ಹೈದರಾಬಾದ್, ನ. 8: ಬಹು ನಿರೀಕ್ಷಿತ, ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಈ ವರ್ಷದ 5ನೇ ಚಿತ್ರ ʼದಿ ಗರ್ಲ್‌ಫ್ರೆಂಡ್ʼ (The Girlfriend) ತೆರೆ ಕಂಡಿದೆ. ತೆಲುಗಿನ ಈ ರೊಮ್ಯಾಂಟಿಕ್ ಡ್ರಾಮಾದ ಕಥೆಯನ್ನು ರಶ್ಮಿಕಾ ಪಾತ್ರದ ಸುತ್ತವೇ ಹಣೆಯಲಾಗಿದ್ದು, ಸಹಜಾಭಿಯದ ಮೂಲಕ ಅವರು ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ರಾಹುಲ್ ರವೀಂದ್ರ ನಿರ್ದೇಶನದ ಈ ಚಿತ್ರದಲ್ಲಿ ನಾಯಕನಾಗಿ ಕನ್ನಡಿಗ ದೀಕ್ಷಿತ್ ಶೆಟ್ಟಿ (Deekshith Shetty) ಕಾಣಿಸಿಕೊಂಡಿರುವುದು ವಿಶೇಷ. ಚಿತ್ರ ನೋಡಿದ ಪ್ರೇಕ್ಷಕರು, ವಿಮರ್ಶಕರು ಮೆಚ್ಚಿಕೊಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಕಮಾಯಿ ಮಾಡಿದೆ ಎನ್ನುವ ಕುತೂಹಲ ಮೂಡಿದೆ (The Girlfriend collection day 1). ಸದ್ಯ ದೇಶದ ಬಹುಬೇಡಿಕೆಯ ನಟಿ ಎನಿಸಿಕೊಂಡಿರುವ ರಶ್ಮಿಕಾಗೆ ಈ ಚಿತ್ರ ಗೆಲುವು ತಂದುಕೊಡ್ತಾ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
ಈ ವರ್ಷ ರಶ್ಮಿಕಾ ನಟಿಸಿದ 5 ಚಿತ್ರಗಳು ತೆರೆಕಂಡಿವೆ. ಈ ಪೈಕಿ ಹಿಂದಿಯ 3, ತೆಲುಗಿನ 1 ಮತ್ತು ತೆಲುಗು-ತಮಿಳಿನ 1 ಸಿನಿಮಾ ಸೇರಿದೆ. ವಿಶೇಷ ಎಂದರೆ ಇದೀಗ ರಿಲೀಸ್ ಆಗಿರುವ ʼದಿ ಗರ್ಲ್‌ಫ್ರೆಂಡ್ʼ ಮಹಿಳಾ ಪ್ರಧಾನ ಚಿತ್ರವಾಗಿದ್ದು, ರಶ್ಮಿಕಾ ವೃತ್ತಿ ಜೀವನದಲ್ಲೇ ಅತ್ಯುತ್ತಮ ಅಭಿನಯ ನೀಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಅದಾಗ್ಯೂ ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಆರಂಭ ಸಿಕ್ಕಿಲ್ಲ. ಮೂಲಗಳ ಪ್ರಕಾರ ಮೊದಲ ದಿನ ಕೇವಲ 1.3 ಕೋಟಿ ರೂ. ಕಲೆಕ್ಷನ್ ಆಗಿದೆ.
