲಸಗಳು ಪೂರ್ಣಗೊಂಡಿವೆ. ʼಡೆವಿಲ್ʼ ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿದೆ.