"ಬೈಯ್ಯೋರು ಬದುಕೋಕೆ ಹೇಳ್ತಾರೆ... ಹೋಗಳೋರು ಹಾಳಾಗೋಕೆ ಹೇಳ್ತಾರೆ..."- ಹಿಂಗೆ ಹೇಳುತ್ತಲೇ ಅಪ್ಪನಿಂದ ಸದಾ ಬೈಯ್ಸಿಕೊಳ್ಳುವ ಹಿರಿಮಗ ಕುಂಡೇಸಿಗೆ (ಮಾಸ್ಟರ್ ವೇದಿಕ್ ಕೌಶಲ್) ಸಮಾಧಾನ ಮಾಡುತ್ತಿರುತ್ತಾಳೆ ಹೆತ್ತಮ್ಮ. ಅದೊಂದು ಗಾರೆಯಾಗಿ ಸುಣ್ಣ ಬಣ್ಣ, ಅತ್ತ ಪೂರ್ಣವಾಗಿ ನಿರ್ಮಾಣ ಕೂಡ ಆಗದ ಮನೆ. ಮನೆ ಯಜಮಾನನಿಗೆ ನಾನಾ ಚಿಂತೆ. ಸದಾ ಪತ್ನಿ (ಹರ್ಷಿತಾ ಗೌಡ) ಮೇಲೆ ಸಿಡುಕು. ಹಿರಿಮಗನನ್ನು ಕಂಡರೆ, ಅದೆಂಥದೋ ಕಡುಕೋಪ. ಕಿರಿಮಗ ಕೊಸುಡಿ (ಮಾಸ್ಟರ್ ಶಯಾನ್) ಅಂದರೆ ಪ್ರೀತಿ. ಇದು ಕುಂಡೇಸಿಯ ನಖಾಶಿಕಾಂತ ಕೋಪಕ್ಕೆ ಕಾರಣ. ತಂದೆಯನ್ನೇ ಮರಕ್ಕೆ ಕಟ್ಟಿಹಾಕಿ, ಚಚ್ಚಿ ಹಾಕುವಂತಹ ಕನಸಿನ್ನೇ ಕುಂಡೇಸಿ ಕಾಣುತ್ತಾನೆ ಎಂದರೆ, ಅಪ್ಪನ ಬಗ್ಗೆ ಅವನಿಗೆ ಅದಿನ್ನೆಂಥ ಅಸಹನೆ ಇರಬೇಕು? ಇಂತಹ ಕುಟುಂಬವೊಂದರಲ್ಲಿ 24 ಗಂಟೆಗಳಲ್ಲಿ ನಡೆಯುವ ಒಂದು ರೋಚಕ ಘಟನೆಯನ್ನೇ ʻವಲವಾರʼ ಸಿನಿಮಾವನ್ನಾಗಿ ಮಾಡಿದ್ದಾರೆ ನಿರ್ದೇಶಕ ಸುತನ್ ಗೌಡ.
ವಲವಾರದಲ್ಲೊಂದು ಹೊಸ ಪರಿಸರ
ನಿರ್ದೇಶಕ ಸುತನ್ ಗೌಡ ತಮ್ಮ ವಲವಾರ ಕಥೆಯನ್ನು ಹೇಳುವುದಕ್ಕೆ ಆಯ್ದುಕೊಂಡಿರುವ ಪರಿಸರ ವಿಭಿನ್ನವಾಗಿದೆ. ಅದು ಉತ್ತರ ಕನ್ನಡದ್ದೋ, ಮಲೆನಾಡಿದ್ದೋ ಯಾವುದೋ ಊರು ಎನಿಸಿದರೂ, ಅಲ್ಲಿ ಬಳಕೆ ಆಗಿರುವ ಭಾಷೆ ಅಲ್ಲಿನದಲ್ಲ. ಹೀಗೆ ಪರಸರಕ್ಕೂ ಭಾಷೆಯ ಸೊಗಡಿಗೂ ಹೊಸ ಕನೆಕ್ಷನ್ ಕೊಟ್ಟು ವಲವಾರ ನಿರೂಪಣೆ ಮಾಡಿಕೊಂಡು ಹೋಗಿದ್ದಾರೆ ನಿರ್ದೇಶಕರು. ಇಲ್ಲಿ ಹೆಚ್ಚಿನ ಪಾತ್ರಗಳಿಲ್ಲ. ಕುಂಡೇಸಿ ಮನೆಯಲ್ಲಿರುವ ಗೌರ ಎಂಬ ಆಕಳಿನ ಸುತ್ತವೇ ಇಡೀ ಕಥೆ ಸಾಗುತ್ತದೆ. ಇನ್ನೇನು ಕರು ಹಾಕುವ ಸ್ಥಿತಿಯಲ್ಲಿರುವ ಗೌರ ಕಾಣೆಯಾದಾಗ, ಕುಂಡೇಸಿ ಎಷ್ಟೆಲ್ಲಾ ಪರಿಪಾಟಲು ಪಡುತ್ತಾನೆ? ಅದನ್ನು ಪುನಃ ಹೇಗೆ ಮನೆಗೆ ಕರೆತರುತ್ತಾನೆ. ಒಂದು ರಾತ್ರಿ ಕಳೆಯುವುದರೊಳಗೆ ಕುಂಡೇಸಿ ಕಾಣುವ ಜೀವನಾನುಭವನ್ನು ಬಹಳ ರೋಚಕವಾಗಿ ತೆರೆಮೇಲೆ ತೋರಿಸಿದ್ದಾರೆ ನಿರ್ದೇಶಕ ಸುತನ್ ಗೌಡ.
