ಸ್ಯಾಂಡಲ್‌ವುಡ್‌ನಲ್ಲಿ ಎರಡು ವಾರಗಳ ಹಿಂದಷ್ಟೇ ʻವಲವಾರʼ ಎಂಬ ಸಿನಿಮಾವೊಂದು ತೆರೆಗೆ ಬಂದಿದೆ. ಸಿನಿಮಾ ನೋಡಿದವರಿಂದ, ವಿಮರ್ಶಕರಿಂದ ಭಾರಿ ಮೆಚ್ಚುಗೆ ಪಡೆದಿರುವ ವಲವಾರ ಚಿತ್ರಕ್ಕೆ ಪ್ರೇಕ್ಷಕರಿಂದ ನಿರೀಕ್ಷಿತ ಪ್ರೀತಿ ಸಿಕ್ಕಿಲ್ಲ. ಹಾಗಾಗಿ, ಸದ್ಯ ಎರಡೇ ಎರಡು ಶೋಗಳಲ್ಲಿ ಈ ಚಿತ್ರ ಪ್ರದರ್ಶನವಾಗುತ್ತಿದೆ. ಈ ಬಗ್ಗೆ ಅಳಲು ತೋಡಿಕೊಂಡಿರುವ ನಿರ್ದೇಶಕ ಸುತನ್ ಗೌಡ, "ಒಂದೊಳ್ಳೆಯ ಸಿನಿಮಾ ಅನ್ನಿಸ್ಕೊಂಡಿರುವ ʻವಲವಾರʼವನ್ನು ಹೆಂಗ್ ಕೈ ಬಿಡ್ತೀರಾ..." ಎಂದು ಪ್ರಶ್ನೆ ಮಾಡಿದ್ದಾರೆ.
ಸಿನಿಮಾ ಅನ್ನೋದು ಜನಕ್ಕೆ ಅತ್ಯಗತ್ಯ ಅಲ್ಲ!
"ವಲವಾರ ತಮಿಳೋ ಮಲಯಾಳಮ್ಮೋ ಸಿನಿಮಾ ಆಗಿದಿದ್ರೆ, ನಮ್ ಜನ ಮುಗಿಬಿದ್ದು ನೋಡ್ತಿದ್ರು ಅಂತ ಚಿತ್ರಮಂದಿರಗಳಲ್ಲಿ ಸಿಕ್ಕ ಕೆಲವು ಪ್ರೇಕ್ಷಕರು ಹೇಳುತ್ತಿರುತ್ತಾರೆ. ನಂಗೆ ಗೊತ್ತು, ಸಿನಿಮಾ ಅನ್ನೋದು ಜನಕ್ಕೆ ಅತ್ಯಗತ್ಯ ಅಲ್ಲ. ಅದೂ ಈಗ ಬೆರಳ ತುದಿಯಲ್ಲೇ ಬೆಟ್ಟದಷ್ಟು ಮನರಂಜನೆ ಸಿಗುವಾಗ! ಆದ್ರೂ ಕನ್ನಡದವರು, ಒಂದೊಳ್ಳೆಯ ಸಿನಿಮಾ ಅನ್ನಿಸ್ಕೊಂಡಿರುವ ಸಿನಿಮಾವನ್ನ ಹೆಂಗ್ ಕೈ ಬಿಡ್ತೀರಾ..." ಎಂದು ಪ್ರಶ್ನೆ ಮಾಡಿದ್ದಾರೆ ಸುತನ್ ಗೌಡ.
Valavaara Review: ತಂಗಾಳಿಯಂತೆ ಹೃದಯ ಸೋಕುವ ಕುಂಡೇಸಿಯ ಪುಟ್ಟ ಪ್ರಪಂಚ
ಹಾಗೆ ಮಾತ್ರ ಹೇಳಬೇಡಿ ಪ್ಲೀಸ್
"ನಿಜ ಹೇಳ್ತಿನಿ, ನಂಗ್ಯಾರೂ ನೀನು ಸಿನಿಮಾ ಮಾಡ್ಲಿಲ್ಲ ಅಂದ್ರೆ ನಾವ್ ಬದುಕಲ್ಲ ಅಂತ ಹೇಳಿಲ್ಲ.. ಕನ್ನಡ ಹಾಗೂ ಸಿನಿಮಾ ಅನ್ನೋದು ನನ್ನ ಉಸಿರು. ಹದಿಮೂರು ವರ್ಷದಿಂದ ಇಲ್ಲಿ ಅಕ್ಷರಶಃ ಒಂದ್ ರೂಪಾಯಿನೂ (ಈ ಸಿನಿಮಾದಲ್ಲೂ ಕೂಡ) ಇಲ್ಲದೆ ತಾಳ್ಮೆಯಿಂದ ಕಲಿತು, ಕಾಯ್ದು, ಪ್ರಾಮಾಣಿಕವಾಗಿ ಶ್ರದ್ದೆಯಿಂದ ʻವಲವಾರʼ ಸಿನಿಮಾ ಮಾಡಿದ್ದೀನಿ. ಅದೂ ಚಿತ್ರಮಂದಿರಗಳಿಗಾಗಿ ಮಾತ್ರ... ಓಟಿಟಿ ಹಾಗೂ ಟೀವಿಯವ್ರು ಈ ಸಿನಿಮಾವನ್ನು ಪ್ರಸಾರ ಮಾಡ್ತಾರೋ, ಇಲ್ವೋ ಗೊತ್ತಿಲ್ಲ! ಆದರೆ ಮುಂದೆ ಒಂದು ದಿನ ಯೂಟ್ಯೂಬ್‌ನಲ್ಲಿ ಫ್ರೀ ಆಗಿ ಗ್ಯಾರಂಟಿ ಬರುತ್ತೆ! ಅಲ್ಲಿ ಈ ಸಿನಿಮಾವನ್ನು ನೋಡಿ, ʻಛೇ, ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ಮಿಸ್ ಮಾಡ್ಕೊಂಡೆʼ ಅಂತ ಮಾತ್ರ ಹೇಳಬೇಡಿ ಪ್ಲೀಸ್.. ನಂಗೆ ಕರುಳು ಕಿವುಚಿದಂತಾಗುತ್ತೆ.." ಎಂಬುದು ಸುತನ್ ಗೌಡ ಅಳಲು.
