ನಟಿ ಸಮಂತಾ ರುತ್ ಪ್ರಭು ಅವರು 2ನೇ ಮದುವೆಯಾಗಿದೆ. ಕೊಯಮತ್ತೂರಿನ ಇಶಾ ಯೋಗ ಫೌಂಡೇಶನ್‌ನಲ್ಲಿ ಇರುವ ಲಿಂಗ ಭೈರವಿ ದೇವಿ ದೇವಸ್ಥಾನದಲ್ಲಿ ನಿರ್ದೇಶಕ ರಾಜ್ ನಿಡಿಮೋರು ಜೊತೆ ಸಮಂತಾ ಮದುವೆಯಾಗಿದ್ದಾರೆ. ಇವರ ನಡುವೆ ಪ್ರೀತಿ ಇದೆ, ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಮಾತುಗಳು ಹಲವು ದಿನಗಳಿಂದ ಕೇಳಿಬರುತ್ತಲೇ ಇದ್ದವು. ಅದಕ್ಕೀಗ ಉತ್ತರ ಸಿಕ್ಕಿದೆ. ಅಂದಹಾಗೆ, ಈಗ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ, ಈ ರಾಜ್ ನಿಡಿಮೋರು ಯಾರು? ಬಹುಭಾಷಾ ತಾರೆಯಾಗಿರುವ ಸಮಂತಾ ಜೊತೆಗೆ ರಾಜ್ ಕನೆಕ್ಷನ್ ಶುರುವಾಗಿದ್ದು ಹೇಗೆ? ಮುಂದೆ ಓದಿ.
ಆಂಧ್ರಪ್ರದೇಶದ ರಾಜ್ ನಿಡಿಮೋರು
ಆಂಧ್ರಪ್ರದೇಶದ ತಿರುಪತಿ ಮೂಲದವರಾದ ರಾಜ್ ನಿಡಿಮೋರು ಅವರು ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಟೆಕ್ ಪದವಿ ಪಡೆದುಕೊಂಡಿದ್ದಾರೆ. ಪದವಿಯ ನಂತರ ಅವರು ತಮ್ಮ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಅಮೆರಿಕದಲ್ಲಿ ಸೆಟ್ಲ್ ಆಗಿದ್ದರು. ಅಲ್ಲಿರುವಾಗಲೇ ಸಿನಿಮಾರಂಗದ ಕಡೆಗೆ ಆಸಕ್ತಿ ಬೆಳೆಸಿಕೊಂಡರು. ಇವರ ಜೊತೆಗೆ ಕೃಷ್ಣ ದಾಸರಕೋತಪಲ್ಲಿ (ಡಿಕೆ) ಎಂಬ ಮತ್ತೋರ್ವ ನಿರ್ದೇಶಕ ಕೆಲಸ ಮಾಡುತ್ತಾರೆ. ಇಬ್ಬರು ಕೂಡ ಒಟ್ಟಿಗೆ ಒಂದೇ ಕಾಲೇಜಿನಲ್ಲಿ ಓದಿ, ಈಗಲೂ ಒಟ್ಟಿಗೆ ವೆಬ್ ಸರಣಿಗಳನ್ನು ಮಾಡುತ್ತಿದ್ದಾರೆ. ರಾಜ್ & ಡಿಕೆ ಸದ್ಯ ಭಾರತೀಯ ವೆಬ್ ಸರಣಿ ಲೋಕದಲ್ಲಿ ದೊಡ್ಡ ಹೆಸರು.
