ಬೆಂಗಳೂರು: ಸೆಪ್ಟೆಂಬರ್ 22ರಂದು ರಿಲೀಸ್ ಆದ ʼಕಾಂತಾರ ಚಾಪ್ಟರ್ 1ʼ (Kantara Chapter 1) ಚಿತ್ರದ ಟ್ರೈಲರ್ ಇತಿಹಾಸ ಬರೆದಿದೆ. ವಿವಿಧ ಭಾಷೆಗಳಲ್ಲಿ ರಿಲೀಸ್ ಆಗಿರುವ ಟ್ರೈಲರ್ ಇದುವರೆಗೆ 160 ಮಿಲಿಯನ್‌ಗಿಂತ ಅಧಿಕ ವೀಕ್ಷಣೆ ಕಂಡು, ಪ್ರೇಕ್ಷಕರ ಕುತೂಹಲವನ್ನು ಇಮ್ಮಡಿಗೊಳಿಸುವಲ್ಲಿ ಯಸಸ್ವಿಯಾಗಿದೆ. ಬಿ. ಅಜನೀಶ್ ಲೋಕನಾಥ್ (B. Ajaneesh Loknath) ಹಿನ್ನೆಲೆ ಸಂಗೀತ ಟ್ರೈಲರ್‌ನಲ್ಲೇ ನಿರೀಕ್ಷೆ ಮೂಡಿಸಿದ್ದು, ಇದೀಗ ಮೊದಲ ಹಾಡು ಹೊರಬಿದ್ದಿದೆ. ಶಿವನನ್ನು ಆರಾಧಿಸುವ ʼಬ್ರಹ್ಮಕಲಶʼ ಹಾಡು ಇದಾಗಿದ್ದು, ಸಿನಿಪ್ರಿಯರ ಗಮನ ಸೆಳೆದಿದೆ. ʼಕಾಂತಾರʼದ ಹಾಡುಗಳೂ ದೊಡ್ಡ ಮಟ್ಟಿಗೆ ಹಿಟ್ ಆಗಿದ್ದವು. ಅದಕ್ಕೂ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರು. ಸದ್ಯ ಹೊರ ಬಂದಿರುವ ಶಿವನ ಕುರಿತಾದ ಈ ಹಾಡನ್ನು ಕೇಳಿ ಪ್ರೇಕ್ಷಕರು ರೋಮಾಂಚಗೊಂಡಿದ್ದಾರೆ.
ʼಕಾಂತಾರʼದ ʼವರಾಹ ರೂಪಂʼನಂತೆ ಭಕ್ತಿ ಪರಾಕಾಷ್ಠೆಯ ಹಾಡು ಇದಾಗಿದ್ದು, ಕನ್ನಡ ಮತ್ತು ತುಳು ಹದವಾಗಿ ಬೆರೆತುಕೊಂಡಿದೆ. ಜತೆಗೆ ಜಾನಪದ ವಾದ್ಯ ಪರಿಕರಗಳನ್ನೂ ಬಳಸಿಕೊಂಡಿದ್ದು ಹಾಡಿಗೆ ದೈವಿಕ ಸ್ಪರ್ಶ ಸಿಕ್ಕಿದೆ. ಕನ್ನಡ ಜತೆಗೆ ಹಿಂದಿ, ಮಲಯಾಳಂ, ತೆಲುಗು ಮತ್ತು ತಮಿಳಿನಲ್ಲೂ ಈ ಹಾಡು ರಿಲೀಸ್ ಆಗಿದೆ. ಮಲಯಾಳಂ ಹೊರತುಪಡಿಸಿ ಉಳಿದೆಲ್ಲ ಭಾಷೆಗಳಿಗೆ ಅಬ್ಬಿ ವಿ. ಧ್ವನಿ ನೀಡಿದ್ದಾರೆ. ಮಲಯಾಳಂನಲ್ಲಿ ಹರಿಶಂಕರ್ ಕೆ.ಎಸ್. ಹಾಡಿದ್ದಾರೆ. ʼನೀನೇ ಕಾಪಾಡುʼ ಎಂದು ಭಕ್ತನೊಬ್ಬ ಶಿವನಿಗೆ ತನ್ನನ್ನು ಅರ್ಪಿಕೊಳ್ಳುವ ಭಕ್ತಿ ಭಾವ ಈ ಹಾಡಿನಲ್ಲಿ ಮೂಡಿಬಂದಿದ್ದು, ಕೇಳುಗರನ್ನು ಮಂತ್ರಮುಗ್ಧಗೊಳಿಸಿದೆ.
