ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತದ ಬಾಕ್ಸ್ ಆಫೀಸ್‌ನಲ್ಲಿ ‘ಸ್ಪೈಡರ್-ಮ್ಯಾನ್’ ಹವಾ ಜೋರು: ಮೊದಲ ದಿನವೇ ದಾಖಲೆಯ ಕಲೆಕ್ಷನ್‌, ಕರ್ನಾಟಕದಲ್ಲೂ ಅಬ್ಬರಿಸಿದ ಪೀಟರ್ ಪಾರ್ಕರ್!

ಟಾಮ್ ಹಾಲೆಂಡ್ ಮತ್ತು ಝೆಂಡಾಯ ನಟನೆಯ ‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರವು ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಬರೋಬ್ಬರಿ 72.44 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ 'ಅವೇಂಜರ್ಸ್: ಎಂಡ್‌ಗೇಮ್' (65 ಕೋಟಿ ರೂ.) ದಾಖಲೆಯನ್ನು ಧೂಳೀಪಟ ಮಾಡಿದೆ.

Tom Holland starrer Spider Man Brand New Day movie India box office collection day 1

ಟಾಮ್ ಹಾಲೆಂಡ್ ಮತ್ತು ಝೆಂಡಾಯ ಅಭಿನಯದ ಬಹುನಿರೀಕ್ಷಿತ ಮಾರ್ವೆಲ್ ಸೂಪರ್‌ಹೀರೋ ಸಿನಿಮಾ ‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ (Spider-Man: Brand New Day) ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಧೂಳೆಬ್ಬಿಸಿದೆ. ಬಿಡುಗಡೆಯಾದ ಮೊದಲ ದಿನವೇ ದೇಶಾದ್ಯಂತ ಬರೋಬ್ಬರಿ 72.44 ರೂ. ಕೋಟಿ ಕಲೆಕ್ಷನ್ ಮಾಡುವ ಮೂಲಕ ಭಾರತದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ.

'ಅವೇಂಜರ್ಸ್: ಎಂಡ್‌ಗೇಮ್' ದಾಖಲೆ ಪತನ

ಈ ಬಂಪರ್ ಓಪನಿಂಗ್‌ನೊಂದಿಗೆ, 2019 ರಿಂದ ಭಾರತದಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಹಾಲಿವುಡ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ 'ಅವೇಂಜರ್ಸ್: ಎಂಡ್‌ಗೇಮ್' (65 ಕೋಟಿ ರೂ.) ಚಿತ್ರದ ದಾಖಲೆಯನ್ನು 'ಸ್ಪೈಡರ್-ಮ್ಯಾನ್' ಪತನಗೊಳಿಸಿದೆ. ಈ ಮೂಲಕ ಭಾರತದಲ್ಲಿ ಸಾರ್ವಕಾಲಿಕ ಅತಿ ದೊಡ್ಡ ಓಪನಿಂಗ್ ಪಡೆದ ಹಾಲಿವುಡ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೊದಲ ದಿನ ಸುಮಾರು 17,250 ಶೋಗಳಲ್ಲಿ ಪ್ರದರ್ಶನ ಕಂಡ ಈ ಸಿನಿಮಾವು ಶೇ. 72.30 ರಷ್ಟು ಆಕ್ಯುಪೆನ್ಸಿ ದಾಖಲಿಸಿದೆ. ಗಳಿಕೆಯಲ್ಲಿ ಇಂಗ್ಲಿಷ್ ವರ್ಷನ್‌ ಕೊಡುಗೆ ಸಿಂಹಪಾಲು ನೀಡಿದ್ದು, ಶೇ. 55 ರಷ್ಟು ಆಕ್ಯುಪೆನ್ಸಿಯೊಂದಿಗೆ 32.25 ಕೋಟಿ ರೂ. ನೆಟ್ ಗಳಿಸಿದೆ. ಆದರೆ, ಹಿಂದಿಗೆ ಡಬ್ ಆದ ಆವೃತ್ತಿಯು ಶೇ. 95 ರಷ್ಟು ದಾಖಲೆಯ ಆಕ್ಯುಪೆನ್ಸಿಯೊಂದಿಗೆ ಸರಿಸುಮಾರು 22 ಕೋಟಿ ರೂ. ನೆಟ್ ಗಳಿಸಿ ದಾಖಲೆ ಬರೆದಿದೆ. ತಮಿಳು ಮತ್ತು ತೆಲುಗು ಆವೃತ್ತಿಗಳು ಕೂಡ ದೇಶಾದ್ಯಂತದ ಗಳಿಕೆಗೆ ಉತ್ತಮ ಕೊಡುಗೆ ನೀಡಿವೆ. ತಮಿಳು ಆವೃತ್ತಿಯು ಸುಮಾರು 3 ಕೋಟಿ ರೂ. ಕಲೆಹಾಕಿದರೆ, ತೆಲುಗು ಪ್ರದರ್ಶನಗಳಿಂದ ಸರಿಸುಮಾರು 3.25 ಕೋಟಿ ರೂ. ಹರಿದುಬಂದಿದೆ. ಒಟ್ಟಾರೆ ಗಳಿಕೆಯು 70 ಕೋಟಿ ರೂ. ದಾಟಿದೆ.

