ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕನ್ನಡಿಗ ದೀಕ್ಷಿತ್‌ ಶೆಟ್ಟಿಗೆ ರಶ್ಮಿಕಾ ಮಂದಣ್ಣ ಜತೆ ರೊಮ್ಯಾನ್ಸ್‌ ಮಾಡುವ ಅವಕಾಶ ಸಿಕ್ಕಿದ್ದು ಹೇಗೆ? ಸೀಕ್ರಟ್‌ ಬಿಚ್ಚಿಟ್ಟ ʼದಿ ಗರ್ಲ್‌ಫ್ರೆಂಡ್‌ʼ ನಿರ್ದೇಶಕ

The Girlfriend: ಸದ್ಯ ಟಾಲಿವುಡ್‌ ಗಮನ ಸೆಳೆದ ಚಿತ್ರಗಳ ಪೈಕಿ ʼದಿ ಗರ್ಲ್‌ಫ್ರೆಂಡ್‌ʼ ಕೂಡ ಒಂದು. ವಿಶೇಷ ಎಂದರೆ ಇದರಲ್ಲಿ ನಾಯಕ ಮತ್ತು ನಾಯಕಿ ಕನ್ನಡಿಗರು. ದೀಕ್ಷಿತ್‌ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಮೊದಲ ಬಾರಿ ತೆರೆಮೇಲೆ ಒಂದಾಗುತ್ತಿರುವ ಈ ಚಿತ್ರ ನವೆಂಬರ್‌ 7ರಂದು ರಿಲೀಸ್‌ ಆಗಲಿದೆ. ಚಿತ್ರವನ್ನಿ ನಿರ್ದೇಶಿಸಿರುವ ರಾಹುಲ್‌ ರವೀಂದ್ರ ಹಲವು ಕುತೂಹಲದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಾಯಕನನ್ನಾಗಿ ಯಾಕೆ ದೀಕ್ಷಿತ್‌ ಶೆಟ್ಟಿ ಅವರನ್ನೇ ಆಯ್ಕೆ ಮಾಡಿಕೊಂಡಿದ್ದು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.

ರಶ್ಮಿಕಾ ಚಿತ್ರದಲ್ಲಿ ದೀಕ್ಷಿತ್‌ ಶೆಟ್ಟಿಗೆ ಅವಕಾಶ ಸಿಕ್ಕಿದ್ದು ಹೇಗೆ?

ರಶ್ಮಿಕಾ ಮಂದಣ್ಣ ಮತ್ತು ದೀಕ್ಷಿತ್‌ ಶೆಟ್ಟಿ -

Ramesh B Ramesh B Oct 29, 2025 9:07 PM

ಹೈದರಾಬಾದ್‌, ಅ. 29: ಸದ್ಯ ಪರಭಾಷೆಗಳಲ್ಲಿ ಕನ್ನಡಿಗರ ಹವಾ ಮುಂದುವರಿದಿದೆ. ಸ್ಯಾಂಡಲ್‌ವುಡ್‌ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಟಾಲಿವುಡ್‌ ಜತೆಗೆ ಬಾಲಿವುಡ್‌ ಆಳುತ್ತಿದ್ದಾರೆ. ಈ ವರ್ಷ ರಶ್ಮಿಕಾ ಅಭಿನಯದ ಬಹುನಿರೀಕ್ಷಿತ 4 ಚಿತ್ರಗಳು ತೆರೆಕಂಡಿದ್ದು, ಈ ಪೈಕಿ 1 ಮಾತ್ರ ಮುಗ್ಗರಿಸಿದೆ. ಉಳಿದ 3 ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಗೆಲುವಿನ ನಗೆ ಬೀರಿದ್ದು, ಇದೀಗ ಮತ್ತೊಂದು ಚಿತ್ರ ರಿಲೀಸ್‌ಗೆ ಸಜ್ಜಾಗಿದೆ. ಹಾಡು, ಟ್ರೈಲರ್‌ನಿಂದಲೇ ಕುತೂಹಲ ಮೂಡಿಸಿರುವ ತೆಲುಗಿನ ʼದಿ ಗರ್ಲ್‌ಫ್ರೆಂಡ್‌ʼ ಸಿನಿಮಾ ನವೆಂಬರ್‌ 7ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ವಿಶೇಷ ಎಂದರೆ ಇದರಲ್ಲಿ ಕನ್ನಡತಿ ರಶ್ಮಿಕಾಗೆ ಜೋಡಿಯಾಗಿ ಕಾಣಿಸಿಕೊಂಡಿರುವುದು ಕನ್ನಡಿಗ ದೀಕ್ಷಿತ್‌ ಶೆಟ್ಟಿ (Deekshith Shetty). ಅವರನ್ನೇ ಯಾಕೆ ಈ ಚಿತ್ರದ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದು ಎನ್ನುವುದರ ಬಗ್ಗೆ ನಿರ್ದೇಶಕ ರಾಹುಲ್‌ ರವೀಂದ್ರ (Rahul Ravindra) ವಿವರಿಸಿದ್ದಾರೆ.