2022ರಲ್ಲಿ ತೆರೆಕಂಡ 'ಕಾಂತಾರ' ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ಅಕ್ಟೋಬರ್ 2ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಸುಮಾರು 30 ದೇಶಗಳಲ್ಲಿ 7 ಸಾವಿರಕ್ಕಿಂತ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈಗಾಗಲೇ ಕರ್ನಾಟಕದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದ್ದು, ಭರಪೂರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ನಿಂದಲೇ ಚಿತ್ರ ಕೋಟಿ ಕೋಟಿ ರೂ. ಬಾಚಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಇದೀಗ ರಿಲೀಸ್ ಆಗಿರುವ ಹಾಡು ಈ ನಿರೀಕ್ಷೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ಈ ಸುದ್ದಿಯನ್ನೂ ಓದಿ: Kantara Chapter 1 Trailer: ಹೊಸ ದಾಖಲೆ ಬರೆದ ʼಕಾಂತಾರ: ಚಾಪ್ಟರ್ 1ʼ ಟ್ರೈಲರ್; 24 ಗಂಟೆಯಲ್ಲಿ 10.7 ಕೋಟಿ ವೀಕ್ಷಣೆ
ತುಳುನಾಡ ಜಾನಪದ ಕಥೆಯನ್ನು, ಅಲ್ಲಿನ ನಂಬಿಕೆಯನ್ನು, ದೈವಗಳ ಹಿನ್ನೆಲೆಯನ್ನು ಈ ಭಾಗದಲ್ಲಿ ರಿಷಬ್ ಶೆಟ್ಟಿ ಹೇಳಹೊರಟಿರುವುದು ಟ್ರೈಲರ್‌ನಲ್ಲಿ ಕಂಡು ಬಂದಿದೆ. ಅದ್ಧೂರಿಯಾಗಿ ಚಿತ್ರ ಮೂಡಿ ಬಂದಿದ್ದು, ಅದರ ಝಲಕ್‌ಗೆ ಸಿನಿಪ್ರೇಕ್ಷಕರು ಮನಸೋತಿದ್ದಾರೆ. ನಾಯಕಿಯಾಗಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದು, ಮುಖ್ಯ ಪಾತ್ರಗಳಲ್ಲಿ ಗುಲ್ಶನ್ ದೇವಯ್ಯ, ರಾಕೇಶ್ ಪೂಜಾರಿ, ಪ್ರಕಾಶ್ ತುಮಿನಾಡ್ ಮತ್ತಿತರರು ಬಣ್ಣ ಹಚ್ಚಿದ್ದಾರೆ. ನೈಜ ಕಾಡಿನಲ್ಲಿ ಶೂಟಿಂಗ್ ನಡೆದಿದ್ದು, ಸುಮಾರು 250 ದಿನಗಳ ಕಾಲ ಚಿತ್ರತಂಡ ಇದಕ್ಕಾಗಿ ಶ್ರಮಪಟ್ಟಿದೆ. ಸುಮಾರು 4-5ನೇ ಶತಮಾನದ ಕಥೆ ಇದರಲ್ಲಿದ್ದು, ಕದಂಬರ ಆಡಳಿತದ ಕಾಲದಲ್ಲಿ ಕರಾವಳಿಯಲ್ಲಿ ಜನ ಜೀವನ ಹೇಗಿತ್ತು ಎನ್ನುವುದರ ಅನಾವರಣ ತೆರೆಮೇಲೆ ಆಗಲಿದೆ.
ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಜೂ. ಎನ್ಟಿಆರ್ ಭಾಗಿ
ಕನ್ನಡದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಅದ್ಧೂರಿಯಾಗಿ ನಿರ್ಮಿಸಿರುವ ಈ ಸಿನಿಮಾದ ಪ್ರಚಾರ ಕಾರ್ಯ ಆರಂಭವಾಗಿದೆ. ವಿವಿಧ ನಗರಗಳಲ್ಲಿ ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿ ಪ್ರಮೋಷನ್ ನಡೆಸುತ್ತಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ಸೆಪ್ಟೆಂಬರ್ 28ರಂದು ಹೈದರಾಬಾದ್‌ನಲ್ಲಿ ನಡೆಯಲಿದ್ದು, ಟಾಲಿವುಡ್ ನಟ ಜೂನಿಯರ್ ಎನ್ಟಿಆರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ʼಕಾಂತಾರʼ ತೆಲುಗಿನಲ್ಲೂ ಸೂಪರ್ ಹಿಟ್ ಆಗಿತ್ತು. ಅಲ್ಲಿನ ಪ್ರೇಕ್ಷಕರು ರಿಷಬ್ ಶೆಟ್ಟಿ ನಟನೆಗೆ, ನಿರ್ದೇಶನಕ್ಕೆ ಪೂರ್ಣಾಂಕ ನೀಡಿದ್ದರು. ತುಳುನಾಡಿನ ವಿಶಿಷ್ಟ ಸಂಸ್ಕೃತಿ, ಭೂತಾರಾಧನೆಯನ್ನು ನೋಡಿ ತೆಲುಗು ಮಂದಿ ಜೈ ಎಂದಿದ್ದರು. ಹೀಗಾಗಿ ರಿಷಬ್ ಶೆಟ್ಟಿ ಪ್ರೀಕ್ವೆಲ್ ಘೋಷಿಸಿದಾಗ ತೆಲುಗು ಪ್ರೇಕ್ಷಕರು ಕೂಡ ಕುತೂಹಲಗೊಂಡಿದ್ದರು. ಇದೀಗ ಟ್ರೈಲರ್ ನಿರೀಕ್ಷೆಗೂ ಮೀರಿ ಮೂಡಿಬಂದಿದ್ದು, ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗುವ ಎಲ್ಲ ಲಕ್ಷಣಗಳಿವೆ.