ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ranabaali Review: ನೋಡುಗನ ಎದೆಗಿಳಿಯದ ರಣಬಾಲಿಯ ಹೋರಾಟ; ಆರಂಭದಿಂದ ಅಂತ್ಯದವರೆಗೂ ಚೀರಾಟ, ನರಳಾಟ!

Ranabaali Telugu Review: ವಿಜಯ್‌ ದೇವರಕೊಂಡ - ರಶ್ಮಿಕಾ ಮಂದಣ್ಣ ನಟನೆಯ ʻರಣಬಾಲಿʼ ಸಿನಿಮಾ ತೆರೆಕಂಡಿದೆ. ಕ್ರಿ.1876ರಲ್ಲಿ ನಡೆದಿತ್ತು ಎನ್ನಲಾದ ಕೆಲವೊಂದು ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಈ ಚಿತ್ರ ಹೇಗಿದೆ? ಇಲ್ಲಿದೆ ಓದಿ ಸಿನಿಮಾ ವಿಮರ್ಶೆ.

ಸಿನಿಮಾ: ರಣಬಾಲಿ

ತಾರಾಗಣ: ವಿಜಯ್‌ ದೇವರಕೊಂಡ, ರಶ್ಮಿಕಾ ಮಂದಣ್ಣ, ಈಶ್ವರಿ ರಾವ್, ಆರ್ನಾಲ್ಡ್ ವೋಸ್ಲೂ, ವಿನೋದ್‌ ಸಾಗರ್‌ ಮುಂತಾದವರು.

ನಿರ್ದೇಶನ: ರಾಹುಲ್ ಸಾಂಕೃತ್ಯಾಯನ್

ನಿರ್ಮಾಣ: ಮೈತ್ರಿ ಮೂವೀ ಮೇಕರ್ಸ್‌

ಸಂಗೀತ: ಅಜಯ್‌ - ಅತುಲ್

ಅವಧಿ: 2 ಗಂಟೆ 58 ನಿಮಿಷ

ರೇಟಿಂಗ್: 2.5/5

ಈ ಹಿಂದೆ ವಿಜಯ್ ದೇವರಕೊಂಡ ಮತ್ತು ರಾಹುಲ್ ಸಾಂಕೃತ್ಯಾಯನ್‌ ಕಾಂಬಿನೇಷನ್‌ನಲ್ಲಿ ಬಂದಿದ್ದ ‘ಟ್ಯಾಕ್ಸಿವಾಲಾ’ ಉತ್ತಮ ಯಶಸ್ಸು ಕಂಡಿತ್ತು. ಇದೀಗ ಅವರಿಬ್ಬರು ಮತ್ತೊಮ್ಮೆ ‘ರಣಬಾಲಿ’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಅದೂ ಅಲ್ಲದೆ, ವಿಜಯ್‌ ದೇವರಕೊಂಡ - ರಶ್ಮಿಕಾ ಮಂದಣ್ಣ ಜೋಡಿ ಮದುವೆಯಾದ ಮೇಲೆ ಮೊದಲ ಬಾರಿಗೆ ‘ರಣಬಾಲಿ’ ಚಿತ್ರದಲ್ಲಿ ನಟಿಸಿರುವುದು ಮತ್ತೊಂದು ವಿಶೇಷ. ಈ ಚಿತ್ರ ಹೇಗಿದೆ? ಇಲ್ಲಿದೆ ಓದಿ ಸಿನಿಮಾ ವಿಮರ್ಶೆ.

ʻರಣಬಾಲಿʼ ಸಿನಿಮಾದ ಕಥೆ ಏನು?

