ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hombale Films: ʼಕೆಜಿಎಫ್‌ʼ ಚಿತ್ರಕ್ಕೆ ಯಶ್‌ಗಿಂತ ಮೊದಲು ಆಯ್ಕೆಯಾಗಿದ್ದು ಬೇರೆ ಸ್ಟಾರ್‌? ರಾಕಿ ಭಾಯ್‌ ಪಾತ್ರದ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

KGF: ಸ್ಯಾಂಡಲ್‌ವುಡ್‌ನ ಚಿತ್ರಣವನ್ನೇ ಬದಲಾಯಿಸಿದ ʼಕೆಜಿಎಫ್‌ʼ ಚಿತ್ರ ಯಾರಿಗೆ ಇಷ್ಟ ಇಲ್ಲ ಹೇಳಿ? ರಾಕಿ ಭಾಯ್‌ ಪಾತ್ರದಲ್ಲಿ ಕಾಣಿಸಿಕೊಂಡ ಯಶ್‌ ಅಂತಹ ಮೋಡಿ ಮಾಡಿದ್ದಾರೆ. ಅವರನ್ನು ಬಿಟ್ಟರೆ ಆ ಪಾತ್ರದಲ್ಲಿ ಬೇರೆ ಯಾರನ್ನೂ ಊಹಿಸಲು ಸಾಧ್ಯವಿಲ್ಲ. ಅದಾಗ್ಯೂ ಈ ಪಾತ್ರಕ್ಕೆ ಯಶ್‌ ಮೊದಲ ಆಯ್ಕೆಯಾಗಿರಲಿಲ್ಲ ಎನ್ನುವ ವದಂತಿ ಹಬ್ಬಿದ್ದು, ಇದಕ್ಕೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ ನೀಡಿದೆ.

ʼಕೆಜಿಎಫ್‌ʼ ಚಿತ್ರಕ್ಕೆ ಯಶ್‌ ಮೊದಲ ಆಯ್ಕೆಯಾಗಿರಲಿಲ್ಲವೆ?

Ramesh B Ramesh B Aug 13, 2025 8:10 PM

ಬೆಂಗಳೂರು: ಜಾಗತಿಕ ಸಿನಿಪ್ರೇಮಿಗಳು ಸ್ಯಾಂಡಲ್‌ವುಡ್‌ ಕಡೆಗೆ ತಿರುಗಿ ನೋಡುವಂತೆ ಮಾಡಿದ ಖ್ಯಾತಿ ಪ್ರಶಾಂತ್‌ ನೀಲ್‌ (Prashanth Neel)-ಯಶ್‌ (Yash) ಕಾಂಬಿನೇಷನ್‌ನ ʼಕೆಜಿಎಫ್‌ʼ (KGF) ಸರಣಿ ಚಿತ್ರಕ್ಕೆ ಸಲ್ಲುತ್ತದೆ. ಕನ್ನಡದ ಹೆಮ್ಮೆಯ ಚಿತ್ರ ನಿರ್ಮಾಣ ಸಂಸ್ಥೆ ವಿಜಯ್ ಕಿರಗಂದೂರು (Vijay Kiragandur) ನೇತೃತ್ವದ ಹೊಂಬಾಳೆ ಫಿಲ್ಮ್ಸ್‌ (Hombale Films) ನಿರ್ಮಾಣದ ಈ ಸಿನಿಮಾದ ಮೊದಲ ಭಾಗ 2018ರಲ್ಲಿ ಮತ್ತು 2ನೇ ಭಾಗ 2022ರಲ್ಲಿನ ತೆರೆಕಂಡು ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿದೆ. ಆ್ಯಕ್ಷನ್‌ ಪ್ಯಾಕ್ಡ್‌ ಚಿತ್ರ ಇದಾಗಿದ್ದು, ಯಶ್‌ ಇಡೀ ಕಥೆಯನ್ನು ಆವರಿಸಿಕೊಂಡು ಗ್ಲೋಬಲ್‌ ಸ್ಟಾರ್‌ ಆಗಿ ಹೊರಹೊಮ್ಮಿದ್ದಾರೆ. ರೆಟ್ರೋ ಶೈಲಿಯಲ್ಲಿ ಮೂಡಿಬಂದ ಈ ಸಿನಿಮಾದ ಯಶ್‌ ಸ್ಟೈಲ್‌, ಮ್ಯಾನರಿಸಂ, ಆ್ಯಕ್ಷನ್‌, ಡೈಲಾಗ್‌ ಡೆಲಿವರಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದೇ ಕಾರಣಕ್ಕೆ ಈಗ ದೇಶದ ಬಹು ಬೇಡಿಕೆಯ ನಟ ಎನಿಸಿಕೊಂಡಿದ್ದಾರೆ. 'ಕೆಜಿಎಫ್‌'ನ ರಾಕಿ ಭಾಯ್‌ ಪಾತ್ರದಲ್ಲಿ ಯಶ್‌ ಅವರನ್ನು ಬಿಟ್ಟರೆ ಬೇರೆ ಯಾರನ್ನೂ ಊಹಿಸಲೂ ಸಾಧ್ಯವಾಗದ ಮಟ್ಟಿಗೆ ಅವರು ಪ್ರಭಾವ ಬೀರಿದ್ದಾರೆ. ಈ ಮಧ್ಯೆ ʼಕೆಜಿಎಫ್‌ʼ ಸರಣಿಗೆ ಯಶ್‌ ಮೊದಲ ಆಯ್ಕೆಯಾಗಿರಲಿಲ್ಲ ಎನ್ನುವ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದ್ದು, ಅದಕ್ಕೆ ಹೊಂಬಾಳೆ ಫಿಲ್ಮ್ಸ್‌ ಇದೀಗ ಸ್ಪಷ್ಟನೆ ನೀಡಿದೆ.

