Year Ender 2025: ಟಾಲಿವುಡ್‌ನಲ್ಲಿ ಸಣ್ಣ ಬಜೆಟ್ ಸಿನಿಮಾಗಳ ಮ್ಯಾಜಿಕ್; ಈ ವರ್ಷ ಬ್ಲಾಕ್ ಬ್ಲಸ್ಟರ್ ಗೆಲುವು ಕಂಡ ಚಿತ್ರಗಳಿವು!
Tollywood Box Office Collection 2025: ತೆಲುಗು ಚಿತ್ರರಂಗದಲ್ಲಿ ಸಣ್ಣ ಬಜೆಟ್‌ನ 2 ಸಿನಿಮಾಗಳು ಅಚ್ಚರಿಯ ಮ್ಯಾಜಿಕ್ ಮಾಡಿವೆ. ಕೇವಲ 2.50 ಕೋಟಿ ರೂ.ನಲ್ಲಿ ತಯಾರಾದ 'ಲಿಟ್ಲ್ ಹಾರ್ಟ್ಸ್' ಮತ್ತು 4 ಕೋಟಿ ಬಜೆಟ್‌ನ 'ಕೋರ್ಟ್' ಸಿನಿಮಾ ಕ್ರಮವಾಗಿ 40 ಕೋಟಿ ಹಾಗೂ 60 ಕೋಟಿ ಗಳಿಸಿ ಹೊಸ ಇತಿಹಾಸ ಬರೆದಿವೆ. ಕಂಟೆಂಟ್ ಚೆನ್ನಾಗಿದ್ದರೆ ಪ್ರೇಕ್ಷಕರು ಕೈಹಿಡಿಯುತ್ತಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ.
-
ಟಾಲಿವುಡ್‌ನಲ್ಲಿ 2025ರಲ್ಲಿ ಸಾಕಷ್ಟು ಉತ್ತಮ ಲಾಭ ಸಿಕ್ಕಿದೆ ಎಂದು ಹೇಳಬಹುದು. ಈ ವರ್ಷ ತೆಲುಗಿನಲ್ಲಿ 275+ ಸಿನಿಮಾಗಳು ತೆರೆಕಂಡಿವೆ. ಬಾಕ್ಸ್ ಆಫೀಸ್‌ನಲ್ಲಿ ಸುಮಾರು 2500+ ಕೋಟಿ ರೂ. ವ್ಯವಹಾರ ನಡೆದಿದೆ. ಸಂಕ್ರಾಂತಿಕಿ ವಸ್ತುನಂ, ದೇ ಲಾಕ್ ಹಿಮ್ ಓಜಿ, ಹಿಟ್ 3, ಡಾಕು ಮಹಾರಾಜ್, ಕುಬೇರ ಥರದ ಸಿನಿಮಾಗಳು ದೊಡ್ಡ ಸದ್ದು ಮಾಡಿವೆ. ಗೇಮ್ ಚೇಂಜರ್, ಅಖಂಡ 2 ಥರದ ಬಿಗ್ ಬಜೆಟ್ ಸಿನಿಮಾಗಳು ತೆರೆಕಂಡಿವೆ. ಈ ಮಧ್ಯೆ ಸಣ್ಣ ಬಜೆಟ್‌ನಲ್ಲಿ ತಯಾರಾಗಿ ದೊಡ್ಡ ಗೆಲುವು ಪಡೆದ ಎರಡು ಸಿನಿಮಾಗಳು ಟಾಲಿವುಡ್‌ಗೆ ಹೊಸ ದಿಕ್ಕು ಮೂಡಿಸಿವೆ. ಯಾವುವು ಆ ಸಿನಿಮಾಗಳು? ಮುಂದೆ ಓದಿ.
ಲಿಟ್ಲ್ ಹಾರ್ಟ್ಸ್ ಸಿನಿಮಾಗೆ ದೊಡ್ಡ ಗೆಲುವು
ಯೂಟ್ಯೂಬರ್ ಮೌಳಿ ತನುಜ್ ಪ್ರಶಾಂತ್ ಮತ್ತು ಶಿವಾನಿ ನಗರಂ ನಟನೆಯ ಲಿಟ್ಲ್ ಹಾರ್ಟ್ಸ್ ಸಿನಿಮಾವು 2.50 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿತ್ತು. ಸಾಯಿ ಮಾರ್ತಾಂಡ್ ನಿರ್ದೇಶನ ಮಾಡಿದ್ದ ಈ ಸಿನಿಮಾವನ್ನು ಆದಿತ್ಯ ಹಾಸನ್ ಅವರು ನಿರ್ಮಾಣ ಮಾಡಿದ್ದರು. ಈ ಹಿಂದೆ ಮೌಳಿ ತನುಜ್ ಜೊತೆಗೆ 90ಸ್ ಮಿಡಲ್ ಕ್ಲಾಸ್ ವೆಬ್ ಸರಣಿಯನ್ನು ನಿರ್ದೇಶಿಸಿದ್ದ ಆದಿತ್ಯ ಹಾಸನ್, ಮೌಳಿಯನ್ನು ಹೀರೋ ಮಾಡಿ ಲಿಟ್ಲ್ ಹಾರ್ಟ್ಸ್ ಸಿನಿಮಾ ನಿರ್ಮಾಣ ಮಾಡಿದ್ದರು. 2.50 ಕೋಟಿ ರೂ. ಬಜೆಟ್‌ನ ಈ ಸಿನಿಮಾವು ಸುಮಾರು 40+ ಕೋಟಿ ರೂ. ಗಳಿಕೆ ಮಾಡಿದ್ದು ವಿಶೇಷ.
