ನಟ ನವೀನ್ ಮಹದೇವ್ ಅವರು ಮೊದಲ ಬಾರಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿರುವ ಸಿನಿಮಾ ‘ಮೃತ್ಯುದೇವತೆ’. ಈಗಾಗಲೇ ಈ ಚಿತ್ರದ ಕೆಲಸಗಳು ಸಂಪೂರ್ಣಗೊಂಡಿದ್ದು, ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ.
ಅದಕ್ಕೂ ಮುನ್ನ ಎರಡು ಹಾಡುಗಳು ಮತ್ತು ಟ್ರೇಲರ್ ರಿಲೀಸ್ ಮಾಡಿ ಸಂಭ್ರಮಿಸಿದ ‘ಮೃತ್ಯುದೇವತೆ’ ಚಿತ್ರತಂಡ ಮಾಜಿ ಕೌನ್ಸಿಲರ್, ಉದ್ಯಮಿ ಕೆ. ರಮೇಶ್, ಉದ್ಯಮಿ ಶ್ರೀನಿವಾಸ್ ಅವರು ಹಾಡುಗಳನ್ನು ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಿನಿಮಾದಲ್ಲೊಂದು ಪ್ರಮುಖ ಪಾತ್ರ ನಿರ್ವಹಿಸಿರುವ ಹಿರಿಯ ನಟಿ ವಿನಯಾ ಪ್ರಸಾದ್ ಅವರು ಹಾಡಿನ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದರು.
ನವೀನ್ ಮಹದೇವ್ ಹೇಳಿದ್ದೇನು?
"ನಾನು ಈ ಹಿಂದೆ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದೆ. ಆದರೆ ಅದರ ಬಿಡುಗಡೆಗೂ ಮೊದಲೇ ‘ಮೃತ್ಯುದೇವತೆ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದೇನೆ. ಹೆಣ್ಣು ಮಕ್ಕಳು ಎಷ್ಟೇ ಬುದ್ಧಿವಂತರಾದರೂ, ಎಷ್ಟೇ ಓದಿಕೊಂಡಿದ್ದರೂ ಕೆಲವೊಮ್ಮೆ ಗೊತ್ತಿಲ್ಲದೆ ಯಾವುದೋ ಬಲೆಗೆ ಬೀಳುತ್ತಾರೆ. ಅದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಕುಡಿತ, ದುಡ್ಡು, ಕೆಟ್ಟ ಸಹವಾಸ ಮತ್ತು ದುರಹಂಕಾರ ಇರುವವರ ಜೊತೆಗೆ ಮಾನಕ್ಕೆ ಅಂಜುವ ಹೆಣ್ಣು ಮಕ್ಕಳು ಇರಬಾರದು ಎಂಬ ಸಂಭಾಷಣೆಯೊಂದು ಚಿತ್ರದಲ್ಲಿದೆ. ಇದೆಲ್ಲದರಿಂದ ತೊಂದರೆಗೊಳಗಾದ ಹುಡುಗಿ ಸಹನೆಯಿಂದ ಈ ಮಾತು ಹೇಳಿ ಎದ್ದು ಹೋಗುತ್ತಾಳೆ. ಆ ತೊಂದರೆ ಅತಿರೇಕಕ್ಕೆ ಹೋದಾಗ ಹುಡುಗಿ ಮೃತ್ಯುದೇವತೆ, ಚಂಡಿ-ಚಾಮುಂಡಿ ಅವತಾರ ತಾಳುತ್ತಾಳೆ. ಅದೇ ಈ ಚಿತ್ರದ ಕಥಾವಸ್ತು. ನಮ್ಮ ಚಿತ್ರವನ್ನು ಡಾ. ರಾಜಕುಮಾರ್ ಹುಟ್ಟುಹಬ್ಬದ (ಏ.24) ಪ್ರಯುಕ್ತ ಬಿಡುಗಡೆ ಮಾಡುವ ಯೋಚನೆ ಇದೆ" ಎನ್ನುತ್ತಾರೆ ನವೀನ್ ಮಹದೇವ್.