ಅದು ಕ್ರಿ.ಶ.1854ರ ಕಾಲಘಟ್ಟ. ಭದ್ರ ಮಲ್ಲಣ್ಣ ತಾತನ ಆಶೀರ್ವಾದದಿಂದ ರಾಜಮ್ಮ (ಈಶ್ವರಿ ರಾವ್) ಈ ರಣಬಾಲಿಗೆ (ವಿಜಯ್ ದೇವರಕೊಂಡ) ಜನ್ಮ ನೀಡುತ್ತಾಳೆ. ಅವನ ಹುಟ್ಟೇ ಒಂದು ಸವಾಲು ಎನ್ನಬಹುದು. ಸಾವನ್ನೇ ಗೆದ್ದು ರಣಬಾಲಿ ರ್ಜನ್ಮ ಪಡೆಯುತ್ತಾನೆ. ಒರಟು ಸ್ವಭಾವದ, ಹಠಮಾರಿಯಾದ ರಣಬಾಲಿ ಸಿಂಗನಮಲ ಪ್ರದೇಶಕ್ಕೆ ಕಾವಲುಗಾರನಾಗಿರುತ್ತಾನೆ. ಕೇವಲ 24 ವರ್ಷ ಆಯುಷ್ಯವಷ್ಟೇ ಇರುವ ರಣಬಾಲಿ ಆ ಊರನ್ನು ಕಣ್ಣಿಟ್ಟು ಕಾಯುತ್ತಿರುತ್ತಾನೆ. ಇತ್ತ ಸಾವಿನ ಘಳಿಗೆ ಸಮೀಪಿಸುತ್ತಿದೆ ಎಂದು ಅರಿತ ತಾಯಿ ರಾಜಮ್ಮ, ರಣಬಾಲಿಗೆ ಮದುವೆ ಮಾಡಬೇಕೆಂದು ಬಯಸುತ್ತಾಳೆ. ಜಯಮ್ಮಳ (ರಶ್ಮಿಕಾ ಮಂದಣ್ಣ) ಜೊತೆ ಮದುವೆಯೂ ನೆರವೇರುತ್ತದೆ.

ಇದೇ ಸಮಯದಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಬ್ರಿಟಿಷರ ದೌರ್ಜನ್ಯಗಳು ಮಿತಿಮೀರಿರುತ್ತವೆ. ಹೊಸದಾಗಿ ಅಧಿಕಾರಕ್ಕೆ ಬಂದ ಬ್ರಿಟಿಷ್ ಕಮಿಷನರ್ ಥಿಯೋಡರ್ ಹೆಕ್ಟರ್ (ಆರ್ನಾಲ್ಡ್ ವೋಸ್ಲೂ), ತೆರಿಗೆ ಮೇಲೆ ತೆರಿಗೆ ವಿಧಿಸಿ ಜನರ ಬಳಿಯಿರುವ ಧಾನ್ಯವನ್ನೆಲ್ಲ ಕಸಿದುಕೊಳ್ಳುತ್ತಿರುತ್ತಾನೆ. ತೀವ್ರ ಬರಗಾಲದಿಂದಾಗಿ ಲಕ್ಷಾಂತರ ಜನರು ಸಾವನ್ನಪ್ಪುತ್ತಿರುತ್ತಾರೆ. ಬ್ರಿಟಿಷರ ವಶದಲ್ಲಿರುವ ಆ ಧಾನ್ಯವನ್ನು ಜನರಿಗೆ ಹಂಚಲು ರಣಬಾಲಿ ಅಖಾಡಕ್ಕಿಳಿಯುತ್ತಾನೆ. ಆ ನಂತರ ರಣಬಾಲಿ ಮಾಡಿದ ಹೋರಾಟವೇನು? ಈ ಹಾದಿಯಲ್ಲಿ ರಣಬಾಲಿಗಾಗಿ ಜಯಮ್ಮ ಮಾಡಿದ ತ್ಯಾಗವೇನು? ಭದ್ರ ಮಲ್ಲಣ್ಣ ನೀಡಿದ ಆಯುಷ್ಯವನ್ನು ಕೊನೆಗೆ ವಾಪಸ್ ತೆಗೆದುಕೊಳ್ಳುತ್ತಾನಾ? ಎಂಬ ಕುತೂಹಲದೊಂದಿಗೆ ಈ ಸಿನಿಮಾ ಸಾಗುತ್ತದೆ.

ಬರವಣಿಗೆಯಲ್ಲಿ ಇನ್ನಷ್ಟು ತೀವ್ರತೆ ಬೇಕಿತ್ತು!