ಈ ಸಿನಿಮಾವು ಎಲ್ಲಾ ವಯೋಮಾನದ ಪ್ರೇಕ್ಷಕರನ್ನು ಸೆಳೆದುಕೊಂಡು, ದೊಡ್ಡ ಗೆಲುವು ಪಡೆದುಕೊಂಡಿತು. ಯಾವುದೇ ಜನಪ್ರಿಯ ಕಲಾವಿದರು ಇಲ್ಲದೆಯೂ, ಬರೀ ಕಂಟೆಂಟ್ ಮತ್ತು ಎಮೋಷನ್ಸ್ ಮೂಲಕ ಆಡಿಯನ್ಸ್‌ನ ಥಿಯೇಟರ್‌ಗೆ ಕರೆಸಿಕೊಂಡಿದ್ದು ಈ ಸಿನಿಮಾದ ಸಾಧನೆ. ವ್ಯವಹಾರದ ವಿಚಾರದಲ್ಲಿ ಟಾಲಿವುಡ್‌ನ ಹಲವು ದೊಡ್ಡ ಸಿನಿಮಾಗಳನ್ನು ಲಿಟ್ಲ್ ಹಾರ್ಟ್ಸ್ ಹಿಂದೆ ಹಾಕಿದೆ.
ಕೋರ್ಟ್‌ನಿಂದ ಬಂತು ದೊಡ್ಡ ಲಾಭ
ರಾಮ್ ಜಗದೀಶ್ ನಿರ್ದೇಶನ ಮಾಡಿದ್ದ ʻಕೋರ್ಟ್: ಸ್ಟೇಟ್ vs ಎ ನೋಬಡಿʼ ಸಿನಿಮಾ ಕೂಡ ದೊಡ್ಡ ಗೆಲುವನ್ನು ಕಂಡಿತು. ತೆಲುಗು ನಟ ನಾನಿ ಇದರ ನಿರ್ಮಾಣ ಮಾಡಿದ್ದರು. 4 ಕೋಟಿ ರೂ. ಬಜೆಟ್‌ನ ಈ ಸಿನಿಮಾದ ಮೇಲೆ ನಾನಿಗೆ ಯಾವ ಮಟ್ಟದ ನಂಬಿಕೆ ಇತ್ತು ಎಂದರೆ, "ನಿಮಗೆ ಕೋರ್ಟ್ ಸಿನಿಮಾ ಇಷ್ಟವಾಗದಿದ್ದರೆ, ನನ್ನ ಮುಂಬರುವ ಚಿತ್ರ ಹಿಟ್ 3 ಚಿತ್ರವನ್ನು ನೋಡಬೇಡಿ" ಎಂದು ಹೇಳಿದ್ದರು ನಾನಿ.
ಆದರೆ ಕೋರ್ಟ್ ಸಿನಿಮಾ ದೊಡ್ಡ ಹಿಟ್ ಆಯಿತು. 60 ಕೋಟಿ ರೂ. ವರೆಗೂ ಗೆಲುವು ತಂದುಕೊಟ್ಟಿತ್ತು. ಪ್ರಿಯಾದರ್ಶಿ ಪುಲಿಕೊಂಡ, ಸಾಯಿಕುಮಾರ್, ಶಿವಾಜಿ, ರೋಹಿಣಿ ಥರದ ಅನುಭವಿ ಕಲಾವಿದರು ಪೋಷಕ ಪಾತ್ರಗಳಲ್ಲಿದ್ದರೆ, ಹೊಸ ಮುಖಗಳಾದ ಹರ್ಷ್ ರೋಷನ್ ಮತ್ತು ಶ್ರೀದೇವಿ ಅಪಲ್ಲಾ ಅವರು ಲೀಡ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದರು.