ದೆಹಲಿಗೆ ಬಂದಿಳಿದ ಯೂರೋಪಿಯನ್ ಯೂನಿಯನ್ ಕಮಿಷನ್ ಅಧ್ಯಕ್ಷೆ; ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗಿ
ಭಾರತದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಯೂರೋಪಿಯನ್ ಯೂನಿಯನ್ ಕಮಿಷನ್‌ನ ಅಧ್ಯಕ್ಷೆ ಉರ್ಸುಲಾ ವಾನ್ ಡರ್ ಲೇಯೆನ್ ಭಾಗವಹಿಸಲಿದ್ದು, ಈ ಹಿನ್ನೆಲೆಯಲ್ಲಿ ಹೊಸದೆಹಲಿಗೆ ಆಗಮಿಸಿದ್ದಾರೆ. ಲೇಯೆನ್ ಅವರೊಂದಿಗೆ ಯೂರೋಪಿಯನ್ ಕೌನ್ಸಿಲ್ ಅಧ್ಯಕ್ಷ ಅಂಟೋನಿಯೊ ಲೂಯಿಸ್ ಸ್ಯಾಂಟೋಸ್ ಡಾ ಕೋಸ್ಟಾ ಕೂಡ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಯೂರೋಪ್ ಯೂನಿಯನ್ ಕಮಿಷನ್‌ನ ಅಧ್ಯಕ್ಷೆ ಉರ್ಸುಲಾ ವಾನ್ ಡರ್ ಲೇಯೆನ್ -
ನವದೆಹಲಿ, ಜ. 24: ಯೂರೋಪಿಯನ್ (European) ಯೂನಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡರ್ ಲೇಯೆನ್ (Ursula Von Der Leyen) ಶನಿವಾರ ನವದೆಹಲಿಗೆ ಆಗಮಿಸಿದ್ದು, ಭಾರತದ 77ನೇ ಗಣರಾಜ್ಯೋತ್ಸವ (Republic Day) ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗಣರಾಜ್ಯೋತ್ಸವ ಪರೇಡ್ ಜನವರಿ 26ರಂದು ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥ (Kartavya Path)ದಲ್ಲಿ ನಡೆಯಲಿದೆ. ಈ ಬಾರಿ ಭಾರತ, ಲೇಯೆನ್ ಅವರೊಂದಿಗೆ ಯೂರೋಪಿಯನ್ ಕೌನ್ಸಿಲ್ ಅಧ್ಯಕ್ಷ ಅಂಟೋನಿಯೊ ಲೂಯಿಸ್ ಸ್ಯಾಂಟೋಸ್ ಡಾ ಕೋಸ್ಟಾ (António Luís Santos da Costa) ಕೂಡ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಗಣರಾಜ್ಯೋತ್ಸವ ಬಳಿಕ ಜನವರಿ 27ರಂದು ನಡೆಯುವ 16ನೇ ಭಾರತ ಯೂರೋಪಿಯನ್ ಯೂನಿಯನ್ ಶೃಂಗಸಭೆಯಲ್ಲೂ ಲೇಯೆನ್ ಮತ್ತು ಕೋಸ್ಟಾ ಯೂರೋಪಿಯನ್ ಯೂನಿಯನ್‌ನ ಪ್ರತಿನಿಧಿಗಳಾಗಿ ಭಾಗವಹಿಸಲಿದ್ದಾರೆ. ಈ ಶೃಂಗಸಭೆಯಲ್ಲಿ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದ (FTA) ಚರ್ಚೆಗಳು ಹಾಗೂ ಮದರ್ ಆಫ್ ಆಲ್ ಡೀಲ್ಸ್ ಬಗ್ಗೆ ಮಾತುಕತೆ ನಡೆಯುವ ನಿರೀಕ್ಷೆಯಿದೆ.
“ಭಾರತಕ್ಕೆ ಭೇಟಿ ನೀಡಿದ ಯೂರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡರ್ ಲೇಯೆನ್ ಅವರಿಗೆ ಹಾರ್ದಿಕ ಸ್ವಾಗತ. ಭಾರತ–ಇಯು ತಂತ್ರಾತ್ಮಕ ಸಹಭಾಗಿತ್ವದ ಮುಂದಿನ ಹಂತವನ್ನು ರೂಪಿಸುತ್ತಿದ್ದೇವೆ. ವಿಶ್ವದ ಎರಡು ಅತಿದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರಗಳಾದ ಭಾರತ ಮತ್ತು ಇಯು ಪರಸ್ಪರ ನಂಬಿಕೆ ಮತ್ತು ಹಂಚಿಕೊಂಡ ಮೌಲ್ಯಗಳ ಮೇಲೆ ಆಧಾರಿತ ಸಹಭಾಗಿತ್ವ ಹೊಂದಿವೆ” ಎಂದು ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಂಧೀರ್ ಜೈಸ್ವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗಣರಾಜ್ಯೋತ್ಸವದ ಸೆಲೆಬ್ರೇಷನ್‌ಗೆ ಬಂತು ದೇಸಿ ಫ್ಯಾಷನ್‌ವೇರ್ಸ್
ಭಾರತದೊಂದಿಗೆ 'ಮದರ್ ಆಫ್ ಆಲ್ ಡೀಲ್ಸ್’ಗೆ ಇಯು ಸಜ್ಜು
ಇದೇ ವೇಳೆ ಸುಮಾರು ಎರಡು ಬಿಲಿಯನ್ ಜನಸಂಖ್ಯೆಯ ಮಾರುಕಟ್ಟೆಯನ್ನು ರೂಪಿಸುವ ಮತ್ತು ಜಾಗತಿಕ ಜಿಡಿಪಿಯ ಸುಮಾರು ನಾಲ್ಕನೇ ಭಾಗವನ್ನು ಒಳಗೊಂಡಿರುವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ಮತ್ತು ಇಯು ಶೀಘ್ರದಲ್ಲೇ ಸಹಿ ಹಾಕಲಿದೆ ಎಂದು ಲೇಯೆನ್ ಹೇಳಿದ್ದಾರೆ. ಇದು ಇಯು–ಭಾರತ ಆರ್ಥಿಕ ಸಂಬಂಧಗಳಲ್ಲಿ ಐತಿಹಾಸಿಕ ಕ್ಷಣವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಡಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಲೇಯೆನ್, “ಇನ್ನೂ ಸ್ವಲ್ಪ ಕೆಲಸ ಬಾಕಿಯಿದೆ. ಆದರೆ ನಾವು ಒಂದು ಐತಿಹಾಸಿಕ ವ್ಯಾಪಾರ ಒಪ್ಪಂದದ ಅಂಚಿನಲ್ಲಿದ್ದೇವೆ. ಕೆಲವರು ಇದನ್ನು 'ಮದರ್ ಆಫ್ ಆಲ್ ಡೀಲ್ಸ್' ಎಂದು ಬಣ್ಣಿಸಿದ್ದಾರೆ” ಎಂದು ಹೇಳಿದರು. ಪ್ರಸ್ತುತ ಹಂತವನ್ನು “ಗಾಢಗೊಳ್ಳುತ್ತಿರುವ ಸಂಬಂಧಗಳ ಶಿಖರಾವಸ್ಥೆ” ಎಂದು ವರ್ಣಿಸಿದ ಅವರು, ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಯಲ್ಲಿ ಭಾರತ ಮತ್ತು ಇಯುಗಳ ಭದ್ರತೆ ಹಾಗೂ ಸಮೃದ್ಧಿಯು ಪರಸ್ಪರ ಸಂಬಂಧ ಹೊಂದಿವೆ ಎಂಬುದನ್ನು ಎರಡೂ ದೇಶಗಳು ಅರಿತುಕೊಂಡಿವೆ ಎಂದು ತಿಳಿಸಿದರು.
ಈ ಶೃಂಗಸಭೆಯ ಪ್ರಮುಖ ಭಾಗವಾಗಿ, ಇಯುಯ ಉನ್ನತ ಪ್ರತಿನಿಧಿ (HRVP) ಕಾಜಾ ಕಾಲಾಸ್ ಮತ್ತು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭದ್ರತೆ ಮತ್ತು ರಕ್ಷಣಾ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಇದು ಏಷ್ಯಾದಲ್ಲಿ ಇಯು ಸಹಿ ಮಾಡಿರುವ ಮೂರನೇ ಸಮಗ್ರ ಒಪ್ಪಂದವಾಗಿದ್ದು, ಇದಕ್ಕೂ ಮೊದಲು ಜಪಾನ್ ಮತ್ತು ದಕ್ಷಿಣ ಕೊರಿಯಾ (ರಿಪಬ್ಲಿಕ್ ಆಫ್ ಕೊರಿಯಾ) ಜೊತೆಗೆ ಇಂತಹ ಒಪ್ಪಂದಗಳು ನಡೆದಿದೆ.