ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Desert Warrior: ಬಜೆಟ್‌ 1400 ಕೋಟಿ, ಕಲೆಕ್ಷನ್‌ 6 ಕೋಟಿ; ಇದು ಜಗತ್ತಿನ ಚಿತ್ರರಂಗದ ಇತಿಹಾಸದಲ್ಲೇ ಅತಿದೊಡ್ಡ ಫ್ಲಾಪ್‌ ಸಿನಿಮಾ!

ಸೌದಿ ಅರೇಬಿಯಾದ ಎಂ‌ಬಿಸಿ ಸ್ಟುಡಿಯೋಸ್ ನಿರ್ಮಿಸಿದ 1400 ಕೋಟಿ ರೂಪಾಯಿ ಬಜೆಟ್‌ನ 'ಡೆಸರ್ಟ್ ವಾರಿಯರ್' ಸಿನಿಮಾ ವಿಶ್ವ ಸಿನಿಮಾ ಇತಿಹಾಸದಲ್ಲೇ ಅತಿದೊಡ್ಡ ಸೋಲು ಕಂಡಿತ್ತು. ಹಾಲಿವುಡ್ ಘಟಾನುಘಟಿ ನಟರು ಮತ್ತು ಭಾರಿ ವಿಎಫ್‌ಎಕ್ಸ್ ಹೊಂದಿದ್ದರೂ, ಚಿತ್ರವು ವಿಶ್ವಾದ್ಯಂತ ಕೇವಲ 6 ಕೋಟಿ ರೂಪಾಯಿ ಗಳಿಸುವಲ್ಲಿ ಮಾತ್ರ ಶಕ್ತವಾಗಿತ್ತು.

ವಿಶ್ವದಾದ್ಯಂತ ಸಿನಿಮಾರಂಗವು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಭಾರತದ 'ವಾರಣಾಸಿ' ಮತ್ತು 'ರಾಮಾಯಣ' ಚಿತ್ರಗಳು ಅತಿ ಹೆಚ್ಚು ಬಜೆಟ್‌ನ ಸಿನಿಮಾಗಳಾಗಿ ಹೊರಹೊಮ್ಮುತ್ತಿವೆ. ಇತ್ತೀಚೆಗೆ ಬಂದ ಚೀನಾದ 755 ಕೋಟಿ ರೂ. ಬಜೆಟ್‌ನ 'ನೆ ಜಾ 2' (Ne Zha 2) ಸಿನಿಮಾವು 21 ಸಾವಿರ ಕೋಟಿ ಗಳಿಕೆ ಮಾಡಿದೆ.

ಇದೇ ಮಾದರಿಯಲ್ಲಿ 5 ವರ್ಷಗಳ ಹಿಂದೆ ಸೌದಿ ಅರೇಬಿಯಾದ ಮನರಂಜನಾ ಕ್ಷೇತ್ರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಕೂಡ ಹಾಲಿವುಡ್ ತಾರೆಯರನ್ನಿಟ್ಟುಕೊಂಡು ಅದ್ದೂರಿಯಾಗಿ 'ಡೆಸರ್ಟ್ ವಾರಿಯರ್' (Desert Warrior) ಸಿನಿಮಾವನ್ನು ಸೌದಿ ಅರೇಬಿಯಾದ ಎಂ‌ಬಿಸಿ ಸ್ಟುಡಿಯೋಸ್ (MBC Studios) 2021ರಲ್ಲಿ ನಿರ್ಮಿಸಿತ್ತು. ಆದರೆ, ಆ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿತ್ತು. ಇದನ್ನು ಜಗತ್ತಿನ ಅತ್ಯಂತ ದೊಡ್ಡ ಫ್ಲಾಪ್‌ ಸಿನಿಮಾ ಎಂದು ಕರೆಯಲಾಗುತ್ತದೆ.

Mohanlal: 54 ದಿನಗಳಲ್ಲಿ ʻದೃಶ್ಯಂ 3ʼ ಶೂಟಿಂಗ್‌ ಮುಕ್ತಾಯ, ರಿಲೀಸ್‌ಗೂ ಮುನ್ನವೇ 350 ಕೋಟಿ ವ್ಯಾಪಾರ! ಪ್ಯಾನ್‌ ಇಂಡಿಯಾ ಮೇಕರ್ಸ್‌ ಕಲಿಬೇಕಿರುವುದೇನು?

