ಮುಂಬೈ/ಚೆನ್ನೈ: ಸ್ವಾತತ್ರ್ಯೋತ್ಸವ ಸಂಭ್ರಮವನ್ನು ದುಪ್ಪಟ್ಟುಗೊಳಿಸಲು ಸಿನಿಪ್ರಿಯರಿಗಾಗಿ ಒಂದಲ್ಲ ಎರಡು ಭರ್ಜರಿ ಗಿಫ್ಟ್ ಸಿಕ್ಕಿದೆ. ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ತಮಿಳಿನ ʼಕೂಲಿʼ (Coolie) ಮತ್ತು ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್, ಟಾಲಿವುಡ್ ಸ್ಟಾರ್ ಜೂ. ಎನ್‌ಟಿಆರ್ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ಹಿಂದಿಯ 'ವಾರ್ 2' (War 2) ಗುರುವಾರ (ಆಗಸ್ಟ್ 14) ರಿಲೀಸ್ ಆಗಿದೆ. ಸ್ಟಾರ್ ಕಾಸ್ಟ್, ಅದ್ಧೂರಿ ಬಜೆಟ್ ಕಾರಣಕ್ಕೆ ಆರಂಭದಿಂದಲೇ ಭಾರಿ ಕುತೂಹಲ ಕೆರಳಿಸಿದ್ದ ಈ ಚಿತ್ರಗಳು ಕೊನೆಗೂ, ಪ್ರೇಕ್ಷಕರ ಮುಂದೆ ಬಂದಿವೆ (Coolie-War 2 First Reactions). ಎರಡೂ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕಾಲಿವುಡ್‌ನಲ್ಲಿ ʼಖೈದಿʼ, ʼಮಾಸ್ಟರ್ʼ, ʼವಿಕ್ರಂʼ ಮುಂತಾದ ಹೊಸ ಬಗೆಯ ಕ್ರೈಂ ಥ್ರಿಲ್ಲರ್ ಮೂಲಕ ಕಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಲೋಕೇಶ್ ಕನಕರಾಜನ್ ಇದೇ ಮೊದಲ ಬಾರಿಗೆ ರಜನಿಕಾಂತ್‌ಗೆ ಆ್ಯಕ್ಷನ್ ಕಟ್ ಹೇಳಿದ ಚಿತ್ರ 'ಕೂಲಿ'. ಇದೇ ಕಾರಣಕ್ಕೆ ಆರಂಭದಿಂದಲೇ ಭಾರಿ ಸದ್ದು ಮಾಡಿದೆ. ಜತೆಗೆ ಆಮೀರ್ ಖಾನ್, ಉಪೇಂದ್ರ, ನಾಗಾರ್ಜುನ, ಶ್ರುತಿ ಹಾಸನ್, ರಚಿತಾ ರಾಮ್ ಸೇರಿದಂತೆ ವಿವಿಧ ಚಿತ್ರರಂಗದ ಜನಪ್ರಿಯ ಕಲಾವಿದರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದು, ಆ ಮೂಲಕವೂ ಕುತೂಹಲ ಕೆರಳಿಸಿದೆ. ಅನಿರುದ್ಧ್ ರವಿಚಂದ್ರನ್ ಅವರ ಸಂಗೀತ ಸಿನಿಮಾಕ್ಕೆ ಮತ್ತಷ್ಟು ಮೈಲೇಜ್ ನೀಡಿದೆ.
