ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Balaramana Dinagalu Review: 80ರ ದಶಕದ ಬೆಂಗಳೂರಿನ ಭೂಗತ ಲೋಕದ ಬಲವಾದ ಕಥೆ

'ಆ ದಿನಗಳು' ಚಿತ್ರ ತೆರೆಕಂಡು 19 ವರ್ಷಗಳ ನಂತರ ನಿರ್ದೇಶಕ ಕೆ. ಎಂ. ಚೈತನ್ಯ 80-90ರ ದಶಕದ ಬೆಂಗಳೂರು ಭೂಗತ ಲೋಕದ ಹಿನ್ನೆಲೆಯಲ್ಲಿ 'ಬಲರಾಮನ ದಿನಗಳು' ಚಿತ್ರವನ್ನು ಪಕ್ಕಾ ಮಾಸ್ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ವಿನೋದ್ ಪ್ರಭಾಕರ್ ಆಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದಾರೆ.

ಕೆ. ಎಂ. ಚೈತನ್ಯ ಎಂದಕೂಡಲೇ ತಕ್ಷಣ ನೆನಪಾಗುವ ಸಿನಿಮಾ, ʻಆ ದಿನಗಳುʼ. 2007ರಲ್ಲಿ ಬಂದ ಈ ಸಿನಿಮಾವು ದೊಡ್ಡ ಯಶಸ್ಸಿನ ಜೊತೆಗೆ ಭೂಗತ ಲೋಕದ ಕುರಿತ ಸಿನಿಮಾಗಳಿಗೆ ಹೊಸ ಭಾಷ್ಯ ಬರೆದಿತ್ತು. ಅದು ಕೆ.ಎಂ. ಚೈತನ್ಯ ಅವರ ಮೊದಲ ಸಿನಿಮಾ ಕೂಡ. ಇದೀಗ 19 ವರ್ಷಗಳ ನಂತರ ʻಬಲರಾಮನ ದಿನಗಳುʼ ಸಿನಿಮಾವನ್ನು ಚೈತನ್ಯ ನಿರ್ದೇಶಿಸಿದ್ದಾರೆ.

ʻಬಲರಾಮನ ದಿನಗಳುʼ ಕಥೆ ಏನು?

'ಆ ದಿನಗಳು' ಚಿತ್ರದಂತೆಯೇ 80-90ರ ದಶಕದ ಬೆಂಗಳೂರಿನ ಭೂಗತ ಲೋಕದ ಹಿನ್ನೆಲೆಯಲ್ಲಿ ಈ ಸಿನಿಮಾದ ಕಥೆ ಸಾಗುತ್ತದೆ. ಕೊತ್ವಾಲ್ ರಾಮಚಂದ್ರ ಮತ್ತು ಎಂ.ಪಿ. ಜಯರಾಜ್ ನಗರವನ್ನು ಆಳುತ್ತಿದ್ದ ಕಾಲವದು. 'ಆ ದಿನಗಳು' ಸಿನಿಮಾವು ಕೊತ್ವಾಲ್ ರಾಮಚಂದ್ರ ಕೊಲೆಯ ಸುತ್ತ ಸುತ್ತಿದರೆ, ಈ ಸಿನಿಮಾ ಜಯರಾಜ್ ಬಂಟನಾಗಿದ್ದ ಬಲರಾಮನ (ವಿನೋದ್ ಪ್ರಭಾಕರ್) ಬೆಳವಣಿಗೆಯನ್ನು ತೋರಿಸಿದೆ.

