Thamma Box Office Collection: ರಶ್ಮಿಕಾ ಮಂದಣ್ಣ ಖಾತೆಗೆ ಮತ್ತೊಂದು ಯಶಸ್ಸು; ವಾರದೊಳಗೆ 130 ಕೋಟಿ ರೂ. ಗಳಿಸಿದ ʼಥಮ್ಮʼ
Rashmika Mandanna: 'ಥಮ್ಮʼ ಬಾಲಿವುಡ್ ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ಅವರಿಗೆ ಮತ್ತೊಂದು ಭರ್ಜರಿ ಯಶಸ್ಸು ಸಿಕ್ಕಿದೆ. ಆಯುಷ್ಮಾನ್ ಖುರಾನ-ರಶ್ಮಿಕಾ ಮಂದಣ್ಣ ಮೊದಲ ಕಾಂಬಿನೇಷನ್ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿದೆ. ದೀಪಾವಳಿ ವೇಳೆ ರಿಲೀಸ್ ಆದ ಈ ಹಾರರ್-ರೊಮ್ಯಾಂಟಿಕ್ ಸಿನಿಮಾ 1 ವಾರದಲ್ಲಿ ಜಾಗತಿಕವಾಗಿ 130 ಕೋಟಿ ರೂ. ಗಳಿಸಿದೆ.
ʼಥಮ್ಮʼ ಚಿತ್ರದ ಪೋಸ್ಟರ್ -
Ramesh B
Oct 28, 2025 5:56 PM
ಮುಂಬೈ, ಆ. 28: ಸ್ಯಾಂಡಲ್‌ವುಡ್ ಮೂಲಕ ಚಿತ್ರರಂಗ ಪ್ರವೇಶಿಸಿ ಟಾಲಿವುಡ್‌ನಲ್ಲಿ ಛಾಪು ಮೂಡಿಸಿ ಇದೀಗ ಬಾಲಿವುಡ್‌ನಲ್ಲಿ ಬೀಡು ಬಿಟ್ಟಿರುವ ರಶ್ಮಿಕಾ ಮಂದಣ್ಣಗೆ (Rashmika Mandanna) ಮತ್ತೊಂದು ಭರ್ಜರಿ ಯಶಸ್ಸು ಸಿಕ್ಕಿದೆ. ಆಯುಷ್ಮಾನ್ ಖುರಾನ (Ayushmann Khurrana)-ರಶ್ಮಿಕಾ ಮಂದಣ್ಣ ಮೊದಲ ಕಾಂಬಿನೇಷನ್ ʼಥಮ್ಮʼ ಬಾಲಿವುಡ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿದೆ. ದೀಪಾವಳಿ ವೇಳೆ ರಿಲೀಸ್ ಆದ ಈ ಹಾರರ್-ರೊಮ್ಯಾಂಟಿಕ್ ಸಿನಿಮಾ 1 ವಾರದಲ್ಲಿ ಜಾಗತಿಕವಾಗಿ 130 ಕೋಟಿ ರೂ. ಗಳಿಸಿದೆ (Thamma Box Office Collection). ಮೊದಲ ಬಾರಿ ಹಾರರ್ ಚಿತ್ರದಲ್ಲಿ ನಟಿಸಿದ ರಶ್ಮಿಕಾ ಗೆಲುವಿನ ನಗೆ ಬೀರಿದ್ದಾರೆ.
ಅಕ್ಟೋಬರ್ 27ರಂದು ಚಿತ್ರ ರಿಲೀಸ್ ಆಗಿ 7 ದಿನವಾಗಿದ್ದು, ಭಾರತದಲ್ಲಿ 95.60 ಕೋಟಿ ರೂ. ಮತ್ತು ಜಾಗತಿಕವಾಗಿ 130.85 ಕೋಟಿ ರೂ. ದೋಚಿಕೊಂಡಿದೆ. ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣದ ಈ ಚಿತ್ರಕ್ಕೆ ಹಾರರ್ ಸಿನಿಮಾದ ಮೂಲಕ ಬಾಲಿವುಡ್‌ನಲ್ಲಿ ಹೊಸದೊಂದು ಟ್ರಂಡ್ ಹುಟ್ಟು ಹಾಕಿರುವ ಆದಿತ್ಯ ಸರ್ಪೋದಾರರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ʼಥಮ್ಮʼ ಚಿತ್ರದ ಟ್ರೈಲರ್:
ಮ್ಯಾಡಾಕ್ ಹಾರರ್ ಕಾಮಿಡಿ ಯೂನಿವರ್ಸ್ (MHCU) ಭಾಗವಾದ ಈ ಚಿತ್ರದಲ್ಲಿ ರಶ್ಮಿಕಾ ದೆವ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಕಥೆ ಕ್ರಿ.ಪೂ. 323ನೇ ಇಸವಿಯಲ್ಲಿ ಆರಂಭವಾಗುತ್ತದೆ. ಮೊದಲು ಪ್ರೇಕ್ಷಕರಿಗೆ ಹಲವು ವರ್ಷಗಳ ಕಾಲ ಜೈಲಿನಲ್ಲಿದ್ದ ಯಕ್ಷಾಸನ್ (ನವಾಝುದ್ದೀನ್ ಸಿದ್ದಿಖಿ)ನ ಪರಿಚಯವಾಗುತ್ತದೆ. ಬಳಿಕ ಪತ್ರಕರ್ತ ಅಲೋಕ್ ಗೋಯಲ್ (ಆಯುಷ್ಮಾನ್ ಖುರಾನಾ) ಕಂಡುಬರುತ್ತಾನೆ. ಸುದ್ದಿಯನ್ನು ಹುಡುಕುತ್ತ ಅಲೋಕ್ ಕಾಡಿಗೆ ತೆರಳುತ್ತಾನೆ. ಅಲ್ಲಿ ತಡಕಾ (ರಶ್ಮಿಕಾ ಮಂದಣ್ಣ)ನನ್ನು ಭೇಟಿಯಾಗುತ್ತಾನೆ. ಬಳಿಕ ಇಬ್ಬರೂ ಪರಸ್ಪರ ಪ್ರೀತಿಸತೊಡಗುತ್ತಾರೆ. ಅಷ್ಟಕ್ಕೂ ತಡಕಾ ಯಾರು? ಆಕೆಯ ಹಿನ್ನೆಲೆ ಏನು? ಎನ್ನುವುದೇ ಸಸ್ಪೆನ್ಸ್. ಹಲವು ತಿರುವು, ಟ್ವಿಸ್ಟ್‌ಗಳ ಮೂಲಕ ಚಿತ್ರ ಸಾಗುತ್ತದೆ.