ಇತ್ತ 'ವಾರ್ 2' ಕೂಡ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಬಾಲಿವುಡ್‌ನ ಯಶಸ್ವಿ ನಿರ್ದೇಶಕ ಅಯನ್ ಮುಖರ್ಜಿ ಇದೇ ಮೊದಲ ಬಾರಿಗೆ ಹೃತಿಕ್ ರೋಷನ್‌ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಜತೆಗೆ ಪ್ರಮುಖ ಪಾತ್ರದಲ್ಲಿ ಟಾಲಿವುಡ್ ಸ್ಟಾರ್ ಜೂ. ಎನ್‌ಟಿಆರ್ ನಟಿಸಿದ್ದು, ಬಾಲಿವುಡ್‌ಗೆ ಭರ್ಜರಿಯಾಗಿ ಕಾಲಿಟ್ಟಿದ್ದಾರೆ. ಕಿಯಾರಾ ಅಡ್ವಾಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪ್ರೀತಮ್ ಸಂಗೀತ ನೀಡಿದ ಹಾಡುಗಳು ಸೂಪರ್ ಹಿಟ್ ಎನಿಸಿಕೊಂಡಿವೆ. ಈ ಎಲ್ಲ ಕಾರಣಗಳಿಗೆ ಎರಡೂ ಚಿತ್ರಗಳ ಮೇಲೆ ಬೆಟ್ಟದಷ್ಟು ನಿರೀಕ್ಷೆ ಮನೆ ಮಾಡಿತ್ತು. ಇದೀಗ ಕೊನೆಗೂ ಈ ಸಿನಿಮಾಗಳು ತೆರೆಕಂಡಿವೆ.
ಈ ಸುದ್ದಿಯನ್ನೂ ಓದಿ: Hombale Films: ʼಕೆಜಿಎಫ್ʼ ಚಿತ್ರಕ್ಕೆ ಯಶ್‌ಗಿಂತ ಮೊದಲು ಆಯ್ಕೆಯಾಗಿದ್ದು ಬೇರೆ ಸ್ಟಾರ್? ರಾಕಿ ಭಾಯ್ ಪಾತ್ರದ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಸ್ಪಷ್ಟನೆ
ಪ್ರೇಕ್ಷಕರು ಏನಂದ್ರು?
ಕೂಲಿ ಚಿತ್ರಕ್ಕೆ ಎಲ್ಲೆಡೆ ಭರ್ಜರಿ ಓಪನಿಂಗ್ ಸಿಕ್ಕಿದೆ. ರಜನಿಕಾಂತ್ ಅವರ ಮಾಸ್ ಅವತಾರಕ್ಕೆ ಫ್ಯಾನ್ ಶಿಳ್ಳೆ ಹೊಡೆದಿದ್ದಾರೆ. ಅದಾಗ್ಯೂ ಕೆಲವರಿಗೆ ಈ ಚಿತ್ರ ಅಷ್ಟಾಗಿ ಹಿಡಿಸಿಲ್ಲ. ಮಾಮೂಲಿ ಕಥೆ, ಕ್ಲೈಮ್ಯಾಕ್ಸ್ ಭಾಗ ಮಾತ್ರ ಚೆನ್ನಾಗಿದೆ ಎಂದಿದ್ದಾರೆ. ಚಿತ್ರ ನೋಡಿದ ಒಬ್ಬರು ಎಕ್ಸ್‌ನಲ್ಲಿ ಅಭಿಪ್ರಾಯ ತಿಳಿಸಿ, ʼʼರಜನಿಕಾಂತ್‌ಗೆ ರಜನಿಕಾಂತ್ ಸಾಟಿʼʼ ಎಂದಿದ್ದಾರೆ. ಇನ್ನೊಬ್ಬರು, ʼʼರೋಮಾಂಚನಗೊಂಡಿದ್ದೇನೆʼʼ ಎಂದು ತಿಳಿಸಿದ್ದಾರೆ. ʼʼಇದು ಇಂಡಸ್ಟ್ರಿ ಹಿಟ್ ಆಗಲಿದೆʼʼ ಎಂದು ರಜನಿ ಅಭಿಮಾನಿ ಭವಿಷ್ಯ ನುಡಿದಿದ್ದಾರೆ. ಮತ್ತೊಬ್ಬರು, ʼʼನಿರಾಸೆಯಾಯ್ತುʼʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನೋಡುಗರೊಬ್ಬರು, ʼʼಫಸ್ಟ್ ಹಾಫ್‌ನಲ್ಲಿ ನಾಗಾರ್ಜುನ್ ಮತ್ತು ಸೌಬಿನ್ ಶಹೀರ್ ಮಿಂಚಿದ್ದಾರೆ. ಸೆಕೆಂಡ್ ಹಾಫ್ ಉದ್ದವಾಯ್ತು. ಕ್ಲೈಮ್ಯಾಕ್ಸ್ ಊಹಿಸುವಂತಿದೆ. ಆಮೀರ್ ಖಾನ್ ಅತಿಥಿ ಪಾತ್ರ ಇಷ್ಟವಾಗಿಲ್ಲ. ಪೂಜಾ ಹೆಗ್ಡೆ ಡ್ಯಾನ್ಸ್ ಮಾತ್ರ ಇಷ್ಟವಾಯ್ತುʼʼ ಎಂದು ಹೇಳಿದ್ದಾರೆ. ಮಗದೊಬ್ಬರು ʼʼಚಿತ್ರ ನೋಡಿ ತುಂಬಾ ಬೇಸರವಾಯ್ತುʼʼ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಚಿತ್ರಕ್ಕೆ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾದರೂ ಕಲೆಕ್ಷನ್‌ನಲ್ಲಿ ಹಿಂದೆ ಬಿದ್ದಿಲ್ಲ. ಮೊದಲ ದಿನ 100 ಕೋಟಿ ರೂ. ಕ್ಲಬ್ ಅನ್ನು ಅನಾಯಾಸವಾಗಿ ಸೇರುವ ಎಲ್ಲ ಸಾಧ್ಯತೆ ಇದೆ.
ಅನೇಕ ದಿನಗಳ ಬಳಿಕ ತೆರೆಮೇಲೆ ಪ್ರತ್ಯಕ್ಷರಾದ ಹೃತಿಕ್ ರೋಷನ್‌ಗೆ ಉತ್ತಮ ಸ್ವಾಗತವೇ ಸಿಕ್ಕಿದೆ. ಹಿಂದಿ ಬೆಲ್ಸ್‌ನಲ್ಲಿ ʼವಾರ್ 2ʼಗೆ ಭರ್ಜರಿ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಹೈವೋಲ್ಟೇಜ್ ಆ್ಯಕ್ಷನ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ʼʼಚಿತ್ರ ಆ್ಯಕ್ಷನ್ ತುಂಬಾ ಇಷ್ಟವಾಯ್ತುʼʼ ಎಂದು ಒಬ್ಬರು ತಿಳಿಸಿದ್ದಾರೆ. ʼʼಹೃತಿಕ್ ಮತ್ತು ಜೂ. ಎನ್‌ಟಿಆರ್ ಆ್ಯಕ್ಷನ್, ಅಭಿನಯ ಅದ್ಭುತವಾಗಿದೆʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಗೂಸ್‌ಬಂಪ್ಸ್ ಮೂಮೆಂಟ್ʼʼ ಎಂದು ಮತ್ತೊಬ್ಬರು ನುಡಿದಿದ್ದಾರೆ. ಅದಾಗ್ಯೂ ಕೆಲವರು ಸಾಧಾರಣ ಎಂದು ಕರೆದಿದ್ದು, ಚಿತ್ರಕಥೆ ಇನ್ನಷ್ಟು ಬಿಗುವಿನಿಂದ ಕೂಡಿರಬೇಕಿತ್ತು ಎಂದಿದ್ದಾರೆ. ಅದಾಗ್ಯೂ ʼವಾರ್ 2ʼ ಕಲೆಕ್ಷನ್ ಕೂಡ ಉತ್ತಮವಾಗಿದ್ದು, ಅಂತಿಮವಾಗಿ ಗೆಲುವು ಯಾರ ಪಾಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.