ನಟ, ನಿರ್ಮಾಪಕ, ನಿರ್ದೇಶಕ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಕೂಡ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ತಂದೆಯ ಯಾವುದೇ ಪ್ರಭಾವ ಇಲ್ಲದೇ, ತಮ್ಮದೇ ಆದ ಸ್ವಂತ ಗುರುತನ್ನ ಪಡೆದುಕೊಂಡಿರು ಶ್ರುತಿ, ಗಾಯಕಿಯಾಗಿ, ನಟಿಯಾಗಿ ಮಿಂಚುತ್ತಿದ್ದಾರೆ. ಬಾಲ್ಯದಲ್ಲೂ ಕೂಡ ಶ್ರುತಿಗೆ ತಂದೆಯ ಹೆಸರಿನಿಂದ ಗುರುತಿಸಿಕೊಳ್ಳಲು ಇಷ್ಟವಿರಲಿಲ್ಲವಂತೆ. ಅದಕ್ಕಾಗಿ ತಂದೆಯ ಹೆಸರನ್ನೇ ಸುಳ್ಳು ಹೇಳುತ್ತಿದ್ದರಂತೆ!
ಎಲ್ರೂ ತಂದೆ ಬಗ್ಗೆ ಹೇಳೋದು ಕಿರಿಕಿರಿ ಆಗ್ತಿತ್ತು
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶ್ರುತಿ, ಬಾಲ್ಯದಲ್ಲಿ ತಮ್ಮದೇ ಆದ ಒಂದು ಸ್ವಂತ ಐಡೆಂಟಿಟಿಯನ್ನು ಸೃಷ್ಟಿಸಿಕೊಳ್ಳಲು ಹರಸಾಹಸಪಟ್ಟ ದಿನಗಳನ್ನು ನೆನಪಿಸಿಕೊಂಡಿದ್ದಾರೆ. "ಸಾರಿಕಾ ಮತ್ತು ಕಮಲ್ ಹಾಸನ್ ಅವರ ಮಗಳಾಗಿ ಹುಟ್ಟಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ಆದರೆ ನಾನು ಚಿಕ್ಕವಳಿದ್ದಾಗ ಪ್ರತಿಯೊಬ್ಬರೂ ನನ್ನ ತಂದೆಯ ಬಗ್ಗೆಯೇ ಕೇಳುತ್ತಿದ್ದರು. ಅದು ನನಗೆ ಕಿರಿಕಿರಿ ಉಂಟುಮಾಡುತ್ತಿತ್ತು" ಎಂದು ಶ್ರುತಿ ಹಾಸನ್ ಹೇಳಿಕೊಂಡಿದ್ದರು.
Kamal Haasan Movie: 44 ವರ್ಷಗಳ ಬಳಿಕ ಒಟಿಟಿಗೆ ಬರ್ತಿದೆ ಈ ಸೌತ್ ಹಿಟ್ ಮೂವಿ!
ನಾನು ಪೂಜಾ ರಾಮಚಂದ್ರನ್..
"ಸಾರ್ವಜನಿಕ ಸ್ಥಳಗಳಲ್ಲಿ, 'ಹೇ ಅಲ್ಲಿ ನೋಡು, ಆಕೆ ಕಮಲ್ ಹಾಸನ್ ಮಗಳು' ಎಂದು ನನ್ನನ್ನು ಗುರುತಿಸುತ್ತಿದ್ದರು. ಆಗ ನನಗೆ, 'ನಾನು ಶ್ರುತಿ, ನನಗೂ ನನ್ನದೇ ಆದ ಒಂದು ಗುರುತು ಬೇಕು' ಎನಿಸುತ್ತಿತ್ತು. ಆ ದಿನಗಳಲ್ಲಿ ಯಾರಾದರೂ ಬಂದು ನೀನು ಕಮಲ್ ಹಾಸನ್ ಮಗಳಾ ಎಂದು ಕೇಳಿದರೆ, ನಾನು 'ಇಲ್ಲ, ನನ್ನ ತಂದೆ ಹೆಸರು ಡಾ. ರಾಮಚಂದ್ರನ್' ಎಂದು ಸುಳ್ಳು ಹೇಳುತ್ತಿದ್ದೆ. ಅಂದಹಾಗೆ, ಆ ರಾಮಚಂದ್ರನ್ ಬೇರೆ ಯಾರೂ ಅಲ್ಲ, ನಮ್ಮ ದಂತ ವೈದ್ಯರಾಗಿದ್ದರು. ಜೊತೆಗೆ ನನ್ನ ಹೆಸರು ಪೂಜಾ ರಾಮಚಂದ್ರನ್ ಎಂದು ನಾನೇ ಒಂದು ಹೆಸರನ್ನು ಸೃಷ್ಟಿಸಿಕೊಂಡು ಹೇಳುತ್ತಿದ್ದೆ" ಎಂದು ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದರು ಶ್ರುತಿ.