ಸಮಂತಾ ರಾಜ್ ಮದುವೆ
ರಾಜ್ & ಡಿಕೆ ಸಿನಿ ಜರ್ನಿ
ರಾಜ್ ನಿಡಿಮೋರು ಮತ್ತು ಡಿಕೆ 2003ರಲ್ಲಿ ʻಫ್ಲೇವರ್ಸ್ʼ ಎಂಬ ಇಂಗ್ಲಿಷ್ ಸಿನಿಮಾ ಮಾಡಿದರು. ನಂತರ ಬ್ರೇಕ್ ಪಡೆದುಕೊಂಡ ಇವರು 2009ರಲ್ಲಿ ಬಾಲಿವುಡ್‌ಗೆ ಎಂಟ್ರಿ ನೀಡಿದರು. 2009ರಲ್ಲಿ ʻ99ʼ ಎಂಬ ಸಿನಿಮಾ ಮಾಡಿದ ಇವರು, ಬಳಿಕ ಶೋರ್ ಇನ್ ದಿ ಸಿಟಿ, ಗೋ ಗೋವಾ ಗಾನ್, ಹ್ಯಾಪಿ ಎಂಡಿಂಗ್, ಎ ಜಂಟಲ್‌ಮನ್ ಸಿನಿಮಾಗಳನ್ನ ನಿರ್ದೇಶಿಸಿದರು. ಇವರಿಗೆ ದೊಡ್ಡ ಗೆಲುವು ಅಂತ ಸಿಕ್ಕಿದ್ದು, 2019ರಲ್ಲಿ ರಿಲೀಸ್ ಆದ ದಿ ಫ್ಯಾಮಿಲಿ ಮ್ಯಾನ್ (The Family Man) ವೆಬ್ ಸರಣಿಯಿಂದ! ಆನಂತರ ಫರ್ಜಿ (2023), ಗನ್ಸ್ & ಗುಲಾಬ್ಸ್ (2023), ಸಿಟಾಡೆಲ್: ಹನಿ ಬನಿ (2024) ವೆಬ್ ಸರಣಿಗಳನ್ನು ನಿರ್ದೇಶಿಸಿ ಫೇಮಸ್ ಆಗಿದ್ದಾರೆ. ಇದರ ಜೊತೆಗೆ ʻದಿ ಫ್ಯಾಮಿಲಿ ಮ್ಯಾನ್ʼ ವೆಬ್ ಸರಣಿಯ 3 ಸೀಸನ್‌ಗಳನ್ನು ರಿಲೀಸ್ ಮಾಡಿದ್ದಾರೆ. ಈಗ ಎಲ್ಲರ ಗಮನವು 4ರ ಮೇಲಿದೆ.
ಸಮಂತಾ ಜೊತೆಗೆ ಸಂಬಂಧ ಹುಟ್ಟಿದ್ದೇಗೆ?
2020ರಲ್ಲಿ ʻದಿ ಫ್ಯಾಮಿಲಿ ಮ್ಯಾನ್- ಸೀಸನ್ 2ʼ ವೆಬ್ ಸರಣಿಗೆ ಸಮಂತಾರನ್ನು ರಾಜ್ & ಡಿಕೆ ಆಯ್ಕೆ ಮಾಡಿದ್ದರು. ಆ ಪಾತ್ರವು ಕೊಂಚ ಬೋಲ್ಡ್ ಆಗಿತ್ತು. ದಿ ಫ್ಯಾಮಿಲಿ ಮ್ಯಾನ್ 2 ರಿಲೀಸ್ ಆದಮೇಲೆ ಭಾರಿ ಸದ್ದು ಮಾಡಿತು. ಅಲ್ಲಿಂದೇ ರಾಜ್ ಮತ್ತು ಸಮಂತಾ ಮಧ್ಯೆ ಒಡನಾಟ ಆರಂಭವಾಯಿತು. ಬಳಿಕ ಸಮಂತಾ ಮುಖ್ಯಭೂಮಿಕೆಯಲ್ಲಿ ಸಿಟಾಡೆಲ್: ಹನಿ ಬನಿ ವೆಬ್ ಸರಣಿಯನ್ನು ರಾಜ್ & ಡಿಕೆ ರಿಲೀಸ್ ಮಾಡಿದರು. ಈ ಮಧ್ಯೆ ರಾಜ್ ಅವರು ತಮ್ಮ ಪತ್ನಿ ಶ್ಯಾಮಿಲಿ ಡೇ ಅವರಿಗೆ ವಿಚ್ಛೇದನ ನೀಡಿದರು. ನಂತರ ರಾಜ್ ಮತ್ತು ಸಮಂತಾ ಅವರ ಓಡಾಟ ಹೆಚ್ಚಿತು.
ರಾಜ್ ವಯಸ್ಸೆಷ್ಟು?
ಹಲವು ಸಿನಿಮಾ ಮತ್ತು ವೆಬ್ ಸರಣಿಗಳನ್ನು ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣವನ್ನು ಮಾಡಿರುವ ರಾಜ್ ನಿಡಮೋರು ಅವರಿಗೆ ಈಗ 46 ವರ್ಷ ವಯಸ್ಸು ಎನ್ನಲಾಗಿದೆ. ಸಮಂತಾಗೆ ಈಗ 38 ವರ್ಷ ವಯಸ್ಸು. ರಾಜ್ ಅವರ ನೆಟ್ ವರ್ತ್ ಸುಮಾರು 80ರಿಂದ 85 ಕೋಟಿ ರೂ. ಎನ್ನಲಾಗಿದೆ. ಸಮಂತಾ ಅವರ ಆಸ್ತಿಯು ಸುಮಾರು 100ರಿಂದ 110 ಕೋಟಿ ರೂ. ಎನ್ನಲಾಗಿದೆ.