Darshan: ʻಮಾನವೀಯತೆ ಕಳೆದುಹೋಗದಿರಲಿ. ಹೆಣ್ಣಿನ ಗೌರವಕ್ಕೆ ಧಕ್ಕೆ ಬರದಿರಲಿʼ; ವಿಜಯಲಕ್ಷ್ಮಿ-ಧನ್ವೀರ್ ವಿವಾದದ ನಡುವೆ ಅಶ್ವಿನಿ ಗೌಡ ಮಾರ್ಮಿಕ ಪೋಸ್ಟ್
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಗೌಡ ನಡುವಿನ ಜಟಾಪಟಿ ತಾರಕಕ್ಕೇರಿರುವ ಹೊತ್ತಲ್ಲೇ, ಬಿಗ್ ಬಾಸ್ ಖ್ಯಾತಿಯ ಅಶ್ವಿನಿ ಗೌಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಸಂಚಲನ ಮೂಡಿಸಿದೆ. ಸಂಬಂಧಗಳ ಬಿರುಕಿನ ನಡುವೆ ಹೆಣ್ಣಿನ ಘನತೆಗೆ ಚ್ಯುತಿ ತರಬಾರದು ಎಂದು ಅವರು ಎಚ್ಚರಿಸಿದ್ದಾರೆ.
-
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಗೌಡ ನಡುವಿನ ಜಟಾಪಟಿ ಸ್ಯಾಂಡಲ್ವುಡ್ ಅಂಗಳದಲ್ಲಿ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಈ ಇಬ್ಬರ ನಡುವಿನ ಸಮರ ದರ್ಶನ್ ಅಭಿಮಾನಿಗಳಲ್ಲೂ ತೀವ್ರ ಬೇಸರ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ತಾರಕಕ್ಕೇರಿವೆ.
ಇತ್ತೀಚೆಗಷ್ಟೇ ಜೈಲಿಗೆ ಭೇಟಿ ನೀಡಿದ್ದ ವಿಜಯಲಕ್ಷ್ಮಿ ಅವರು ದರ್ಶನ್ ಅವರನ್ನು ಭೇಟಿ ಮಾಡಿ ಇತ್ತೀಚಿನ ವಿದ್ಯಮಾನಗಳ ಕುರಿತು ಚರ್ಚಿಸಿ ಬಂದಿದ್ದಾರೆ. ಇದರ ಬೆನ್ನಲ್ಲೇ, ಈ ಇಡೀ ಬೆಳವಣಿಗೆಗಳ ಕುರಿತು ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಅಶ್ವಿನಿ ಗೌಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಸಖತ್ ಸದ್ದು ಮಾಡುತ್ತಿದೆ. ಯಾರ ಹೆಸರನ್ನೂ ನೇರವಾಗಿ ಪ್ರಸ್ತಾಪಿಸದೆ, ಪರೋಕ್ಷವಾಗಿ ಕಿವಿಮಾತು ಹೇಳಿದ್ದಾರೆ.
