Karimani: 'ಕರಿಮಣಿ' ಧಾರಾವಾಹಿಯ 'ಬ್ಲ್ಯಾಕ್ ರೋಜ್' ಯಾರು ? ಮಾ. 24 ಕ್ಕೆ ಬಯಲಾಗಲಿದೆ ಸತ್ಯ
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಕರಿಮಣಿ'ಯ 'ಬ್ಲ್ಯಾಕ್ ರೋಜ್' ಪಾತ್ರ ಜನರಿಗೆ ಅತ್ಯಂತ ಕುತೂಹಲ ಹುಟ್ಟಿಸಿದ ನೆಗೆಟಿವ್ ಪಾತ್ರ. ಈ 'ಬ್ಲ್ಯಾಕ್ ರೋಜ್' ಯಾರು ಎನ್ನುವುದು ಪ್ರೇಕ್ಷಕರಿಗೆ ಯಕ್ಷಪ್ರಶ್ನೆಯಾಗಿತ್ತು. ಆ ಯಕ್ಷಪ್ರಶ್ನೆಗೆ ಕೊನೆಗೂ ಉತ್ತರ ಸಿಗಲಿದೆ. ಮಾರ್ಚ್ 24 ರಂದು ಸಂಜೆ 6 ಕ್ಕೆ ಬಯಲಾಗಲಿದೆ

ಬ್ಲಾಕ್ ರೋಸ್

ಬೆಂಗಳೂರು: ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಕರಿಮಣಿ'ಯ 'ಬ್ಲ್ಯಾಕ್ ರೋಜ್' ಪಾತ್ರ ಜನರಿಗೆ ಅತ್ಯಂತ ಕುತೂಹಲ ಹುಟ್ಟಿಸಿದ ನೆಗೆಟಿವ್ ಪಾತ್ರ. ಕಥಾ ನಾಯಕ ಕರ್ಣನನ್ನು ನಾಶ ಮಾಡುವ ಏಕೈಕ ಉದ್ದೇಶ ಇರೋ ಈ 'ಬ್ಲ್ಯಾಕ್ ರೋಜ್' ಯಾರು ಎನ್ನುವುದು ಪ್ರೇಕ್ಷಕರಿಗೆ ಯಕ್ಷಪ್ರಶ್ನೆಯಾಗಿತ್ತು. ಆ ಯಕ್ಷಪ್ರಶ್ನೆಗೆ ಕೊನೆಗೂ ಉತ್ತರ ಸಿಗಲಿದೆ. ಮಾರ್ಚ್ 24 ರಂದು ಸೋಮವಾರ ಸಂಜೆ 6 ಕ್ಕೆ "ಕರಿಮಣಿ' ಧಾರಾವಾಹಿಯ "ಬ್ಲ್ಯಾಕ್ ರೋಜ್' ಯಾರು ಎಂಬ ರಹಸ್ಯ ಬಯಲಾಗಲಿದೆ.
ಯಾರು ಈ 'ಬ್ಲ್ಯಾಕ್ ರೋಜ್'?
'ಕರಿಮಣಿ' ಧಾರಾವಾಹಿಯ ಆಸಕ್ತಿಕರ ಅಂಶವೆಂದರೆ - ಇಲ್ಲಿ ಅತ್ಯಂತ ವಿಶಿಷ್ಟ ಪಾತ್ರಗಳಿರುತ್ತವೆ. ಒಂದು ರೆಗ್ಯುಲರ್ ಚೌಕಟ್ಟಿನಲ್ಲಿ ಇರದ ವಿಕ್ಷಿಪ್ತ ಅನಿಸುವ ಆದರೆ ಮನರಂಜನೆಗೆ ಮೋಸ ಮಾಡದ ಈ ಪಾತ್ರಗಳಲ್ಲಿ ಒಂದು - "ಬ್ಲ್ಯಾಕ್ ರೋಜ್' ಪಾತ್ರ. 'ಕರಿಮಣಿ' ಧಾರಾವಾಹಿ ಇತ್ತೀಚಿನ ದಿನಗಳಲ್ಲಿ ಜನರಿಗೆ ಪ್ರೀತಿಪಾತ್ರ ಆಗುವಲ್ಲಿ ಕತೆಗಾರ ಸೋಮು ಹೊಯ್ಸಳ ಅವರ ಪಾತ್ರವೂ ಇದೆ. ಸೋಮು ಹೊಯ್ಸಳ ಸೃಷ್ಟಿಸಿದ ಈ ಪಾತ್ರ ಯಾರಿವನು ಡ್ರೀಮ್ ಬಾಯ್ ಅಂತೆಲ್ಲ ಯೋಚಿಸೋ ಪಾತ್ರವಲ್ಲ. ಇದು ಕರ್ಣನ ಕನಸುಗಳನ್ನು ನಾಶ ಮಾಡಲೇ ಹುಟ್ಟಿರೋ ಬ್ಯಾಡ್ ಬಾಯ್' ಪಾತ್ರ. ಆದರೆ ಅದು "ಬಾಯೋ' 'ಗರ್ಲೋ' ಅಂದ್ರೆ, ಗಂಡೋ ಹೆಣ್ಣೋ ಅನ್ನುವುದು ಕೂಡಾ ಸಸ್ಪೆನ್ಸ್! ಹೌದು, ಗಂಡಿನ ಸ್ವರದಲ್ಲಿ ಮಾತಾಡುವ "ಬ್ಲ್ಯಾಕ್ ರೋಜ್' ಹೆಣ್ಣಾಗಿರಬಾರದೇಕೆ ಎಂದೆಲ್ಲ 'ಕರಿಮಣಿ' ಧಾರಾವಾಹಿಯ ಕೆಲವು ಮಹಿಳಾಮಣಿಗಳ ವಾದ.