ಕರ್ನಾಟಕದಲ್ಲಿ ದಾಖಲೆ ಗಳಿಕೆ

'ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಸಿನಿಮಾವು ಕರ್ನಾಟಕ ಒಂದರಲ್ಲೇ ಮೊದಲ ದಿನ ₹8.90 ಕೋಟಿ ಗಳಿಸುವ ಮೂಲಕ, ರಾಜ್ಯದಲ್ಲಿ ಹಾಲಿವುಡ್ ಚಿತ್ರವೊಂದರ ಸಾರ್ವಕಾಲಿಕ ಗರಿಷ್ಠ ಓಪನಿಂಗ್ ಕಲೆಕ್ಷನ್ ದಾಖಲಿಸಿದೆ. ಕರುನಾಡಿನಲ್ಲಿ ಕನ್ನಡ ಸಿನಿಮಾಗಳಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಓಪನಿಂಗ್‌ ಈ ವರ್ಷ ಸಿಕ್ಕಿಲ್ಲ. ಆದರೆ, 'ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಸಿನಿಮಾವು ಉತ್ತಮ ರೆಸ್ಪಾನ್ಸ್‌ ಪಡೆದುಕೊಂಡಿದೆ.

ಬುಕ್‌ಮೈಶೋನಲ್ಲಿ 'ದಿ ಒಡಿಸ್ಸಿ' ಹಿಂದಿಕ್ಕಿದ ಸ್ಪೈಡರ್-ಮ್ಯಾನ್

ಆನ್‌ಲೈನ್ ಟಿಕೆಟ್ ಬುಕಿಂಗ್ ತಾಣ 'ಬುಕ್‌ಮೈಶೋ'ನಲ್ಲಿ ಮೊದಲ ದಿನದ ಟಿಕೆಟ್ ಮಾರಾಟದಲ್ಲಿ ಕ್ರಿಸ್ಟೋಫರ್ ನೋಲನ್ ಅವರ 'ದಿ ಒಡಿಸ್ಸಿ' ಚಿತ್ರದ ದಾಖಲೆಯನ್ನು ಈ ಸಿನಿಮಾ ಹಿಂದಿಕ್ಕಿದೆ. 'ದಿ ಒಡಿಸ್ಸಿ' ಚಿತ್ರದ 2.71 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದರೆ, 'ಸ್ಪೈಡರ್-ಮ್ಯಾನ್' ಮಧ್ಯಾಹ್ನದ ವೇಳೆಗೆ ಬರೋಬ್ಬರಿ 3.70 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಸೇಲ್ ಮಾಡಿ ಮುನ್ನುಗ್ಗಿದೆ.

ಡೆಸ್ಟಿನ್ ಡೇನಿಯಲ್ ಕ್ರೆಟನ್ ನಿರ್ದೇಶನದ ಈ ಚಿತ್ರದಲ್ಲಿ, ಡಾಕ್ಟರ್ ಸ್ಟ್ರೇಂಜ್ ಅವರ ಮಾಂತ್ರಿಕ ಮಂತ್ರದಿಂದಾಗಿ ಪ್ರತಿಯೊಬ್ಬರ ನೆನಪಿನಿಂದ ಪೀಟರ್ ಪಾರ್ಕರ್ ಗುರುತು ಅಳಿಸಿಹೋದ ನಂತರದ ಕಥೆಯನ್ನು ಪ್ರಸ್ತುತಪಡಿಸಲಾಗಿದೆ. ಯಾರೂ ಗುರುತಿಸದ ಸಾಮಾನ್ಯ ಜೀವನ ನಡೆಸುವ ಪೀಟರ್, ತನ್ನ ಸೂಪರ್ ಪವರ್‌ಗಳ ಅಪಾಯಕಾರಿ ರೂಪಾಂತರದ ನಡುವೆಯೂ ನ್ಯೂಯಾರ್ಕ್ ನಗರವನ್ನು ರಕ್ಷಿಸುವ ರೋಚಕ ಸನ್ನಿವೇಶಗಳು ಚಿತ್ರದಲ್ಲಂತಿವೆ.

Rishab Shetty: ಹಾಲಿವುಡ್‌ನಲ್ಲಿ ಮಿಂಚಿದ ರಿಷಬ್ ಶೆಟ್ಟಿ! ಸ್ಪೈಡರ್ ಮ್ಯಾನ್ ಜೊತೆ ಡಿವೈನ್ ಸ್ಟಾರ್

ಪೀಟರ್ ಪಾರ್ಕರ್ ಆಗಿ ಟಾಮ್ ಹಾಲೆಂಡ್ ಮತ್ತು ಝೆಂಡಾಯ ಜೊತೆಗೆ ಸಾಡಿ ಸಿಂಕ್, ಜಾನ್ ಬರ್ನ್‌ಥಾಲ್ ಮತ್ತು ಮಾರ್ಕ್ ರಫಲೋ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಸ್ಪೈಡರ್-ಮ್ಯಾನ್ ಅಬ್ಬರ ಹೀಗೆಯೇ ಮುಂದುವರಿದರೆ, ಮೊದಲ ವಾರಾಂತ್ಯದಲ್ಲೇ ₹200 ಕೋಟಿ ಕ್ಲಬ್ ಸೇರುವ ಸಾಧ್ಯತೆಯಿದೆ.