ಕಮಲ್ ಹೆಸರಿಲ್ಲದ ಶ್ರುತಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ
"ನನ್ನ ತಂದೆ ಕೇವಲ ಒಬ್ಬ ನಟ ಅಥವಾ ಪ್ರಸಿದ್ಧ ವ್ಯಕ್ತಿ ಮಾತ್ರವಲ್ಲ, ನಾನು ಭೇಟಿಯಾದ ಉಳಿದ ಎಲ್ಲರಿಗಿಂತ ಅವರು ವಿಭಿನ್ನ ಹಾಗೂ ಅಪರೂಪದ ವ್ಯಕ್ತಿ ಎಂಬುದು ನನಗೆ ಬಾಲ್ಯದಲ್ಲೇ ಗೊತ್ತಿತ್ತು. ನಾನು ಮತ್ತು ನನ್ನ ತಂಗಿ ಅಕ್ಷರಾ ಇಬ್ಬರೂ ತುಂಬ ಹಠಮಾರಿ ಸ್ವಭಾವದ ದಂಪತಿಗಳ ಕೈಯಲ್ಲಿ ಬೆಳೆದಿದ್ದೇವೆ. ಹಾಗಾಗಿ ಅವರ ಆ ಸ್ವಭಾವ ನಮಗೂ ಬಂದಿದೆ. ನಮ್ಮ ಹೆತ್ತವರು ಬೇರೆಯಾದಾಗ ನಾನು ಮುಂಬೈಗೆ ಶಿಫ್ಟ್ ಆದೆ. ಏಕೆಂದರೆ ಚೆನ್ನೈನಲ್ಲಿ ಇದ್ದಾಗ ನನಗೆ 'ಶ್ರುತಿ'ಯಾಗಿ ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತಿರಲಿಲ್ಲ. ರಸ್ತೆ ರಸ್ತೆಗಳಲ್ಲೂ ಅಪ್ಪನ ಸಿನಿಮಾಗಳ ಪೋಸ್ಟರ್‌ಗಳು ಇರುವಾಗ, ಅವರ ಆ ಸ್ಟಾರ್‌ಡಮ್ ಮತ್ತು ಜನಪ್ರಿಯತೆಯಿಂದ ದೂರ ಉಳಿಯುವುದು ಅಸಾಧ್ಯವಾಗಿತ್ತು. ಆದರೆ ಇಂದು ಕಮಲ್ ಹಾಸನ್ ಹೆಸರಿಲ್ಲದ ಶ್ರುತಿಯನ್ನು ಕಲ್ಪಿಸಿಕೊಳ್ಳಲು ಕೂಡ ನನಗೆ ಸಾಧ್ಯವಿಲ್ಲ" ಎಂದಿದ್ದರು ಶ್ರುತಿ ಹಾಸನ್.
Kamal Haasan: ಕಮಲ್ ಹಾಸನ್-ಶಿವಕಾರ್ತಿಕೇಯನ್ ಜೋಡಿಯ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್!
ಅಂದಹಾಗೆ, ಕಮಲ್ ಹಾಸನ್ ಹಾಗೂ ನಟಿ ಸಾರಿಕಾ ಅವರು 1988ರಲ್ಲಿ ವಿವಾಹವಾಗಿ, 2004ರಲ್ಲಿ ವಿಚ್ಛೇದನ ಪಡೆದರು. ಇವರಿಗೆ ಶ್ರುತಿ ಹಾಸನ್ ಮತ್ತು ಅಕ್ಷರಾ ಹಾಸನ್ ಎಂಬಿಬ್ಬರು ಪುತ್ರಿಯರಿದ್ದಾರೆ.