ಫೆಬ್ರವರಿಯಲ್ಲಿ ಯಾವುದು ದೊಡ್ಡ ಬಜೆಟ್‌ನ ಪ್ಯಾನ್ ಇಂಡಿಯಾ ಸಿನಿಮಾಗಳ ಬಿಡುಗಡೆಯ ಸದ್ದು ಇಲ್ಲ. ಆದರೆ ಎಲ್ಲರ ಕಣ್ಣು ಈಗ ಯಶ್ ನಟನೆಯ ʻಟಾಕ್ಸಿಕ್ʼ ಮತ್ತು ರಣವೀರ್ ಸಿಂಗ್ ನಟನೆಯ ʻಧುರಂಧರ್ 2ʼ ಚಿತ್ರಗಳ ಮೇಲಿದೆ. ಕಾರಣ, ಇವೆರಡೂ ಪ್ಯಾನ್ ಇಂಡಿಯಾ ಸಿನಿಮಾಗಳು ಮಾರ್ಚ್ 19ರಂದು ಒಟ್ಟಿಗೆ ತೆರೆಗೆ ಬರುತ್ತಿವೆ. ಆದರೆ ಇದೀಗ ಬೇರೆ ಬೇರೆ ನಿರ್ಮಾಪಕರಿಗೆ ಭಯ ಹುಟ್ಟಿಸಿದೆ.
ಬಾಕ್ಸ್ ಆಫೀಸ್ ಬ್ಲಾಸ್ಟ್ ಆಗೋದು ಪಕ್ಕಾ!
ಕೆಜಿಎಫ್ 2 ಬಳಿಕ ಬರುತ್ತಿರುವ ಯಶ್ ನಟನೆಯ ʻಟಾಕ್ಸಿಕ್ʼ ಮೇಲೆ ಎಂಥ ನಿರೀಕ್ಷೆ ಇದೆ ಎಂಬುದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈಗಾಗಲೇ ಟೀಸರ್ ಭಾರಿ ಹವಾ ಮಾಡಿದೆ. ಇದರ ನಡುವೆ ಡಿಸೆಂಬರ್‌ನಲ್ಲಿ ಬಂದ ಧುರಂಧರ್ 1 ಸಿನಿಮಾದ ದಾಖಲೆಯ ಬಗ್ಗೆಯೂ ಸಿನಿಪ್ರಿಯರಿಗೆ ತಿಳಿದಿದೆ ಮತ್ತು ಅದು ʻಧುರಂಧರ್ 2ʼ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಹಾಗಾಗಿ, ಇವೆರಡೂ ಸಿನಿಮಾಗಳು ಒಂದೇ ದಿನ ಬರುವುದರಿಂದ, ಅಂದು ಭಾರತದ ಬಾಕ್ಸ್ ಆಫೀಸ್ ಉಡೀಸ್ ಆಗೋದು ಗ್ಯಾರಂಟಿ.
Yash Toxic teaser: ಯಶ್ ಟಾಕ್ಸಿಕ್ ಟೀಸರ್, ರಣವೀರ್ ಸಿಂಗ್ ಧುರಂಧರ್ ಸಿನಿಮಾ ಟೀಕಿಸಿದ ಖ್ಯಾತ ನಟ
ಸೈಲೆಂಟ್ ಆಗಿ ಪೋಸ್ಟ್‌ಪೋನ್ ಆಗ್ತಿವೆ ಸಿನಿಮಾಗಳು
ಮಾರ್ಚ್ 19ರ ಆಸುಪಾಸಿನಲ್ಲಿಯೇ ಒಂದಷ್ಟು ಬಿಗ್ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದ್ದವು. ಆದರೆ ಇದೀಗ ಆ ಸಿನಿಮಾಗಳು ಸದ್ದಿಲ್ಲದೇ ಪೋಸ್ಟ್‌ಪೋನ್ ಆಗುತ್ತಿವೆ. ಹೊಸ ಹೊಸ ರಿಲೀಸ್ ಡೇಟ್ ಘೋಷಣೆ ಮಾಡುತ್ತಿವೆ. ಯಾವುವು ಆ ಸಿನಿಮಾಗಳು ಮುಂದೆ ಓದಿ.
ಡಕಾಯಿತ್
ನಟ ಅಡಿವಿ ಶೇಷ್ ಅವರು ʻಡಕಾಯಿತ್ʼ ಸಿನಿಮಾವನ್ನು ಮಾರ್ಚ್ 19ರಂದೇ ರಿಲೀಸ್ ಮಾಡೋದಾಗಿ ಹೇಳಿದ್ದರು. ಆದರೆ ಇದೀಗ ಎಲ್ಲವೂ ಬದಲಾಗಿದೆ. ಬಹುಭಾಷೆಯಲ್ಲಿ ತೆರೆಗೆ ಬರಬೇಕಾದ ಈ ಸಿನಿಮಾವನ್ನೀಗ ಪೋಸ್ಟ್ ಪೋನ್ ಮಾಡಲಾಗಿದೆ. "ನಾವೀಗಷ್ಟೇ ಕೊನೆಯ ಹಂತದ ಚಿತ್ರೀಕರಣ ಮುಗಿಸಿದ್ದೇವೆ. ಈ ಕಥೆಗೆ ನಾವು ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಧಾರೆ ಎರೆದಿದ್ದೇವೆ. ಏಪ್ರಿಲ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ" ಎಂದು ಶೇಷ್ ಹೇಳಿದ್ದಾರೆ.