ಸದಾ ಕಪ್ಪು ದಿರಿಸಿನಲ್ಲಿರುವ ಈ ಪಾತ್ರದ ಮುಖ ಜನರಿಗೆ ರಿವೀಲ್ ಆಗುವುದೇ ಇಲ್ಲ. ನೀಲಿ ಕಣ್ಣುಗಳು ಮಾತ್ರ ಜನರಿಗೆ ಕಾಣಿಸುತ್ತದೆ ಹೊರತು, ಯಾರು ಈ ಬ್ಲ್ಯಾಕ್ ರೋಜ್ ಅನ್ನುವುದು ಸಸ್ಪೆನ್ಸ್ ಆಗೇ ಉಳಿಯುತ್ತದೆ. ಕರ್ಣನ ಕುಟುಂಬದಲ್ಲಿಯೇ ಇರುವ ಅವನಿಗೆ ಹತ್ತಿರದ ಸಂಬಂಧಿಗಳಲ್ಲೇ ಒಬ್ಬರು - ಈ "ಬ್ಲ್ಯಾಕ್ ರೋಜ್' ಆಗಿರಬಹುದು ಎಂದುಕೊಂಡಿರುವ ಪ್ರೇಕ್ಷಕನ ತಲೆಯಲ್ಲಿ - ಇವರಿರಬಹುದಾ ಅವರಿರಬಹುದಾ ಎಂಬ ಲೆಕ್ಕಾಚಾರ ನಡೆಯುತ್ತಲೇ ಇದೆ. ಅವರಲ್ಲಿ ಪ್ರಮುಖವಾಗಿ - ಕರ್ಣ ಎಂದರೆ ಆಗದೆ ಇರೋ ವನಜ ಆಗಿರಬಹುದಾ? ನಳಿನಿನಾ ? ಅಥವಾ ವೆಂಕಟೇಶ್ ಆಗಿರಬಹುದಾ ಎಂದು ಗೆಸ್ ಮಾಡುತ್ತಾ ಕೂತ ಪ್ರೇಕ್ಷಕರಿಗೆ ಉತ್ತರ ಸಿಗುವ ಸಮಯ ಬಂದಿದೆ. ಪದ್ಮನಾಭ ಭಟ್ ಶೇವ್ಕಾರ್ ಅವರ ಸೊಗಸಾದ ಸಂಭಾಷಣೆ "ಕರಿಮಣಿ' ಧಾರಾವಾಹಿಗೆ ಚುರುಕು ತಂದಿದ್ದು "ವೃದ್ಧಿ ಪ್ರೊಡಕ್ಷನ್ಸ್'ನ ಹಲವು ಹೆಮ್ಮೆಯ ಸೀರಿಯಲ್ ಗಳಲ್ಲಿ ಒಂದೆನಿಸಲು ಪೂರಕವಾಗಿದೆ.
ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರ ಪ್ರತಿ ಸಂಜೆ 6 ಕ್ಕೆ ಪ್ರಸಾರವಾಗುತ್ತಿರುವ 'ಕರಿಮಣಿ' ಧಾರಾವಾಹಿಯಲ್ಲಿ 'ಬ್ಲ್ಯಾಕ್ ರೋಜ್' ರಹಸ್ಯ ಬಯಲಾಗುವ ಸಂಚಿಕೆಗಳನ್ನು ಮರೆಯದೆ ನೋಡಿ.
