ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಬಹುನಿರೀಕ್ಷಿತ ಮೊದಲ ಹಾಡು 'ತಬಾಹಿ' (Tabaahi) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಸದ್ಯ ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ಮಾಡಿರುವ ಹಾಡಿನ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿ ಹಚ್ಚಿದ್ದು, ಯಶ್ ನಟಿಯೊಬ್ಬರನ್ನು ಹೊತ್ತುಕೊಂಡು ಹೋಗುತ್ತಿರುವಂತೆ ಈ ಪೋಸ್ಟರ್ ಡಿಸೈನ್ ಮಾಡಲಾಗಿದೆ. ಆದರೆ ಆ ನಟಿಯು ಮುಖವನ್ನು ತೋರಿಸಿಲ್ಲ. ಹಾಗಾದರೆ, ಆ ನಟಿ ಯಾರು? ಕಿಯಾರಾ ಅಡ್ವಾಣಿ! ಹೌದು, ಈ ಪೋಸ್ಟರ್‌ನಲ್ಲಿ ಯಶ್ ಮತ್ತು ಕಿಯಾರಾ ನಡುವಿನ ಕೆಮಿಸ್ಟ್ರಿ ಅಭಿಮಾನಿಗಳ ನಿದ್ದೆ ಗೆಡಿಸಿದೆ.
ಪೋಸ್ಟರ್‌ನಲ್ಲಿ ಏನಿದೆ?
ಸಮುದ್ರದ ಅಲೆಗಳ ಅಬ್ಬರದ ನಡುವೆ ಯಶ್ ಮತ್ತು ಕಿಯಾರಾ ಅಡ್ವಾಣಿ ಗಾಢವಾದ ಆಲಿಂಗನದಲ್ಲಿರುವ ದೃಶ್ಯ ಈ ಪೋಸ್ಟರ್‌ನಲ್ಲಿದೆ. ಯಶ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರೆ, ಕಿಯಾರಾ ಬಿಳಿ ಉಡುಪಿನಲ್ಲಿ ಅಷ್ಟೇ ತೀವ್ರವಾಗಿ ಮತ್ತು ಸುಂದರವಾಗಿ ಕಾಣುತ್ತಿದ್ದಾರೆ. ಇದು ಬರೀ ಒಂದು ಹಾಡಿನ ಪೋಸ್ಟರ್ ಅಲ್ಲ, ಅದಕ್ಕಿಂತಲೂ ಹೆಚ್ಚಾಗಿ ಚಿತ್ರದಲ್ಲಿ ಒಂದು ಗಾಢ ಪ್ರೇಮಕಥೆ ಇದೆ ಎಂಬ ಸುಳಿವನ್ನು ಈ ಪೋಸ್ಟರ್ ನೀಡುತ್ತಿದೆ. ಪ್ರೀತಿ, ಆಸೆ ಮತ್ತು ತೀವ್ರತೆಯುಳ್ಳ ಭಾವನೆಗಳ ಸಂಗಮದಂತೆ ಈ ಪೋಸ್ಟರ್ ಮೂಡಿಬಂದಿದೆ.
Dhurandhar 2 vs Toxic: ‘ಟಾಕ್ಸಿಕ್’ ಚಿತ್ರದ ಬಗ್ಗೆ ಹೀಗೆ ಹೇಳೋದಾ ಆರ್ಜಿವಿ? ಗರಂ ಆದ್ರು ಕನ್ನಡಿಗರು
'ತಬಾಹಿ' ಹಾಡಿಗೆ ವಿಶಾಲ್ ಮಿಶ್ರಾ ಮ್ಯೂಸಿಕ್
ಭಾವನಾತ್ಮಕ ಹಾಗೂ ಸೂಪರ್ ಹಿಟ್ ಹಾಡುಗಳನ್ನು ನೀಡುವಲ್ಲಿ ಹೆಸರುವಾಸಿಯಾಗಿರುವ ಬಾಲಿವುಡ್‌ನ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಈ ಹಾಡನ್ನು ಸಂಯೋಜಿಸಿ, ಹಾಡಿದ್ದಾರೆ. ಅವರ ವಿಶಿಷ್ಟ ಕಂಠಸಿರಿಯಲ್ಲಿ ಮೂಡಿಬಂದಿರುವ 'ತಬಾಹಿ' ಹಾಡು ಮಾರ್ಚ್ 2 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಯಶ್ ಅಭಿಮಾನಿಗಳು ಟಾಕ್ಸಿಕ್ ಸಿನಿಮಾದ ಈ ಮೊದಲ ಹಾಡಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಟಾಕ್ಸಿಕ್ ಯಾವಾಗ ಬಿಡುಗಡೆ?
ಟಾಕ್ಸಿಕ್ ಸಿನಿಮಾವು ಮಾರ್ಚ್ 19ರಂದು ಜಾಗತಿಕ ಮಟ್ಟದಲ್ಲಿ ತೆರೆಗೆ ಬರಲು ಸಜ್ಜಾಗಿದ್ದು, ಈಗ ಬಿಡುಗಡೆಯಾಗಿರುವ ಈ ಪೋಸ್ಟರ್ ಚಿತ್ರದ ಮೇಲಿರುವ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸುತ್ತಿರುವ ಈ ಸಿನಿಮಾ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿದ್ದು, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೂ ಡಬ್ ಆಗಿ, ತೆರೆಕಾಣುತ್ತಿದೆ.