ದಿ ಪ್ಯಾರಡೈಸ್
ನಾನಿ ನಟನೆಯ ದಿ ಪ್ಯಾರಡೈಸ್ ಸಿನಿಮಾ ಮಾರ್ಚ್ 27ರಂದು ತೆರೆಗೆ ಬರಲಿದೆ ಎಂದು ಘೋಷಣೆ ಮಾಡಲಾಗಿತ್ತು. ಟಾಕ್ಸಿಕ್ ಬಂದು ಒಂದೇ ವಾರಕ್ಕೆ ತೆರೆಕಾಣಿಸುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ ಇತ್ತೀಚಿನ ವರದಿಗಳ ಪ್ರಕಾರ ಈ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದೆ. ಚಿತ್ರೀಕರಣ ಇನ್ನೂ ಪೂರ್ಣಗೊಂಡಿಲ್ಲ ಮತ್ತು ಸಾಕಷ್ಟು ಕೆಲಸಗಳು ಬಾಕಿ ಉಳಿದಿವೆ. ಹಾಗಾಗಿ ಜೂನ್ 25ರಂದು ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಲಾಗುತ್ತಿದೆಯಂತೆ.
ಪೆದ್ದಿ
ರಾಮ್ ಚರಣ್ ನಟನೆಯ ಪೆದ್ದಿ ಸಿನಿಮಾದ ಮೇಲೂ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಶಿವರಾಜ್‌ಕುಮಾರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದು, ಮಾ.27ರ ರಾಮ್ ಚರಣ್ ಹುಟ್ಟುಹಬ್ಬಕ್ಕೆ ಈ ಸಿನಿಮಾವನ್ನು ರಿಲೀಸ್ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ಆದರೆ ಇದೀಗ ಅದು ಏಪ್ರಿಲ್ 30ಕ್ಕೆ ಶಿಫ್ಟ್ ಆಗಿದೆ. ಒಟ್ಟಿನಲ್ಲಿ ಈ ಮೂರು ಪ್ಯಾನ್ ಇಂಡಿಯಾ ಸಿನಿಮಾಗಳು ಟಾಕ್ಸಿಕ್ - ಧುರಂಧರ್ 2 ಸಹವಾಸವೇ ಬೇಡ ಎಂದು ಮಾರ್ಚ್ ತಿಂಗಳಿನಿಂದಲೇ ಜಾಗ ಖಾಲಿ ಮಾಡಿವೆ.
ಅಖಾಡಕ್ಕಿಳಿದ ಪವನ್ ಕಲ್ಯಾಣ್
ಈ ಮಧ್ಯೆ ಸಡನ್ ಆಗಿ ಪವನ್ ಕಲ್ಯಾಣ್ ನಟನೆಯ ಉಸ್ತಾದ್ ಭಗತ್ ಸಿಂಗ್ ಮಾರ್ಚ್‌ಗೆ ಎಂಟ್ರಿ ಕೊಟ್ಟಿದೆ. ಪೆದ್ದಿ ಜಾಗಕ್ಕೆ ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ ಉಸ್ತಾದ್ ಭಗತ್ ಸಿಂಗ್ ಸಿನಿಮಾವನ್ನ ರಿಲೀಸ್ ಮಾಡಲಿದೆ. ಅಂದಹಾಗೆ, ಟಾಕ್ಸಿಕ್ ಮತ್ತು ಧುರಂಧರ್ 2 ಸಿನಿಮಾಗಳಿಂದ ಉಸ್ತಾದ್ ಭಗತ್ ಸಿಂಗ್ ಚಿತ್ರಕ್ಕೆ ಅಷ್ಟೇನೂ ತೊಂದರೆ ಇಲ್ಲ. ಯಾಕೆಂದರೆ, ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಅಲ್ಲದೆ, ಈ ಚಿತ್ರದ ಮೂಲ ಆಡಿಯೆನ್ಸ್ ತೆಲುಗು ರಾಜ್ಯಗಳಲ್ಲಿ ಹೆಚ್ಚು. ಹಾಗಾಗಿ, ಈ ತಂತ್ರವನ್ನು ನಿರ್ಮಾಪಕರು ಫಾಲೋ ಮಾಡಿದ್ದಾರೆ.