"ಸದ್ಯಕ್ಕೆ ಪ್ರತಿದಿನ ಬೆಂಗಳೂರು ಒರಾಯನ್ ಮಾಲ್‌ನಲ್ಲಿ ಮಧ್ಯಾಹ್ನ 1 ಗಂಟೆಗೆ, ವೇಗಾ ಸಿಟಿ ಬನ್ನೇರುಘಟ್ಟ ರಸ್ತೆ 7.50ಕ್ಕೆ ಪ್ರದರ್ಶನಗಳಿವೆ. ಸಾಧ್ಯವಾದ್ರೆ ನೋಡಿ ನಮ್ಮ ಚಿತ್ರ ತಂಡವೂ ಪ್ರತಿದಿನ ಅಲ್ಲಿ ಹಾಜರಿರ್ತೀವಿ ಸಿಗೋಣ. ಹಂಗೇ, ಈ ಚಿತ್ರ ನಿರ್ಮಾಣ ಮಾಡಲು ಧೈರ್ಯ ತೋರಿದ ಮಾರ್ಪ್ ಪ್ರೊಡಕ್ಷನ್ಸ್‌ಗೆ ಈ ಚಿತ್ರವನ್ನು ಕನ್ನಡದ ಎಲ್ಲಾ ಚಿತ್ರ ಪ್ರೇಮಿಗಳಿಗೆ ತಲುಪಿಸಲೇಬೇಕೆಂದು ಚಿತ್ರತಂಡದ ಬೆನ್ನಿಗೆ ನಿಂತು ಹಗಲಿರುಳು ಶ್ರಮಿಸುತ್ತಿರುವ ಕವಿರಾಜ್ ಸರ್, ವೀರಕಪುತ್ರ ಎಂ. ಶ್ರೀನಿವಾಸ್ ಸರ್‌ಗೆ ನಾನು ಜೀವನಪೂರ್ತಿ ಋಣಿಯಾಗಿರುತ್ತೇನೆ" ಎಂದು ಭಾವುಕರಾಗಿದ್ದಾರೆ ಸುತನ್ ಗೌಡ.
ಸುತನ್ ಗೌಡ ಹಂಚಿಕೊಂಡಿರುವ ಪೋಸ್ಟ್
ಬಡವರ ಮನೆ ಮಕ್ಳು ವಿಥ್ ಮೆರಿಟ್
"ಹಾಗೆಯೇ, ಈ ಸಿನಿಮಾದಲ್ಲಿ ಕೆಲಸ ಮಾಡಿದ ತಂತ್ರಜ್ಞರು, ಕಲಾವಿದರು ಹಾಗೂ ಈಗಾಗಲೇ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಹಾರೈಸುತ್ತಿರುವ ಎಲ್ಲಾ ಗಣ್ಯರು ಹಾಗೂ ಪ್ರೇಕ್ಷಕ ಕರಿಗೆ ಕೃತಜ್ಞನಾಗಿದ್ದೇನೆ. ಹೀಗೇ ಆದರೆ ಮುಂದೆ ಸಿನಿಮಾ ಮಾಡೋದು ನಂಗೆ ಕಷ್ಟ ಆಗಬಹುದು.. ಯಾಕಂದರೆ, ನನ್ನನ್ನೇ ನಂಬಿಕೊಂಡಿರುವ ಕುಟುಂಬ ಇದೆ... ಬಡವರ ಮನೆ ಮಕ್ಳು ವಿಥ್ ಮೆರಿಟ್... ಕೈ ಹಿಡಿಯೋದು ಬಿಡೋದು ನಿಮಗೆ ಬಿಟ್ಟಿದ್ದು" ಎಂದು ಸುತನ್ ಗೌಡ ಅವರು ಭಾರದಲ್ಲಿ ಹೃದಯದಿಂದ ಬರೆದುಕೊಂಡಿದ್ದಾರೆ.