ಭಾರತೀಯ ಚಿತ್ರರಂಗದಲ್ಲಿ ಈಗಾಗಲೇ ಬ್ರಿಟಿಷರನ್ನು ಹಿನ್ನೆಲೆಯನ್ನಿಟ್ಟುಕೊಂಡು ಸಾಕಷ್ಟು ಸಿನಿಮಾಗಳನ್ನು ತೆರೆಗೆ ತರಲಾಗಿದೆ. ನಿರ್ದೇಶಕ ಎಸ್.ಎಸ್. ರಾಜಮೌಳಿ ಕೂಡ ತಮ್ಮ ‘ಆರ್‌ಆರ್‌ಆರ್’ ಸಿನಿಮಾ ಕೂಡ ಇದೇ ವಿಷಯವನ್ನು ಇಟ್ಟುಕಂಡು ಮಾಡಿದ್ದರು. ಈ ಬಾರಿ ನಿರ್ದೇಶಕ ರಾಹುಲ್ 1876-1878ರ ಅವಧಿಯಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಉಂಟಾದ ಭೀಕರ ಬರಗಾಲ ಮತ್ತು ಅದಕ್ಕೆ ಕಾರಣವಾದ ನೈಜ ಅಂಶಗಳನ್ನು ಇಟ್ಟುಕೊಂಡು ಈ ಸಿನಿಮಾವನ್ನು ಮಾಡಿದ್ದಾರೆ. ಮೊದಲರ್ಧವನ್ನು ಹೇಗೆ ಸಹಿಸಿಕೊಳ್ಳಬಹುದು. ಆದರೆ ಆನಂತರದ್ದು ಕೊಂಚ ಕಷ್ಟ. ಒಂದೆಡೆ ಬ್ರಿಟಿಷರ ಕಾಲದ ನೈಜ ಇತಿಹಾಸ, ಮತ್ತೊಂದು ಕಡೆ ಕಮರ್ಷಿಯಲ್‌ ಎಲಿಮೆಂಟ್ಸ್‌.. ಎರಡನ್ನೂ ಬೆಸೆಯುವಲ್ಲಿ ಅವರು ಹೆಣಗಾಡಿರುವುದು ಗೊತ್ತಾಗುತ್ತದೆ.

ಚಿತ್ರದ ಆರಂಭಿಕ ದೃಶ್ಯಗಳು, ನಾಯಕನ ಪರಿಚಯದ ಆಕ್ಷನ್ ಎಪಿಸೋಡ್, ಮೊದಲ ಕೆಲ ನಿಮಿಷಗಳಲ್ಲಿನ ವಿಜಯ್ ದೇವರಕೊಂಡ ಅವರ ಸಂಭಾಷಣಾ ಶೈಲಿ ಅಷ್ಟಾಗಿ ಆಪ್ತವೆನಿಸುವುದಿಲ್ಲ. ಆದರೆ, ವಿಲನ್ ಎಂಟ್ರಿಯಿಂದಾಗಿ ಚಿತ್ರ ಒಂದು ಹಂತದಲ್ಲಿ ಲಯ ಕಂಡುಕೊಳ್ಳುತ್ತದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಲವ್‌ ಟ್ರ್ಯಾಕ್ ಚಿತ್ರದ ಪ್ರಮುಖ ಹೈಲೈಟ್ ಎನ್ನಬಹುದು. ಅವರಿಬ್ಬರನ್ನು ತೆರೆಮೇಲೆ ನೋಡುವುದೇ ಖುಷಿ.