ಹಿಂದೂಸ್ಥಾನ್‌ ಟೈಮ್ಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಹೊಂಬಾಳೆ ಫಿಲ್ಮ್ಸ್‌ನ ಸಹ ಸಂಸ್ಥಾಪಕ ಚಲುವೇ ಗೌಡ ಈ ವದಂತಿಯನ್ನು ತಳ್ಳಿ ಹಾಕಿದ್ದಾರೆ. ಆ ಮೂಲಕ ʼಕೆಜಿಎಫ್‌ʼಗೆ ಯಶ್‌ ಮೊದಲ ಮತ್ತು ಕೊನೆಯ ಆಯ್ಕೆಯಾಗಿದ್ದರು ಎಂದು ತಿಳಿಸಿದ್ದಾರೆ.



ಈ ಸುದ್ದಿಯನ್ನೂ ಓದಿ: KGF Chapter 3: ಯಶ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; 'ಕೆಜಿಎಫ್‌ 3' ಬರೋದು ಪಕ್ಕಾ: ಮಾಳವಿಕಾ ಅವಿನಾಶ್‌ ಕೊಟ್ರು ಬಿಗ್‌ ಅಪ್‌ಡೇಟ್‌

ಸ್ಪಷ್ಟನೆಯಲ್ಲಿ ಏನಿದೆ?

ʼʼಯಾವುದೇ ಇತರ ನಟರಿಗಿಂತ ಹೆಚ್ಚು ಸಮಯ ನಾವು ಯಶ್‌ ಜತೆ ಕೆಲಸ ಮಾಡಿದ್ದೇವೆ. ಅದಕ್ಕಿಂತ ಹೆಚ್ಚಾಗಿ ಯಶ್‌ ನಮ್ಮ ಕುಟುಂಬದ ಓರ್ವ ಸದಸ್ಯ. ಅವರನ್ನು ಮನಸ್ಸಿನಲ್ಲಿಟ್ಟುಕೊಂಡೇ ʼಕೆಜಿಎಫ್‌ʼ ಕಥೆ ಹೆಣೆದಿದ್ದೇವೆ. ಅವರು ಯಾವತ್ತಿದ್ದರೂ ನಮ್ಮ ರಾಕಿ ಭಾಯ್‌. ʼಕೆಜಿಎಫ್‌ 1ʼ ಚಿತ್ರದ ಇತರ ಪ್ರಮುಖ ಪಾತ್ರಗಳಿಗಾಗಿ ನಾವು ದೇಶದ ಹಲವು ಸ್ಟಾರ್‌ಗಳನ್ನು ಸಂಪರ್ಕಿಸಿದ್ದೆವು. ಅದು ಬಿಟ್ಟರೆ ನಾಯಕ ಪಾತ್ರಕ್ಕೆ ಬೇರೆ ಯಾರನ್ನೂ ಪರಿಗಣಿಸಿರಲಿಲ್ಲ. ನಾಯಕನ ಪಾತ್ರಕ್ಕೆ ಯಶ್‌ ಮೊದಲ ಆಯ್ಕೆಯಾಗಿರಲಿಲ್ಲ ಎನ್ನುವ ಸುದ್ದಿ ಸತ್ಯಕ್ಕೆ ದೂರವಾದುದುʼʼ ಎಂದು ತಿಳಿಸಿದ್ದಾರೆ. ಆ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ.

