ಇಟಲಿಯಲ್ಲಿ ಒಟ್ಟಾಗಿ ಹೊಸ ವರ್ಷವನ್ನು ಆಚರಿಸಿದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಈಗ ಹೈದರಾಬಾದ್‌ಗೆ ವಾಪಸಾಗಿದ್ದಾರೆ. ಇವರಿಬ್ಬರ ಬಗ್ಗೆ ಕೇಳಿಬರುತ್ತಿದ್ದ ಗಾಸಿಪ್‌ಗಳು ಈಗ ಮತ್ತಷ್ಟು ಜೋರಾಗಿವೆ. ಇವರಿಬ್ಬರು ಇಟಲಿಗೆ ಬೇರೆ ಬೇರೆಯಾಗಿ ಪ್ರಯಾಣ ಬೆಳೆಸಿದ್ದರೂ, ಸೋಮವಾರ (ಜ.5) ವಿಮಾನ ನಿಲ್ದಾಣಕ್ಕೆ ಒಟ್ಟಾಗಿ ಆಗಮಿಸುವಾಗ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಂಡ ಜೋಡಿ
ಹೊಸ ವರ್ಷ ಆಚರಿಸಲು ಇಟಲಿಗೆ ತೆರಳಿದ್ದ ಈ ಜೋಡಿ ಹೈದರಾಬಾದ್‌ಗೆ ಸೋಮವಾರ ಮರಳಿದರು. ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ರಶ್ಮಿಕಾ ಮತ್ತು ವಿಜಯ್ ಮಾಸ್ಕ್ ಧರಿಸಿದ್ದರು ಮತ್ತು ಪಾಪರಾಜಿಗಳಿಗೆ ಪೋಸ್ ನೀಡದೆ ತಮ್ಮ ತಂಡಗಳೊಂದಿಗೆ ಪ್ರತ್ಯೇಕವಾಗಿ ಹೊರನಡೆದರು. ರಶ್ಮಿಕಾ ಗ್ರೇ ಟ್ರೌಸರ್ ಮತ್ತು ಕಪ್ಪು ಕೋಟ್ ಧರಿಸಿದ್ದರೆ, ವಿಜಯ್ ಲೇದರ್ ಜಾಕೆಟ್ ಮತ್ತು ನೀಲಿ ಕ್ಯಾಪ್‌ನಲ್ಲಿ ತೊಟ್ಟಿದ್ದರು.
Rashmika Mandanna: ರಶ್ಮಿಕಾ-ವಿಜಯ್ ಮದುವೆ ಕುರಿತು ಬಿಗ್ ಅಪ್‌ಡೇಟ್; ಭರದಿಂದ ಸಾಗಿದ ಸಿದ್ಧತೆ, ಮುಹೂರ್ತ ಫಿಕ್ಸ್!
ಇಟಲಿ ಪ್ರವಾಸಕ್ಕೆ ಹೋದಾಗ ಇವರಿಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಫೋಟೋಗಳ ಹಿನ್ನೆಲೆ ಒಂದೇ ಆಗಿದ್ದನ್ನು ಗಮನಿಸಿದ್ದ ನೆಟ್ಟಿಗರು, ರಶ್ಮಿಕಾ ಮತ್ತು ವಿಜಯ್ ಒಟ್ಟಿಗೆ ರೋಮ್‌ನಲ್ಲಿ ರಜೆ ಕಳೆಯುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದರು. ವಿಶೇಷವಾಗಿ ವಿಜಯ್ ಹಂಚಿಕೊಂಡಿದ್ದ ಫೋಟೋವೊಂದರಲ್ಲಿ ಯುವತಿಯೊಬ್ಬಳು ಅವರ ಹೆಗಲ ಮೇಲೆ ತಲೆ ಇಟ್ಟು ಮಲಗಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆ ಯುವತಿ ಬೇರೆ ಯಾರೂ ಅಲ್ಲ, ರಶ್ಮಿಕಾ ಎನ್ನಲಾಗಿತ್ತು.
ಮದುವೆ ಆಗಲಿದೆಯಾ ಈ ಜೋಡಿ?
ಸದ್ಯದ ಮಾಹಿತಿ ಪ್ರಕಾರ, ಕಳೆದ ವರ್ಷ ಅಕ್ಟೋಬರ್ 3 ರಂದು ಹೈದರಾಬಾದ್‌ನಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ನಿಶ್ಚಿತಾರ್ಥ ಗುಟ್ಟಾಗಿ ನಡೆದಿದ್ದು, ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದ ಪಾರಂಪರಿಕ ಅರಮನೆಯಲ್ಲಿ ವಿವಾಹ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆಯಂತೆ. ನಿಶ್ಚಿತಾರ್ಥದಂತೆಯೇ ಮದುವೆಯನ್ನು ಕೂಡ ಕೇವಲ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಅತ್ಯಂತ ಖಾಸಗಿಯಾಗಿ ಮಾಡಿಕೊಳ್ಳುವುದಕ್ಕೆ ವಿಜಯ್ ಮತ್ತು ರಶ್ಮಿಕಾ ತೀರ್ಮಾನ ಮಾಡಿದ್ದಾರೆ ಎಂಬ ಸುದ್ದಿ ಇದೆ.
ಅಂದಹಾಗೆ, 2018ರಲ್ಲಿ ತೆರೆಕಂಡ 'ಗೀತಾ ಗೋವಿಂದಂ' ಮತ್ತು 2019ರ 'ಡಿಯರ್ ಕಾಮ್ರೇಡ್' ಸಿನಿಮಾಗಳಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಒಟ್ಟಿಗೆ ನಟಿಸಿದ್ದರು. ಅಲ್ಲಿಂದಲೇ ಇವರಿಬ್ಬರ ನಡುವೆ ಪ್ರೀತಿ ಶುರುವಾಗಿದ್ದು,ಇದೀಗ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ಮಾತು ಕೇಳಿಬಂದಿದೆ.