ಊಹಿಸಬಹುದಾದ ಟ್ವಿಸ್ಟ್‌ಗಳು

ಇದರ ಜೊತೆಗೆ ಬ್ರಿಟಿಷರು ಮೊದಲ ಬಾರಿಗೆ ರಣಬಾಲಿಯ ಹಳ್ಳಿಗೆ ಬರುವ ಸೀನ್, ಇಂಟರ್ವಲ್‌ಗೂ ಮುನ್ನ ಬರುವ ದೃಶ್ಯ ಹಾಗೂ ಬ್ರಿಟಿಷರ ದೌರ್ಜನ್ಯಗಳನ್ನು ಬಿಂಬಿಸುವ ಒಂದೆರಡು ಸನ್ನಿವೇಶಗಳು ಮೊದಲಾರ್ಧದಲ್ಲಿ ಹೈಲೈಟ್‌ ಆಗಿವೆ. ಆದರೆ ಸೆಕೆಂಡ್‌ ಹಾಫ್‌ನಲ್ಲಿಯೇ ಅಸಲಿ ಸಮಸ್ಯೆ ಶುರುವಾಗುವುದು. ಸಿನಿಮಾವು ಊಹಿಸಬಹುದಾದ ಹಾದಿ ಹಿಡಿಯುತ್ತದೆ. ಹಲವು ದೃಶ್ಯಗಳು ಪುನರಾವರ್ತನೆಯಾಗುತ್ತಾ, ಕಥೆ ಮುಂದಕ್ಕೆ ಸಾಗದೆ ಒಂದೇ ಕಡೆ ನಿಂತುಬಿಟ್ಟ ಅನುಭವ ನೀಡುತ್ತವೆ. ಸಿನಿಮಾ ಅವಧಿಯನ್ನು ಬಹುತೇಕ ಕಡೆ ಟ್ರಿಮ್‌ ಮಾಡುವ ಅವಕಾಶ ಇತ್ತು. ನಿರ್ದೇಶಕರು ಬರವಣಿಗೆ ಇನ್ನಷ್ಟು ಎಚ್ಚರ ವಹಿಸಿದ್ದರೆ ಸಿನಿಮಾ ಮತ್ತಷ್ಟು ಉತ್ತಮವಾಗಿ ಮೂಡಿಬರುತ್ತಿತ್ತು. ಹೀಗಾಗಿ ಬ್ರಿಟಿಷರ ವಿರುದ್ಧದ ರಣಬಾಲಿಯ ಹೋರಾಟ ಪ್ರೇಕ್ಷಕನ ಎದೆಗೆ ಇಳಿಯುವುದೇ ಇಲ್ಲ.

ವಿಜಯ್ ದೇವರಕೊಂಡ - ರಶ್ಮಿಕಾ ಮಂದಣ್ಣ ಜೋಡಿಯ ‘ರಣಬಾಲಿ’ ಚಿತ್ರದ ಮೊದಲು ಹಾಡು ರಿಲೀಸ್; ಮನಸೂರೆಗೊಳ್ಳುತ್ತಿದೆ ʻಎಂದಯ್ಯಾ ಸಾಮಿ‌ʼ ಸಾಂಗ್

ಅಜಯ್‌ -‌ ಅತುಲ್ ಜೋಡಿಯ ಸಂಗೀತ ನಿರ್ದೇಶನದಲ್ಲಿ ಒಂದು ಹಾಡು ಗುನುಗುವಂತಿದ್ದರೆ, ಹಿನ್ನೆಲೆ ಸಂಗೀತ ಸಾಧಾರಣ ಎನಿಸುವಂತಿದೆ. ಇನ್ನು, ತೆರೆಮೇಲೆ ಅತಿಯಾದ ಹಿಂಸೆ ಇದೆ. ಆಗಾಗ ಕೈ-ಕಾಲುಗಳನ್ನು ಕತ್ತರಿಸಲಾಗುತ್ತದೆ. ರುಂಡವನ್ನು ಚೆಂಡಾಡಲಾಗುತ್ತದೆ. ರಕ್ತವನ್ನು ನೀರಿನಂತೆ ಹರಿಯುತ್ತದೆ. ಆ ಚೀರಾಟ, ನರಳಾಟ, ಹಿಂಸೆಯನ್ನು ಆಳವಾಗಿ ತೋರಿಸುವುದರಲ್ಲಿ ಇರುವ ಆಸಕ್ತಿ ನಿರ್ದೇಶಕರಿಗೆ ಸ್ಕ್ರಿಪ್ಟ್‌ ಅನ್ನು ಇನ್ನಷ್ಟು ಗಟ್ಟಿಯಾಗಿಸುವುದರಲ್ಲಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.