ಅಭಿಮಾನವೆಂಬುದು ಕೇವಲ ಹೆಸರಿನ ಮೇಲಿನ ಪ್ರೀತಿಯಲ್ಲ
ಅಭಿಮಾನ ಮತ್ತು ಸಂಸ್ಕಾರದ ಮಹತ್ವವನ್ನು ವಿವರಿಸಿರುವ ಅಶ್ವಿನಿ ಗೌಡ, "ಅಭಿಮಾನವೆಂಬುದು ಕೇವಲ ಹೆಸರಿನ ಮೇಲಿನ ಪ್ರೀತಿಯಲ್ಲ, ಅದು ಹೃದಯಗಳ ನಡುವಿನ ಸುಂದರವಾದ ನಂಟು. ಒಬ್ಬ ಕಲಾವಿದನನ್ನು ಪ್ರೀತಿಸುವ ಅಭಿಮಾನಿಗಳು, ಆತನ ಜತೆ ಕಷ್ಟ-ಸುಖಗಳಲ್ಲಿ ಬೆನ್ನೆಲುಬಾಗಿ ನಿಂತಿರುವ ಕುಟುಂಬವನ್ನೂ ಗೌರವಿಸುವ ಹೃದಯವಂತಿಕೆಯನ್ನು ಬೆಳೆಸಿಕೊಳ್ಳಬೇಕು. ವಿಶೇಷವಾಗಿ ಮನೆಯ ಹೆಣ್ಣುಮಕ್ಕಳು, ಪತ್ನಿ ಹಾಗೂ ಮಕ್ಕಳನ್ನು ಗೌರವಿಸುವುದು ನಮ್ಮ ಸಂಸ್ಕಾರವಾಗಬೇಕು" ಎಂದು ಹೇಳುವ ಮೂಲಕ ಕುಟುಂಬದ ಘನತೆಗೆ ಧಕ್ಕೆ ತರದಂತೆ ನೆನಪಿಸಿದ್ದಾರೆ.
ಹೆಣ್ಣಿನ ಮೌನ ದೌರ್ಬಲ್ಯವಲ್ಲ
ಸಂಬಂಧಗಳಲ್ಲಿ ಭಿನ್ನಾಭಿಪ್ರಾಯಗಳು ಮೂಡಿದಾಗ ಹಿಂದಿನ ಪ್ರೀತಿ-ವಿಶ್ವಾಸ ಮರೆತು ನಡೆದುಕೊಳ್ಳುವ ರೀತಿಯನ್ನು ಕಟುವಾಗಿ ವಿರೋಧಿಸಿರುವ ಅವರು, "ಕಾಲ ಬದಲಾದಾಗ ಸಂಬಂಧಗಳಲ್ಲಿ ಮನಸ್ತಾಪಗಳು ಬರುವುದು ಸಹಜ. ಆದರೆ ಇಷ್ಟು ದಿನ ಜೊತೆಯಾಗಿ ಹಂಚಿಕೊಂಡ ಪ್ರೀತಿ, ವಿಶ್ವಾಸ, ಕಷ್ಟ-ಸುಖಗಳನ್ನೆಲ್ಲ ಮರೆತು, ಅದೇ ಹಳೆಯ ಸಂಬಂಧವನ್ನು ಮತ್ತೊಬ್ಬರನ್ನು ನೋಯಿಸುವ ಅಸ್ತ್ರವನ್ನಾಗಿ ಬಳಸಿಕೊಳ್ಳುವುದು ಮನಸ್ಸಿಗೆ ತೀವ್ರ ನೋವು ತರುವ ಸಂಗತಿ. ಒಂದು ಹೆಣ್ಣಿನ ಮೌನವನ್ನು ಯಾರೂ ದೌರ್ಬಲ್ಯವೆಂದು ಭಾವಿಸಬಾರದು. ಒಂದು ಕುಟುಂಬದ ಗೌರವವನ್ನು ಕೇವಲ ಮಾತುಗಳಿಂದ ಅಳೆಯಬೇಡಿ. ಭಿನ್ನಾಭಿಪ್ರಾಯಗಳಿರಬಹುದು, ಆದರೆ ಯಾರದ್ದೇ ಹೆಣ್ಣಿನ ಘನತೆಗೆ ಧಕ್ಕೆ ತರುವ ಹಕ್ಕು ಯಾರಿಗೂ ಇಲ್ಲ" ಎಂದು ಖಡಕ್ ಆಗಿ ಎಚ್ಚರಿಸಿದ್ದಾರೆ.