ಟ್ರೈಲರ್‌ ರಿಲೀಸ್‌ ಆದ ಬಳಿಕ ದೀಕ್ಷಿತ್‌-ರಶ್ಮಿಕಾ ಜೋಡಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಕೆಲವರು ನಾಯಕನಾಗಿ ಸ್ಟಾರ್‌ ನಟರೊಬ್ಬರು ಇರಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಚಿತ್ರದ ಪ್ರಮೋಷನ್ ವೇಳೆ ತಮ್ಮ ಈ ರೊಮ್ಯಾಂಟಿಕ್‌ ಡ್ರಾಮಾಕ್ಕೆ ದೀಕ್ಷಿತ್‌ ಶೆಟ್ಟಿ ಆಯ್ಕೆಯಾಗಿದ್ದು ಹೇಗೆ ಎನ್ನುವುದರ ಬಗ್ಗೆ ರಾಹುಲ್‌ ರವೀಂದ್ರ ಮಾತನಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: The Girlfriend Movie: ರಶ್ಮಿಕಾ ಮಂದಣ್ಣ-ದೀಕ್ಷಿತ್‌ ಶೆಟ್ಟಿ ಜೋಡಿಯ ʼದಿ ಗರ್ಲ್‌ಫ್ರೆಂಡ್‌ʼ ಚಿತ್ರದ ರಿಲೀಸ್‌ ಡೇಟ್‌ ಘೋಷಣೆ

ದೀಕ್ಷಿತ್‌ ಶೆಟ್ಟಿ ಆಯ್ಕೆಯಾಗಿದ್ದು ಹೇಗೆ?

2023ರಲ್ಲಿ ತೆರೆಕಂಡ ನಾನಿ ನಟನೆಯ ತೆಲುಗು ಚಿತ್ರ ʼದಸರಾʼದ ಮುಖ್ಯ ಪಾತ್ರದಲ್ಲಿ ದೀಕ್ಷಿತ್‌ ಶೆಟ್ಟಿ ನಟಿಸಿದ್ದರು. ಗ್ರಾಮೀಣ ಭಾಗದ ಕಥೆಯನ್ನು ಒಳಗೊಂಡ ಈ ಚಿತ್ರದಲ್ಲಿನ ದೀಕ್ಷಿತ್‌ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಈ ಸಿನಿಮಾದಲ್ಲಿನ ಅವರ ಅಭಿನಯ ನೋಡಿ ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾಗಿ ರಾಹುಲ್‌ ತಿಳಿಸಿದ್ದಾರೆ. ʼʼದಸರಾʼ ಚಿತ್ರ ನೋಡುವಾಗ ದೀಕ್ಷಿತ್‌ ಗಮನ ಸೆಳೆದರು. ಅವರಲ್ಲಿನ ಆತ್ಮವಿಶ್ವಾಸ, ಕಣ್ಣುಗಳಲ್ಲಿನ ಮಿಂಚು ವಿಶೇಷ ಎನಿಸಿತು. ಆಗಲೇ ಅವರು ಕಾಲೇಜು ವಿದ್ಯಾರ್ಥಿಯ ಪಾತ್ರಕ್ಕೆ ಹೊಂದುತ್ತಾರೆ ಎನಿಸಿತು. ʼದಿ ಗರ್ಲ್‌ಫ್ರೆಂಡ್‌ʼ ಸಿನಿಮಾದಲ್ಲಿನ ನನ್ನ ಕಲ್ಪನೆಯ ನಾಯಕ ಹೇಗಿದ್ದಾನೋ ಅದೇ ರೀತಿ ದೀಕ್ಷಿತ್‌ ಕಾಣಿಸಿದರುʼʼ ಎಂದು ವಿವರಿಸಿದ್ದಾರೆ.