ವಿಶೇಷ ಎಂದರೆ ರಶ್ಮಿಕಾ ಮಂದಣ್ಣ ಅವರ ಪಾತ್ರಕ್ಕೆ ಚಿತ್ರದಲ್ಲಿ ಸಾಕಷ್ಟು ಸ್ಕ್ರೀನ್ ಸ್ಪೇಸ್ ಸಿಕ್ಕಿದ್ದು ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಬೋಲ್ಡಾಗಿ ಕಾಣಿಸಿಕೊಂಡಿದ್ದು, ಹಾಡಿನಲ್ಲಿ ಗ್ಲಾಮರ್ ಅವತಾರಣದಲ್ಲಿ ಮೈ ಚಳಿ ಬಿಟ್ಟು ಸೊಂಟ ಬಳುಕಿಸಿದ್ದಾರೆ.
ದಾಖಲೆಯ ಸಂಭಾವನೆ ಪಡೆದ ರಶ್ಮಿಕಾ
ಚಿತ್ರಕ್ಕಾಗಿ ರಶ್ಮಿಕಾ ದಾಖಲೆಯ ಸಂಭಾವನೆ ಪಡೆದಿದ್ದಾರೆ. ತಡಕಾ ಪಾತ್ರಕ್ಕಾಗಿ ಅವರು 5-7 ಕೋಟಿ ರೂ. ಜೇಬಿಗಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ಆಯುಷ್ಮಾನ್ ಖುರಾನ ಅವರಿಗೆ 8-10 ಕೋಟಿ ರೂ. ಸಂಭಾವನೆ ಸಂದಿದೆ.
ಸೋಲಿನ ಸರಪಳಿಯಿಂದ ಹೊರ ಬಂದ ರಶ್ಮಿಕಾ
ಕೆಲವು ವರ್ಷಗಳಿಂದ ಸತತ ಗೆಲುವು ದಾಖಲಿಸಿದ್ದ ರಶ್ಮಿಕಾ ಮಾರ್ಚ್‌ನಲ್ಲಿ ರಿಲೀಸ್ ಆಗಿದ್ದ ಬಾಲಿವುಡ್‌ನ ʼಸಿಕಂದರ್ʼ ಚಿತ್ರದ ಮೂಲಕ ಸೋಲಿನ ರುಚಿ ನೋಡಿದ್ದರು. ಅದಾದ ಬಳಿಕ ತೆರೆ ಕಂಡ ಧನುಷ್ ಜತೆಗಿನ ತಮಿಳು ಸಿನಿಮಾ ʼಕುಬೇರʼ ಬಾಕ್ಸ್ ಆಫೀಸ್‌ನಲ್ಲಿ ಗೆಲುವು ದಾಖಲಿಸಿತ್ತು. ಇದೀಗ ʼಥಮ್ಮʼ ಕೂಡ ಗೆಲುವಿನ ಹಾದಿಯಲ್ಲಿ ಮುನ್ನಡೆಯುತ್ತಿದ್ದು, ರಶ್ಮಿಕಾ ಮತ್ತೊಮ್ಮೆ ಲಕ್ಕಿ ಚಾರ್ಮ್ ಎನಿಸಿಕೊಂಡಿದ್ದಾರೆ. ಜತೆಗೆ ಸೋಲಿನ ಸರಪಳಿಯಿಂದ ಹೊರ ಬಂದಿದ್ದಾರೆ. ಇನ್ನು ಅವರ ತೆಲುಗು ಚಿತ್ರ ʼದಿ ಗರ್ಲ್‌ಫ್ರೆಂಡ್ʼ ಈ ವರ್ಷವೇ ತೆರೆಗೆ ಬರಲಿದ್ದು, ಅದರ ಮೇಲೂ ನಿರೀಕ್ಷೆ ಮೂಡಿದೆ. ಇದರಲ್ಲಿ ನಾಯಕನಾಗಿ ಸ್ಯಾಂಡಲ್‌ವುಡ್ ನಟ ದೀಕ್ಷಿತ್ ಶೆಟ್ಟಿ ನಟಿಸಿದ್ದಾರೆ. ಈಗಾಗಲೇ ಹೊರಬಿದ್ದಿರುವ ಟ್ರೈಲರ್ ಗಮನ ಸೆಳೆದಿದೆ.