ಆದರೆ, ಈ ಬಾರಿ ಪಾತ್ರದ ಹೆಸರುಗಳನ್ನು ಕೊಂಚ ಬದಲಾವಣೆ ಮಾಡಲಾಗಿದೆ. ಜಯರಾಮ್ (ಆಶಿಶ್ ವಿದ್ಯಾರ್ಥಿ), ಶಶಿಧರ್‌ (ಅತುಲ್ ಕುಲಕರ್ಣಿ), ಮೊನಪ್ಪ ರೈ (ರಮೇಶ್ ಇಂದಿರಾ) ಬೆಂಗಳೂರನ್ನು ಆಳುತ್ತಿರುತ್ತಾರೆ. ಇಂಥ ಬೆಂಗಳೂರಿಗೆ ವಲಸೆ ಬಂದ‌ ಹಳ್ಳಿಯ ಸಾಮಾನ್ಯ ಯುವಕ ಬಲರಾಮ, ಹೇಗೆ ಒಬ್ಬ ಪ್ರಭಾವಿ ರೌಡಿಯಾಗಿ ಹೇಗೆ ಬೆಳೆಯುತ್ತಾನೆ ಎಂಬುದೇ ಕಥೆ.

'ಬಲರಾಮನ ದಿನಗಳು' ಚಿತ್ರಕ್ಕೆ ಧ್ವನಿಯಾದ 'ಆಲ್ ಓಕೆ' ಅಲೋಕ್; ಸಖತ್‌ ಖುಷಿಯಾದ ನಟ ವಿನೋದ್‌ ಪ್ರಭಾಕರ್

ಬಲರಾಮನಿಗೆ ಮೂಗಿನ ತುದಿಯಲ್ಲೇ ಕೋಪ. ಅನ್ಯಾಯ ಕಂಡರೇ ಸಹಿಸದ ಬಲರಾಮ, ಒಳ್ಳೆಯದು ಮಾಡುವ ಉದ್ದೇಶದಿಂದಲೇ ಭೂಗತ ಲೋಕಕ್ಕೆ ಅನಿವಾರ್ಯವಾಗಿ ಕಾಲಿಡುತ್ತಾನೆ. ಅಲ್ಲಿ ಆತನಿಗೆ ಕತ್ತಿ (ವಿನಯ್ ಗೌಡ) ಎಂಬ ರೌಡಿಯ ಜೊತೆಗೆ ಹಗೆತನ.. ನಿವೃತ್ತ ಸೇನಾ ಅಧಿಕಾರಿ ಕರ್ನಲ್ ದೇವಯ್ಯ (ಅವಿನಾಶ್) ಮಗಳು ರೇವತಿ (ಪ್ರಿಯಾ ಆನಂದ್) ಜೊತೆಗಿನ ಪ್ರೇಮಕಥೆ ಮತ್ತು ಭೂಗತ ಲೋಕದಲ್ಲಿ ಬಲವಾಗಿ ಬೆಳೆದ ಆತನ ಬದುಕು.. ಇದು ಬಲರಾಮನ ದಿನಗಳು ಸಿನಿಮಾದ ಪ್ರಮುಖಾಂಶಗಳು.

ಮೇಕಿಂಗ್‌ ಹೇಗಿದೆ?

ಸಿನಿಪ್ರಿಯರು 'ಬಲರಾಮನ ದಿನಗಳು' ಸಿನಿಮಾವನ್ನು ʻಆ ದಿನಗಳುʼ ಚಿತ್ರದ ಜೊತೆ ಹೋಲಿಕೆ ಮಾಡೋದು ಸಾಮಾನ್ಯ. ಏಕೆಂದರೆ, ಎರಡಕ್ಕೂ ಒಬ್ಬರೇ ನಿರ್ದೇಶಕರು. ಆದರೆ ʻಆ ದಿನಗಳುʼ ಸಿನಿಮಾದಂತೆ ಬಲರಾಮನ ಕಥೆ ಕ್ಲಾಸ್‌ ಅಲ್ಲ. ಇದು ಪಕ್ಕಾ ಮಾಸ್.‌ ಚೈತನ್ಯ ತಮ್ಮ ಮೇಕಿಂಗ್‌ ಶೈಲಿಯನ್ನು ಈ ಚಿತ್ರದಿಂದ ಬದಲಿಸಿಕೊಂಡಿರುವಂತಿದೆ. ಈ ಬಾರಿ ಕಮರ್ಷಿಯಲ್‌ ಅಂಶಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಹಾಗಾಗಿ, ಬಡಿದಾಟ ಹೆಚ್ಚಿದೆ, ರಕ್ತವೂ ಹರಿದಿದೆ. ಚಿತ್ರದ ಮೊದಲಾರ್ಧ ಪಾತ್ರಗಳ ಪರಿಚಯ, ಭೂಗತ ಲೋಕದ ರಾಜಕೀಯ ಮತ್ತು ಸಂಘರ್ಷಗಳನ್ನು ಕುತೂಹಲಕಾರಿಯಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ.