ʼದಿ ಗರ್ಲ್‌ಫ್ರೆಂಡ್‌ʼ ಚಿತ್ರದ ಟ್ರೈಲರ್‌:



ʼʼಅವರು ಪಾತ್ರಕ್ಕೆ ಹೊಂದಿಕೆಯಾಗುತ್ತಾರೆ ಎಂದುಕೊಂಡ ಬಳಿಕ ಬೇರೆನನ್ನೂ ಯೋಚಿಸಲಿಲ್ಲ. ಅವರು ಯಾವ ಭಾಷೆಯವರೂ ಎನ್ನವುದು ನನಗೆ ಮುಖ್ಯವಾಗಲಿಲ್ಲ. ಅವರು ಪಾತ್ರಕ್ಕೆ ನ್ಯಾಯ ಒದಗಿಸಬಲ್ಲರು, ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಬಲ್ಲರು ಎಂಬುದು ಮನದಟ್ಟಾಗಿತ್ತು. ನನಗೆ ಅಷ್ಟೇ ಬೇಕಾಗಿತ್ತುʼʼ ಎಂದು ಹೇಳಿದ್ದಾರೆ.

ನಾಯಕನ ಪಾತ್ರಕ್ಕೂ ಇದೆ ಪ್ರಾಮುಖ್ಯತೆ

ʼದಿ ಗರ್ಲ್‌ಫ್ರೆಂಡ್‌ʼ ನಾಯಕಿ ಪ್ರಧಾನ ಚಿತ್ರ. ಅದಾಗ್ಯೂ ನಾಯಕಿಯಷ್ಟೇ ನಾಯಕನ ಪಾತ್ರಕ್ಕೂ ಪ್ರಾಧಾನ್ಯತೆ ಇದೆಯಂತೆ. ʼʼನಾಯಕನ ಪಾತ್ರಕ್ಕೂ ಸಾಕಷ್ಟು ಒತ್ತು ನೀಡಲಾಗಿದೆ. ನಾಯಕಿಯ ದೃಷ್ಟಿಕೋನದಲ್ಲಿ ಕಥೆ ಸಾಗುತ್ತದೆʼʼ ಎಂದು ರಾಹುಲ್‌ ತಿಳಿಸಿದ್ದಾರೆ. ಸ್ಟಾರ್‌ ನಟರು ಇಂತಹ ಪಾತ್ರ ನಿರ್ವಹಿಸಲು ಹಿಂದೇಟು ಹಾಕುತ್ತಾರೆ ಎಂದೂ ಅವರು ವಿವರಿಸಿದ್ದಾರೆ. ʼʼಒಂದುವೇಳೆ ಸ್ಟಾರ್‌ ನಟರು ಇಂತಹ ಚಿತ್ರದಲ್ಲಿ ನಟಿಸಲು ಒಪ್ಪಿದರೆ ಸಂತಸವಾಗುತ್ತದೆ. ಸಮ್ಮತಿಸದಿದ್ದರೆ ಬೇಸರವೇನೂ ಇಲ್ಲ. ಪ್ರತಿಯೊಬ್ಬ ನಟ-ನಟಿ ಪರಿಶ್ರಮದಿಂದ ತಮ್ಮ ಛಾಪು ಮೂಡಿಸಿರುತ್ತಾರೆ. ಪಾತ್ರವನ್ನು ಒಪ್ಪಿಕೊಳ್ಳುವುದು ಬಿಡುವುದು ಅವರ ಕೈಯಲ್ಲಿರುತ್ತದೆʼʼ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣಗೆ ಬಾಲಿವುಡ್‌ನಲ್ಲಿ ಮತ್ತೊಂದು ಬಂಪರ್‌ ಆಫರ್‌; ಹೃತಿಕ್‌ ರೋಷನ್‌ಗೆ ಕನ್ನಡತಿ ಜೋಡಿ

ʼದಿ ಗರ್ಲ್‌ಫ್ರೆಂಡ್‌ʼ ಕಾಲೇಜು ಲವ್‌ ಸ್ಟೋರಿಯನ್ನು ಒಳಗೊಂಡಿದ್ದು, ಇದರ ಸೂಚನೆ ಟ್ರೈಲರ್‌ನಲ್ಲೇ ಸಿಕ್ಕಿದೆ. 2018ರಲ್ಲಿ ತೆರೆಕಂಡ ʼಚಿ ಲಾ ಸೌʼ ಚಿತ್ರದ ಮೂಲಕ ನಿರ್ದೇಶಕರಾಗಿ ಟಾಲಿವುಡ್‌ಗೆ ಕಾಲಿಟ್ಟ ರಾಹುಲ್‌ ನಟರೂ ಹೌದು. ʼದಿ ಗರ್ಲ್‌ಫ್ರೆಂಡ್‌ʼ ಅವರು ಆ್ಯಕ್ಷನ್ ಕಟ್‌ ಹೇಳುತ್ತಿರುವ 3ನೇ ಚಿತ್ರ.