ನಿರಾಸೆ ಮೂಡಿಸುವ ವಿಜಯ್‌ ದೇವರಕೊಂಡ

ಬ್ರಿಟಿಷರ ವಿರುದ್ಧ ಹೋರಾಡುವ ರಣಬಾಲಿಯಾಗಿ ವಿಜಯ್‌ ದೇವರಕೊಂಡ ಅಬ್ಬರಿಸಿದ್ದಾರೆ. ಆದರೆ ಅವರ ಬಾಡಿ ಮ್ಯಾನರಿಸಂ ಯಾಕೋ ಕೃತಕ ಎಂಬ ಫೀಲ್‌ ನೀಡುತ್ತದೆ. ಎಲ್ಲಾ ಸನ್ನಿವೇಶಗಳಲ್ಲೂ ಒಂದೇ ರೀತಿಯಲ್ಲಿ ಇರುವ ಅವರ ದೇಹಭಾಷೆ ಒಂಚೂರು ಕಿರಿಕಿರಿಯನ್ನೂ ಉಂಟು ಮಾಡುತ್ತದೆ. ಉಳಿದಂತೆ, ಅವರ ಪಾತ್ರದಲ್ಲಿನ ರಗಡ್‌ನೆಸ್, ಸಂಭಾಷಣೆ ಹೇಳುವ ಶೈಲಿ ಇಷ್ಟವಾಗುತ್ತದೆ. ಜಯಮ್ಮನ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಇಷ್ಟವಾಗುತ್ತಾರೆ. ಜಯಮ್ಮನ ಪಾತ್ರದಲ್ಲಿನ ಮುಗ್ಧತೆ, ಅಂಜಿಕೆ ಎಲ್ಲವನ್ನೂ ಅದ್ಭುತವಾಗಿ ಅಭಿವ್ಯಕ್ತಿಸಿದ್ದಾರೆ ರಶ್ಮಿಕಾ. ಹಾಲಿವುಡ್‌ ನಟ ಅರ್ನಾಲ್ಡ್‌ ಖಡಕ್‌ ಖಳನಾಗಿ ಮಿಂಚಿದ್ದರೆ, ರಾಜಮ್ಮ ಪಾತ್ರದಲ್ಲಿ ಈಶ್ವರಿ ರಾವ್‌ ಇಷ್ಟವಾಗುತ್ತಾರೆ. ಸಣ್ಣ ಪಾತ್ರವೊಂದರಲ್ಲಿ ಕನ್ನಡ ನಟ ವೈಜನಾಥ್‌ ಬಿರಾದರ್‌ ಅವರು ಕಾಣಿಸಿಕೊಂಡಿರುವುದು ಖುಷಿ ನೀಡುತ್ತದೆ.

ಒಟ್ಟಾರೆಯಾಗಿ ಹೇಳುವುದಾರೆ, ಟೆಕ್ನಿಕಲಿ ಉತ್ತಮವಾಗಿರುವ ʻರಣಬಾಲಿʼ ಸಿನಿಮಾ, ತೀವ್ರತೆಯಿರದ ಬರವಣಿಗೆಯ ಕೊರತೆಯಿಂದ ನರಳುತ್ತದೆ. ರಶ್ಮಿಕಾ ಮತ್ತು ವಿಜಯ್‌ ಜೋಡಿಯ ಫ್ಯಾನ್ಸ್‌, ಬ್ರಿಟಿಷರ ಕಾಲಘಟ್ಟದಲ್ಲಿ ನಡೆದ ಹಿಂಸೆಗಳು ಯಾವ ರೀತಿಯಲ್ಲಿದ್ದವು ಎಂಬ ವಿಚಾರದ ಮೇಲೆ ಕುತೂಹಲ ಇದ್ದವರು ಒಮ್ಮೆ ಈ ಸಿನಿಮಾವನ್ನು ನೋಡಬಹುದು.