'ಬಲರಾಮನ ದಿನಗಳು' ಚಿತ್ರಕ್ಕೆ ಧ್ವನಿಯಾದ 'ಆಲ್ ಓಕೆ' ಅಲೋಕ್; ಸಖತ್ ಖುಷಿಯಾದ ನಟ ವಿನೋದ್ ಪ್ರಭಾಕರ್
ವಿನೋದ್ ಪ್ರಭಾಕರ್ ಮುಖ್ಯ ಭೂಮಿಕೆಯ, ಕೆ ಎಂ ಚೈತನ್ಯ ನಿರ್ದೇಶನದ 'ಬಲರಾಮನ ದಿನಗಳು' ಚಿತ್ರದ ಹೊಸ ಹಾಡು ಬಿಡುಗಡೆಯಾಗಿದೆ. ಸಂತೋಷ್ ನಾರಾಯಣನ್ ಸಂಗೀತ ಹಾಗೂ 'ಆಲ್ ಓಕೆ' ಅಲೋಕ್ ಧ್ವನಿಯಾಗಿರುವ ಈ ಗೀತೆಯ ಬಗ್ಗೆ ಭಾರಿ ಮೆಚ್ಚುಗೆ ಸಿಕ್ಕಿದೆ.
-
ಕನ್ನಡ ಚಿತ್ರರಂಗದಲ್ಲಿ ಸದ್ಯ ಭಾರೀ ನಿರೀಕ್ಷೆ ಮೂಡಿಸಿರುವ, ವಿನೋದ್ ಪ್ರಭಾಕರ್ ಮುಖ್ಯ ಭೂಮಿಕೆಯಲ್ಲಿರುವ ‘ಬಲರಾಮನ ದಿನಗಳು’ ಚಿತ್ರದ ಹಾಡುಗಳು ಒಂದೊಂದಾಗಿಯೇ ಬಿಡುಗಡೆಯಾಗುತ್ತಿವೆ.
ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ವಿಶೇಷ ಗೀತೆಗೆ, ಕನ್ನಡದ ಪ್ರಖ್ಯಾತ ರಾಪರ್ ‘ಆಲ್ ಓಕೆ’ ಅಲೋಕ್ ಧ್ವನಿಯಾಗಿದ್ದಾರೆ. ಸದ್ಯ ಈ ಹಾಡು ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡ್ ಸೃಷ್ಟಿಸುತ್ತಿದೆ. ಈ ಹಾಡಿನ ಯಶಸ್ಸಿನ ಬಗ್ಗೆ ನಟ ವಿನೋದ್ ಪ್ರಭಾಕರ್ ಕೂಡ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.
ಕೆಲವು ತಪ್ಪು ನಿರ್ಧಾರಗಳಿಂದ ಹಾದಿ ತಪ್ಪಿದ್ದೆ
ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾವುಕರಾಗಿ ಮಾತನಾಡಿದ ನಾಯಕ ನಟ ವಿನೋದ್ ಪ್ರಭಾಕರ್, "ನಾನು ಇಂದು ಈ ಮಟ್ಟಕ್ಕೆ ಬೆಳೆದು ನಿಲ್ಲಲು ನನ್ನ ತಂದೆ, ಕನ್ನಡದ ಹೆಮ್ಮೆಯ ನಟ ‘ಟೈಗರ್’ ಪ್ರಭಾಕರ್ ಅವರೇ ಕಾರಣ. ಚಿತ್ರರಂಗದಲ್ಲಿ ಅವರ ಕನಸುಗಳು ಅಪಾರವಾಗಿದ್ದವು. ಆರಂಭದಲ್ಲಿ ನಾನು ಕೆಲವು ತಪ್ಪು ನಿರ್ಧಾರಗಳಿಂದ ಹಾದಿ ತಪ್ಪಿದ್ದೆ, ಆದರೆ ಈಗ ಮತ್ತೆ ಕಂಬ್ಯಾಕ್ ಮಾಡಿದ್ದೇನೆ. ಇಂದಿನ ದಿನಗಳಲ್ಲಿ ಸಿನಿಮಾಗಳು ಕಂಟೆಂಟ್ ಆಧಾರದ ಮೇಲೆ ಗೆಲ್ಲುತ್ತಿವೆ. ನಾನು ನನ್ನ ತಂದೆಯ ಮುಂದುವರಿದ ಅಧ್ಯಾಯವಾಗಿ ಚಿತ್ರರಂಗದಲ್ಲಿ ಮುಂದುವರಿಯುತ್ತೇನೆ" ಎಂದರು.
