ಸ್ಯಾಂಡಲ್ವುಡ್ ನಟ ಧನ್ವೀರ್ ಗೌಡ ಅವರದ್ದು ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಈ ಕುರಿತು ಅವರ ಪರ ವಕೀಲರು ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿದ್ದಾರೆ. "ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋಗಳು ಸಂಪೂರ್ಣ ನಕಲಿ ಹಾಗೂ ದುರುದ್ದೇಶಪೂರ್ವಕವಾಗಿ ಸೃಷ್ಟಿಸಲಾಗಿದೆ. ನನ್ನ ಕಕ್ಷಿದಾರ ಧನ್ವೀರ್ ವಿರುದ್ಧ ವ್ಯವಸ್ಥಿತ ಕುತಂತ್ರ ನಡೆಯುತ್ತಿದೆ" ಎಂದು ವಕೀಲರು ಗಂಭೀರ ಆರೋಪ ಮಾಡಿದ್ದಾರೆ.
ಕೋರ್ಟ್ ದಾಖಲೆಗಳನ್ನು ನಂಬುತ್ತದೆ
ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲರು, "2017ರಲ್ಲಿ ನಟ ದರ್ಶನ್ ಅವರ ಪರಿಚಯವಾದ ದಿನದಿಂದ ಇಂದಿನವರೆಗೂ ಮತ್ತು ಮುಂದೆಯೂ ಧನ್ವೀರ್ ಅವರ ನಿಷ್ಠೆ ಹಾಗೂ ನಿಯತ್ತು ದರ್ಶನ್ ಅವರ ಪರವಾಗಿಯೇ ಇರಲಿದೆ. ಇದರಲ್ಲಿ ಯಾವುದೇ ಗೊಂದಲ ಬೇಡ. ಧನ್ವೀರ್ ಮತ್ತು ವಿಜಯಲಕ್ಷ್ಮಿ ಅವರ ನಡುವೆ ಹಿಂದೆ ಯಾವ ಬಾಂಧವ್ಯವಿತ್ತೋ ಇಂದಿಗೂ ಅದೇ ಸಂಬಂಧ ಮುಂದುವರಿದಿದೆ. ಒಡಕಿನ ಧ್ವನಿಗೆ ನಾವು ಬೆಲೆ ಕೊಡುವ ಅಗತ್ಯವಿಲ್ಲ. ನ್ಯಾಯಾಲಯವು ಬರೀ ಮಾತುಗಳನ್ನಲ್ಲ, ಅಧಿಕೃತ ದಾಖಲೆಗಳನ್ನು ನಂಬುತ್ತದೆ. ದರ್ಶನ್ ಅವರಿಗೆ ನ್ಯಾಯಾಲಯದಲ್ಲಿ ಶ್ಯೂರಿಟಿ ನೀಡಿದ್ದೇ ಧನ್ವೀರ್, ಅದಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳು ನಮ್ಮ ಬಳಿಯಿವೆ" ಎಂದು ಸ್ಪಷ್ಟಪಡಿಸಿದರು.
ಷಡ್ಯಂತ್ರ ಶೀಘ್ರದಲ್ಲೇ ಬಯಲಾಗಲಿದೆ
ಇದೇ ವೇಳೆ ಹಣಕಾಸಿನ ಆರೋಪ ಹಾಗೂ ಪೊಲೀಸರ ನೋಟಿಸ್ ಕುರಿತು ಮಾತನಾಡಿದ ಅವರು, "ಕೋಟ್ಯಂತರ ರೂಪಾಯಿ ಹಣದ ವಹಿವಾಟಿಗೆ ಸಂಬಂಧಿಸಿದಂತೆ ಯಾವುದೇ ಮಟ್ಟದ ತನಿಖೆಯನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ನಮ್ಮ ಬಳಿ ಮುಚ್ಚಿಡುವಂಥದ್ದು ಏನೂ ಇಲ್ಲ. ಪೊಲೀಸ್ ತನಿಖಾಧಿಕಾರಿಗಳು ನೀಡಿರುವ ನೋಟಿಸ್ಗೆ ನಮ್ಮ ಕಾನೂನು ತಂಡದ ಮೂಲಕ ಅಧಿಕೃತ ಉತ್ತರ ನೀಡುತ್ತೇವೆ. ಯಾವುದೇ ಉನ್ನತ ಮಟ್ಟದ ತನಿಖಾ ಸಂಸ್ಥೆ ತನಿಖೆ ನಡೆಸಿದರೂ ನಾವು ಸಂಪೂರ್ಣ ಸಹಕಾರ ನೀಡಲಿದ್ದು, ಸತ್ಯಾಸತ್ಯತೆ ಹಾಗೂ ಇದರ ಹಿಂದಿರುವ ಷಡ್ಯಂತ್ರ ಶೀಘ್ರದಲ್ಲೇ ಬಯಲಾಗಲಿದೆ" ಎಂದರು.
"ಅದು ಧನ್ವೀರ್ ಮಾತಾಡಿರೋ ಆಡಿಯೋನೇ ಅಲ್ಲ!
ಇದು ಎಐ ಕಾಲ ಎಂದ ವಕೀಲರು
ವೈರಲ್ ಆಗಿರುವ ಆಡಿಯೋದಲ್ಲಿರುವ ಧ್ವನಿ ಧನ್ವೀರ್ ಅವರದ್ದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಕೀಲರು, "ಇವೆಲ್ಲವೂ ಫ್ಯಾಬ್ರಿಕೇಟೆಡ್ ಆಡಿಯೋಗಳು. ಇಂದು ಎಐ ತಂತ್ರಜ್ಞಾನದ ಕಾಲದಲ್ಲಿ ಏನೆಲ್ಲಾ ಸೃಷ್ಟಿ ಮಾಡಲು ಸಾಧ್ಯ ಎಂಬುದು ಎಲ್ಲರಿಗೂ ತಿಳಿದಿದೆ. ವಿಕೃತ ಮನಸ್ಥಿತಿಯ ಕೆಲವರು ಇಂತಹ ಷಡ್ಯಂತ್ರ ರೂಪಿಸಿದ್ದಾರೆ. ಈ ಬಗ್ಗೆ ನಾವು ಕಾನೂನು ಹೋರಾಟ ಮುಂದುವರಿಸಲಿದ್ದೇವೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆ ಇಟ್ಟು, ದರ್ಶನ್ ಅವರನ್ನು ಕಾನೂನುಬದ್ಧವಾಗಿ ಹೊರತರಲು ಶ್ರಮಿಸುವುದೇ ನಮ್ಮ ಮತ್ತು ನಮ್ಮ ಕಕ್ಷಿದಾರರ ಮುಖ್ಯ ಉದ್ದೇಶ" ಎಂದು ತಿಳಿಸಿದರು.