ʻವರನಟʼ ಡಾ. ರಾಜ್‌ಕುಮಾರ್ ಜನ್ಮದಿನದಂದು ಅಪ್ಪು ಅಭಿಮಾನಿಯ ʻಪುನೀತ್ ನಿವಾಸʼ ರಿಲೀಸ್
ನಾಯಕಿಯಾಗಿ ಕಾಣಿಸಿಕೊಂಡಿ ಸಾರಿಕಾ
ಈ ಹಿಂದೆ ‘ಸಹಾರಾ’ ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಿದ್ದ ಸಾರಿಕಾ, ಈಗ ಮೃತ್ಯುದೇವತೆ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. "ಈ ಚಿತ್ರದಲ್ಲಿ ನನ್ನದು ಆರತಿ ಎಂಬ ತುಂಬಾ ಮುಗ್ಧ ಹುಡುಗಿಯ ಪಾತ್ರ. ಅಂತಹವಳನ್ನು ಕೆಣಕಿದಾಗ, ಅದು ಯಾವ ಮಟ್ಟಕ್ಕೆ ಹೋಗಬಹುದು ಎಂದು ತೋರಿಸುವ ಪಾತ್ರ ನನ್ನದು. ಈ ಚಿತ್ರದಲ್ಲಿ ಮೊದಲ ಬಾರಿಗೆ ಫೈಟಿಂಗ್ ಸಹ ಮಾಡಿದ್ದೇನೆ. ಹಲವು ದಿನಗಳ ಕಾಲ ನಾನು ಸೂರ್ಯನನ್ನೇ ನೋಡಿರಲಿಲ್ಲ. ಏಕೆಂದರೆ, ಸತತವಾಗಿ ರಾತ್ರಿ ಹೊತ್ತು ಕಾಡಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಈ ಚಿತ್ರದಲ್ಲಿ ವಿನಯಾ ಪ್ರಸಾದ್ ಅವರಂತಹ ಹಿರಿಯ ನಟಿ ಜೊತೆಗೆ ಕೆಲಸ ಮಾಡಿದ ಅನುಭವ ಅದ್ಭುತವಾಗಿತ್ತು, ಅವರಿಂದ ಬಹಳಷ್ಟು ಕಲಿತೆ" ಎನ್ನುತ್ತಾರೆ ಸಾರಿಕಾ.
ವಿನಯಾ ಪ್ರಸಾದ್ ಹೇಳಿದ್ದೇನು?
"ಈ ಸಿನಿಮಾಕ್ಕೆ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಚಿತ್ರದ ಚಿತ್ರೀಕರಣವಾಗಿದೆ. ಒಳ್ಳೆಯ ಸಂದೇಶ ಕೊಡುವುದಕ್ಕೆ ಈ ಚಿತ್ರ ಮಾಡಿದ್ದಾರೆ. ಹಾಗಾಗಿ, ಈ ಚಿತ್ರ ನಿಜವಾಗಲೂ ಚೆನ್ನಾಗಿ ಮೂಡಿಬಂದಿರುತ್ತದೆ ಎಂಬ ಭರವಸೆ ನನಗಿದೆ" ಎನ್ನುತ್ತಾರೆ ವಿನಯಾ ಪ್ರಸಾದ್. "ಈ ಚಿತ್ರದಲ್ಲಿ ಸಂಧ್ಯಾ ಎಂಬ ಹಳ್ಳಿಹುಡುಗಿಯ ಪಾತ್ರದಲ್ಲಿ ನಟಸಿದ್ದೇನೆ. ಮಂಡ್ಯ ಭಾಷೆ ಮಾತನಾಡುತ್ತೇನೆ. ಇದುವರೆಗೂ ನಾನು ಯಾವತ್ತೂ ಇಂತಹ ಪಾತ್ರ ಮಾಡಿರಲಿಲ್ಲ. ನನ್ನ ಪಾತ್ರಕ್ಕೆ ಮೇಕಪ್ ಸಹ ಇಲ್ಲ" ಎನ್ನುತ್ತಾರೆ ಮತ್ತೋರ್ವ ನಟಿ ಹಿಮಶ್ರೀ.
‘ಮೃತ್ಯದೇವತೆ’ ಚಿತ್ರದಲ್ಲಿ ಸಾರಿಕಾ, ವಿನಯಾ ಪ್ರಸಾದ್, ಹಿಮಶ್ರೀ, ನವೀನ್ ಮಹದೇವ ಜೊತೆಗೆ ಡಯಾನ, ಮಾಹಿನ್ ಕುಬೇರ, ಸೂರ್ಯ, ಪವನ್, ವರ್ಷಿತಾ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣವನ್ನು ಅನಿರುದ್ಧ್ ಮಾಡಿದ್ದು, ನವೀನ್ ಮಹದೇವ್ ಅವರ ಪತ್ನಿ ಸರಸ್ವತಿ ವರ್ಷಿತಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.