ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಜಯ್ ದೇವರಕೊಂಡ - ರಶ್ಮಿಕಾ ಮಂದಣ್ಣ ಜೋಡಿಯ ‘ರಣಬಾಲಿ’ ಚಿತ್ರದ ಮೊದಲು ಹಾಡು ರಿಲೀಸ್; ಮನಸೂರೆಗೊಳ್ಳುತ್ತಿದೆ ʻಎಂದಯ್ಯಾ ಸಾಮಿ‌ʼ ಸಾಂಗ್

Ranabaali Song Release: ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ʻರಣಬಾಲಿʼ ಪ್ಯಾನ್-ಇಂಡಿಯಾ ಚಿತ್ರವನ್ನು ರಾಹುಲ್ ಸಂಕೃತ್ಯನ್ ನಿರ್ದೇಶಿಸಿದ್ದು, ಅಜಯ್-ಅತುಲ್ ಸಂಗೀತ ಸಂಯೋಜಿಸಿದ್ದಾರೆ. 19ನೇ ಶತಮಾನದ ಬ್ರಿಟಿಷ್ ಕಾಲಘಟ್ಟದ ಹಿನ್ನೆಲೆಯುಳ್ಳ ಈ ಕೃತಿಯು ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 16ರಂದು ವಿಶ್ವದಾದ್ಯಂತ ಐದು ಭಾಷೆಗಳಲ್ಲಿ ತೆರೆಕಾಣಲಿದೆ.

ವಿಜಯ್‌ ದೇವರಕೊಂಡ–ರಶ್ಮಿಕಾ ಜೋಡಿಯ ‘ರಣಬಾಲಿ’ ಚಿತ್ರದ ಮೆಲೋಡಿ ಹಾಡು ರಿಲೀಸ್

-

Avinash GR
Avinash GR Sep 23, 2026 7:12 PM

ವಿಜಯ್ ದೇವರಕೊಂಡ - ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ನ ಪ್ಯಾನ್-ಇಂಡಿಯಾ ಸಿನಿಮಾ ‘ರಣಬಾಲಿ’ಯ ಮೊದಲ ಲಿರಿಕಲ್ ಹಾಡು ʻಎಂದಯ್ಯಾ ಸಾಮಿ...ʼ ರಿಲೀಸ್‌ ಆಗಿದೆ. ರಾಹುಲ್ ಸಂಕೃತ್ಯನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ವಿಜಯದಶಮಿ ಹಬ್ಬದ ಕೊಡುಗೆಯಾಗಿ ಅಕ್ಟೋಬರ್ 16ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ.

ಈ ಬೆನ್ನಲ್ಲೇ ಬಿಡುಗಡೆಯಾಗಿರುವ ಈ ರೊಮ್ಯಾಂಟಿಕ್ ಮೆಲೋಡಿ ಗೀತೆ ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಿ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಭಾವನಾತ್ಮಕ ಕ್ಷಣಗಳ ಹಾಡು

ʻರಣಬಾಲಿʼ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಪಾತ್ರಗಳ ಮದುವೆಯ ಸಂಭ್ರಮದ ಸನ್ನಿವೇಶದಲ್ಲಿ ಈ ಹಾಡನ್ನು ಅತ್ಯಂತ ಕಲಾತ್ಮಕವಾಗಿ ಸೆರೆಹಿಡಿಯಲಾಗಿದೆ. 19ನೇ ಶತಮಾನದ ಸಾಂಪ್ರದಾಯಿಕ ಕಲ್ಯಾಣ ಮಹೋತ್ಸವದ ಸೊಬಗು, ಅಂದಿನ ಕಾಲಘಟ್ಟದ ಗ್ರಾಮೀಣ ವೈಭವ ಹಾಗೂ ಹಬ್ಬದ ಕಳೆಯನ್ನು ಪರದೆಯ ಮೇಲೆ ಅತ್ಯಂತ ನೈಜವಾಗಿ ಮರುಸೃಷ್ಟಿಸಲಾಗಿದೆ. ನವದಂಪತಿಗಳ ಪ್ರೇಮ, ಒಲವಿನ ತುಂಟಾಟ ಹಾಗೂ ಭಾವನಾತ್ಮಕ ಕ್ಷಣಗಳನ್ನು ಚಿತ್ರಿಸಿದ್ದು, ಪ್ರೇಕ್ಷಕರ ಕಣ್ಣು ಮತ್ತು ಕಿವಿಗೆ ಈ ಗೀತೆ ರಸದೌತಣ ನೀಡುತ್ತಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌

ಖ್ಯಾತ ಸಂಗೀತ ಸಂಯೋಜಕ ಜೋಡಿ ಅಜಯ್-ಅತುಲ್ ಈ ಗೀತೆಗೆ ಮಧುರವಾದ ರಾಗ ಸಂಯೋಜನೆ ಮಾಡಿದ್ದು, ಗೀತರಚನೆಕಾರ ರಾಮಜೋಗಯ್ಯ ಶಾಸ್ತ್ರಿ ಅವರ ಸಾಹಿತ್ಯ ಈ ಹಾಡಿನ ಆಕರ್ಷಣೆಯನ್ನು ಹೆಚ್ಚಿಸಿದೆ. ಖ್ಯಾತ ಗಾಯಕಿ ಶ್ವೇತಾ ಮೋಹನ್ ಮತ್ತು ಅಜಯ್ ಗೊಗಾವಲೆ ಈ ಯುಗಳ ಗೀತೆಯನ್ನು ಹಾಡಿದ್ದಾರೆ. ಈ ಲಿರಿಕಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡಿಂಗ್‌ನಲ್ಲಿದೆ.

Vijay Deverakonda: ಸಿನಿ ಜರ್ನಿಗೆ 10 ವರ್ಷ; ಭಾವುಕ ಪೋಸ್ಟ್‌ ಹಂಚಿಕೊಂಡ ವಿಜಯ್‌ ದೇವರಕೊಂಡ

ನಿರೀಕ್ಷೆ ಮೂಡಿಸಿರುವ ಟೀಸರ್‌

ಬ್ರಿಟಿಷರ ಆಳ್ವಿಕೆಯ ಕಾಲಘಟ್ಟವಾದ 1854ರಿಂದ 1878ರ ನಡುವೆ ನಡೆದ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾವನ್ನು ತೆರೆಗೆ ತರಲಾಗುತ್ತಿದ್ದು, ಈಗಾಗಲೇ ರಿಲೀಸ್ ಆಗಿದ್ದ ಟೀಸರ್ ಭಾರಿ ಸಂಚಲನ ಮೂಡಿಸಿತ್ತು. ಇದೀಗ ಬಿಡುಗಡೆಯಾಗಿರುವ ಮೆಲೋಡಿ ಹಾಡು ಚಿತ್ರದ ಮೇಲಿನ ಕುತೂಹಲ ಹಾಗೂ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.

ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೂ ಎಂಟ್ರಿ

ಪ್ರತಿಷ್ಠಿತ ‘ಮೈತ್ರಿ ಮೂವಿ ಮೇಕರ್ಸ್’ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಹಾಗೂ ವೈ. ರವಿಶಂಕರ್ ಈ ಮೆಗಾ ಪ್ರಾಜೆಕ್ಟ್‌ಗೆ ಬಂಡವಾಳ ಹೂಡಿದ್ದು, ಟಿ-ಸೀರೀಸ್‌ನ ಗುಲ್ಶನ್ ಕುಮಾರ್ ಮತ್ತು ಭೂಷಣ್ ಕುಮಾರ್ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಸಿನಿಮಾದಲ್ಲಿ ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೂ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವುದು ಮತ್ತೊಂದು ದೊಡ್ಡ ಹೈಲೈಟ್ ಆಗಿದೆ. ನೀರವ್ ಶಾ ಮತ್ತು ಜಿಷ್ಣು ಭಟ್ಟಾಚಾರ್ಜಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.