ಈ ಸುದ್ದಿಯನ್ನೂ ಓದಿ: Rashmika Mandanna: ಫ್ಯಾನ್ಸ್ ಹೃದಯ ಗೆದ್ದ ನ್ಯಾಶನಲ್ ಕ್ರಶ್ ಅಭಿನಯ! ದೀಕ್ಷಿತ್, ರಶ್ಮಿಕಾ 'ದಿ ಗರ್ಲ್‌ಫ್ರೆಂಡ್' ಮೂವಿ ನೋಡಿದವರು ಹೇಳಿದಿಷ್ಟು
ʼದಿ ಗರ್ಲ್‌ಫ್ರೆಂಡ್ʼ ಚಿತ್ರದ ಟ್ರೈಲರ್:
ಮೊದಲ ದಿನ ಅತೀ ಕಡಿಮೆ ಗಳಿಸಿದ ರಶ್ಮಿಕಾ ತೆಲುಗು ಚಿತ್ರ
ತೆಲುಗಿನ ಜನಪ್ರಿಯ ನಟಿಯಾಗಿ ಹೊರ ಹೊಮ್ಮಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕಲೆಕ್ಷನ್ ವಿಚಾರದಲ್ಲಿ ʼದಿ ಗರ್ಲ್‌ಫ್ರೆಂಡ್ʼ ಮೂಲಕ ಹಿನ್ನಡೆ ಅನುಭವಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮೊದಲ ದಿನ ಅತೀ ಕಡಿಮೆ ಗಳಿಸಿದ ಅವರ ತೆಲುಗು ಚಿತ್ರ ಇದು ಎನಿಸಿಕೊಂಡಿದೆ. ಈ ಹಿಂದಿನ ಅವರ ʼಆಡವಲ್ಲು ಮೀಕು ಜೋಹಾರ್ಲುʼ 1.56 ಕೋಟಿ ರೂ., 'ಸೀತಾ ರಾಮಮ್' 3.05 ಕೋಟಿ ರೂ. ಮತ್ತು 'ಗೀತಾ ಗೋವಿಂದಂ' ಚಿತ್ರ 10 ಕೋಟಿ ರೂ. ಮೊದಲ ದಿನವೇ ದೋಚಿಕೊಂಡಿದ್ದವು. ಸದ್ಯ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆ ಇದೆ.
ಗಮನ ಸೆಳೆದ ದೀಕ್ಷಿತ್
ಕಲೆಕ್ಷನ್ ವಿಚಾರ ಏನೇ ಇರಲಿ ʼದಿ ಗರ್ಲ್‌ಫ್ರೆಂಡ್ʼ ಸಿನಿಮಾ ಮೂಲಕ ರಶ್ಮಿಕಾ ಜತೆಗೆ ದೀಕ್ಷಿತ್ ಕೂಡ ಗಮನ ಸೆಳೆದಿದ್ದಾರೆ. ಲವರ್ ಬಾಯ್ ಆಗಿ, ಪೊಸೆಸಿವ್ ಹೊಂದಿರುವ ಯುವಕನಾಗಿ ಅವರು ಕಾಣಿಸಿಕೊಂಡಿದ್ದಾರೆ. ಅವರ ಅಭಿನಯವನ್ನೂ ವೀಕ್ಷಕರು ಮೆಚ್ಚಿಕೊಂಡಿದ್ದು, ಆ ಮೂಲಕ ʼದಸರಾʼ ಬಳಿಕ ಮತ್ತೊಮ್ಮೆ ಛಾಪು ಮೂಡಿಸಿದ್ದಾರೆ. 2023ರಲ್ಲಿ ತೆರೆಕಂಡ ನಾನಿ ನಟನೆಯ ತೆಲುಗು ಚಿತ್ರ ʼದಸರಾʼದ ಮುಖ್ಯ ಪಾತ್ರದಲ್ಲಿ ದೀಕ್ಷಿತ್ ಶೆಟ್ಟಿ ನಟಿಸಿದ್ದರು. ಗ್ರಾಮೀಣ ಭಾಗದ ಕಥೆಯನ್ನು ಒಳಗೊಂಡ ಈ ಚಿತ್ರದಲ್ಲಿನ ದೀಕ್ಷಿತ್ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಇದೀಗ ಮತ್ತೊಮ್ಮೆ ಮೋಡಿ ಮಾಡಿದ್ದಾರೆ.