1400 ಕೋಟಿ ರೂ. ಬಜೆಟ್‌ನ ಸಿನಿಮಾ ಇದು

7ನೇ ಶತಮಾನದ ಅರೇಬಿಯಾದ ಹಿನ್ನೆಲೆಯಲ್ಲಿ ಅರಸ ಕಿಸ್ರಾನ ವಿರುದ್ಧ ರಾಜಕುಮಾರಿ ಹಿಂದ್ ನಡೆಸುವ ಹೋರಾಟದ ಕಥೆಯನ್ನು ಈ ಚಿತ್ರ ಹೊಂದಿತ್ತು. 'ರೈಸ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್' ಖ್ಯಾತಿಯ ರೂಪರ್ಟ್ ವ್ಯಾಟ್ 'ಡೆಸರ್ಟ್ ವಾರಿಯರ್' ಚಿತ್ರವನ್ನು ನಿರ್ದೇಶಿಸಿದ್ದರು. ಹಾಲಿವುಡ್ ನಟರಾದ ಆಂಥೋನಿ ಮ್ಯಾಕಿ, ಆಸ್ಕರ್ ವಿಜೇತ ಬೆನ್ ಕಿಂಗ್ಸ್ಲಿ, ಶಾರ್ಲ್ಟೋ ಕಾಪ್ಲೆ ಮತ್ತು ಆಯಿಷಾ ಹಾರ್ಟ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಸಿನಿಮಾದ ಚಿತ್ರೀಕರಣಕ್ಕಾಗಿ ಪ್ರತಿದಿನ 400 ರಿಂದ 500 ಜನರು ಕೆಲಸ ಮಾಡುತ್ತಿದ್ದರು. ಅದ್ದೂರಿ ಆಕ್ಷನ್ ಸನ್ನಿವೇಶಗಳು, ವಿಎಫ್‌ಎಕ್ಸ್ ಮತ್ತು ನಟರ ಸಂಭಾವನೆ ಎಲ್ಲವೂ ಸೇರಿ ಚಿತ್ರದ ಬಜೆಟ್ ಸುಮಾರು 150 ಮಿಲಿಯನ್ ಡಾಲರ್, ಅಂದರೆ, ಅಂದಾಜು 1,400 ಕೋಟಿ ರೂಪಾಯಿ ದಾಟಿತ್ತು.

The Raja Saab: 'ಪ್ಯಾನ್‌ ಇಂಡಿಯಾ ಸ್ಟಾರ್‌' ಪ್ರಭಾಸ್‌ಗಾಗಿ ರೆಬೆಲ್‌ ಸಾಂಗ್‌ ಹಾಡಿದ 'ಕನ್ನಡಿಗ' ಸಂಜಿತ್ ಹೆಗ್ಡೆ; ಹಾಡು ಕೇಳಿದ್ಮೇಲೆ ‌'ಡಾರ್ಲಿಂಗ್‌' ಫ್ಯಾನ್ಸ್‌ ಥ್ರಿಲ್

6+ ಕೋಟಿ ರೂ. ಗಳಿಸುವಲ್ಲಿ ಸುಸ್ತು

ಸುದೀರ್ಘ ಅವಧಿಯನ್ನು ಚಿತ್ರೀಕರಣಕ್ಕಾಗಿ ಮೀಸಲಿಟ್ಟಿದ್ದ ಚಿತ್ರತಂಡ ನಂತರ ಸುಮಾರು ಎರಡು ವರ್ಷಗಳ ಕಾಲ ಪೋಸ್ಟ್-ಪ್ರೊಡಕ್ಷನ್ ಕೆಲಸಗಳಿಗಾಗಿ ಸಮಯ ತೆಗೆದುಕೊಳ್ಳಲಾಯಿತು. ಅಂತಿಮವಾಗಿ 2025ರಲ್ಲಿ ಜ್ಯೂರಿಚ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡ ಈ ಸಿನಿಮಾವನ್ನು 2026ರ ಏಪ್ರಿಲ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡಲಾಯಿತು. ಆದರೆ ಈ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಮಾತ್ರ ಆಘಾತಕಾರಿಯಾಗಿತ್ತು.