ಶ್ರೇಯಸ್ ನಿರ್ಮಾಣದ ಸಿನಿಮಾ
ಅಲ್ಲದೆ, ಇಂದಿನ ಯುವ ಪೀಳಿಗೆಯನ್ನು ಸೆಳೆಯುವಂತೆ ಅದ್ಭುತವಾಗಿ ಹಾಡಿರುವ ಆಲ್ ಓಕೆ ಅಲೋಕ್ ಮತ್ತು ಇಡೀ ತಂಡಕ್ಕೆ ಅವರು ಧನ್ಯವಾದ ಅರ್ಪಿಸಿದರು. ಚಿತ್ರದ ನಿರ್ಮಾಪಕರಾದ ಶ್ರೇಯಸ್ ಮತ್ತು ಪದ್ಮಾವತಿ ಅವರು 'ಕೆ.ವಿ.ಎಲ್. ಸಂಸ್ಥೆ'ಯ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಿರ್ಮಾಪಕರು, "ಸಂತೋಷ್ ನಾರಾಯಣನ್ ಅವರ ಸಂಗೀತ ಮತ್ತು ಆಲ್ ಓಕೆ ಅವರ ಗಾಯನ ಕೇವಲ ಯುವ ಸಮುದಾಯಕ್ಕಷ್ಟೇ ಅಲ್ಲದೆ, ಹಳೆಯ ತಲೆಮಾರಿನ ಪ್ರೇಕ್ಷಕರಿಗೂ ಕನೆಕ್ಟ್ ಆಗುತ್ತದೆ. ಈ ಹಾಡನ್ನು ಮೊದಲ ಬಾರಿ ಕೇಳಿದಾಗ ಮೈ ಜುಂ ಎಂದಿತು" ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಈ ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ?
ಬಲರಾಮ ದಿನಗಳು ಸಿನಿಮಾಕ್ಕೆ ಕೆ ಎಂ ಚೈತನ್ಯ ನಿರ್ದೇಶನ ಮಾಡಿದ್ದಾರೆ. ವಿನೋದ್ ಪ್ರಭಾಕರ್ ಅವರಿಗೆ ಜೋಡಿಯಾಗಿ ಪ್ರಿಯಾ ಆನಂದ್ ನಟಿಸಿದ್ದಾರೆ. ಶರತ್ ಲೋಹಿತಾಶ್ವ, ಆತುಲ್ ಕುಲಕರ್ಣಿ, ಅಶೀಷ್ ವಿದ್ಯಾರ್ಥಿ, ರಮೇಶ್ ಇಂದಿರಾ ಸೇರಿದಂತೆ ದೊಡ್ಡ ಪೋಷಕ ಕಲಾವಿದರ ತಾರಾಬಳಗವೇ ಇದೆ. ಚಿತ್ರಕ್ಕೆ ಖ್ಯಾತ ಛಾಯಾಗ್ರಾಹಕ ಹೆಚ್ ಸಿ ವೇಣು ಛಾಯಾಗ್ರಹಣ ಮಾಡಿದ್ದಾರೆ. ಜೂನ್ 26ರಂದು ಈ ಸಿನಿಮಾ ತೆರೆಗೆ ಬರುತ್ತಿದೆ.