ಬ್ಲ್ಯಾಕ್ ರೋಜ್ ಚರಿತ್ರೆ
'A rose is a rose is a rose' ಅನ್ನುವುದು ಇಂಗ್ಲಿಷ್ ಸಾಹಿತ್ಯದ ಒಂದು ಪ್ರಸಿದ್ಧ ಸಾಲು. ಗುಲಾಬಿ ಎಂದೆಂದಿಗೂ ಗುಲಾಬಿಯೇ - ಅದು ಇನ್ನೊಂದು ಹೂವಾಗದು, ಅದರ ಅಸಲಿ ಗುಣ ಬದಲಾಗದು... ಅಂಥದೇ ಒಂದು ಕಪ್ಪು ಗುಲಾಬಿ ಮೊದಲ ಬಾರಿಗೆ ಕರ್ಣನಿಗೆ ತಲುಪಿಸಿದಾಗಿನಿಂದ ಈ ಕಣ್ಣಾಮುಚ್ಚಾಲೆ ಆಟ ಆರಂಭವಾಗಿ, ಕರ್ಣನ ನಾಶಕ್ಕಾಗಿ "ಬ್ಲ್ಯಾಕ್ ರೋಜ್' ಅನೇಕ ಪ್ರಯತ್ನಗಳನ್ನು ಮಾಡುತ್ತಾ ಹೋಗುತ್ತದೆ. ಕರ್ಣ ಕೂಡಾ ತನ್ನ ಬೆನ್ನ ಹಿಂದೆ ಬಿದ್ದಿರೋ "ಬ್ಲ್ಯಾಕ್ ರೋಜ್' ಯಾರು ಎನ್ನುವುದನ್ನು ತಿಳಿದುಕೊಳ್ಳಲು ಎಷ್ಟೇ ಕಷ್ಟಪಟ್ಟರೂ ವಿಫಲವಾಗುತ್ತಾನೆ. ಕಥಾ ನಾಯಕನಿಗೇ ಸವಾಲೊಡ್ಡುವ "ಬ್ಲ್ಯಾಕ್ ರೋಜ್'ನಿಂದ ಕಥಾನಾಯಕಿ ಸಾಹಿತ್ಯಾ ಕೂಡಾ ಹಲವು ಕಡೆ ಅಪಾಯ ಎದುರಿಸುವಂತಾಗುತ್ತದೆ. ಇನ್ನೂ ಒಂದು ಹಂತದಲ್ಲಿ ಕರ್ಣ ಮತ್ತು ಸಾಹಿತ್ಯಾ ನಡುವೆ ಭಿನ್ನಾಭಿಪ್ರಾಯ ಕೂಡಾ ಆಗಿ ಬಿಡುತ್ತದೆ.
ಸಾಹಿತ್ಯಾ ಮದುವೆ ರಿಷಿ ಜೊತೆ ಆಗಬೇಕು ಎಂದು ಸಂಚು ರೂಪಿಸಿದ್ದು "ಬ್ಲ್ಯಾಕ್ ರೋಜ್'. ಆದರೆ, ಅದನ್ನು ಏರುಪೇರು ಮಾಡುವಲ್ಲಿ ಕರ್ಣ ಯಶಸ್ವಿಯಾಗುವುದಲ್ಲದೆ - ಸಾಹಿತ್ಯಾಳನ್ನು ಮದುವೆಯಾಗುತ್ತಾನೆ. ಇಲ್ಲಿ ಸೋಲುವ "ಬ್ಲ್ಯಾಕ್ ರೋಜ್' ತನ್ನ ಪ್ರಯತ್ನ ಬಿಡದೆ ಒಂದೊಂದು ಹೊಸ ಹೆಜ್ಜೆ ಹೊಸ ಸಂಚುಗಳನ್ನು ಮಾಡುತ್ತಾ ಹೋಗುತ್ತದೆ. ಆದರೆ "ಬ್ಲ್ಯಾಕ್ ರೋಜ್' ಯಾರು ಎನ್ನುವುದನ್ನು ನಾಯಕ ಕರ್ಣ ಪತ್ತೆ ಮಾಡುವನೇ ಅಥವಾ ಸಾಹಿತ್ಯಾ ಪತ್ತೆ ಹಚ್ಚುವಳೇ ಅನ್ನುವ ಪ್ರೇಕ್ಷಕರ ಕುತೂಹಲಕ್ಕೆ ಈ ವಾರದ ಸಂಚಿಕೆಯಲ್ಲಿ ಉತ್ತರವಿದೆ.