ಅಮೆರಿಕಾದ 1010 ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಸಿನಿಮಾ ಅಲ್ಲಿ ಗಳಿಸಿದ್ದು ಕೇವಲ 4.72 ಲಕ್ಷ ಡಾಲರ್!‌ ಇದು ದೊಡ್ಡ ಸಿನಿಮಾವೊಂದಕ್ಕೆ ಸಿಕ್ಕ ಅತ್ಯಂತ ಕಳಪೆ ಕಲೆಕ್ಷನ್‌ ಎನ್ನಲಾಗಿದೆ. ಇನ್ನು, ಸೌದಿ ಅರೇಬಿಯಾದಲ್ಲೇ ಈ ಚಿತ್ರವು ಕೇವಲ 87 ಸಾವಿರ ಡಾಲರ್‌ ಗಳಿಸಿತು. ಒಟ್ಟಾರೆ ವಿಶ್ವಾದ್ಯಂತ ಈ ಸಿನಿಮಾ ಕೇವಲ 6.65 ಲಕ್ಷ ಡಾಲರ್‌ (6 ಕೋಟಿ ರೂ.) ಗಳಿಸುವಲ್ಲಿ ಸುಸ್ತು ಹೊಡೆಯಿತು.

'ಡೆಸರ್ಟ್ ವಾರಿಯರ್' ಚಿತ್ರಕ್ಕೆ ಖರ್ಚು ಮಾಡಿದ ಒಟ್ಟು ಬಜೆಟ್‌ನಲ್ಲಿ ಶೇ. 0.4 ರಷ್ಟು ಹಣವನ್ನು ಕೂಡ ಹಿಂಪಡೆಯಲು ಚಿತ್ರತಂಡಕ್ಕೆ ಸಾಧ್ಯವಾಗಲಿಲ್ಲ. ಶೇ. 99.6ರಷ್ಟು ನಷ್ಟ ಅನುಭವಿಸುವ ಮೂಲಕ ಇದು ಇತಿಹಾಸದಲ್ಲೇ ಅತಿದೊಡ್ಡ 'ಬಾಕ್ಸ್ ಆಫೀಸ್ ಫೇಲ್ಯೂರ್‌ ಸಿನಿಮಾʼ ಎನಿಸಿಕೊಂಡಿತು. ಸಾವಿರಾರು ಕೋಟಿ ರೂ. ಹಣ ನಿರ್ಮಾಪಕರ ಕೈಬಿಟ್ಟಿತು.

'ಡೆಸರ್ಟ್ ವಾರಿಯರ್' ಚಿತ್ರ ಸೋತಿದ್ದೇಕೆ?

ಮುಖ್ಯವಾಗಿ ಈ ಚಿತ್ರಕ್ಕೆ ದುರ್ಬಲವಾದ ಮಾರ್ಕೆಟಿಂಗ್ ಮಾಡಲಾಯಿತು. ಪ್ರೇಕ್ಷಕರಲ್ಲಿ ಈ ಚಿತ್ರದ ಬಗ್ಗೆ ಅರಿವು ಮೂಡಿಸುವಲ್ಲಿ ಚಿತ್ರತಂಡ ವಿಫಲವಾಯ್ತು. ಘೋಷಣೆ ಮತ್ತು ಬಿಡುಗಡೆಯ ನಡುವಿನ ಸುದೀರ್ಘ ವಿಳಂಬವು ಪ್ರೇಕ್ಷಕರಲ್ಲಿ ಸಿನಿಮಾದ ಬಗೆಗಿನ ಆಸಕ್ತಿಯನ್ನು ಕಡಿಮೆ ಮಾಡಿತು. ಇದರ ಜೊತೆಗೆ ಸಿನಿಮಾ ತೆರೆಕಂಡ ಮೇಲೆ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಬಂದ ನಕಾರಾತ್ಮಕ ಪ್ರತಿಕ್ರಿಯೆಗಳು ಸೋಲಿಗೆ ಮತ್ತೊಂದು ಕಾರಣ.

'ಡೆಸರ್ಟ್ ವಾರಿಯರ್' ಚಿತ್ರದ ಕುರಿತ ಟ್ವೀಟ್‌



ಕೇವಲ ಭಾರಿ ಬಜೆಟ್ ಅಥವಾ ಹಾಲಿವುಡ್ ನಟರಿದ್ದ ಮಾತ್ರಕ್ಕೆ ಒಂದು ಸಿನಿಮಾ ಗೆಲ್ಲುವುದಿಲ್ಲ ಎಂಬುದಕ್ಕೆ 'ಡೆಸರ್ಟ್ ವಾರಿಯರ್' ಸಿನಿಮಾ ಚಿತ್ರರಂಗದ ಇತಿಹಾಸದಲ್ಲಿ ಒಂದು ಕಹಿ ಉದಾಹರಣೆಯಾಗಿ ಉಳಿದುಕೊಂಡಿತು.