Chowkidar Review: ನಿನ್ನಂಥ ಅಪ್ಪ ಇಲ್ಲಾ, ನಿನ್ನಂಥ ಮಗನೂ ಇಲ್ಲಾ; ಚೌಕಿದಾರ್‌ನಲ್ಲಿ ಫ್ಯಾಮಿಲಿ ಡ್ರಾಮಾವೇ ಎಲ್ಲಾ!
ಕುಂಡೇಸಿ ಪ್ರಪಂಚವನ್ನು ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರುವಾಗಿಸುವುದು ಕದ್ರಿ ಮಣಿಕಾಂತರ ಹಾಡುಗಳು ಮತ್ತು ಹಿನ್ನೆಲೆ ಸಂಗೀತ. ಬಾಲರಾಜ್ ಗೌಡ ಛಾಯಾಗ್ರಹಣಕ್ಕೂ ಮೆಚ್ಚುಗೆಯನ್ನು ಸಲ್ಲಿಸಲೇಬೇಕು. ಹಸು ಹುಡುಕಲು ಕುಂಡೇಸಿಗೆ ಜೊತೆಯಾಗುವ ಯದು ಅಣ್ಣನ ಪಾತ್ರ ಈ ಸಿನಿಮಾದ ಮತ್ತೊಂದು ಜೀವಂತಿಕೆ. ಬಹಳ ತೂಕಬದ್ಧವಾದ ಮತ್ತು ಅಷ್ಟೇ ದೇಸಿಯಾದ ಸಂಭಾಷಣೆ ವಲವಾರಕ್ಕೆ ವರದಾನವಾಗಿದೆ. ಇರಾನ್‌ನ ನಿರ್ದೇಶಕ ಮಜೀದ್ ಮಜೀದಿ ಅವರ ಸಿನಿಮಾಗಳಲ್ಲಿನ ಮಕ್ಕಳ ಪ್ರಪಂಚ, ಮುಗ್ಧತೆ ಮತ್ತು ಬಡತನದ ನಡುವೆಯೂ ಅರಳುವ ಮಾನವೀಯ ಮೌಲ್ಯಗಳನ್ನು ಇಲ್ಲಿಯೂ ಕಾಣಬಹುದಾಗಿದೆ. ಗ್ರಾಮೀಣ ಭಾಗದ ಪ್ರೇಕ್ಷಕರ ಬಾಲ್ಯದ ನೆನಪುಗಳನ್ನು ತಾಕುವಂತಹ ಶಕ್ತಿ ಈ ಚಿತ್ರಕ್ಕಿದೆ. ಇದೊಂದು ಸರಳ ಮತ್ತು ಭಾವಪೂರ್ಣ ಕಥನ.
Landlord Review: ಉಳ್ಳವರ ಮೇಲೆ ಇಲ್ಲದವರ ಹೋರಾಟ; ಲ್ಯಾಂಡ್‌ಲಾರ್ಡ್‌ನಲ್ಲಿ ರಾಚಯ್ಯನ ಹೊಡೆದಾಟ!