Actor Dhanveer: ನಟ ಧನ್ವೀರ್ ಗೌಡಗೆ ಸಂಕಷ್ಟ; ಮತ್ತೊಂದು ದೂರು ದಾಖಲು
ನಿಜವಾದ ಅಭಿಮಾನದ ಅರ್ಥವನ್ನು ವ್ಯಾಖ್ಯಾನಿಸಿರುವ ಅಶ್ವಿನಿ ಗೌಡ, "ಅಭಿಮಾನವೆಂದರೆ ಕೇವಲ ಜೈಕಾರ ಕೂಗುವುದಷ್ಟೇ ಅಲ್ಲ, ಅವರ ಮೇಲಿನ ಪ್ರೀತಿಯನ್ನು ಗೌರವದಿಂದ ಉಳಿಸಿಕೊಳ್ಳುವುದು. ಕಲಾವಿದ ಮತ್ತು ಅಭಿಮಾನಿಯ ನಡುವಿನ ನಂಟು ಪರದೆಯ ಆಕರ್ಷಣೆಯಲ್ಲ, ಅದು ನಂಬಿಕೆ ಮತ್ತು ಭಾವನೆಗಳ ಪವಿತ್ರ ಬಂಧ. ನಿಜವಾದ ಅಭಿಮಾನಿ ಕಲಾವಿದನ ಏಳಿಗೆಯಲ್ಲಿ ಸಂಭ್ರಮಿಸುತ್ತಾನೆ, ಕಷ್ಟದ ದಿನಗಳಲ್ಲಿ ಬೆಂಬಲವಾಗಿ ನಿಲ್ಲುತ್ತಾನೆ. ಆದರೆ ಇನ್ನೊಬ್ಬರನ್ನು ನೋಯಿಸುವ ಮೂಲಕ ತನ್ನ ಅಭಿಮಾನವನ್ನು ಎಂದಿಗೂ ಸಾಬೀತುಪಡಿಸುವುದಿಲ್ಲ" ಎಂದು ಮಾರ್ಮಿಕವಾಗಿ ಕಿವಿಮಾತು ಹೇಳಿದ್ದಾರೆ.
ಅಶ್ವಿನಿ ಗೌಡ ಹಂಚಿಕೊಂಡ ಪೋಸ್ಟ್
ಹೆಣ್ಣಿನ ಗೌರವಕ್ಕೆ ಧಕ್ಕೆ ಬರದಿರಲಿ
ತಮ್ಮ ಪೋಸ್ಟ್ನ ಕೊನೆಯಲ್ಲಿ ಸಂದೇಶವನ್ನು ರವಾನಿಸಿರುವ ಅವರು, "ಕೊನೆಗೆ ಒಂದೇ ಮಾತು... ಅಭಿಮಾನ ಇರಲಿ, ಆದರೆ ಮಾನವೀಯತೆ ಕಳೆದುಹೋಗದಿರಲಿ. ಪ್ರೀತಿ ಇರಲಿ, ಆದರೆ ಹೆಣ್ಣಿನ ಗೌರವಕ್ಕೆ ಧಕ್ಕೆ ಬರದಿರಲಿ. ನಂಟು ಇರಲಿ, ಆದರೆ ಮನಸ್ಸುಗಳನ್ನು ಮುರಿಯುವಷ್ಟು ದ್ವೇಷ ಬೆಳೆಯದಿರಲಿ. ಅದೇ ನಿಜವಾದ ಅಭಿಮಾನ, ಅದೇ ನಿಜವಾದ ಮನುಷ್ಯತ್ವ" ಎಂದು ಬರೆದುಕೊಂಡಿದ್ದಾರೆ. ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವಿನ ವಾಕ್ಸಮರ ತಾರಕಕ್ಕೇರಿರುವ ಈ ಸೂಕ್ಷ್ಮ ಸಂದರ್ಭದಲ್ಲಿ ಅಶ್ವಿನಿ ಗೌಡ ಅವರ ಈ ಪೋಸ್ಟ್ ಕನ್ನಡ ಚಿತ್ರರಂಗದ ಗಮನ ಸೆಳೆಯುತ್ತಿದ್ದು, ನೆಟ್ಟಿಗರಿಂದಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.