ವಿನೋದ್‌ ಪ್ರಭಾಕರ್‌ ನಟನೆಯ ‘ಬಲರಾಮನ ದಿನಗಳು’ ರಿಲೀಸ್‌ ಡೇಟ್‌ ಫಿಕ್ಸ್‌; ಚಿತ್ರತಂಡಕ್ಕೆ ಸಾಥ್‌ ನೀಡಿದ ಕೆವಿಎನ್ ಪ್ರೊಡಕ್ಷನ್ಸ್

1980ರ ದಶಕದ ಬೆಂಗಳೂರನ್ನು ಅಚ್ಚುಕಟ್ಟಾಗಿ ಮರುಸೃಷ್ಟಿಸಿರುವುದು ಇಲ್ಲಿನ ದೊಡ್ಡ ಪ್ಲಸ್‌ ಪಾಯಿಂಟ್.‌ ಆಗಿನ ಕಾಲದ ವಾತಾವರಣವನ್ನು ಕಟ್ಟಿಕೊಡಲು ಪಟ್ಟಿರುವ ಶ್ರಮ ಎದ್ದು ಕಾಣುತ್ತದೆ. ಹಳೆಯ ಬೆಂಗಳೂರಿನ ರೇಟ್ರೋ ಲುಕ್ ಅನ್ನು ತಾಂತ್ರಿಕ ತಂಡ ಅದ್ಭುತವಾಗಿ ತೆರೆಗೆ ತಂದಿದೆ. ಅದಕ್ಕೆ ಕಲಾ ನಿರ್ದೇಶಕ ವಿಶ್ವಾಸ್‌ ಮತ್ತು ಛಾಯಾಗ್ರಹಕ ಎಚ್ ಸಿ ವೇಣು ಅವರ ಕೊಡುಗೆ ಅಪಾರ.

ಇನ್ನು, ಸಂತೋಷ್ ನಾರಾಯಣನ್ ಅವರ ಸಂಗೀತ ಈ ಚಿತ್ರಕ್ಕೆ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು. ಕೆಲವು ಕಡೆ ಅವರು ಮಾಡಿರುವ ಪ್ರಯೋಗ ಇಷ್ಟವಾಗುತ್ತದೆ. ಆದರೆ, ಸೆಕೆಂಡ್‌ ಹಾಫ್‌ನಲ್ಲಿ ಮಾತ್ರ ಅಬ್ಬರವೇ ಜಾಸ್ತಿ ಇದೆ. ಸಂಜಿತ್‌ ಹೆಗಡೆ ಹಾಡಿರುವ ಮೆಲೋಡಿ ಹಾಡು ಇಷ್ಟವಾಗುತ್ತದೆ. ಆದರೆ, ಐಟಂ ಸಾಂಗ್‌ನ ಅವಶ್ಯಕತೆ ಇರಲಿಲ್ಲ. ಸಂಕಲನ ಇನ್ನಷ್ಟು ಹರಿತವಾಗಿರಬೇಕಿತ್ತು. ಒಂದಷ್ಟು ಬೇಡದ ದೃಶ್ಯಗಳನ್ನು ಕತ್ತರಿಸುವ ಅವಕಾಶಗಳಿದ್ದವು. ಮಾರ್ಕೆಟ್‌ನಲ್ಲಿ ಬರುವ ಸಿಂಗಲ್‌ ಶಾಟ್‌ನ ಫೈಟ್‌ವೊಂದು ಮಜಾ ನೀಡುತ್ತದೆ. ಸಿನಿಮಾದ ಕ್ಲೈಮ್ಯಾಕ್ಸ್‌ ಅಚ್ಚರಿ ಮತ್ತು ಆಘಾತ ನೀಡುತ್ತದೆ.