ಕುಂಡೇಸಿಯಾಗಿ ಮಿಂಚಿದ ವೇದಿಕ್
ವಲವಾರ ಸಿನಿಮಾದಲ್ಲಿ ಹೆಚ್ಚು ಹೈಲೈಟ್ ಆಗುವುದೇ ಕುಂಡೇಸಿ ಪಾತ್ರಧಾರಿ ವೇದಿಕ್. ಸಿನಿಮಾ ಶುರುವಾದ ಕೆಲವೇ ನಿಮಿಷದೊಳಗೆ ಕುಂಡೇಸಿ ಪಾತ್ರದೊಟ್ಟಿಗೆ ಪ್ರೇಕ್ಷಕರು ಕನೆಕ್ಟ್ ಆಗುತ್ತಾರೆ. ಆತನ ನೋವು, ನಲಿವುಗಳನ್ನು ಕಣ್ತುಂಬಿಕೊಳ್ಳುತ್ತಾ, ಆಗಾಗ ಕಣ್ಣಾಲಿಗಳನ್ನು ತುಂಬಿಕೊಳ್ಳುತ್ತಾ ಕುಂಡೇಸಿ ಜೊತೆಗೆ ಪ್ರೇಕ್ಷಕ ಟ್ರಾವೆಲ್ ಮಾಡುತ್ತಾನೆ. ಇಡೀ ಸಿನಿಮಾದ ಜೀವಾಳವಾಗಿರುವ ಕುಂಡೇಸಿ ಪಾತ್ರವನ್ನು ವೇದಿಕ್ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತನ್ನೊಳಗಿನ ಸಿಟ್ಟು, ಆಕ್ರೋಶ, ಅಸಹಾಯಕತೆ, ದೈನ್ಯತೆ ಎಲ್ಲವನ್ನೂ ಅಭಿವ್ಯಕ್ತಿಸುತ್ತಾ ಪ್ರೇಕ್ಷಕರಿಂದ ಪೂರ್ಣಾಂಕ ಪಡೆಯುತ್ತಾರೆ.
ಕುಂಡೇಶಿಯ ಪೋಷಕರಾಗಿ ಕಾಣಿಸಿಕೊಂಡಿರುವ ಮಾಲತೇಶ್ ಮತ್ತು ಹರ್ಷಿತಾ ಗೌಡ ಅವರ ನಟನೆ ಅದೆಷ್ಟು ನೈಜವಾಗಿದೆ ಎಂದರೆ, ನಮ್ಮೂರಿನ ಅಕ್ಕ ಪಕ್ಕದಲ್ಲೆಲ್ಲೋ ಇರುವ ಕುಟುಂಬವಿದು ಎನಿಸುತ್ತದೆ. ಹಾಗೆಯೇ, ಈ ಸಿನಿಮಾದ ಪುಟ್ಟ ವಿಲನ್ ಎಂದರೆ ಅದು ಕೊಸುಡಿ ಪಾತ್ರ. ಆ ಪಾತ್ರವನ್ನು ಮಾಸ್ಟರ್ ಶಯಾನ್ ಸಖತ್ ಆಗಿ ನಿಭಾಯಿಸಿದ್ದಾರೆ. ಇನ್ನು, ಯದು ಅಣ್ಣನಾಗಿ ಬರುವ ಅಭಯ್, ತಮ್ಮ ಮ್ಯಾನರಿಸಂನಿಂದ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಾರೆ. ತಮಾಷೆ ಮಾಡುತ್ತಲೇ ಜೀವನದ ದೊಡ್ಡ ದೊಡ್ಡ ತತ್ವಗಳನ್ನು ಸಿಂಪಲ್ ಆಗಿ ದಾಟಿಸುತ್ತಾರೆ.
ಒಟ್ಟಾರೆಯಾಗಿ, ಸುತಾನ್ ಗೌಡ ಅವರ ವಲವಾರ, ಕೇವಲ ಮಕ್ಕಳ ಸಿನಿಮಾ ಎಂದು ಮೂಗುಮುರಿಯುವಂತಿಲ್ಲ. ಇದು ಕುಂಡೇಸಿ ಎಂಬ ಬಾಲಕನ ಮೂಲಕ ಒಂದು ಕುಟುಂಬದ ಬಾಂಧವ್ಯ, ಮುರಿದ ಕನಸುಗಳು, ಸಂಬಂಧಗಳು ಮತ್ತು ಆತ್ಮಾವಲೋಕನದ ಕಥೆಯನ್ನು ಹೇಳುವ ಸಿನಿಮಾವಾಗಿದೆ.
Movie: ವಲವಾರ
Release Date: ಜನವರಿ 30, 2026
Language: ಕನ್ನಡ
Genre: ಡ್ರಾಮಾ, ಕಾಮಿಡಿ
Director: ಸುತನ್ ಗೌಡ
Cast: ವೇದಿಕ್ ಕೌಶಲ್, ಶಯಾನ್, ಮಾಲತೇಶ್ ಎಚ್.ವಿ., ಹರ್ಷಿತಾ ಗೌಡ, ಅಭಯ್
Duration: 113 ನಿಮಿಷಗಳು
Rating: 4/5