ಆಫರ್‌ ತಿರಸ್ಕರಿಸಿದ್ದ ಸ್ಟಾರ್

ʼಕೆಜಿಎಫ್‌ʼ ಚಿತ್ರದ ಪ್ರಮುಖ ಪಾತ್ರಗಳನ್ನು ವಿವಿಧ ಚಿತ್ರರಂಗಗಳ ಸ್ಟಾರ್‌ಗಳು ನಿರಾಕರಿಸಿದ್ದರು ಎನ್ನುವ ವಿಚಾರವನ್ನೂ ಅವರು ಈ ಸಂದರ್ಭದಲ್ಲಿ ಬಹಿರಂಗಡಿಸಿದ್ದಾರೆ. ʼʼಕೆಜಿಎಫ್‌ʼ ಸಿನಿಮಾದ ಪಾತ್ರವೊಂದಕ್ಕೆ ನಾವು ಬೇರೆ ಚಿತ್ರರಂಗದ ಸ್ಟಾರ್‌ ನಟರೊಬ್ಬರನ್ನು ಸಂಪರ್ಕಿಸಿದ್ದೆವು. ಕನ್ನಡ ಸಿನಿಮಾಗಳು ಎಲ್ಲಿ ಓಡುತ್ತವೆ? ಎಂದು ಅವರು ಪ್ರಶ್ನಿಸಿದ್ದರು. ಆ ವೇಳೆ ಬೇರೆ ಚಿತ್ರರಂಗದ ಹಲವು ನಟರು ಇದೇ ಅಭಿಪ್ರಾಯ ಹೊಂದಿದ್ದರು. ಡಾ. ರಾಜ್‌ಕುಮಾರ್‌ ಸೇರಿದಂತೆ ಕೆಲವೇ ಕಲಾವಿದರ ಹೆಸರಷ್ಟೇ ಅವರಿಗೆ ತಿಳಿದಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಕನ್ನಡ ಚಿತ್ರರಂಗದ ಬಗ್ಗೆ ಎಲ್ಲರಿಗೂ ತಿಳಿಯುವಂತಾಗಿದೆʼʼ ಎಂದಿದ್ದಾರೆ.

ʼಕೆಜಿಎಫ್‌ʼ ಸ್ಯಾಂಡಲ್‌ವುಡ್‌ನ ಚಿತ್ರಣವನ್ನೇ ಬದಲಾಯಿಸಿದ್ದು, ಈಗಲೂ ಹಲವರ ಫೆವರೇಟ್‌ ಎನಿಸಿಕೊಂಡಿದೆ. ಮೊದಲ ಭಾಗ 250 ಕೋಟಿ ರೂ. ದೋಚಿಕೊಂಡರೆ, 2ನೇ ಭಾಗ ಸುಮಾರು 1,200 ಕೋಟಿ ರೂ. ಗಳಿಸಿದೆ. ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಟಾಪ್‌ 5 ಭಾರತೀಯ ಚಿತ್ರಗಳ ಪೈಕಿ ʼಕೆಜಿಎಫ್‌ 2ʼ ಕೂಡ ಸ್ಥಾನ ಪಡೆದುಕೊಂಡಿದೆ.