ಕಲಾವಿದರ ನಟನೆ ಹೇಗಿದೆ?

ಬಲರಾಮನ ಪಾತ್ರದಲ್ಲಿ ವಿನೋದ್‌ ಮಿಂಚಿದ್ದಾರೆ. ಆಕ್ಷನ್ ದೃಶ್ಯಗಳಲ್ಲಿ ಮತ್ತು ಸ್ಕ್ರೀನ್ ಪ್ರೆಸೆನ್ಸ್‌ನಲ್ಲಿ ವಿನೋದ್ ಗಮನ ಸೆಳೆಯುತ್ತಾರೆ. ಜಯರಾಮ್‌ ಪಾತ್ರದಲ್ಲಿ ಆಶಿಶ್‌ ವಿದ್ಯಾರ್ಥಿ ಮತ್ತು ಶಶಿಧರ್‌ ಪಾತ್ರದಲ್ಲಿ ಅತುಲ್‌ ಕುಲಕರ್ಣಿ ಅವರ ನಟನೆ ಗಮಸನೆಳೆಯುತ್ತದೆ. ಆ ದಿನಗಳು ಸಿನಿಮಾದಿಂದ ಮುಂದುವರಿದ ಆ ಪಾತ್ರಗಳನ್ನು ಅಷ್ಟೇ ಎಫೆಕ್ವೀವ್‌ ಆಗಿ ಇಲ್ಲಿಯೂ ಕಟ್ಟಿಕೊಟಿದ್ದಾರೆ.

ನಟ ರಮೇಶ್‌ ಇಂದಿರಾ ಅವರು ಮೊನಪ್ಪ ರೈ ಪಾತ್ರದಲ್ಲಿ ತಮ್ಮದೇ ವಿಶಿಷ್ಟ ಶೈಲಿಯ ಮೂಲಕ ಮಿಂಚಿದ್ದಾರೆ. ಕತ್ತಿ ಪಾತ್ರದಲ್ಲಿ ನಟಿಸಿರುವ ವಿನಯ್ ಗೌಡ ಅವರ ನಟನೆ ಅಚ್ಚುಕಟ್ಟಾಗಿದೆ. ಈ ಸಿನಿಮಾದಲ್ಲಿ ಅವರ ಪಾತ್ರ ಸಖತ್ ಹೈಲೈಟ್ ಆಗಿದೆ. ಪ್ರಿಯಾ ಆನಂದ್, ಅವಿನಾಶ್‌, ಅಶ್ವಿನ್‌ ಹಾಸನ್‌, ಪ್ರತಾಪ್‌ ನಾರಾಣ್‌ ನಟನೆ ಸೊಗಸಾಗಿದೆ. ಗ್ಯಾಂಗ್‌ಸ್ಟರ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಬಲರಾಮನ ದಿನಗಳು ಖಂಡಿತವಾಗಿಯೂ ಇಷ್ಟವಾಗಲಿದೆ. `ಆ ದಿನಗಳು' ಗುಂಗಿನಲ್ಲಿ ಈ ದಿನಗಳನ್ನು ನೋಡಬಾರದಷ್ಟೇ!

Movie: ಬಲರಾಮನ ದಿನಗಳು
Release Date: ಜೂನ್ 26, 2026
Language: ಕನ್ನಡ
Genre: ಡ್ರಾಮಾ, ಆಕ್ಷನ್
Director: ಕೆ ಎಂ ಚೈತನ್ಯ
Cast: ವಿನೋದ್‌ ಪ್ರಭಾಕರ್‌, ಪ್ರಿಯಾ ಆನಂದ್‌, ವಿನಯ್‌ ಗೌಡ, ಅತುಲ್‌ ಕುಲಕರ್ಣಿ, ಆಶಿಶ್ ವಿದ್ಯಾರ್ಥಿ, ಅಶ್ವಿನ್‌ ಹಾಸನ್‌, ಪ್ರತಾಪ್‌ ನಾರಾಯಣ್‌, ರಮೇಶ್‌ ಇಂದಿರಾ.
Duration: 151ನಿಮಿಷ
Rating: 3/5